An unconventional News Portal.

ಕಣ್ಣೂರಿನಿಂದ ‘ನಿಯಮ ಸಭಾ’ವರೆಗೆ: ಯಾರು ಈ ಮುಖ್ಯಮಂತ್ರಿ ಪಿಣರಾಯಿ ವಿಜಯನ್?

ಕಣ್ಣೂರಿನಿಂದ ‘ನಿಯಮ ಸಭಾ’ವರೆಗೆ: ಯಾರು ಈ ಮುಖ್ಯಮಂತ್ರಿ ಪಿಣರಾಯಿ ವಿಜಯನ್?

ರಕ್ತಸಿಕ್ತ ಅಧ್ಯಾಯಗಳನ್ನು ಒಳಗೊಂಡ ಜಿಲ್ಲೆ; ಕೇರಳ ರಾಜ್ಯದ ಕಣ್ಣೂರು. ಅಂತಹ ಜಿಲ್ಲೆಯ ಪಿಣರಾಯಿ ಎಂಬ ಹಳ್ಳಿಯ ಕೆಳಜಾತಿಯೊಂದರಲ್ಲಿ ಹುಟ್ಟಿದ ಆ ಹುಡುಗ ಓದಲು ಕಲಿತಿದ್ದ. ಅದೇ ಆತನನ್ನು ಮುಂದಿನ ಭವಿಷ್ಯ ರಾಜಕೀಯ ನೆಲೆಯತ್ತ ಕೊಂಡೊಯ್ದು ಇವತ್ತು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದೆ. ನಿಯಮ ಸಭಾ ಎಂದು ಜನಪ್ರಿಯವಾಗಿರುವ ಕೇರಳ ವಿಧಾನಸಭೆಯ ಚುಕ್ಕಾಣಿ ಹಿಡಿಯುವಂತೆ ಮಾಡಿದೆ.

ಸುದೀರ್ಘ 72ವರ್ಷಗಳ ತುಂಬು ಜೀವನದಲ್ಲಿ ‘ಪಿಣರಾಯಿ ವಿಜಯನ್’ ಎಂಬ ಹೆಸರಿನ ಜತೆಗೆ; ರಾಜಕೀಯ ಸಂಘರ್ಷಗಳು, ಪಕ್ಷದೊಳಗಿನ ಗುದ್ದಾಟಗಳು, ಅಧಿಕಾರವಧಿಯಲ್ಲಿ ಮಾಡಿದ ಒಳ್ಳೆಯ ಕೆಲಸಗಳು, ಎದುರಿಸಿದ ಹಗರಣಗಳ ಆರೋಪಗಳು ಹಾಗೂ ಅತ್ಯುತ್ತಮ ಸಂಘಟಕ ಎಂಬ ಪ್ರಶಂಸೆಗಳು… ಹೀಗೆ ದ್ವಂದ್ವಮಯ ವಿಚಾರಗಳು ಹಾಸುಹೊಕ್ಕಾಗಿವೆ.

ಫೆ. 25ಕ್ಕೆ ಮಂಗಳೂರಿನಲ್ಲಿ ಸಿಪಿಐ- ಎಂ ಪಕ್ಷ ಆಯೋಜಿಸುವ ‘ಐಕ್ಯತಾ ರ್ಯಾಲಿ’ಯ ಪ್ರಮುಖ ಆಕರ್ಷಣೆಯಾಗಿರುವ ಪಿಣರಾಯಿ ವಿಜಯನ್ ಅವರ ವ್ಯಕ್ತಿಚಿತ್ರ ಇದು. ಸಂಘಪರಿವಾರದ ಸಂಘಟನೆಗಳು ವಿಜಯನ್ ಆಗಮನಕ್ಕೆ ವಿರೋಧ ವ್ಯಕ್ತಪಡಿಸಿವೆ. ಅವರ ಭಾವಚಿತ್ರವನ್ನು ಒಳಗೊಂಡ ಫ್ಲೆಕ್ಸ್‌ಗಳಿಗೆ ಮಸಿ ಬಳಿಯಲಾಗಿದೆ. ತೊಕ್ಕೊಟ್ಟುನಲ್ಲಿರುವ ಪಕ್ಷದ ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಈ ಮೂಲಕ ರಾಜ್ಯಾದ್ಯಂತ ವಿಜಯನ್ ಆಗಮನಕ್ಕೂ ಮುನ್ನವೇ ‘ಪಿಣರಾಯಿ’ ಎಂಬ ಊರಿನ ಹೆಸರು ಪ್ರಚಾರ ಪಡೆದುಕೊಂಡಿದೆ.


Background: ಲೆಫ್ಟ್ ವರ್ಸಸ್ ರೈಟ್: ಫೆ. 25ಕ್ಕೆ ಮಂಗಳೂರಿನಲ್ಲಿ ಮತ್ತೊಂದು ಸುತ್ತಿನ ಸೌದ್ಧಾಂತಿಕ ಸಂಘರ್ಷ


ರಾಜ್ಯದಲ್ಲಿ ಇಷ್ಟೆಲ್ಲಾ ಸದ್ದು ಮಾಡುತ್ತಿರುವ ನೆರೆಯ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿಜಕ್ಕೂ ಯಾರು? ಅವರು ನಡೆದು ಬಂದ ಹಾದಿ ಎಂಥದ್ದು? ಅವರ ಆಡಳಿತದ ವೈಖರಿ ಹೇಗಿದೆ? ಮತ್ತಿತರ ತಳಮಟ್ಟದ ವಿಚಾರಗಳನ್ನೊಳಗೊಂಡ ಈ ವ್ಯಕ್ತಿಚಿತ್ರವನ್ನು ‘ಸಮಾಚಾರ’ ಓದುಗರಿಗಾಗಿ ಇಲ್ಲಿ ಕಟ್ಟಿಕೊಡಲಿದೆ.

ಸಂಘರ್ಷದ ಕೂಸು: 

ರಾಜ್ಯದ ಮಂಗಳೂರಿಗೂ ನೆರೆ ರಾಜ್ಯದ ಕಾಸರಗೋಡು ಮತ್ತು ಕಣ್ಣೂರುಗಳಿಗೆ ಹಳೆಯ ಸಂಬಂಧವೊಂದಿದೆ. ಅದಿನ್ನೂ ಬ್ರಿಟಿಷರಿದ್ದ ಕಾಲಘಟ್ಟ. ಅವತ್ತಿಗೆ ಒಂದಷ್ಟು ಹೆಸರು ಮಾಡಿದ್ದ ‘ಗಣೇಶ್ ಬೀಡಿ’ಗಳನ್ನು ಕಟ್ಟುತ್ತಿದ್ದವರು ಕಾಸರಗೋಡು ಮತ್ತು ಕಣ್ಣೂರಿನ ಬಡವರು. ಕಂಪನಿಯ ಮಾಲೀಕರು ಮಂಗಳೂರು ಮೂಲದವರು. ಹೀಗೆ ಈ ಊರುಗಳ ನಡುವೆ ಒಂದು ವ್ಯವಹಾರಿಕ ಸಂಬಂಧವೊಂದು ಬೆಳೆದುಕೊಂಡು ಬಂದಿತ್ತು. ಈ ಸಮಯದಲ್ಲಿ ಕಣ್ಣೂರಿನ ಬೀಡಿ ಕಾರ್ಮಿಕರನ್ನು ಸಂಘಟಿಸುವ ಕೆಲಸಕ್ಕೆ ಇಳಿದಿದ್ದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ- ಮಾರ್ಕ್ಸ್‌ಸಿಸ್ಟ್.

ಅವತ್ತಿಗಾಗಲೇ ಜನರ ಹಣದಲ್ಲಿ ಪಕ್ಷ ‘ದೇಶಾಭಿಮಾನಿ’ ಎಂಬ ಪತ್ರಿಕೆಯನ್ನು ಶುರುಮಾಡಿತ್ತು. ಸಹಕಾರಿ ತತ್ವಗಳಡಿ ಹುಟ್ಟಿಕೊಂಡ ಈ ಪತ್ರಿಕೆಯ ಇತಿಹಾಸವನ್ನು ಬರೆದರೆ ಅದೇ ಒಂದು ಪ್ರತ್ಯೇಕ ಅಧ್ಯಾಯ. ‘ದೇಶಾಭಿಮಾನಿ ಪತ್ರಿಕೆ’ ಕಡಿಮೆ ಅವಧಿಯಲ್ಲಿ ದೊಡ್ಡ ಮಟ್ಟದ ಜನರನ್ನು ತಲುಪಿತ್ತು. ವಿಶೇಷವಾಗಿ ಅನಕ್ಷರಸ್ಥ ಬೀಡಿ ಕಟ್ಟುವ ಕಾರ್ಮಿಕರ ನಡುವೆ ಪತ್ರಿಕೆ ಪ್ರಚಲಿತದಲ್ಲಿತ್ತು. ಅವತ್ತು ಕಣ್ಣೂರಿನ ಪಿಣರಾಯಿ ಗ್ರಾಮದಲ್ಲಿ ಬೀಡಿ ಕಟ್ಟುವ ಓದು ಬಾರದ ಜನರಿಗೆ ಪತ್ರಿಕೆಯನ್ನು ಓದಿ ಹೇಳುತ್ತಿದ್ದವರು ವಿಜಯನ್. ಹೀಗಾಗಿ, ಬೀಡಿ ಕಟ್ಟುವ ಜನರೇ ಅವರ ವಿದ್ಯಭ್ಯಾಸಕ್ಕೂ ಹಣ ನೀಡಿದರು ಎನ್ನುತ್ತವೆ ಅವರ ಕುರಿತು ಬಂದಿರುವ ವರದಿಗಳು.

“ಯಾವಾಗ ಬೀಡಿ ಕಾರ್ಮಿಕರ ನಡುವೆ ಪತ್ರಿಕೆಯ ಓದು ಜಾಗೃತಿಯನ್ನು ಹುಟ್ಟು ಹಾಕಿತೋ, ಮಾಲೀಕರು ಮಂಗಳೂರು ಮೂಲದ ಗೂಂಡಾಗಳ ಮೂಲಕ ಹಿಂಸೆಗೆ ಇಳಿದರು ಎನ್ನುತ್ತಾರೆ,” ಸಿಪಿಐ-ಎಂನ ರಾಜ್ಯ ಸಮಿತಿ ಸದಸ್ಯರಲ್ಲಿ ಒಬ್ಬರಾದ ಪ್ರಕಾಶ್. ಹೀಗೆ ಕಣ್ಣೂರಿನಲ್ಲಿ ಹುಟ್ಟಿಕೊಂಡ ಹಿಂಸಾಚಾರವನ್ನು ನೋಡಿಕೊಂಡೆ ಬೆಳೆದವರು ವಿಜಯನ್.

ತ್ರಿವೆಂಡ್ರಮ್‌ನಲ್ಲಿ ನಡೆದ ಪಕ್ಷದ ರಾಜ್ಯ ಸಮ್ಮೇಳನದಲ್ಲಿ ಪ್ರಕಾಶ್ ಕಾರಟ್ ಜತೆಗೆ ವಿಜಯನ್.

ತ್ರಿವೆಂಡ್ರಮ್‌ನಲ್ಲಿ ನಡೆದ ಪಕ್ಷದ ರಾಜ್ಯ ಸಮ್ಮೇಳನದಲ್ಲಿ ಪ್ರಕಾಶ್ ಕಾರಟ್ ಜತೆಗೆ ವಿಜಯನ್.

ರಾಜಕೀಯದಲ್ಲಿ ವೇಗದ ಬೆಳವಣಿಗೆ:

ವಿಜಯನ್ ಹುಟ್ಟಿದ್ದು ಮಾರ್ಚ್. 21, 1944ರಲ್ಲಿ. ಮುಂದೆ, ಕಾಲೇಜು ಕಲಿಯುವ ಹೊತ್ತಿಗಾಗಲೇ ಸಿಪಿಐ- ಎಂ ಪಕ್ಷದ ಕಾರ್ಯಕರ್ತರಾಗಿ ಬದಲಾಗಿದ್ದರು. 24ನೇ ವಯಸ್ಸಿಗಾಗಲೇ ಕಣ್ಣೂರು ಜಿಲ್ಲೆಯ ಪಕ್ಷದ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಹುದ್ದೆ ಮುಖ್ಯಮಂತ್ರಿ ಹುದ್ದೆಗಿಂತಲೂ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಹೀಗಿರುವಾಗ ಅತ್ಯಂತ ಕಡಿಮೆ ಅವಧಿಯಲ್ಲಿ ಕಣ್ಣೂರಿನಂತಹ ಜಿಲ್ಲೆಯಲ್ಲಿ ಪಕ್ಷದ ಕಾರ್ಯದರ್ಶಿ ಹುದ್ದೆಯನ್ನು ವಿಜಯನ್ ನಿಭಾಯಿಸುವ ಮೂಲಕ ಸಂಘಟನಾತ್ಮಕ ನಲೆಯಲ್ಲಿ ಮೊದಲ ಯಶಸ್ಸನ್ನು ಪಡೆದುಕೊಂಡರು. ತನ್ನ 26ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಗೆ ಎಂಎಲ್‌ಎ ಕೂಡ ಆದರು. ಮುಂದೆ, 1977, 1991, 1996ರಲ್ಲಿ ಅವರು ಜನಪ್ರತಿನಿಧಿಯಾಗಿ ಆಯ್ಕೆಯಾಗುವ ಮೂಲಕ ಪಕ್ಷದೊಳಗೆ ಹಿಡಿತ ಸಾಧಿಸಿಕೊಂಡು ಬಂದರು.

ತುರ್ತು ಪರಿಸ್ಥಿತಿ ಸಮಯದಲ್ಲಿ ವಿಜಯನ್‌ ಶಾಸಕರಾಗಿದ್ದರು. ಆಗ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಬಂಧಿಸಿದರು ಮತ್ತು ಲಾಕಪ್‌ನಲ್ಲಿ ಇಟ್ಟು ದೈಹಿಕ ಹಿಂಸೆ ಕೊಟ್ಟರು. ಜೈಲಿನಿಂದ ಹೊರಬಂದವೇ ಸೀದಾ ವಿಧಾನಸಭೆಗೆ ಹೋದ ವಿಜಯನ್‌ ರಕ್ತಸಿಕ್ತ ಅಂಗಿಯನ್ನು ತೋರಿಸುತ್ತಲೇ ಅಂದಿನ ಕಾಂಗ್ರೆಸ್ ನಾಯಕರ ವಿರುದ್ಧ ಉಗ್ರ ಭಾಷಣ ಮಾಡಿದ್ದರು. ಅದು ಇವತ್ತಿಗೂ ಕೇರಳದ ರಾಜಕೀಯ ಇತಿಹಾಸದಲ್ಲಿ ನೆನಪು ಮಾಡಿಕೊಳ್ಳುವ ಪ್ರಸಂಗವಾಗಿ ದಾಖಲಾಯಿತು.

ಮೊದಲ ಬಾರಿಗೆ ಪಿಣರಾಯಿ ವಿಜಯನ್ ಹೆಸರು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು ಪಕ್ಷದ ಹಿರಿಯ ನಾಯಕ ಅಚ್ಯುತಾನಂದನ್ ಜತೆಗಿನ ಗುದ್ದಾಟದ ಕಾರಣಕ್ಕೆ. 2007ರಲ್ಲಿ ಬಹಿರಂಗವಾಗಿ ಸವಾಲು ಹಾಕಲು ಶುರುಮಾಡುತ್ತಿದ್ದಂತೆ ಪಕ್ಷದಿಂದ ಇಬ್ಬರನ್ನೂ ಉಚ್ಛಾಟನೆ ಮಾಡಲಾಯಿತು. ನಂತರ ಸೇರ್ಪಡೆಗೊಂಡು ಪಕ್ಷದ ಮೇಲಿನ ಹಿಡಿತವನ್ನು ಉಳಿಸಿಕೊಂಡರು. 1998ರಿಂದ 2015ರವರೆಗೂ ಅವರು ಪಕ್ಷದ ರಾಜ್ಯ ಕಾರ್ಯದರ್ಶಿ ಸ್ಥಾನದಲ್ಲಿ ಸುದೀರ್ಘ ಅವಧಿಗೆ ಮುಂದುವರಿದರು. ಸದ್ಯ ಪಕ್ಷದ ಪಾಲಿಟ್‌ ಬ್ಯುರೋ (ರಾಜಕೀಯ ತೀರ್ಮಾನ ತೆಗೆದುಕೊಳ್ಳುವ ಪಕ್ಷದ ಅತ್ಯುನ್ನತ ಸಮಿತಿ) ಸದಸ್ಯರಾಗಿದ್ದಾರೆ.

“ವಿಜಯನ್‌ ಇವತ್ತು ಪಕ್ಷದೊಳಗೂ ಹಿಡಿತ ಹೊಂದಿದ್ದಾರೆ. ಆಡಳಿತದಲ್ಲಿಯೂ ಅವರಿಗೆ ಹಾದಿ ಸ್ಪಷ್ಟವಿದೆ. ಹೀಗಾಗಿ ಕೇರಳದ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಅವರು ಮುನ್ನೋಟ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ,” ಎನ್ನುತ್ತಾರೆ ಪಕ್ಷದ ಕರ್ನಾಟಕ ರಾಜ್ಯ ಸಮಿತಿಯ ಇನ್ನೊಬ್ಬ ಸದಸ್ಯ ಗುರುಶಾಂತ್.

ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್ ಪ್ರಮಾಣ ವಚನ.

ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್ ಪ್ರಮಾಣ ವಚನ.

ವಿವಾದಗಳ ನೆರಳಿನಲ್ಲಿ:

ಸುದೀರ್ಘ ಅವಧಿಯ ರಾಜಕೀಯ ಜೀವನದಲ್ಲಿ ಮುಖ್ಯಮಂತ್ರಿಯಾಗುವ ಮೊದಲು ಪಿಣರಾಯಿ ವಿಜಯನ್ ಅಧಿಕಾರ ಅನುಭವಿದ್ದು ಕೇವಲ ಒಂದು ಬಾರಿ; ಅದೂ ಎರಡು ವರ್ಷಗಳ ಅವಧಿಗೆ. 1996-98ರ ನಡುವೆ ಎಲ್‌ಡಿಎಫ್ ಸರಕಾರದಲ್ಲಿ ವಿಜಯನ್‌ ರಾಜ್ಯ ಇಂಧನ ಮತ್ತು ಸಹಕಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಈ ಸಮಯದಲ್ಲಿ ಕೇರಳ ವಿದ್ಯುತ್‌ಶಕ್ತಿ ವಿಚಾರದಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿತ್ತು. ಜತೆಗೆ, ಇದೇ ಅವಧಿಯಲ್ಲಿ ಕೆನಡಾ ಮೂಲಕ ಕಂಪನಿಯೊಂದಕ್ಕೆ ಟೆಂಡರ್ ನೀಡುವ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ವಿವಾದ ಶುರುವಾಗಿತ್ತು. ರಾಜ್ಯ ಸರಕಾರದ ಬೊಕ್ಕಸಕ್ಕೆ ಸುಮಾರು 350 ಕೋಟಿ ನಷ್ಟವಾಗಿದೆ ಎಂದು ಸಿಎಜಿ ವರದಿ ನೀಡುವ ಮೂಲಕ ವಿಜಯನ್‌ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ತನಿಖೆ ನಡೆಸಿದ ಸಿಬಿಐ ನೀಡಿದ ವರದಿಯ ಆರೋಪಿಗಳ ಪಟ್ಟಿಯಲ್ಲಿ ವಿಜಯನ್‌ರನ್ನು ಹೆಸರಿಸಿತ್ತು. ಆದರೆ ಇದು ರಾಜಕೀಯ ಷಡ್ಯಂತ್ರ ಎಂದು ಪಕ್ಷ ವಿಜಯನ್ ಬೆನ್ನಿಗೆ ನಿಂತಿತು. ಮುಂದೆ, ನ್ಯಾಯಾಲಯವೇ ವಿಜಯನ್‌ ಅವರಿಗೆ ಕ್ಲೀನ್‌ ಚಿಟ್ ನೀಡಿತ್ತು.

ಇದರ ಜತೆಗೆ ವಿಜಯನ್‌ ಹೆಸರಿಗೆ ಕಳಂಕ ತಂದಿದ್ದು ಕೋಯಿಕೊಡೆ ಜಿಲ್ಲೆಯ ಪಕ್ಷದ ನಾಯಕ ಚಂದ್ರಶೇಖರನ್‌ ಕೊಲೆ ಪ್ರಕರಣ. ವಿಜಯನ್‌ ಅವರೇ ಪ್ರತಿಸ್ಪರ್ಧಿಯನ್ನು ಕೊಲೆ ಮಾಡಿಸಿದ್ದಾರೆ ಎಂಬ ದೂರುಗಳು ಕೇಳಿಬಂದಿದ್ದವು. ಮತ್ತೊಮ್ಮೆ, ವಿಜಯನ್‌ ವಿಮಾನ ನಿಲ್ದಾಣದ ತಪಾಸಣೆ ವೇಳೆ ಪಿಸ್ತೂಲಿನ ಗುಂಡುಗಳ ಜತೆ ಸಿಕ್ಕಿಬಿದ್ದಿದ್ದರು. ಕೊನೆಗೆ ಅವರು ಪರವಾನಗಿ ತೋರಿಸಿ ಹೊರಬಂದಿದ್ದರು. ಇತ್ತಿಚೆಗಷ್ಟೆ ಅವರ ಸಂಬಂಧಿಕರ ಮೇಲೆ ಆರೋಪವೊಂದು ಕೇಳಿಬಂದಿತ್ತು.

ಆಡಳಿತದಲ್ಲಿ ಹೊಸ ನಡೆ:

ಹೀಗೆ ಪಕ್ಷದೊಳಗೆ ಮತ್ತು ಹೊರಗೆ ಸಂಘರ್ಷಗಳಲ್ಲೇ ಬೆಳದುಬಂದ ವಿಜಯನ್‌ 2016ರ ಚುನಾವಣೆಯಲ್ಲಿ ಧರ್ಮಾದೂಮ್ ಕ್ಷೇತ್ರದಲ್ಲಿ 38 ಸಾವಿರ ಮತಗಳ ಅಂತರದಿಂದ ಗೆದ್ದು ಬಂದರು. 93 ವರ್ಷದ ಹಿರಿಯ ನಾಯಕ ಅಚ್ಯುತಾನಂದನ್‌ ಅವರನ್ನು ಪಕ್ಕಕ್ಕೆ ಸರಿಸಿ ಮುಖ್ಯಮಂತ್ರಿಯೂ ಆದರು.

‘ಮುಖದಲ್ಲಿ ನಗುವೇ ಇಲ್ಲದ ನಾಯಕ’ ಎಂಬುದು ವಿಜಯನ್‌ ಬಗೆಗೆ ಇರುವ ಜನಪ್ರಿಯ ಮಾತು. “ವಿಜಯನ್‌ ಯಾರನ್ನೂ ಅಷ್ಟು ಸುಲಭಕ್ಕೆ ಹತ್ತಿರ ಬಿಟ್ಟುಕೊಳ್ಳುವುದಿಲ್ಲ, ನಂಬುವುದಿಲ್ಲ. ಆದರೆ ಒಮ್ಮೆ ನಂಬಿದರೆ ಮತ್ತವರು ಯಾವತ್ತೂ ಅನುಮಾನಿಸುವುದಿಲ್ಲ,” ಎನ್ನುತ್ತಾರೆ ಅವರ ‘ಪತ್ರಿಕಾ ಸಲಹೆಗಾರ’ ಪ್ರಭಾ ವರ್ಮಾ. ಪ್ರಭಾ ವರ್ಮಾ ‘ಏಷಿಯನ್‌ ಏಜ್’ ಪತ್ರಿಕೆಯ ಸ್ಥಾನಿಕ ಸಂಪಾದಕರಾಗಿದ್ದವರು.

ವಿಜಯನ್‌ ಆಡಳಿತದಲ್ಲಿ ವೈಜ್ಞಾನಿಕ, ಕಾನೂನು ಮತ್ತು ಹಣಕಾಸು ಸಲಹೆಗಾರರ ಸ್ಥಾನಗಳಿಗೆ ನೇಮಕ ಮಾಡಿಕೊಳ್ಳಲಾಗಿದೆ. ಇಲ್ಲೊಂದು ವಿಶೇಷವೂ ಇದೆ. ಮಾಧ್ಯಮಗಳ ವಿಚಾರಕ್ಕೆ ಬಂದರೆ, ಎಲೆಕ್ಟ್ರಾನಿಕ್ ಮತ್ತು ಪ್ರಿಂಟ್ ಮಾಧ್ಯಮಗಳಿಗೆ ಪ್ರತ್ಯೇಕ ಸಲಹೆಗಾರರನ್ನು ವಿಜಯನ್‌ ನೇಮಕ ಮಾಡಿಕೊಂಡಿದ್ದಾರೆ. ವಿಜಯನ್‌ ಅವರ ನ್ಯೂಸ್ ಮೀಡಿಯಾ ಸಲಹೆಗಾರರಾದ ಜಾನ್‌ ಬ್ರಿತಾಸ್‌ ಅವರನ್ನು ‘ಸಮಾಚಾರ’ ಸಂಪರ್ಕಿಸಿದಾಗ, “ನೀವು ಆನ್‌ಲೈನ್ ಮೀಡಿಯಾದವರಲ್ವಾ? ಪ್ರಭಾ ಅವರನ್ನೇ ಸಂಪರ್ಕಿಸಿ,” ಎಂದರು.

ವಿಜಯನ್‌ ಅವರ ಆಡಳಿತದಲ್ಲಿ ಕೇರಳ ಕಮ್ಯುನಿಸ್ಟ್ ಪಕ್ಷದಲ್ಲಿ ಕೈಗಾರಿಕರಣದ ಒತ್ತು ಹೆಚ್ಚಿರುವಂತೆ ಕಾಣಿಸುತ್ತಿದೆ. ಅವರೇ ‘ದಿ ಹಿಂದೂ’ ಪತ್ರಿಕೆ ಬರೆದ ಅಂಕಣವೊಂದರಲ್ಲಿ ಅವರ ಆಡಳಿತ ಮುಂದಿನ ನಡೆಗಳನ್ನು ಸ್ಪಷ್ಟವಾಗಿ ಬಿಚ್ಚಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ದೂರಗಾಮಿ ನೆಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಸರಕಾರ ಉದ್ದೇಶಿಸಿದೆ. ಜತೆಗೆ, ದೇಶದಲ್ಲಿ ಕೇರಳ ರಾಜ್ಯ ಅಭಿವೃದ್ಧಿ ಪಥದಲ್ಲಿ ಗುರುತಿಸಿಕೊಳ್ಳುವ ಯೋಚನೆ ಅವರಿಗಿದ್ದ ಹಾಗಿದೆ. ಸಹಕಾರಿ ಚಳುವಳಿಗಳನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ವಿಜಯನ್‌ ಆಲೋಚನೆಗಳಿವೆ.

ಇವೆಲ್ಲಾ ಏನೇ ಇದ್ದರು ಮುಂದಿನ ದಿನಗಳಲ್ಲಿ ಕೇರಳದಲ್ಲಾಗುವ ಬದಲಾವಣೆಗಳೇ ವಿಜಯನ್‌ ಆಡಳಿತಕ್ಕೆ ಪ್ರಗತಿ ಪತ್ರವಾಗಲಿವೆ. ಸದ್ಯ ಅವರು ಮಂಗಳೂರಿಗೆ ಬರಲಿದ್ದಾರೆ. ವಿವಾದ ಎದ್ದ ಕಾರಣಕ್ಕಾದರೂ ರಾಜ್ಯದ ಜನರಿಗೆ ವಿಜಯನ್‌ ಎಂಬ ವ್ಯಕ್ತಿತ್ವದ ಕುರಿತು ಕುತೂಹಲ ಮೂಡಿದೆ.

Leave a comment

Top