An unconventional News Portal.

ಮರೆತ ಕಾಶ್ಮೀರವನ್ನು, ಜತೆಗೆ ‘ಆಮ್ನೆಸ್ಟಿ’ಯನ್ನೂ ನೆನಪಿಸಿದ ಬೆಂಗಳೂರು ಪ್ರತಿಭಟನೆ…!

ಮರೆತ ಕಾಶ್ಮೀರವನ್ನು, ಜತೆಗೆ ‘ಆಮ್ನೆಸ್ಟಿ’ಯನ್ನೂ ನೆನಪಿಸಿದ ಬೆಂಗಳೂರು ಪ್ರತಿಭಟನೆ…!

ಸುದ್ದಿಯ ಕೇಂದ್ರ ಸ್ಥಾನದಲ್ಲಿದ್ದ ಕಾಶ್ಮೀರದ ಜಾಗ ಈಗ ಬದಲಾಗಿದೆ. ಮುಖ್ಯವಾಹಿನಿ ಮಾಧ್ಯಮಗಳಾವುವೂ ಕಾಶ್ಮೀರದ ವಿಷಯ ಮುಟ್ಟುತ್ತಿಲ್ಲ. ಹಾಗಾದರೆ ಕಾಶ್ಮೀರ ಶಾಂತವಾಯಿತಾ? ಇಲ್ಲ.

ಸೋಮವಾರ ಕೆಂಪುಕೋಟೆಯ ಮೇಲೆ ನಿಂತು ನರೇಂದ್ರ ಮೋದಿ, ನಿಮ್ಮ ಪ್ರೇರಿತ ಭಯೋತ್ಪಾದನೆ ನಿಲ್ಲಿಸಿ ಎಂದು ಪಾಕಿಸ್ತಾನಕ್ಕೆ ತಾಕೀತು ಮಾಡಿದರು. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಬಲೂಚಿಸ್ತಾನದ ಜನತೆಗೆ ಬೆಂಬಲ ನೀಡಿದ್ದಕ್ಕೆ ಧನ್ಯವಾದ ಹೇಳಿದರು.

ಅದೇ ಹೊತ್ತಿಗೆ ಇತ್ತ ನೌಹಟ್ಟಾದಲ್ಲಿ ಓರ್ವ ಸಿಆರ್ಪಿಎಫ್ ಅಧಿಕಾರಿಯನ್ನು ಹೊಡೆದುರುಳಿಸಲಾಯಿತು. ಭಾನುವಾರ ಮತ್ತು ಸೋಮವಾರ ಕ್ರಮವಾಗಿ ಪಾಕಿಸ್ತಾನ ಮತ್ತು ಭಾರತದ ಸ್ವಾತಂತ್ರ್ಯ ದಿನಗಳ ಹಿನ್ನಲೆಯಲ್ಲಿ ಕಣಿವೆ ರಾಜ್ಯದಲ್ಲಿ ಚಟುವಟಿಕೆಗಳು ತುಸು ಹೆಚ್ಚೇ ಗರಿಗೆದರಿವೆ.

ಕಳೆದ ಒಂದು ತಿಂಗಳಿನಲ್ಲಿ ಕಾಶ್ಮೀರದ 60ಕ್ಕೂ ಹೆಚ್ಚು ಜನ ಪ್ರಾಣ ತೆತ್ತಿದ್ದಾರೆ. 5000ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇವರಲ್ಲಿ 120ಕ್ಕೂ ಹೆಚ್ಚು ಜನ ಕಣ್ಣು ಕಳೆದುಕೊಂಡಿದ್ದಾರೆ. ಅವರಿನ್ನೆಂದಿಗೂ ಈ ಜಗತ್ತನ್ನು ನೋಡಲಾರರು. ಬಹುಶಃ ಕಣಿವೆ ರಾಜ್ಯದಲ್ಲಿ ಶಾಂತಿ ನೆಲೆಸಬೇಕು ಎಂಬ ನಿರೀಕ್ಷೆಗಾದ ದೊಡ್ಡ ಹಿನ್ನಡೆ ಇದು.

ಹಿಜ್ಬುಲ್ಲಾ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವನಿ ಸಾವಿನ ಬೆನ್ನಿಗೆ ಹತ್ತಿಕೊಂಡ ಕಾಶ್ಮೀರಿಗರ ಆಕ್ರೋಷದ ಬಿಸಿ ಇನ್ನೂ ತಣ್ಣಗಾಗಿಲ್ಲ. ಆದರೆ ಮಾಧ್ಯಮ, ಜನರ್ಯಾರೂ ಇದರತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ ಅಷ್ಟೆ. ಹಾಗಾದರೆ ಸದ್ಯ ಕಣಿವೆ ರಾಜ್ಯ ಹೇಗಿದೆ ಎಂಬುದನ್ನು ಬಿಬಿಸಿಯ ಜಸ್ಟಿನ್ ರೌಲೆಟ್ ಇಲ್ಲಿ ಕಟ್ಟಿಕೊಟ್ಟಿದ್ದಾರೆ.


kashmiri ho lost his son “ಇದೇ ಬುಲೆಟ್ ನನ್ನ ಮಗನನ್ನು ಕೊಂದದ್ದು,” ಕೈಯಲ್ಲಿ ತಾಮ್ರದ ಕಾರ್ಟ್ರಿಡ್ಜ್ ಹಿಡಿದುಕೊಂಡ ಅಬ್ದುಲ್ ರೆಹ್ಮಾನ್ ಮಿರ್ ಹೇಳುತ್ತಿದ್ದರು.

ತಿಂಗಳ ಕೆಳಗೆ ಶ್ರೀನಗರದಲ್ಲಿರುವ ನನ್ನ ಕುಟುಂಬದ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದರು ಎನ್ನುತ್ತಾರೆ ಅವರು. ಅಂದ ಹಾಗೆ ಶ್ರೀನಗರ, ಜಮ್ಮು ಮತ್ತು ಕಾಶ್ಮೀರದ ರಾಜಧಾನಿ.

ಕಿಟಕಿಗಳನ್ನು ಪುಡಿ ಮಾಡಿದ್ದಷ್ಟೇ ಅಲ್ಲ ಅಶ್ರುವಾಯು ಸಿಡಿಸಿದರು. ಮನೆಯಲ್ಲಿ ಬಿದ್ದಿದ್ದ ಗ್ರೆನೇಡಿನ ಚೂರುಗಳ ಜೊತೆಗೆ ಅವರ ಮಗನ ರಕ್ತವನ್ನೂ ಕರ್ಚೀಫಿನಲ್ಲಿ ಒರೆಸಿಕೊಂಡು ಬಂದಿದ್ದರು ಮಿರ್.

“ಅವರು ಆತನನ್ನು ಇಲ್ಲಿಂದಲೇ ಎಳೆದೊಯ್ದರು,” ಎಂದು ಮೊದಲ ಮಹಡಿಯಲ್ಲಿದ್ದ ಕೋಣೆ ತೋರಿಸಿ ಅವರು ಹೇಳುತ್ತಿದ್ದರು. “ಗಾರ್ಡನಿನಲ್ಲಿಯೇ ಆತನನ್ನು ಕೊಂದರು. ಇದು ಆತ ಸತ್ತ ಜಾಗ,” ಬೆರಳು ತೋರಿಸಿದರು.

ನಮ್ಮನ್ನು ಹಿಂಬಾಲಿಸಿ ಮನೆವರೆಗೆ ಬಂದಿದ್ದ ಗುಂಪು ಹೊರಗಡೆ ಆಕ್ರೋಷದಿಂದಿತ್ತು.

ಆದರೆ ಇವರು ಹೇಳಿದ್ದನ್ನು ರಾಜ್ಯ ಸರಕಾರ ಒಪ್ಪುವುದಿಲ್ಲ. ಕಲ್ಲು ತೂರುತ್ತಿದ್ದ ಗುಂಪನ್ನು ನಿಯಂತ್ರಿಸುವ ವೇಳೆಯಲ್ಲಿ ಶಬಿರ್ ಅಹಮದ್ ಮಿರ್ ಸಾವನ್ನಪ್ಪಿದ ಎಂಬುದು ಅದರ ವಾದ.

ಮಿರ್ ಜೊತೆ ಮಾತನಾಡುತ್ತಿದ್ದಾಗಲೇ ಹೊರಗಡೆಯಿಂದ ಜನರ ಪಿಸು ಮಾತುಗಳು ಕೇಳಿಸುತ್ತಿದ್ದವು. ಸ್ವಲ್ಪ ಹೊತ್ತಿನಲ್ಲೇ ಅಲ್ಲಿಂದ ಘೋಷಣೆಗಳು ಆರಂಭವಾದವು.

ಬಿಬಿಸಿಯ ವರದಿಗಾರ ಅಲ್ಲಿದ್ದಾನೆ ಎಂಬ ಸುದ್ದಿ ಮಿಂಚಿನಂತೆ ಹರಡಿ, ಅಲ್ಲಿ ಜನ ಸೇರಿದ್ದರು. ಕರ್ಫೂ ಹೇರಿದ್ದನ್ನೂ ಲೆಕ್ಕಿಸದೆ ಅವರೆಲ್ಲಾ ಸೂಕ್ಷ್ಮ ಪ್ರದೇಶದೊಳಕ್ಕೆ ಕಾಲಿಟ್ಟಿದ್ದರು.

“ಆಝಾದಿ! ಆಝಾದಿ!” ಅವರು ಕೂಗುತ್ತಿದ್ದರು.

ನಿಜ ಹೇಳಬೇಕೆಂದರೆ ನಾನು ಒಂದು ಕ್ಷಣ ಬೆವತು ಹೋದೆ. ನಾನಿದ್ದ ಮನೆಯ ಸುತ್ತ ಕೆರಳಿದ ಜನರಿದ್ದಾರೆ. ಅದೂ ಮಿಲಿಟರಿ ಮತ್ತು ಪೊಲೀಸರ ಸರ್ಪಗಾವಲಿರುವ ನಗರದಲ್ಲಿ.

ಆದರೆ ಅವರ ಆಕ್ರೋಷ ನನ್ನ ಮೇಲಾಗಿರಲಿಲ್ಲ; ಬದಲಿಗೆ ಭಾರತದ ಮೇಲಾಗಿತ್ತು.

“ಗೋ ಇಂಡಿಯಾ, ಗೋ ಬ್ಯಾಕ್!,” ಅವರು ಘೋಷಣೆ ಕೂಗುತ್ತಿದ್ದರು.

ಮುಸ್ಲಿಮರೇ ಬಹು ಸಂಖ್ಯಾತರಾಗಿರುವ ಕಾಶ್ಮೀರ 1947ಕ್ಕೂ ಮೊದಲು ಬ್ರಿಟೀಷರ ಆಳ್ವಿಕೆಯಲ್ಲಿ ಭಾರತಕ್ಕೆ ಸೇರಿತ್ತು. ಇದಾದ ಬಳಿಕ ಅಲ್ಲಿನ ಜನ ನಿರಂತರವಾಗಿ ಸ್ವಾತಂತ್ರ್ಯಕ್ಕಾಗಿ ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದಾರೆ.

ಘೋಷಣೆ ಕೂಗುತ್ತಿದ್ದವರ ಬಳಿಗೆ ಬಂದರೆ, ಅಲ್ಲಿ ಏನು ನಡೆಯಿತು ಎಂಬುದನ್ನು ಹೇಳಲು ಅವರೆಲ್ಲಾ ತುದಿಗಾಲಲ್ಲಿ ನಿಂತಿದ್ದಾರೆ. ಅಷ್ಟೇ ಅಲ್ಲ ಜಾಗತಿಕ ಮಾಧ್ಯಮಗಳಲ್ಲಿ ಇಲ್ಲಿನ ತಳಮಳ ಯಾಕೆ ವರದಿಯಾಗುತ್ತಿಲ್ಲ ಎಂದು ನನ್ನ ಬಳಿ ಪ್ರಶ್ನಿಸಿದರು.

ಹೌದು ನಿಜ, ಒಂದು ಕಾಲದಲ್ಲಿ ಕಾಶ್ಮೀರ ವಿಚಾರ ದೊಡ್ಡ ಸುದ್ದಿಯಾಗುತ್ತಿತ್ತು. ನಾವು ಈ ಹಿಂದಿನ ಘಟನೆಗಳನ್ನು ನೋಡಿದರೆ ದೊಡ್ಡ ಮಟ್ಟದ ಅಂತರಾಷ್ಟ್ರೀಯ ಚರ್ಚೆಯನ್ನು ಇದು ಹುಟ್ಟುಹಾಕಿತ್ತು. ಈ ಬಾರಿಯದು ಅದೇ ರೀತಿಯ ಘಟನೆ.

ಈ ಹಸಿರು ಭೂಮಿಯ ಮೇಲೆ ಭಾರತ ಮತ್ತು ಪಾಕಿಸ್ತಾನ ಹಕ್ಕು ಸ್ಥಾಪಿಸುತ್ತಲೇ ಬಂದಿವೆ. ಇದೇ ಕಾಶ್ಮೀರಕ್ಕಾಗಿ ಎರಡೂ ದೇಶಗಳು ಎರಡು ಬಾರಿ ಯುದ್ಧವನ್ನು ಮಾಡಿವೆ. ಆದರೆ ಈ ನೆಲ ಮಾತ್ರ ವಿಶ್ವದಲ್ಲಿ ಹೆಚ್ಚು ಬಂಡುಕೋರರಿರುವ ತಾಣಗಳಲ್ಲಿ ಒಂದಾಗಿದೆ.

ಇಲ್ಲಿನ ಅಪಾಯಗಳು ಇನ್ನೂ ಮುಗಿದಿಲ್ಲ. ಹಾಗೆ ನೋಡಿದರೆ 9/11, ಐಸಿಸ್ ನ ಬೆಳವಣಿಗೆ, ಸಿರಿಯಾದ ಸಂಘರ್ಷ, ಅಮೆರಿಕಾ ಮತ್ತು ಯೂರೋಪ್ ಭಯೋತ್ಪಾನೆ ಹೀಗೆ ಎಲ್ಲಾ ವಿಚಾರಗಳಿಗೂ ಕಣಿವೆ ರಾಜ್ಯ ಪ್ರತಿಸ್ಪಂದಿಸುತ್ತಲೇ ಬಂದಿದೆ.

ಆದರೆ ಇತ್ತೀಚಿಗಿನ ಈ ಹಿಂಸಾಚಾರಕ್ಕೆ ಕಾರಣ ಮಾತ್ರ ಬುರ್ಹಾನ್ ಮುಝಾಫುರ್ ವನಿ ಎಂಬ ಚಿರಯುವಕನ ಸಾವು. ಸಾಮಾಜಿಕ ಜಾಲತಾಣದಲ್ಲಿ ಅಸಂಖ್ಯಾತ ಹಿಂಬಾಲಕರನ್ನು ಪಡೆದಿದ್ದ 22ರ ತರುಣ ಈತ.

“ಬುರ್ಹಾನ್” ಎಂಬ ಕಾಶ್ಮೀರದಲ್ಲಿ ಜಗತ್ಪ್ರಸಿದ್ಧನಾಗಿದ್ದ ಯುವಕನನ್ನು ಜುಲೈ 8ರಂದು ಕೊಲೆ ಮಾಡಲಾಯಿತು.

ಭಾರತೀಯ ಪಡೆಗಳು ಬೇಕೆಂದೇ ಬುರ್ಹಾನ್ ವನಿಯನ್ನು ಗುರಿಯಾಗಿಸಿದವೋ ಗೊತ್ತಿಲ್ಲ. ಆದರೆ ಒಮ್ಮೆ ಬುರ್ಹಾನ್ ಸಾವನ್ನಪ್ಪುತ್ತಿದ್ದಂತೆ ಮುಂಬರಲಿರುವ ದಿನಗಳ ನಿರೀಕ್ಷೆಯಂತೂ ಅವುಗಳಿಗಿತ್ತು. ಮೊಬೈಲ್ ನೆಟ್ ವರ್ಕ್ ನಿಲ್ಲಿಸಲಾಯಿತು; ಕರ್ಫ್ಯೂ ಹೇರಲಾಯಿತು; ಸೇನಾಪಡೆಗಳು ಧಾವಿಸಿ ಬಂದವು.

ಒಂದು ತಿಂಗಳು ಕಳೆದರೂ ಭಾರತ ಇವತ್ತಿಗೂ ಹಿಂಸಾಚಾರವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಒದ್ದಾಡುತ್ತಿದೆ.

ಸಂಜೆ ಹೊತ್ತು ಕಣ್ಣು ಮಾತ್ರ ಕಾಣಿಸುವಂತೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಯುವಕರಿಬ್ಬರು ಪೊಲೀಸರತ್ತ ಕಲ್ಲು ತೂರುತ್ತಿದ್ದರು. ತನ್ನ ಗುರಾಣಿ ಬಳಸಿ ಪೊಲೀಸ್ ಅದರಿಂದ ರಕ್ಷಣೆ ಪಡೆಯುತ್ತಿದ್ದುದನ್ನು ಕಂಡೆ. ಇದನ್ನು ನೋಡಿ ನಾನು ಮಾತ್ರ ಮರೆಯಲ್ಲಿ ಆಶ್ರಯ ಪಡೆದುಕೊಳ್ಳಲು ಓಡಿದೆ.

ಆ ಪೊಲೀಸ್ ಚಾಟರಿ ಬಿಲ್ಲು ಕೈಗೆತ್ತಿಕೊಂಡು ಕಲ್ಲು ತೂರಿದ. “ಗುಂಪನ್ನು ನಮ್ಮಿಂದ ತುಸು ದೂರ ಇರುವಂತೆ ನೋಡಿಕೊಳ್ಳಿ” ಕಮಾಂಡರ್ ರಾಜೇಶ್ ಯಾದವ್ ಕೂಗುತ್ತಿದ್ದರು. ಅವರ ಬಳಿ ಎಲ್ಲವೂ ಇತ್ತು. ಚಾಟರಿ ಬಿಲ್ಲು, ಅಶ್ರುವಾಯಿ, ಪೆಪ್ಪರ್ ಸ್ಪ್ರೇ, ರಬ್ಬರ್ ಬುಲ್ಲೆಟ್, ಮತ್ತು ವಿವಾದಿತ ಪೆಲೆಟ್ ಗನ್. “ಗಾಯ ಕಡಿಮೆ ಮಾಡಲು ನಾವು 9ಎಂಎಂ ಪೆಲೆಟ್ ಗನ್ ಬಳಸುತ್ತೇವೆ. ನನ್ನ ಜನರು ತಿರುಗಿ ಉತ್ತರ ನೀಡಲು ಶಕ್ತರಾಗಿದ್ದಾರೆ,” ಎಂದರು ಕಮಾಂಡೆರ್ ಯಾದವ್.

ಗಾತ್ರ ಎಷ್ಟೇ ಇರಬಹುದು ಇರಬಹುದು, ಹಾನಿ ಮಾಡಿಯೇ ಮಾಡುತ್ತದೆ. ಇಲ್ಲಿನ ಮುಖ್ಯ ಆಸ್ಪತ್ರೆಯ ವಾರ್ಡ್ ತುಂಬಾ ಸನ್ ಗ್ಲಾಸ್ ಹಾಕಿದ ಯುವಕರೇ ತುಂಬಿ ತುಳುಕುತ್ತಿದ್ದಾರೆ. ಅವರೆಲ್ಲಾ ಭಯಾನಕ ಗಾಯಕ್ಕೆ ತುತ್ತಾಗಿದ್ದಾರೆ.

“ಸಣ್ಣ ಪೆಲೆಟ್ ಕಣ್ಣಿನ ಸೂಕ್ಷ್ಮ ಭಾಗಕ್ಕೆ ಬಂದು ತಾಕುತ್ತದೆ. ಡಜನ್ ಗಟ್ಟಲೆ ಜನರು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ.” ಎಂದರು ವೈದ್ಯರು ಬೇರೆಲ್ಲಾ ಅವಕಾಶಗಳಿದ್ದೂ ಗುಂಪು ನಿಯಂತ್ರಿಸಲು ಕ್ರೂರ ಹಿಂಸೆಗೆ ಭಾರತ ಇಳಿದಿರುವುದನ್ನು ನೋಡಲು ಕಷ್ಟವಾಗುತ್ತದೆ.

ಈಗಾಗಲೇ ಕಾಶ್ಮೀರಕ್ಕೆ ಭಾರತ ಪ್ರಾತಿನಿಧಿಕ ಸ್ಥಾನಮಾನ ನೀಡಿ, ಖಟ್ಟರ್ ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆ ನಿರಾಕರಿಸಿದೆ. ಹಾಗಂತ ಸ್ವಾತಂತ್ರ್ಯವನ್ನೂ ಕೊಟ್ಟಿಲ್ಲ. ಬದಲಿಗೆ ಮತ್ತಷ್ಟು ಪೊಲೀಸರು, ಸೇನೆಯನ್ನು ನುಗ್ಗಿಸಿ, ಪ್ರತಿಭಟನೆ ಬಗ್ಗು ಬಡಿಯುವವರೆಗೆ ನಿಯಂತ್ರಣಕ್ಕೆ ತಗೆದುಕೊಳ್ಳುವ ಹವಣಿಕೆಯಲ್ಲಿದೆ.

ಈ ಹಿಂದೆಯೂ ಇದೇ ರೀತಿ ಸಾಧಿಸಿದೆ, ಆದರೆ ಇದು ಅಪಾಯಕಾರಿ.

ಕತ್ತಲಾಗುತ್ತಿದ್ದಂತೆ ಯುವಕರ ಕನಸುಗಳು ಕಮರುತ್ತವೆ. ಮತ್ತೆ ಬೆಳಗಾಗುತ್ತಾ ಅದೇ ಕನವರಿಕೆ ಮುಂದುವರಿಯುತ್ತದೆ. ದಿನಗಳು ಮಾತ್ರ ಉರುಳುತ್ತಲೇ ಇವೆ. “ಎಲ್ಲಾ ತಾಯಂದಿರೂ ಬುರ್ಹಾನ್ ಗೆ ಜನ್ಮ ನೀಡ್ತಾರಂತೆ,” ಮುಖ್ಯ ಕಚೇರಿಕೆ ಕಡೆ ಭಾರವಾದ ಹೆಚ್ಚೆಗಳನ್ನು ಹಾಕುತ್ತಾ ಹೋಗುತ್ತಿದ್ದ ಪೊಲೀಸ್ ಪೇದೆಯೊಬ್ಬ ಅಸಹನೆಯಲ್ಲಿ ಪಿಸುಗುಟ್ಟಿದ.

ಕೃಪೆ: ಬಿಬಿಸಿ

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top