An unconventional News Portal.

‘ಬಿಜೆಪಿ ಬೈಪೋಲಾರ್ ಅಜೆಂಡಾ’: ಯಡಿಯೂರಪ್ಪ ಬಾಯಲ್ಲಿ ಅಭಿವೃದ್ಧಿ; ಹಿಂದುತ್ವದ ಪಂಜು ಹಿಡಿದ ಅನಂತ- ಪ್ರತಾಪ!

‘ಬಿಜೆಪಿ ಬೈಪೋಲಾರ್ ಅಜೆಂಡಾ’: ಯಡಿಯೂರಪ್ಪ ಬಾಯಲ್ಲಿ ಅಭಿವೃದ್ಧಿ; ಹಿಂದುತ್ವದ ಪಂಜು ಹಿಡಿದ ಅನಂತ- ಪ್ರತಾಪ!

ಒಂದು ಕಡೆ ಹಿಂದುತ್ವ; ಮತ್ತೊಂದು ಕಡೆ ಅಭಿವೃದ್ಧಿ, ಮೋದಿ ಆಡಳಿತ, ಜನಪರ ಯೋಜನೆಗಳ ಮೆಲುಕಾಟ.

ಇದು ಸದ್ಯ ರಾಜ್ಯ ಬಿಜೆಪಿ ನಾಯಕರು ಚುನಾವಣಾ ಹೊಸ್ತಿಲಿನಲ್ಲಿ ನಿಂತುಕೊಂಡು ಜನರನ್ನು ಸೆಳೆಯಲು ಅನುಸರಿಸುತ್ತಿರುವ ಎರಡು ಪ್ರತ್ಯೇಕ ಕಾರ್ಯತಂತ್ರಗಳು.

ಕಳೆದ ಕೆಲವು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ಅದಕ್ಕೂ ಮುಂಚೆ ಹುಣಸೂರಿನಲ್ಲಿ, ದಕ್ಷಿಣ ಕನ್ನಡದಲ್ಲಿ ನಡೆದ ಘಟನಾವಳಿಗಳನ್ನು ಗಮನಿಸಿದರೆ, ಬಿಜೆಪಿ ಹಿಂದುತ್ವದ ಟ್ರಂಪ್ ಕಾರ್ಡ್ ಇಟ್ಟುಕೊಂಡೇ ಮುಂದಿನ ಚುನಾವಣೆಗೆ ಇಳಿಯುವ ಮನಸ್ಸು ಮಾಡಿದಂತಿದೆ. ಈ ‘ಹಿಂದೂ ಪರ’ ಎಂಬ ಪಂಜನ್ನು ಕರ್ನಾಟಕದಲ್ಲಿ ಹಿಡಿದುಕೊಂಡು ಓಡುತ್ತಿರುವವರಲ್ಲಿ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ, ಮೈಸೂರು ಸಂಸದ ಪ್ರತಾಪ್ ಸಿಂಹ ಮುಂಚೂಣಿಯಲ್ಲಿದ್ದಾರೆ.

ಇನ್ನೊಂದು ಕಡೆ, ಪಕ್ಷವನ್ನು ಮುನ್ನಡೆಸುತ್ತಿರುವ ಬಿ. ಎಸ್. ಯಡಿಯೂರಪ್ಪ, ಹಿಂದುತ್ವದ ತಳಹದಿಗಿಂತಲೂ ಮೋದಿ ಸರಕಾರದ ಸಾಧನೆ ಹಾಗೂ ಹಿಂದಿನ ಬಿಜೆಪಿ ಸರಕಾರದ ಜನಪರ ಯೋಜನೆಗಳನ್ನೇ ಚುನಾವಣೆಯ ಅಜೆಂಡಾ ಆಗಿ ಮುಂದಿಡಲಾಗುವುದು ಎಂದು ಹೇಳುತ್ತಿದ್ದಾರೆ. ಇತ್ತೀಚೆಗೆ ‘ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್’ ಜತೆ ಮಾತನಾಡಿರುವ ಅವರು, “ಪ್ರತಾಪ್ ಹಾಗೂ ಅನಂತ್ ಕುಮಾರ್ ಹೆಗಡೆ ಮೊದಲಿನಿಂದಲೂ ಹಾಗೆಯೇ. ಚುನಾವಣೆ ವೇಳೆಯಲ್ಲಿ ಹಿಂದುತ್ವಕ್ಕಿಂತ ಅಭಿವೃದ್ಧಿ ವಿಚಾರವನ್ನು ಜನರ ಮುಂದಿಡುತ್ತೇವೆ,’’ ಎಂದು ಹೇಳಿದ್ದಾರೆ.

ಗೊಂದಲಕ್ಕೆ ಮುನ್ನುಡಿ:

ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳ ಆಡಳಿತ ನಡೆಸಿರುವ ಕಾಂಗ್ರೆಸ್ ಮರಳಿ ಅಧಿಕಾರ ಹಿಡಿಯುವ ಕನಸಿನಲ್ಲಿದೆ. ಅದಕ್ಕಾಗಿ ರಾಜ್ಯ ಧ್ವಜ, ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆಗಳಿಗೆ ನೀರೆರೆದು ಪೋಷಿಸಿಕೊಂಡು ಬರುತ್ತಿದೆ. ಅವುಗಳ ಜತೆಗೆ, ಆರ್ಥಿಕ ಹಾಗೂ ಸಾಮಾಜಿಕ ಸಮೀಕ್ಷೆ ಹೆಸರಿನಲ್ಲಿ ನಡೆದ ಜಾತಿ ಗಣತಿಯನ್ನೂ ಕಾಂಗ್ರೆಸ್ ಉಪಯೋಗಿಸಿಕೊಳ್ಳುವ ಸಾಧ್ಯತೆ. ಅಹಿಂದ ಟ್ರಂಪ್ ಕಾರ್ಡ್ ಜತೆಗೆ, ಒಬ್ಬರೇ ಮುಖ್ಯಮಂತ್ರಿಯ ಮೂಲಕ ನೀಡಿದ ಸದೃಢ ಆಡಳಿತಗಳು ಕಾಂಗ್ರೆಸ್ ಪಾಲಿಗೆ ವರವಾಗಿವೆ.

ಈ ನಾಲ್ಕು ವರ್ಷಗಳಲ್ಲಿ ಪ್ರತಿಪಕ್ಷ ಬಿಜೆಪಿ ಸರಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಜನಾಂದೋಲ ರೂಪಿಸುವಲ್ಲಿ ಸೋತು ಹೋಗಿದೆ. ಉಭಯ ಸದನಗಳ ಒಳಗೆ ಹಾಗೂ ಹೊರಗೆ ಕೂಡ ಆಡಳಿತ ಪಕ್ಷದ ವಿರುದ್ಧ ಜನಾಭಿಪ್ರಾಯ ರೂಪಿಸಲು ನಡೆಸಿದ ಬಹುತೇಕ ಪ್ರಯತ್ನಗಳು ವಿಫಲವಾಗಿದೆ.

ದುರಾದೃಷ್ಟಕ್ಕೆ ಕೇಂದ್ರದ ಬಿಜೆಪಿ ಆಡಳಿತ ಹಾಗೂ ಪ್ರಧಾನಿ ಮೋದಿ ವರ್ಚಸ್ಸು ಕೂಡ ಮೊದಲಿದ್ದ ಪ್ರಭೆಗಳನ್ನು ಕಳೆದುಕೊಂಡಿವೆ. ನೋಟ್ ಬ್ಯಾನ್, ಜಿಎಸ್ಟಿ ಹಾಗೂ ಆಧಾರ ಕಡ್ಡಾಯ ತೀರ್ಮಾನಗಳು ಬೀರಿರುವ ಪರಿಣಾಮ ಪರೋಕ್ಷವಾಗಿ ರಾಜ್ಯ ಬಿಜೆಪಿ ಮೇಲೆ ಬೀರುತ್ತಿವೆ. ರೈತರ ಸಾಲ ಮನ್ನಾ ವಿಚಾರದಲ್ಲಿಯೂ ಕೇಂದ್ರ ಸರಕಾರ ನಿರೀಕ್ಷಿತ ನಡೆಯನ್ನು ಇಡದೆ ಇರುವುದು ಯಡಿಯೂರಪ್ಪರ ಮುಖ್ಯಮಂತ್ರಿ ಕನಸಿಗೆ ಸಂಚಕಾರ ತರುವ ಸಾಧ್ಯತೆಗಳಿವೆ.

ಈ ಎಲ್ಲಾ ಹಿನ್ನೆಲೆಯಲ್ಲಿ, ಕಳೆದ ಒಂದು ತಿಂಗಳ ಅಂತರದಲ್ಲಿ ಬಿಜೆಪಿಗೆ ತನ್ನ ಮೂಲ ನೆಲೆಯಾದ ಹಿಂದುತ್ವದ ಬಾಗಿಲು ತಟ್ಟದೆ ಬೇರೆ ದಾರಿಗಳು ಕಾಣಿಸುತ್ತಿಲ್ಲ.

ಅಮಿತ್ ಶಾ ಏಟು:

ಕೆಲವು ತಿಂಗಳ ಹಿಂದೆ ರಾಜ್ಯ ಕಾರ್ಯಕಾರಣಿಯಲ್ಲಿ ಪಾಲ್ಗೊಂಡ ಅಮಿತ್ ಶಾ ರಾಜ್ಯ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದು ಸುದ್ದಿಯಾಗಿತ್ತು. ಹುಣಸೂರಿನಲ್ಲಿ ಪೊಲೀಸರ ಮೇಲೆ ಬಲಪ್ರದರ್ಶನ ನಡೆಸುವ ಮೂಲಕ ಸದ್ದು ಮಾಡುವ ಪ್ರಯತ್ನ ಮಾಡಿದ ಪ್ರತಾಪ್ ಸಿಂಹ ಕೂಡ, ಅಮಿತ್ ಶಾ ಕಾರ್ಯತಂತ್ರ ಏನಿದೆ? ಎಂಬುದನ್ನು ಬಹಿರಂಗವಾಗಿ ಹೇಳಿಕೊಂಡರು. ರಾಜ್ಯ ಸರಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲು ಬಿಜೆಪಿ ಹೈ ಕಮಾಂಡ್ ತಿಳಿಸಿದೆ ಎಂದು ಹೇಳಿದ್ದರು. ಇದೀಗ ಅವರ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಪ್ರತಿ ನಡೆಯಲ್ಲಿ ಅದು ಬಿಂಬಿತವಾಗುತ್ತಿದೆ. ಅದಕ್ಕಾಗಿ ವಿಚಾರಗಳನ್ನು ಅವರು ಹುಡುಕಿಕೊಂಡಿದ್ದಾರೆ.

ಉತ್ತರ ಕರ್ನಾಟಕ ಜಿಲ್ಲೆ ಈಗ ಬೂದಿ ಮುಚ್ಚಿದ ಕೆಂಡದಂತಿದೆ. ಪರೇಶ್ ಮೇಸ್ತಾ ಎಂಬ ಯುವಕನ ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಬಿಜೆಪಿ ಅಖಾಡಕ್ಕೆ ಇಳಿದಿದೆ. ಸಂಘಪರಿವಾರದ ಇತರೆ ಸಂಘಟನೆಗಳು ತಮ್ಮ ಕಾರ್ಯಕರ್ತರನ್ನು ಫೀಲ್ಡ್ಗೆ ಇಳಿಸಿವೆ. ಈಗಾಗಲೇ ಬಿಜೆಪಿ ಮಾಜಿ ಸಚಿವರ ವಿರುದ್ಧ ಕೇಸು ದಾಖಲಾಗಿದೆ. ಹಲವರು ಕಾರ್ಯಕರ್ತರ ಬಂಧನವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಹಿನ್ನೆಲೆಯಲ್ಲೂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಇವೆಲ್ಲವುಗಳ ಒಟ್ಟು ಸಾರಾಂಶ, ರಾಜ್ಯ ಬಿಜೆಪಿ ಉಗ್ರ ಪ್ರತಿಭಟನೆಗೆ ಇಳಿದಿದೆ ಎಂಬ ಸಂದೇಶವನ್ನು ರವಾನಿಸುವುದೇ ಆಗಿದೆ.

ಇದೇ ಪರಿವರ್ತನೆ:

ಕಳೆದ ತಿಂಗಳು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪರಿವರ್ತನಾ ರ್ಯಾಲಿ ನಡೆಸಲು ಬಿಜೆಪಿ ಚಾಲನೆ ನೀಡಿತ್ತು. ಅದರ ಟೇಕ್ ಆಫ್ ಸಮಯದಲ್ಲಿಯೇ ಜನರ ಕೊರತೆ ಎದುರಿಸಿತ್ತು. ರಾಷ್ಟ್ರಾಧ್ಯಕ್ಷ ಅಮಿತ್ ಶಾ ಎದುರಿಗೆ ಮುಖಭಂಗವಾಗಿತ್ತು. ಆದರೆ ಪರಿವರ್ತನಾ ಯಾತ್ರೆ ಸಾಗುತ್ತಿದ್ದಂತೆ, ಬಿಜೆಪಿ ಅನಿವಾರ್ಯವಾಗಿ ತನ್ನ ಹಿಂದುತ್ವದ ಅಜೆಂಡಾವನ್ನೇ ಹೆಚ್ಚು ನೆಚ್ಚಿಕೊಳ್ಳುವ ಮನಸ್ಸು ಮಾಡಿದಂತೆ ಕಾಣಿಸುತ್ತಿದೆ. ಬೆಳಗಾವಿಯಲ್ಲಿ ಕೇಂದ್ರ ಸಚಿವ ಹೆಗಡೆ ವಿರುದ್ಧ ಮಾನಹಾನಿಕರ ಹೇಳಿಕೆಗೆ ಕೇಸೂ ದಾಖಲಾಯಿತು.

ಸಿಎಂ ಸಿದ್ದರಾಮಯ್ಯ ಸರಕಾರ ಜನಪರವಾದ ಯೋಜನೆಗಳನ್ನು ಜಾರಿ ತಂದಿದೆ. ಅಂದಮಾತ್ರಕ್ಕೆ ಅವರ ಆಡಳಿತ ಭ್ರಷ್ಟಾಚಾರ ಮುಕ್ತವಾಗಿದೆ ಅಂತೇನೂ ಅಲ್ಲ. ಸಿದ್ದರಾಮಯ್ಯ ಜನರ ಸಮಸ್ಯೆಗಳ ಕುರಿತು ಮಾತನಾಡುತ್ತಲೇ ಬರುತ್ತಿದ್ದಾರೆ. ಅಂದ ಮಾತ್ರಕ್ಕೆ ಅವರ ಯೋಜನೆಗಳಿಂದ ರಾಜ್ಯ ತಳಮಟ್ಟದ ಜನರ ಜೀವನಮಟ್ಟ ಸುಧಾರಣೆಗೊಂಡಿದೆ ಅಂತೇನೂ ಅಲ್ಲ. ಕಾಂಗ್ರೆಸ್ ಕಳೆದ ನಾಲ್ಕು ವರ್ಷಗಳಲ್ಲಿ ಸುಭದ್ರ ಆಡಳಿತ ನೀಡಿದೆ. ಅಂದಮಾತ್ರಕ್ಕೆ, ಕಾಂಗ್ರೆಸ್ ಮಾದರಿ ಎಂಬಂತ ಆಡಳಿತ ನೀಡಿದೆ ಅಂತೇನೂ ಅಲ್ಲ. ಪ್ರತಿಪಕ್ಷ ಸ್ಥಾನದಲ್ಲಿರುವ ಬಿಜೆಪಿಗೆ ರಾಜ್ಯ ಸರಕಾರಗಳ ವಿರುದ್ಧ ಹೋರಾಡಲು ಹಲವು ಕಾರಣಗಳಿವೆ. ಆದರೆ ಕೊನೆಯ ಕ್ಷಣದವರೆಗೂ ನಿದ್ದೆಯಲ್ಲಿದ್ದವರಂತೆ ಕಂಡ ಕೇಸರಿ ಪಾಳಯದ ನಾಯಕರೀಗ ಹಿಂದುತ್ವದ ಅಜೆಂಡಾವನ್ನೇ ನೆಚ್ಚಿಕೊಂಡು ಚುನಾವಣೆಗೆ ಹೋಗಲು ಅಣಿಯಾಗುತ್ತಿದ್ದಾರೆ. ಹೀಗಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಶಾಂತಿ ತಲೆದೋರಿದೆ. ಸಾಮಾನ್ಯ ಜನ ಧರ್ಮಾಧಾರಿತ ರಾಜಕಾರಣದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಒಂದು ಕಡೆ ಯಡಿಯೂರಪ್ಪ ಅಭಿವೃದ್ಧಿ ಎನ್ನುತ್ತಿದ್ದಾರೆ. ಇನ್ನೊಂದು ಕಡೆ ಅನಂತ ಕುಮಾರ್ ಹೆಗಡೆ, ಪ್ರತಾಪ್ ಸಿಂಹ ‘ಹಿಂದೂ ನಾವೆಲ್ಲಾ ಒಂದು’ ಎನ್ನುತ್ತಿದ್ದಾರೆ. ಇಂತಹ ಇಬ್ಬಗೆಯ ನೀತಿ ಬಿಜೆಪಿಗೆ ಮತಗಳಾಗಿ ಪರಿವರ್ತನೆಯಾಗುತ್ತಾ? ಕಾದು ನೋಡಬೇಕು. ಆದರೆ ಇವರ ರಾಜಕೀಯ ಕಾರ್ಯತಂತ್ರಗಳಿಗೆ ಸಾಮಾನ್ಯ ಜನರ ನಿತ್ಯ ಬದುಕು ಸದ್ಯ ಹೈರಾಣಾಗಿದೆ. ಸಾಕ್ಷಿ ಬೇಕಿದ್ದರೆ, ಉತ್ತರ ಕನ್ನಡದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿ.

Leave a comment

Top