An unconventional News Portal.

ಸೆಲೆಬ್ರಿಟಿಯನ್ನೂ ಕಾಡಿದ ಭ್ರಷ್ಟಾಚಾರ: ‘ಇದೇನಾ ಅಚ್ಛೇ ದಿನ್?’; ಕಪಿಲ್ ಶರ್ಮ ಟ್ವೀಟ್ ಟಾಂಗ್!

ಸೆಲೆಬ್ರಿಟಿಯನ್ನೂ ಕಾಡಿದ ಭ್ರಷ್ಟಾಚಾರ: ‘ಇದೇನಾ ಅಚ್ಛೇ ದಿನ್?’; ಕಪಿಲ್ ಶರ್ಮ ಟ್ವೀಟ್ ಟಾಂಗ್!

ದೇಶದ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಘೋಷಣೆ ‘ಅಚ್ಛೇ ದಿನ್’ ಪ್ರಶ್ನಿಸುವವರ ಸಾಲಿಗೆ ‘ಕಾಮಿಡಿ ನೈಟ್ಸ್’ ಖ್ಯಾತಿಯ ಹಾಸ್ಯ ಕಲಾವಿದ ಕಪಿಲ್ ಶರ್ಮ್ ಹೊಸದಾಗಿ ಸೇರ್ಪಡೆಯಾಗಿದ್ದಾರೆ.

ಮುಂಬೈ ಸಾರ್ವಜನಿಕ ಇಲಾಖೆ ಅಧಿಕಾರಿಗಳು ತಮ್ಮಲ್ಲಿ 5 ಲಕ್ಷ ಲಂಚ ಕೇಳಿದ್ದನ್ನು ಪ್ರಶ್ನಿಸಿರುವ ಕಪಿಲ್, ನೇರವಾಗಿ ಪ್ರಧಾನಿಗೆ ಟ್ವೀಟ್ ಮಾಡಿ “ಇದೇನಾ ‘ಅಚ್ಛೇ ದಿನ್’?” ಅಂತ ಪ್ರಶ್ನೆ ಮಾಡಿದ್ದಾರೆ.

ಆಗಿದ್ದಿಷ್ಟು:

ಕಾಮಿಡ್ ನೈಟ್ಸ್ ಖ್ಯಾತಿಯ ಕಿರುತೆರೆ ಸ್ಟಾರ್ ನಿರೂಪಕ, ಬಾಲಿವುಡ್ ನಟ ಕಪಿಲ್ ಶರ್ಮ ಮುಂಬೈನಲ್ಲಿ ಕಚೇರಿ ಮಾಡಲು ಹೊರಟಿದ್ದರು. ಈ ಸಂದರ್ಭ ಅಲ್ಲಿನ BMC (ಬೃಹನ್’ಮುಂಬೈ ಮುನ್ಸಿಪಲ್ ಕಾರ್ಪೋರೇಷನ್) ಅಧಿಕಾರಿಗಳು 5 ಲಕ್ಷ ಲಂಚ ಕೇಳಿದ್ದಾರೆ. ಇದರಿಂದ ಕೆರಳಿ ಹೋದ ಕಾಮಿಡಿ ಮ್ಯಾನ್ ನೇರವಾಗಿ ಪ್ರಧಾನಿ (@narendramodi) ಟ್ವಿಟರ್ ಹ್ಯಾಂಡಲ್ಗೆ ಟ್ವೀಟಿಸಿದ್ದಾರೆ.

“ಕಳೆದ 5 ವರ್ಷಗಳಿಂದ 15 ಕೋಟಿ ಆದಾಯ ತೆರಿಗೆ ಕಟ್ಟಿದ್ದೇನೆ. ಹೀಗಿದ್ದೂ ನನ್ನ ಕಚೇರಿ ಆರಂಭಿಸಲು ನಾನು ಬಿಎಂಸಿ ಕಚೇರಿಯಲ್ಲಿ 5 ಲಕ್ಷ ಲಂಚ ನೀಡಬೇಕು. ಇದೇನಾ ನಿಮ್ಮಅಚ್ಚೇ ದಿನ್?” ಅಂತ ಸಾಮಾಜಿಕ ಜಾಲತಾಣದಲ್ಲಿ ಟ್ವೀಟಿಸಿದ್ದಾರೆ.

kapil-sharma

ಈ ಟ್ವೀಟ್ ನೋಡಿ ತಕ್ಷಣ ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, “ಕಪಿಲ್ ಭಾಯ್, ದಯವಿಟ್ಟು ಎಲ್ಲಾ ಮಾಹಿತಿ ಕೊಡಿ. ಬಿಎಂಸಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ನಿರ್ದೇಶನ ನೀಡುತ್ತೇನೆ. ಭ್ರಷ್ಟರನ್ನು ನಾವು ಕ್ಷಮಿಸುವುದು ಬೇಡ,” ಎಂದು ಟ್ವೀಟ್ ಮಾಡಿ ಕಪಿಲ ಶರ್ಮ ಮತ್ತು ಮೋದಿ ಇಬ್ಬರನ್ನೂ ಟ್ಯಾಗ್ ಮಾಡಿದ್ದಾರೆ.

devendra-padnavis

ಕಳೆದ ನಾಲ್ಕು ಗಂಟೆಗಳಲ್ಲಿ ಕಪಿಲ್ ಶರ್ಮಾ ಟ್ವೀಟ್ 4,100 ಬಾರಿ ರಿಟ್ವೀಟ್ ಆಗಿದ್ದರೆ, ಫಡ್ನವೀಸ್ ರಿಪ್ಲೈ 526 ಬಾರಿ ರಿಟ್ವೀಟ್ ಆಗಿವೆ.

ಇದೀಗ ಬೃಹನ್’ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಶರ್ಮಾಗೆ ಔಪಚಾರಿಕ ದೂರು ನೀಡುವಂತೆ ಕೇಳಿಕೊಂಡಿದ್ದು, ಲಂಚ ಕೇಳಿದ ಅಧಿಕಾರಿಯ ಹೆಸರು ಹೇಳುವಂತೆ ಕೋರಿದೆ.

ನವಜೋತ್ ಸಿಂಗ್ ಸಿದ್ಧು ಜತೆ ಸೇರಿ ‘ಕಾಮಿಡಿ ನೈಟ್ಸ್ ವಿತ್ ಕಪಿಲ್’ ಶೋ ನಡೆಸಿಕೊಡುವ ಕಪಿಲ್ ಶರ್ಮ, ಹಿಂದಿ ಟಿವಿ ವೀಕ್ಷಕರ ಚಿರಪರಿಚಿ ಮುಖ. ಸದ್ಯದ ಮಾಹಿತಿ ಪ್ರಕಾರ ಇವರು ಪ್ರತಿ ಎಪಿಸೋಡಿಗೆ 60 ಲಕ್ಷ ಸಂಭಾವನೆ ತೆಗೆದುಕೊಳ್ಳುತ್ತಾರೆ.

ಈ ವರ್ಷದ ಆರಂಭದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕಪಿಲ್ ಶರ್ಮ, “ನನ್ನ ಶೋನಲ್ಲಿ ನಾನು ಪ್ರಧಾನಿ ನರೇಂದ್ರ ಮೋದಿಯನ್ನು ನೋಡಲು ಇಷ್ಟಪಡುತ್ತೇನೆ. ಅಲ್ಲಿ ರಾಜಕೀಯ ಬಿಟ್ಟು ಉಳಿದ ಪ್ರಶ್ನೆಗಳನ್ನು ಅವರಿಗೆ ಕೇಳಬೇಕು,” ಎಂದಿದ್ದರು.

ಸದ್ಯ ಇದೇ ಕಪಿಲ್ ಶರ್ಮ ಪ್ರಧಾನಿ ನರೇಂದ್ರ ಮೋದಿಯವರ 2014ರ ಚುನಾವಣಾ ಪ್ರಚಾರದ ಘೋಷಣೆ ‘ಅಚ್ಛೇ ದಿನ್’ ಪ್ರಶ್ನಿಸಿ ಸುದ್ದಿಗೆ ಗ್ರಾಸವಾಗಿದ್ದಾರೆ.

Top