An unconventional News Portal.

ಫೇಕ್‌ ನ್ಯೂಸ್‌; ಮಾಧ್ಯಮ ಸಂಸ್ಥೆಗಳ ಮಾಲೀಕ ರಾಜೀವ್‌ ಚಂದ್ರಶೇಖರ್‌ ವಿರುದ್ಧ ಪ್ರಕರಣ

ಫೇಕ್‌ ನ್ಯೂಸ್‌; ಮಾಧ್ಯಮ ಸಂಸ್ಥೆಗಳ ಮಾಲೀಕ ರಾಜೀವ್‌ ಚಂದ್ರಶೇಖರ್‌ ವಿರುದ್ಧ ಪ್ರಕರಣ

ಹಲವು ವರ್ಷಗಳಿಂದ ‘ನೇರ, ದಿಟ್ಟ, ನಿರಂತರ’ ಎಂಬ ಶೀರ್ಷಿಕೆಯಡಿ ಮಾಧ್ಯಮ ಸಂಸ್ಥೆಗಳನ್ನು ನಡೆಸಿಕೊಂಡು ಬಂದಿರುವ ಸಂಸದ ರಾಜೀವ್‌ ಚಂದ್ರಶೇಖರ್‌ ವಿರುದ್ಧ ಫೇಕ್‌ ನ್ಯೂಸನ್ನು ಟ್ವೀಟ್‌ ಮಾಡಿದ್ದಕ್ಕೆ ದೂರು ದಾಖಲಾದ ಹಾಸ್ಯಾಸ್ಪದ ಪ್ರಕರಣ ಕೇರಳದಲ್ಲಿ ನಡೆದಿದೆ.

ಕೇರಳ ಪೊಲೀಸ್‌ ಮಹಾ ನಿರ್ದೇಶಕ ಲೋಕನಾಥ್‌ ಬೆಹೆರಾ ಆದೇಶದ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಕೇರಳ ಸುದ್ದಿ ವಾಹಿನಿಗಳು ವರದಿ ಮಾಡಿವೆ. ಈ ಮೂಲಕ ಸಮೂಹ ಸುದ್ದಿ ಸಂಸ್ಥೆಗಳ ಒಡೆಯನೊಬ್ಬನ ಮೇಲೆಯೇ ನಕಲಿ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತಿದ ಆರೋಪ ಸದ್ದು ಮಾಡುತ್ತಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನೊಬ್ಬ ಟ್ವೀಟ್‌ ಮಾಡಿದ್ದ ವಿಡಿಯೋ ಒಂದರ ಅಧಿಕೃತತೆಯನ್ನು ಪರಿಶೀಲಿಸದೇ, ರಾಜೀವ್‌ ಚಂದ್ರಶೇಖರ್‌ ರಿಟ್ವೀಟ್‌ ಮಾಡಿದ್ದರು. ಆರ್‌ಎಸ್‌ಎಸ್‌ ಮುಖಂಡ ಬಿಜು ಎಂಬುವವರ ಮೃತದೇಹ ಹೊತ್ತೊಯ್ಯುತ್ತಿದ್ದ ಆಂಬ್ಯುಲೆನ್ಸ್‌ ಮೇಲೆ ಸಿಪಿಐಎಂ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂಬ ಮಾಹಿತಿಯನ್ನು ಸಾಮಾಜಿಕ ಜಾಲತಾಣದ ತಮ್ಮ ಹಿಂಬಾಲಕರಿಗೆ ರಾಜೀವ್‌ ಚಂದ್ರಶೇಖರ್‌ ಹಂಚಿದ್ದರು. ಅದೂ ಕಳೆದ ವರ್ಷ ಮೇ ತಿಂಗಳಿನಲ್ಲಿ. ಆದರೆ ಅಸಲಿ ಕಥೆ ಬೇರೆಯದೇ ಆಗಿದೆ ಎಂಬುದನ್ನು ಕೇರಳ ಪೊಲೀಸ್‌ ಇಲಾಖೆ ತಿಳಿಸಿದೆ. ಅದರ ಬೆನ್ನಲ್ಲೇ ರಾಜೀವ್‌ ಚಂದ್ರಶೇಖರ್‌ ವಿರುದ್ಧ ಕಾನೂನು ಕ್ರಮ ಜರುಗಿಸಲು ಇಲಾಖೆ ಮುಂದಾಗಿದೆ ಎನ್ನಲಾಗಿದೆ.

ನಡೆದದ್ದೇನು?:

2017ರ ಮೇ 11ರಂದು ಕೇರಳದ ಕಣ್ಣೂರಿನ ಆರ್‌ಎಸ್‌ಎಸ್‌ ಮುಖಂಡ ಬಿಜು ಎಂಬುವವರು ಮೃತಪಟ್ಟಿದ್ದರು. ಬಿಜು ಸಾವಿಗೆ ಪ್ರತಿಸ್ಪಂದನೆಯಾಗಿ ಅಲ್ಲಿನ ಬಿಜೆಪಿ ಕಾರ್ಯಕರ್ತರು ಸಹಕಾರಿ ಆಸ್ಪತ್ರೆಯೊಂದರ ಆಂಬುಲೆನ್ಸ್‌ ಮೇಲೆ ದಾಳಿ ಮಾಡಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಆದರೆ ಆರ್‌ಎಸ್‌ಎಸ್‌, ಬಿಜೆಪಿ ಸೇರಿದಂತೆ ಹಲವು ಬಲಪಂಥೀಯ ಸಂಘಟನೆಗಳು ಈ ಕೃತ್ಯವನ್ನು ಅಲ್ಲಿನ ಆಡಳಿತ ಪಕ್ಷದ ತಲೆಗೆ ಕಟ್ಟಲು ಯತ್ನಿಸಿದ್ದರು. ಇದರ ಭಾಗವಾಗಿಯೇ ಹರಿಬಿಡಲಾದ ಟ್ವೀಟನ್ನು ರಾಜೀವ್‌ ಚಂದ್ರಶೇಖರ್‌ ರಿಟ್ವೀಟ್‌ ಮಾಡಿದ್ದರು. ಮೂಲಗಳ ಪ್ರಕಾರ ಸದ್ಯ ರಾಜೀವ್‌ ಚಂದ್ರಶೇಖರ್‌ ವಿರುದ್ಧ ಐಪಿಸಿ ಸೆಕ್ಷನ್‌ 153 (ಕೋಮು ಗಲಭೆಗೆ ಪ್ರಚೋದನೆ) ಅಡಿ ಪ್ರಕರಣ ದಾಖಲಿಸಲಾಗಿದೆ.

ರಾಜೀವ್‌ ಪ್ರತಿಕ್ರಿಯೆ:

ತಮ್ಮ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸ್‌ ಇಲಾಖೆ ಮತ್ತು ಸರ್ಕಾರ ಮುಂದಾಗಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ರಾಜೀವ್‌ ಚಂದ್ರಶೇಖರ್‌ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೇರಳದ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಮಾಡಿರುವ ಟ್ವೀಟ್‌ನಲ್ಲಿ ರಾಜೀವ್‌, ಕೇರಳದ ಕಮ್ಯುನಿಸ್ಟರನ್ನು ಅಣಕಿಸಿದ್ದಾರೆ. “ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನನ್ನ ಟ್ವೀಟ್‌ ಆಧರಿಸಿ ಬಂಧಿಸಲು ಆಶಿಸಿದ್ದಾರೆ. ಬನ್ನೀ ಸಂಗಾತಿಗಳೇ (ಕಮ್ಯುನಿಸ್ಟ್‌ ಕಾರ್ಯಕರ್ತರು), ಈ ಬಾರಿ ನಿಮ್ಮ ಹಿಂಸಾಚಾರ, ಅಸಹಿಷ್ಣುತೆ, ಭಯಹುಟ್ಟಿಸುವ ಕೆಲಸಗಳನ್ನು ಬಯಲಿಗೆಳೆಯುತ್ತೇನೆ,” ಎಂಬುದಾಗಿ ರಾಜೀವ್‌ ಟ್ವೀಟ್‌ ಮಾಡಿದ್ದಾರೆ.

ರಾಜೀವ್‌ ಒಡೆತನದ ಸುದ್ದಿ ಸಂಸ್ಥೆಗಳ್ಯಾವುವು?:

ಸಾಮಾನ್ಯ ವ್ಯಕ್ತಿ ಅಥವಾ ಯಾವುದಾದರೂ ಸಂಘಟನೆಯ ಕಾರ್ಯಕರ್ತನ ವಿರುದ್ಧ ಫೇಕ್‌ ನ್ಯೂಸ್‌ ಸಂಬಂಧಿತ ಪ್ರಕರಣ ದಾಖಲಾಗಿದ್ದರೆ ಅದು ಅಷ್ಟಾಗಿ ಸುದ್ದಿಯಾಗುತ್ತಿರಲಿಲ್ಲವೇನೊ. ಆದರೆ ಸಮೂಹ ಸುದ್ದಿ ಸಂಸ್ಥೆಗಳ ಒಡೆಯೊನಬ್ಬನ ಮೇಲೆ ಸುಳ್ಳು ಸುದ್ದಿ ಸಂಬಂಧಿತ ಪ್ರಕರಣ ದಾಖಲಾಗಿದೆ. ಹೀಗಾಗಿಯೇ ಇದು ಗಮನ ಸೆಳೆಯುತ್ತಿದೆ. ರಾಜೀವ್‌ ಚಂದ್ರಶೇಖರ್‌ ಒಡೆತನದಲ್ಲಿ ಸದ್ಯ ಏಷಿಯಾನೆಟ್‌ ನ್ಯೂಸ್‌ ನೆಟ್‌ವರ್ಕ್‌ (ಕನ್ನಡದ ಸುವರ್ಣ ನ್ಯೂಸ್‌, ಕನ್ನಡಪ್ರಭ, ಏಷಿಯಾನೆಟ್‌ ನ್ಯೂಸ್‌ ಮಲಯಾಳಮ್‌ ಸೇರಿದಂತೆ), ರಿಪಬ್ಲಿಕ್‌ ಟಿವಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ ಏಷಿಯಾನೆಟ್‌ ನ್ಯೂಸೆಬಲ್‌ ಮೂಲಕ ಡಿಜಿಟಲ್‌ ಮಾಧ್ಯಮ ಕ್ಷೇತ್ರಕ್ಕೂ ಕೂಡ ರಾಜೀವ್‌ ಒಡೆತನದ ಮಾಧ್ಯಮ ಕಾಲಿಟ್ಟಿದೆ.

ರಾಜೀವ್‌ ಚಂದ್ರಶೇಖರ್‌ ಸಕ್ರಿಯ ರಾಜಕಾರಣದಲ್ಲಿ ಮಹಾತ್ವಾಕಾಂಕ್ಷಿಯಾಗಿದ್ದು, ಕೇರಳ ಎನ್‌ಡಿಎ ಉಪಾಧ್ಯಕ್ಷರಾಗಿದ್ದಾರೆ. ಕೇರಳದಲ್ಲಿ ಮತ್ತು ಬೆಂಗಳೂರಿನ ರಾಜಕೀಯದಲ್ಲಿ ಹಿಡಿತ ಸಾಧಿಸುವತ್ತ ರಾಜೀವ್‌ ಹಲವು ವರ್ಷಗಳಿಂದ ಕಾರ್ಯನಿರತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಕೋಮು ಗಲಭೆಗೆ ಪ್ರಚೋದನೆ ನೀಡುವ ಪ್ರಕರಣದಲ್ಲಿ ರಾಜೀವ್‌ ವಿರುದ್ಧ ಯಾವ ರೀತಿಯ ಕಾನೂನು ಕ್ರಮ ತೆಗೆದುಕೊಳ್ಳಲಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ರಾಜೀವ್ ಮಾಲೀಕತ್ವದ ‘ಕನ್ನಡ ಪ್ರಭ’ ಪತ್ರಿಕೆ ಗುರುವಾರ ಸುವರ್ಣ ಸಂಭ್ರಮೋತ್ಸವವನ್ನು ಆಚರಿಸಿಕೊಂಡಿದೆ. ಈ ಸಮಯದಲ್ಲಿ ವಿಶೇಷ ಸಂಚಿಕೆಗೆ ಬರೆದ ಸಂದೇಶದಲ್ಲಿ, ‘ನನ್ನ ಪ್ರಕಾರ ಪತ್ರಿಕೋದ್ಯಮ ಎಂದರೆ ನೇರವಂತಿಕೆ, ದಿಟ್ಟತನ ಮತ್ತು ನಿರಂತರವಾಗಿ ಸತ್ಯವನ್ನು ಹೇಳುವ ವ್ರತ’ ಎಂದು ಅವರು ಬರೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Leave a comment

Top