An unconventional News Portal.

ಕೇರಳದ 15 ಯುವಕರು ಐಸಿಲ್ ಸೇರಿರುವ ಶಂಕೆ

ಕೇರಳದ 15 ಯುವಕರು ಐಸಿಲ್ ಸೇರಿರುವ ಶಂಕೆ

ದೇವರ ನಾಡು ಕೇರಳದಿಂದ ಕಳೆದೊಂದು ತಿಂಗಳಿನಿಂದ ನಾಪತ್ತೆಯಾಗಿರುವ 15 ಯುವಕರು ಐಸಿಲ್ ಸೇರ್ಪಡೆಯಾಗಿರುವ ಅನುಮಾನಗಳು ವ್ಯಕ್ತವಾಗಿವೆ. ಈ ಕುರಿತಂತೆ ಕೇರಳ ರಾಜ್ಯ ಸರಕಾರ ತುರ್ತು ತನಿಖೆಗೆ ಆದೇಶ ನೀಡಿದೆ.
ಕೇರಳದ ಕಾಸರಗೋಡು, ಪಾಲಕ್ಕಾಡ್ ಜಿಲ್ಲೆಗಳಿಂದ ಶಿಕ್ಷಣಕ್ಕಾಗಿ ವಿದೇಶಕ್ಕೆ 15 ಮಂದಿ ತೆರಳಿದ್ದರು. ಇವರೆಲ್ಲಾ ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದಾರೆ. ಇವರಲ್ಲಿ ಪುಟ್ಟ ಮಕ್ಕಳಿರುವ ದಂಪತಿ ಕೂಡ ಸೇರಿರುವ ಶಂಕೆ ವ್ಯಕ್ತವಾಗಿದೆ. ಉದ್ಯೋಗಕ್ಕಾಗಿ ಅಬ್ದುಲ್ ರಷೀದ್ ಎಂಬಾತ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಮುಂಬೈಗೆ ಹೋಗಿದ್ದವರ ಸುಳಿವೇ ಇಲ್ಲ ಎಂದು ಹೇಳಲಾಗಿದೆ. ಹೀಗಾಗಿ ಇವರೆಲ್ಲರೂ ಐಸಿಲ್ ಉಗ್ರ ಸಂಘಟನೆಗೆ ಸೇರಿರುವ ಶಂಕೆ ಮೂಡಿದೆ. ಈ ಬಗ್ಗೆ ಸ್ವತಃ ನಾಪತ್ತೆಯಾದ ಯುವಕರ ಕುಟುಂಬಸ್ಥರೇ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.
ಇದಕ್ಕೆಲ್ಲಾ ಕಾರಣವಾಗಿದ್ದು ಇತ್ತೀಚೆಗೆ ಪೋಷಕರಿಗೆ ನಾಪತ್ತೆಯಾದ ಯುವಕರು ಕಳುಹಿಸಿರುವ ಕೆಲ ಮೆಸೇಜ್ಗಳು ಮತ್ತು ವಿಡಿಯೋ ತುಣುಕುಗಳು. ಇವುಗಳೆಲ್ಲಾ ಐಸಿಲ್ ಸಂಘಟನೆಗೆ ಸೇರಿರುವ ಅನುಮಾನ ಹೆಚ್ಚಿಸಿದೆ.
ಘಟನೆ ಬಗ್ಗೆ ಎಚ್ಚೆತ್ತುಕೊಂಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕುರಿತಂತೆ ತುರ್ತು ತನಿಖೆಗೆ ಆದೇಶಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ  ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ವಿಪಿಪಿ ಮುಸ್ತಾಫಾ ಅವರು, ನಾಪತ್ತೆಯಾದ ಫೋಷಕರಿಗೆ ಯುವಕರು ವಾಟ್ಸಪ್ ಮೆಸೇಜ್ ಮಾಡಿದ್ದಾರೆ. ಈ ಮೆಸೇಜ್ನಲ್ಲಿ “ನಾವು ಭಾರತಕ್ಕೆ ವಾಪಸಾಗುವುದಿಲ್ಲ. ಇಲ್ಲಿ ಅತ್ಯುನ್ನತ ಆಡಳಿತವಿದೆ. ನೀವು ಕೂಡ ಇಲ್ಲಿಗೇ ಬರಬೇಕು” ಎಂದು ಬರೆದಿದ್ದಾರೆ.
ಮತ್ತೊಂದು ಮಸೇಜ್ ನಲ್ಲಿ “ನಾವು ಐಸಿಲ್ ಸೇರಿದ್ದು, ಅಮೆರಿಕ ವಿರುದ್ಧ ಹೋರಾಡುತ್ತೇವೆ” ಎಂದು ಬರೆಯಲಾಗಿದೆ. ನಾಪತ್ತೆಯಾದ ಯುವಕರೆಲ್ಲರೂ ಉನ್ನತ ಶಿಕ್ಷಣ ಪಡೆದಿದ್ದು ಇಸ್ಲಾಂ ಕುರಿತು ಉನ್ನತ ವ್ಯಾಸಂಗಕ್ಕಾಗಿ ಮಧ್ಯ ಪ್ರಾಚ್ಯಕ್ಕೆ ತೆರಳುತ್ತಿರುವುದಾಗಿ ತಿಳಿಸಿದ್ದರು, ಎಂದು ಪೋಷಕರು ತಿಳಿಸಿದ್ದಾರೆ. ಇಂತಹುದೇ ಮತ್ತೊಂದು ವಿಡಿಯೋ ಮೆಸೇಜ್ ಲಭಿಸಿದ್ದು, ಈ ವಿಡಿಯೋ ತುಣುಕಿನಲ್ಲಿ ವೈದ್ಯ ಪುತ್ರನೊಬ್ಬ “ನಾವು ಇಸ್ಲಾಮಿಕ್ ಸ್ಟೇಟ್ ತಲುಪಿದ್ದೇವೆ. ಇನ್ನೇನಿದ್ದರೂ ಸಾವು-ಬದುಕಿನ ಹೋರಾಟ” ಎಂದು ಹೇಳಿಕೊಂಡಿದ್ದಾನೆ.
ಈ ಎಲ್ಲ ಅಂಶಗಳು ನಾಪತ್ತೆಯಾಗಿರುವ ಯುವಕರು ಐಸಿಲ್ ಉಗ್ರಗಾಮಿ ಸಂಘಟನೆ ಸೇರಿರುವ ಅನುಮಾನಗಳನ್ನು ಹೆಚ್ಚಿಸಿದೆ. ಈ ಕುರಿತು ಕೇರಳ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳ ಗುಪ್ತಚರ ಇಲಾಖೆ, ಪ್ರಕರಣ ಸಂಬಂಧ ಈಗಲೇ ಯಾವುದೇ ನಿರ್ಧಾರಕ್ಕೂ ಬರಲು ಸಾಧ್ಯವಿಲ್ಲ. ಆದರೂ ಪ್ರಕರಣದ ಆಳವಾದ ತನಿಖೆ ನಡೆಸಲಾಗುವುದು ಎಂದಿದೆ.
ಈ ಬಗ್ಗೆ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿರುವ ನಾಪತ್ತೆಯಾದ ಯುವಕನೋರ್ವನ ತಂದೆ ಹಕೀಮ್, “ಆತ ಓರ್ವ ಒಳ್ಳೆಯ ವ್ಯಕ್ತಿಯಾಗಿ ಮನೆಗೆ ಬಂದರೆ ಆತನಿಗೆ ಸ್ವಾಗತವಿದೆ. ಇಲ್ಲವೆಂದರೆ ಆತನ ಹೆಣವನ್ನು ನೋಡಲೂ ನಾವು ಬಯಸುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿತ್ರ: ಅಲ್ ಜಝೀರಾ

Top