An unconventional News Portal.

ನೀವು ಬ್ಲಾಕ್ ಮೇಲರ್ಸ್, ಸತ್ಯವನ್ನು ನೇಣು ಹಾಕುವವರು: ‘ಡೋಂಟ್ ಟಾಕ್ ರಬ್ಬಿಶ್’ ಕೆಂಪಯ್ಯ!

ನೀವು ಬ್ಲಾಕ್ ಮೇಲರ್ಸ್, ಸತ್ಯವನ್ನು ನೇಣು ಹಾಕುವವರು: ‘ಡೋಂಟ್ ಟಾಕ್ ರಬ್ಬಿಶ್’ ಕೆಂಪಯ್ಯ!

ರಾಜ್ಯ ಗೃಹ ಇಲಾಖೆಯ ಭದ್ರತಾ ಸಲಹೆಗಾರ ಕೆಂಪಯ್ಯ ಮಾಧ್ಯಮಗಳ ವಿರುದ್ಧ ಹರಿಹಾಯ್ದ ಘಟನೆಗೆ ಬುಧವಾರ ಸಂಜೆ ಬೆಂಗಳೂರಿನ ಇನ್ಫೆಂಟ್ರಿ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಯ ಆವರಣ ಸಾಕ್ಷಿಯಾಯಿತು.

ಅರ್ಕಾವತಿ ಡಿ- ನೋಟಿಫಿಕೇಶನ್ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಆದಾಯ ತೆರಿಗೆ ಇಲಾಖೆಯು ಕೆಂಪಯ್ಯ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು. ಈ ಸಂಬಂಧ ಕೆಂಪಯ್ಯ ಬುಧವಾರ ಸಂಜೆ 5. 30ರ ಸುಮಾರಿಗೆ ಇನ್ಫೆಂಟ್ರಿ ರಸ್ತೆಯಲ್ಲಿರುವ ಕಚೇರಿಗೆ ಆಗಮಿಸಿದ್ದರು. ಸುದ್ದಿ ತಿಳಿದ ಮಾಧ್ಯಮಗಳು ಹೊರಗೆ ಕಾಯುತ್ತಿದ್ದವು.

ರಾತ್ರಿ 8.30ರ ಸುಮಾರಿಗೆ ವಿಚಾರಣೆ ಮುಗಿಸಿ ಹೊರಬಂದ ಕೆಂಪಯ್ಯ ಅವರನ್ನು ಮಾಧ್ಯಮಗಳು ಸುತ್ತುವರಿದಾಗ, ತಾಳ್ಮೆಯಿಂದಲೇ ಉತ್ತರಿಸಲು ಶುರುಮಾಡಿದರು. ಮಧ್ಯದಲ್ಲಿ ಸುದ್ದಿವಾಹಿನಿಯೊಂದರ ವರದಿಗಾರರೊಬ್ಬರು ‘ನಿಮ್ಮ ಮೇಲೆ ಅಕ್ರಮ ಆಸ್ತಿ ಆರೋಪ ಬಂದಿದೆ ಅಂತಲ್ಲ’ ಎಂಬ ಪ್ರಶ್ನೆಯನ್ನು ಎಸೆಯುತ್ತಲೇ ಕೆಂಪಯ್ಯರ ತಾಳ್ಮೆ ಕಟ್ಟೆ ಒಡೆಯಿತು.

‘ಡೋಂಟ್ ಟಾಕ್ ರಬ್ಬಿಶ್, ಯು ಫೆಲ್ಲೊಸ್’, ಎನ್ನುತ್ತಲೇ ಮಾಧ್ಯಮಗಳ ವಿರುದ್ಧ ಹರಿಹಾಯ್ದ ಕೆಂಪಯ್ಯ, ಮುಂದಿನ 10-15 ನಿಮಿಷಗಳ ಕಾಲ ಉಗ್ರಾವತಾರವನ್ನು ಪ್ರದರ್ಶಿಸಿದರು. “ಬ್ಲಡ್ ಕೊಡುವ ಜನ ನಾವು. ಇನ್ನೊಬ್ಬರ ದುಡ್ಡನ್ನು ಡಾ. ರಾಜ್ ಕುಮಾರ್ ಕಕ್ಕಸ್ಸು ಎಂದಿದ್ದಾರೆ. ನಾನು ಕಕ್ಕಸ್ಸು ತಿನ್ನುವ ಕೆಲಸವನ್ನು ಯಾವತ್ತಿಗೂ ಮಾಡುವುದಿಲ್ಲ. ನಿಮಗೆ ಮ್ಯಾನರ್ಸ್ ಇಲ್ಲ. ಸತ್ಯವನ್ನು ಸುಳ್ಳು ಮಾಡುವ ಜನ ನೀವು. ಸುಳ್ಳುಗಾರರು. ಬ್ಲಾಕ್ ಮೇಲ್ ಮಾಡುವವರು. ನಿಮ್ಮನ್ನು ನೋಡಿಕೊಳ್ಳಲು ದೇವರೊಬ್ಬ ಇದ್ದಾನೆ. ವಿಧಾನಸೌಧದ ಮುಂದೆ ಸತ್ಯವನ್ನು ನೇಣು ಹಾಕುತ್ತಿದ್ದೀರಿ. ನೆಮ್ಮದಿಯಾಗಿ ಬದುಕುವುದಕ್ಕೂ ಬಿಡುವುದಿಲ್ಲ. ಅವರೂ ತಿನ್ನಬೇಕು, ನಿಮಗೂ ತಿನ್ನಿಸಬೇಕು. ಅಯೋಗ್ಯರು ನೀವು,” ಎಂದು ಮಾಧ್ಯಮಗಳಿಗೆ ಯರ್ರಾಬಿರ್ರಿ ಉಗಿಯಲಾರಂಭಿಸಿದರು.

ಈ ಹಂತದಲ್ಲಿ ಮಾಧ್ಯಮ ಪ್ರತಿನಿಧಿಗಳು ಅವರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿದರಾದರೂ, ಕೆಂಪಯ್ಯರ ರಕ್ತದೊತ್ತಡ ತಣ್ಣಗಾಗಲು ಬಿಡಲಿಲ್ಲ.

ನಂತರ, ಕಾರು ಹತ್ತಲು ಬಂದರೂ ಅವರ ಬೈಗುಳಗಳು ನಿಯಂತ್ರಕ್ಕೆ ಬರಲಿಲ್ಲ. “ನೀವು ತಾಳ್ಮೆಯನ್ನು ಪರೀಕ್ಷಿಸುತ್ತೀರಿ. ನನ್ನ ಸಹನೆಯನ್ನು ಕಟ್ಟೆ ಒಡೆಯುವಂತೆ ಮಾಡಿದ್ದೀರಿ. ಮೀಡಿಯಾ ಇಸ್ ವೆರಿ ವೆರಿ ಬ್ಯಾಡ್,” ಎಂದರು ಕೆಂಪಯ್ಯ. ಒಂದು ಹಂತದಲ್ಲಿ ಕಾರಿನಲ್ಲಿ ಕುಳಿತವರು ಇಳಿದು ಬಂದು, ”ತಗೊಳ್ಳಿ ಎಷ್ಟು ತಗೋತೀರೋ ತಗೊಳ್ಳಿ,” ಎಂದು ಟಿವಿ ಕ್ಯಾಮೆರಾಗಳ ಮುಂದೆ ಅಕ್ಷರಶಃ ಸಿನೆಮಾ ಶೈಲಿಯಲ್ಲಿ ಗುಟುರು ಹಾಕಿದರು.

ಹಿನ್ನಲೆ:

ಬುಧವಾರ ಮಧ್ಯಾಹ್ನದ ನಂತರ ಕನ್ನಡದ ಸುದ್ದಿವಾಹಿನಿ ಬಿಟಿವಿಯಲ್ಲಿ ಕೆಂಪಯ್ಯರ ಹೆಸರನ್ನು ಹಾಕದೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರೊಬ್ಬರ ಮೇಲೆ ತೆರಿಗೆ ಇಲಾಖೆ ಆರೋಪ ಬಂದಿದೆ. ಅವರ ಬಳಿ ಮೂರು ಕೋಟಿ ರೂಪಾಯಿ ವಾಚಿದೆ. ಅವರ ಬಣ್ಣ ಬಯಲು ಮಾಡುತ್ತೀವಿ, ಮತ್ತಿತರ ಆರೋಪಗಳಿಂದ ಕೂಡಿದ ಸುದ್ದಿ ಭಿತ್ತರವಾಗಲು ಶುರುವಾಯಿತು. ಇದನ್ನು ವಾಹಿನಿ ‘ತನಿಖಾ ಪತ್ರಿಕೋದ್ಯಮ’ ಎಂದು ಹೇಳಿಕೊಂಡಿತು.

ಸಂಜೆ, ಮೂರು ಗಂಟೆಗಳ ಕಾಲ ವಿಚಾರಣೆಯಲ್ಲಿ ಪಾಲ್ಗೊಂಡು ಮಾನಸಿಕ ಒತ್ತಡಕ್ಕೊಳಗಾದ ಸ್ಥಿತಿಯಲ್ಲಿಯೇ ಹೊರಬಂದ ಕೆಂಪಯ್ಯ ಮಾಧ್ಯಮಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದರು. ಕೆಂಪಯ್ಯರ ಗುಟುರು ಟಿವಿವಾಹಿನಿಗಳನ್ನು ತಲುಪುತ್ತಲೇ, ಆಯಕಟ್ಟಿನ ಸ್ಥಾನದಲ್ಲಿರುವ ಅಧಿಕಾರಿಯೊಬ್ಬರು ಹೀಗೆ ಬೀಸು ಹೇಳಿಕೆ ನೀಡುವುದು ಸರಿಯಲ್ಲ ಎಂದು ಬೊಬ್ಬಿರಿಯಲು ಸುದ್ದಿವಾಹಿನಿಗಳು ಶುರುಮಾಡಿದರು. ಸುವರ್ಣ ಸುದ್ದಿವಾಹಿನಿ, ಕೆಂಪಯ್ಯ ಅವರಿಗೆ, ‘ಬ್ಲಾಕ್ ಮೇಲ್ ಮಾಡಿದ ಪತ್ರಕರ್ತರು ಯಾರು? ಬಹಿರಂಗಪಡಿಸಿ, ಇಲ್ಲವೇ ಕ್ಷಮೆ ಕೇಳಿ’ ಎಂದು ಆಗ್ರಹಿಸಿತು.

kempayya-suv-3

ಟಿವಿ9 ಸುದ್ದಿವಾಹಿನಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಕೆಂಪಯ್ಯ ಅವರ ಗಂಭೀರ ಆರೋಪವನ್ನು ‘ಒಂದು ವಾಹಿನಿಗೆ’ ಸೀಮಿತಗೊಳಿಸಿತು. ‘ಕೆಂಪಯ್ಯ ಅವರೇ ನಿಮಗೆ ಬ್ಲಾಕ್ ಮೇಲ್ ಮಾಡಿದ ವಾಹಿನಿ ಅಥವಾ ಪತ್ರಕರ್ತ ಯಾರು ಎಂದು ಬಹಿರಂಗಪಡಿಸಿ’ ಎಂದು ಅದು ತನ್ನ ಸುದ್ದಿ ನಿರೂಪಕರ ಮೂಲಕ ಹೇಳಿಸಿತು.

ಪ್ರತಿಕ್ರಿಯೆ:

ಘಟನೆಗೆ ಸಾಮಾಜಿಕ ಜಾಲತಾಣದಲ್ಲಿ ತಕ್ಷಣದ ಪ್ರತಿಕ್ರಿಯೆ ವ್ಯಕ್ತವಾಯಿತು. ‘ಕೆಂಪಯ್ಯ ಹೇಳಿದ್ದರಲ್ಲಿ ಸತ್ಯವಿದೆ’ ಎನ್ನುವ ಅರ್ಥದಲ್ಲಿ ಅಭಿಪ್ರಾಯಗಳನ್ನು ಹಂಚಿಕೊಳ್ಳಲಾಯಿತು.

kempayya-rection-fb-1

ಈ ವಿಚಾರ ಗುರುವಾರ ತೆಗೆದುಕೊಳ್ಳಲಿರುವ ತಿರುವುಗಳು ಬಗ್ಗೆ ಕುತೂಹಲವನ್ನಂತೂ ಮೂಡಿಸಿದೆ.

Top