An unconventional News Portal.

ಕೊಲ್ಲಂ ಪಟಾಕಿ ದುರಂತ: ಸ್ಪರ್ಧೆಗೆ ಅನುಮತಿ ನಿರಾಕರಿಸಿದ್ದಕ್ಕೆ ‘ಧರ್ಮ’ದ ಬಣ್ಣ

ಕೊಲ್ಲಂ ಪಟಾಕಿ ದುರಂತ: ಸ್ಪರ್ಧೆಗೆ ಅನುಮತಿ ನಿರಾಕರಿಸಿದ್ದಕ್ಕೆ ‘ಧರ್ಮ’ದ ಬಣ್ಣ

ಭಾನುವಾರ ಕೊಲ್ಲಂನ ಪುತ್ತಿಂಗಳ್ ದೇವಳದಲ್ಲಿ ನಡೆದ ಅಗ್ನಿದುರಂತದ ಬೆನ್ನಲ್ಲೇ ಜಿಲ್ಲಾಡಳಿತದ ಕಾರ್ಯವೈಖರಿಗೆ ರಾಜಕಾರಣಿಗಳು ಹಸ್ತಕ್ಷೇಪ ಮಾಡಿದ ಮಾಹಿತಿ ಹೊರಬಿದ್ದಿದೆ.

ದೇಗುಲದಲ್ಲಿ ಪಟಾಕಿ ಸಿಡಿಸಲು ಅನುಮತಿ ನಿರಾಕರಿಸಿದ ಜಿಲ್ಲಾಡಳಿತದ ವಿರುದ್ಧ ಕೆಲವು ರಾಜಕಾರಣಿಗಳು ಒತ್ತಡ ಹೇರುವ ಪ್ರಯತ್ನವನ್ನು ನಡೆಸಿದ್ದರು ಎಂದು ಸೋಮವಾರ ‘ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆ ವರದಿ ಮಾಡಿದೆ. ಇದಕ್ಕೆ ಕಾರಣವಾಗಿದ್ದು ‘ಧರ್ಮ’ದ ಹಿನ್ನೆಲೆ ಎಂದು ವರದಿ ಹೇಳಿದೆ.

ಪುತ್ತಿಂಗಳ್ ದೇವಳದ ಹದಿನಾರು ದಿನಗಳ ಜಾತ್ರಾ ಮಹೋತ್ಸವದಲ್ಲಿ ಸಂಪ್ರದಾಯದಂತೆ ನಡೆದು ಬಂದಿರುವ ಸುಡುಮದ್ದು ಪ್ರದರ್ಶನಕ್ಕೆ ಈ ಬಾರಿ ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಜಿಲ್ಲಾಡಳಿತದ ನಿರ್ಣಯದ ಹಿಂದೆ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಏ.ಶಾನವಾಸ್ ಮತ್ತು ಜಿಲ್ಲಾಧಿಕಾರಿ ಏ.ಶೈನಾಮೋಳ್ ಪಾತ್ರ ಪ್ರಮುಖವಾಗಿತ್ತು. ರಾಜಕೀಯವಾಗಿ ಪ್ರಭಾವಶಾಲಿಯಾಗಿರುವ ದೇವಳದ ಆಡಳಿತ ಮಂಡಳಿಗೆ ಇದು ಅಸಮಾಧಾನ ತಂದಿತ್ತಂತೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಏ.ಶಾನವಾಸ್ ಮತ್ತು ಜಿಲ್ಲಾಧಿಕಾರಿ ಏ.ಶೈನಾಮೋಳ್ ಇಬ್ಬರು ಮುಸ್ಲಿಮರು. ಹೀಗಾಗಿ, ಹಿಂದೂ ದೇಗುಲದ ಆಚರಣೆಗೆ ಕಾನೂನಿನ ಅನ್ವಯ ಅನುಮತಿ ನಿರಾಕರಿಸಿದ್ದಾರೆ ಎಂಬ ಗುಲ್ಲೆಬ್ಬಿಸುವ ಪ್ರಯತ್ನವನ್ನು ಮಾಡಲಾಗಿತ್ತು ಎಂದು ವರದಿ ಬಹಿರಂಗ ಪಡಿಸಿದೆ.

ಜಿಲ್ಲಾಡಳಿತದ ಆದೇಶವನ್ನೊಪ್ಪದ ದೇವಳ ಆಡಳಿತ ಮಂಡಳಿ, ‘ಸುಡುಮದ್ದು ಪ್ರದರ್ಶನ ಇಲ್ಲಿಯ ಜನರಿಗೆ ಭಾವಾನಾತ್ಮಕ ವಿಷಯ,’ ಎಂದು ವಾದಿಸಿತ್ತು. ಇದಕ್ಕೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದ ಕೆಲವು ಸ್ಥಳೀಯ ರಾಜಕಾರಣಿಗಳು ಹಾಗೂ ಹಿಂದೂ ಪರ ಸಂಘಟನೆಗಳು ದನಿ ಗೂಡಿಸಿದ್ದವು ಎಂಬ ವಿಚಾರವೀಗ ಬಯಲಾಗಿದೆ.

ಶನಿವಾರ ಮಧ್ಯಾಹ್ನದವರೆಗೂ ಸುಡುಮದ್ದು ಪ್ರದರ್ಶನ ನಡೆಯುವ ಬಗ್ಗೆ ಕೊಲ್ಲಂನಲ್ಲಿ ಗೊಂದಲ ಏರ್ಪಟ್ಟಿತ್ತು. ಆದರೆ, ಪ್ರದರ್ಶನ ಯಥಾವತ್ತಾಗಿ ನಡೆಯುವುದೆಂದು ದೇವಳದ ಆಡಳಿತ ಮಂಡಳಿ ಸಂಜೆಯ ವೇಳೆಗೆ ಘೋಷಿಸುವ ಮೂಲಕ ಜಿಲ್ಲಾಡಳಿತದ ನಿರ್ಧಾರದ ವಿರುದ್ಧ ನಡೆ ಇಟ್ಟಿತ್ತು.

ದೇವಳದ ಪಕ್ಕದಲ್ಲಿ ವಾಸಿಸುವ ಪಂಚಜಾಕ್ಷಿ ಎಂಬ ಮಹಿಳೆಯ ದೂರಿನ ಆಧಾರದಲ್ಲಿ ಜಿಲ್ಲಾಡಳಿತ ಸುಡುಮದ್ದು ಸ್ಪರ್ಧೆಗೆ ಅನುಮತಿಯನ್ನು ನಿರಾಕರಿಸಿತ್ತು. ಕಳೆದ ವರ್ಷ ಸುಡುಮದ್ದು ಪ್ರದರ್ಶನದಿಂದಾಗಿ ತನ್ನ ಮನೆಯ ಗೋಡೆಗಳು ಬಿರುಕು ಬಿಟ್ಟಿವೆಯೆಂದು ಆಕೆ ದೂರಿದ್ದಳು. ಆ ಬಳಿಕ, ಪ್ರದರ್ಶನಕ್ಕೆ ಅನುಮತಿ ನೀಡುವ ವಿಚಾರದಲ್ಲಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಏ.ಶಾನವಾಸ್, ತನಿಖೆ ನಡೆಸುವಂತೆ ತಹಸಿಲ್ದಾರ್, ಪೋಲಿಸ್, ಮತ್ತು ಅಗ್ನಿಶಾಮಕದಳಕ್ಕೆ ಸೂಚಿಸಿದ್ದರು.

ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಸಲ್ಲಿಸಿದ್ದ ವರದಿಯಲ್ಲಿ, ಪೋಲಿಸ್ ಇಲಾಖೆಯು ಸುಡುಮದ್ದು ಪ್ರದರ್ಶನಕ್ಕೆ ಅನುಮತಿ ನೀಡಬಾರದೆಂದು ಸಲಹೆ ಮಾಡಿತ್ತು. ಪ್ರದರ್ಶನವು ಸ್ಪರ್ಧಾತ್ಮಕವಾಗಿರುವ ಅಂಶವನ್ನು ದೇವಳದ ಆಡಳಿತ ಮಂಡಳಿಯು ಬಚ್ಚಿಡುತ್ತಿದೆಯೆಂದೂ ಪೋಲಿಸರೂ ಹೇಳಿದ್ದರು. ದೊಡ್ಡ ಪ್ರಮಾಣದಲ್ಲಿ  ನಡೆಯುವ ಈ ಸ್ಪರ್ಧೆ ಅಪಾಯಕಾರಿಯಾಗಬಹುದೆಂದು ಪೋಲಿಸರು ಎಚ್ಚರಿಸಿದ್ದರು.

ಪೊಲೀಸ್ ವರದಿ ಆಧಾರದ ಮೇಲೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಾನವಾಸ್, ದೇವಳದ ಆಡಳಿತ ಮಂಡಳಿಯು ಅನುಮತಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಕಳೆದ ಶುಕ್ರವಾರದಂದು ತಿರಸ್ಕರಿಸಿದ್ದರು. “ಅಲ್ಲಿ ನಡೆಯುತ್ತಿರುವುದು ಸುಡುಮದ್ದು ಪ್ರದರ್ಶನವಲ್ಲ; ಬದಲಾಗಿ ಎರಡು ತಂಡಗಳ ನಡುವೆ ಸ್ಪರ್ಧೆಯಾಗಿರುವುದರಿಂದ ಜಿಲ್ಲಾಡಳಿತವು ಅನುಮತಿಯನ್ನು ನಿರಾಕರಿಸುತ್ತದೆ, ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಸ್ಫೋಟಕ ವಸ್ತು ಕಾಯ್ದೆಯನ್ವಯ ಕ್ರಮ ಜರುಗಿಸಲಾಗುವುದು,” ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದ್ದರು.

ಆದರೆ ಆದೇಶದ ಪಾಲನೆಯನ್ನು ಖಾತ್ರಿಪಡಿಸಬೇಕಾಗಿದ್ದ ಜಿಲ್ಲಾಧಿಕಾರಿ ಏ.ಶೈನಾಮೋಳ್ ಮೇಲೆ ನಿಲುವನ್ನು ಬದಲಾಯಿಸುವಂತೆ ಕೆಲ ರಾಜಕೀಯ ವ್ಯಕ್ತಿಗಳು ಒತ್ತಡ ಹೇರಿದ್ದರೆನ್ನಲಾಗಿದೆ. ಬೇರೆ ಧರ್ಮದವರ ಭಾವನೆಗಳಿಗೆ ಧಕ್ಕೆ ತರುವುದು ಸರಿಯಲ್ಲವೆಂದು ಆಕೆಗೆ ಎಚ್ಚರಿಕೆ ನೀಡುವ ಕೆಲಸವೂ ನಡೆದಿತ್ತು. ಆ ಮಧ್ಯೆ ಕೆಲ ಹಿಂದೂ ಸಂಘಟನೆಗಳು ಈ ಬೆಳವಣಿಗೆಯನ್ನು ಆಡಳಿತಪಕ್ಷದ ವಿರುದ್ಧ ಕೆಸರೆರಚಲು ಬಳಸಲಾರಂಭಿಸಿದವೆಂದು ‘ಪತ್ರಿಕೆ’ ವರದಿಯಲ್ಲಿ ಹೇಳಲಾಗಿದೆ.

ENTER YOUR E-MAIL

Name
Email *
August 2017
M T W T F S S
« Jul    
 123456
78910111213
14151617181920
21222324252627
28293031  

Top