An unconventional News Portal.

‘ಕನಕ ನಡೆ’ ಉಡುಪಿ ರಥಬೀದಿಗಷ್ಟೆ ಸೀಮಿತ: ಗೊಂದಲದ ಗೂಡಾದ ಭಾನುವಾರದ ‘ಕ್ಲೈಮ್ಯಾಕ್ಸ್’!

‘ಕನಕ ನಡೆ’ ಉಡುಪಿ ರಥಬೀದಿಗಷ್ಟೆ ಸೀಮಿತ: ಗೊಂದಲದ ಗೂಡಾದ ಭಾನುವಾರದ ‘ಕ್ಲೈಮ್ಯಾಕ್ಸ್’!

ಸೈದ್ಧಾಂತಿಕ ಸಂಘರ್ಷಕ್ಕೆ ಸಿದ್ಧವಾಗಿದ್ದ ಉಡುಪಿಯಲ್ಲಿ ಭಾನುವಾರ ನಡೆಯುವ ಬೆಳವಣಿಗೆಗಳ ಬಗ್ಗೆ ಗೊಂದಲ ಆವರಿಸಿಕೊಂಡಿದೆ.

‘ಚಲೋ ಉಡುಪಿ’ ಹಿನ್ನೆಲೆಯಲ್ಲಿ ಉಡುಪಿಯನ್ನು ಸ್ವಚ್ಛ ಮಾಡುತ್ತೇವೆ ಎಂದು ಹೊರಟಿದ್ದ ‘ಕನಕ ನಡೆ’ ಆಯೋಜಕರು ಸಾಂಕೇತಿಕ ಸ್ವಚ್ಛತೆಗಷ್ಟೇ ಸೀಮಿತರಾಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೊಂದು ಕಡೆ ‘ಕನಕ ನಡೆ’ ವಿರೋಧಿಸಿ ‘ಸ್ವಾಭಿಮಾನಿ ನಡೆ’ ಮಾಡಲು ಹೊರಟವರಿಗೆ ಶುಕ್ರವಾರದ ಅಂತ್ಯದವರೆಗೂ ಪೊಲೀಸ್ ಇಲಾಖೆಯ ಅನುಮತಿ ಸಿಕ್ಕಿಲ್ಲ.

ಮೂಲಗಳ ಮಾಹಿತಿಗಳ ಪ್ರಕಾರ ಎರಡೂ ‘ನಡೆ’ಗಳ ಮೇಲೆ ಕೊನೆಯ ಕ್ಷಣದಲ್ಲಿ ಪೊಲೀಸ್ ಇಲಾಖೆ ನಿಷೇಧ ಹೇರುವ ಸಾಧ್ಯತೆಗಳಿವೆ. ಆದರೆ, 23ರಂದು ಉಡುಪಿಯಲ್ಲಿ ಏನು ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಅಕ್ಟೋಬರ್ 23ರಂದು ಉಡುಪಿಯನ್ನು ಸ್ವಚ್ಛ ಮಾಡುವುದಾಗಿ ‘ನಮೋ ಬ್ರಿಗೇಡ್’ (ಈಗಿನ ಯುವ ಬ್ರಿಗೇಡ್) ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಘೋಷಿಸಿದ್ದರು. ಅದಕ್ಕೆ ‘ಕನಕ ನಡೆ’ ಎಂದು ಹೆಸರಿಟ್ಟಿದ್ದರು. ಆದರೆ ಇದಕ್ಕೆ ‘ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ’ ತೀವ್ರ ವಿರೋಧ ವ್ಯಕ್ತಪಡಿಸಿದೆ. ಮಾತ್ರವಲ್ಲ ದೂರನ್ನೂ ನೀಡಿತ್ತು. ಜತೆಗೆ, ನಾಡಿನ ಹಲವು ಕುರುಬ ಮಠಗಳು ಮತ್ತು ದಲಿತ ಸಂಘಟನೆಗಳು ಕನಕ ನಡೆಯ ವಿರುದ್ಧ ಪತ್ರಿಕಾಗೋಷ್ಠಿಗಳನ್ನು ನಡೆಸಿದರು.

ಸಾಂಕೇತಿಕ ಸ್ವಚ್ಛತೆ:

ದಲಿತ ಮತ್ತು ದಮನಿತರ ಈ ಎಲ್ಲಾ ವಿರೋಧಗಳಿಂದಾಗಿ ಚಕ್ರವರ್ತಿ ಸೂಲಿಬೆಲೆ ತಮ್ಮ ‘ಕನಕ ನಡೆ’ ಕಾರ್ಯಕ್ರಮದ ರೂಪುರೇಷೆ ಬದಲಿಸಿದ್ದಾರೆ ಎಂದು ತಿಳಿದು ಬಂದಿದೆ. “ನಾವು ಈ ಹಿಂದೆ ಅವರಲ್ಲಿ ರಸ್ತೆಯಲ್ಲಿ ಕಾರ್ಯಕ್ರಮ ಬೇಡ ಎಂದು ಕೇಳಿಕೊಂಡಿದ್ದೆವು. ಹೀಗಾಗಿ ಸಾಂಕೇತಿಕವಾಗಿ ಉಡುಪಿ ಮಠದ ಒಳಗೆ ಸ್ವಚ್ಛತೆ ಮಾಡಲಿದ್ದಾರೆ. ಅವತ್ತೇ ಸಂಜೆ ಉಡುಪಿಯ ರಾಜಾಂಗಣದಲ್ಲಿ ಸರ್ಜಿಕಲ್ ಸ್ಟೈಕ್ ಬಗ್ಗೆಯೂ ಕಾರ್ಯಕ್ರಮ ನಡೆಯಲಿದೆ,” ಎಂಬ ಮಾಹಿತಿಯನ್ನು ಉಡುಪಿ ನಗರದ ಪ್ರಭಾರ ವೃತ್ತ ನಿರೀಕ್ಷಕ ಶ್ರೀಕಾಂತ್ ‘ಸಮಾಚಾರ’ಕ್ಕೆ ತಿಳಿಸಿದ್ದಾರೆ. ಸಂಸ್ಕೃತ ಕಾಲೇಜು ವೃತ್ತದಲ್ಲಿರುವ ಕನಕ ರಸ್ತೆಯಿಂದ ರಥಬೀದಿಯವರಗೆ ಸ್ವಚ್ಛತೆ ಮಾಡಿ ನಂತರ ಮಠದೊಳಗೆ ಸ್ವಚ್ಛತೆ ಮಾಡಲು ಜಿಲ್ಲಾ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

ಆದರೆ ಈ ಸಾಂಕೇತಿಕ ಸ್ವಚ್ಛತೆಗೂ ‘ದಲಿತ ಧಮನಿತರ ಸ್ವಾಭಿಮಾನಿ ಹೋರಾಟ ಸಮಿತಿ’ಯ ಸದಸ್ಯರಾದ ಭಾಸ್ಕರ್ ಪ್ರಸಾದ್ ವಿರೋಧ ವ್ಯಕ್ತಪಡಿಸಿದ್ದಾರೆ. “ಈಗ ಅವರು ತಮ್ಮ ಮಾತನ್ನು ಹಿಂದಕ್ಕೆ ತೆಗೆದುಕೊಂಡು, ಸಾಂಕೇತಿಕ ಆಚರಣೆಗೆ ಮುಂದಾಗಿರಬಹುದು. ಆದರೆ ಅವರು ದಲಿತರು ತುಳಿದ ನೆಲವನ್ನು ಸ್ವಚ್ಛ ಮಾಡುತ್ತೇವೆ ಎಂದೇ ಆರಂಭದಲ್ಲಿ ಹೇಳಿದ್ದು. ಅವರು ಸಾಂಕೇತಿಕವಾಗಿ ಮಠದ ಒಳಗೆ ಮಾಡಲಿ ಬಿಡಲಿ ಅವರ ಮನಸ್ಥಿತಿ ಅದೇ. ಅದರಲ್ಲೇನೂ ಬದಲಾವಣೆ ಇಲ್ಲ,” ಎಂದು ಅವರು ಹೇಳುತ್ತಾರೆ.

“ನಮಗಿನ್ನೂ ಸ್ವಾಭಿಮಾನಿ ನಡೆ ನಡೆಸಲು ಅನುಮತಿ ನೀಡಿಲ್ಲ. ಬೇರೊಂದು ದಿನ ಬೇಕಾದರೆ ನಡೆಸಿ ಎಂದು ಹೇಳಿದ್ದಾರೆ. ಆದರೆ ‘ಕನಕ ನಡೆ’ ಆಯೋಜಕರಿಗೆ ಅನುಮತಿ ನೀಡಿದ್ದಾರೆ. ಅವರಿಗೆ ಅನುಮತಿ ನೀಡಿದ್ದು ತಪ್ಪು. ಕಾನೂನು ಬಾಹಿರ ಕೆಲಸ ಮಾಡಲು ಹೊರಟವರ ಮೇಲೆ ರಾಜ್ಯಾದ್ಯಂತ ಕೇಸುಗಳು ದಾಖಲಾಗಿವೆ. ಅವರನ್ನು ಬಂಧಿಸುವುದು ಬಿಟ್ಟು ಅನುಮತಿ ನೀಡಲಾಗಿದೆ. ಇಲ್ಲೊಂದು ಸರಕಾರ ಇದೆಯಾ? ಇದೆಂಥಾ ಸರಕಾರ? ಗೃಹ ಮಂತ್ರಿಗಳು ಏನು ಮಾಡುತ್ತಿದ್ದಾರೆ?” ಎಂಬ ಪ್ರಶ್ನೆಗಳನ್ನು ಅವರು ಕೇಳುತ್ತಾರೆ.

“ನಮ್ಮನ್ನು ಸ್ವಚ್ಛತೆಗೆ ಆಹ್ವಾನಿಸಿದ್ದಾರೆ; ಆಯಿತು ನಾವು ಬರುತ್ತೇವೆ. ನಾವು ಹಿಂದಿನಿಂದಲೂ ಕಸ ಗುಡಿಸಿಕೊಂಡು, ಹೆಣ ಎತ್ತಿಕೊಂಡು, ಚಪ್ಪಲಿ ಹೊಲಿದುಕೊಂಡೇ ಬಂದವರು; ಪರವಾಗಿಲ್ಲ. ಆದರೆ ಅವರು ನಮ್ಮ ಬೇಡಿಕೆಗಳಾದ ದಲಿತರಿಗೆ ಭೂಮಿ ನೀಡಿ, ಆಹಾರದ ಹಕ್ಕನ್ನು ಗೌರವಿಸಿ, ಖಾಸಗಿ ಕಂಪೆನಿಗಳಲ್ಲಿ ಮೀಸಲಾತಿ ನೀಡಿ, ಪಂಕ್ತಿ ಭೇದ ನಿಲ್ಲಿಸಿ ಮುಂತಾದ ಬೇಡಿಕೆಗಳಿಗೆ ಜೊತೆಯಾಗುತ್ತಾರಾ?” ಎಂದು ಅವರು ಪ್ರಶ್ನೆ ಮಾಡುತ್ತಾರೆ.

swabimani-nade-udupi

ಉಡುಪಿ ಎಸ್ಪಿಗೆ ಮನವಿ ಪತ್ರ ನೀಡುತ್ತಿರುವ ಸ್ವಾಭಿಮಾನಿ ನಡೆ ಹೋರಾಟಗಾರರು

ಈ ಕುರಿತು ‘ಸಮಾಚಾರ’ ಚಕ್ರವರ್ತಿ ಸೂಲಿಬೆಲೆಯವರನ್ನು ಸಂಪರ್ಕಿಸಿತಾದರೂ ಕರೆ ಸ್ವೀಕರಿಸಿದ ಸೂಲಿಬೆಲೆ ಬ್ಯೂಸಿ ಇದ್ದೇನೆ, ಸಂಜೆ 7 ಗಂಟೆ ನಂತರ ಕರೆ ಮಾಡಿ ಎಂದು ಫೋನಿಟ್ಟರು. ರಾತ್ರಿ ಕರೆ ಮಾಡಿದರೆ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

ಈ ಕುರಿತು ಪ್ರತಿಕ್ರಿಯೆ ನೀಡಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ ಬಾಲಕೃಷ್ಣ, “ಸ್ವಾಭಿಮಾನಿ ನಡೆ ಆಯೋಜಕರು ಗುರುವಾರ ತಮ್ಮ ನಡೆಗೆಗೆ ಅವಕಾಶ ಕೋರಿ ನನಗೆ ಮನವಿ ನೀಡಿದ್ದಾರೆ. ಕನಕ ನಡೆಯವರೂ ಅನುಮತಿ ಕೋರಿ ಪತ್ರ ಕೊಟ್ಟಿದ್ದಾರೆ. ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ನಾನು ಮತ್ತು ಡಿಸಿಯವರು ಮಾತನಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ. ಒಂದೇ ದಿನ ಎರಡು ವಿರೋಧಿ ‘ನಡೆ’ಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ. ಬೇಕಿದ್ದರೆ ಬೇರೆ ಬೇರೆ ದಿನ ಅನುಮತಿ ನೀಡಬಹುದು ಎಂದು ಸಂಘಟಕರಿಗೆ ಹೇಳಿದ್ದೇವೆ. ನಮ್ಮ ಕಡೆಯಿಂದ ನಾವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಿದ್ದೇವೆ,” ಎಂದು ಹೇಳಿದ್ದಾರೆ.

ಅಕ್ಟೋಬರ್ 23ರಂದು ಉಡುಪಿಯಲ್ಲಿ ವಿಶೇಷ ಭದ್ರತೆ ಕೈಗೊಳ್ಳಲಾಗಿದ್ದು 5 ಕಿಎಸ್ಆರ್ಪಿ, 10 ಡಿಎಆರ್ ತುಕಡಿ, ಮೂವರು ಡಿವೈಎಸ್ಪಿಗಳು, 100 ಹೋಮ್ ಗಾರ್ಡ್ಸ್ ಹಾಗೂ ಇತರ ಪೊಲೀಸ್ ಅಧಿಕಾರಿಗಳನ್ನು ರಕ್ಷಣೆಗಾಗಿ ನಿಯೋಜಿಸಲಾಗಿದೆ.

ಮುಂದುವರಿದ ಗೊಂದಲ:

‘ಸ್ವಾಭಿಮಾನಿ ನಡೆ’ಗೆ ಅನುಮತಿ ನೀಡದ ಹಿನ್ನಲೆಯಲ್ಲಿ ಶುಕ್ರವಾರ ಗೃಹ ಸಚಿರನ್ನು ಭೇಟಿಯಾಗಿ ಮತ್ತೊಮ್ಮೆ ಮನವಿ ಸಲ್ಲಿಸಲು ‘ದಲಿತ ದಮಿತರ ಸ್ವಾಭಿಮಾನಿ ಹೋರಾಟ ಸಮಿತಿ’ ಅಂದುಕೊಂಡಿತ್ತು. ಆದರೆ ಶುಕ್ರವಾರ ರಾತ್ರಿವರೆಗೂ ಗೃಹ ಸಚಿವರನ್ನು ಸಮಿತಿಯವರಿಗೆ ಭೇಟಿಯಾಗಲು ಸಾಧ್ಯವಾಗಲಿಲ್ಲ.

swabhimani-nadeಈ ಎಲ್ಲಾ ಹಿನ್ನಲೆಯಲ್ಲಿ, “ಕನಕನಿಗೆ, ದಲಿತರಿಗೆ, ದಮನಿತರಿಗೆ ಅವಮಾನ ಮಾಡಲು ಹೊರಟವರಿಗೆ ಇನ್ನೂ ಅನುಮತಿ ಸಿಕ್ಕಿಲ್ಲವಂತೆ. ಅನುಮತಿ ನೀಡಿದ್ದೇ ಆದಲ್ಲಿ ನಾವೂ ನಡೆಸಿಯೇ ಸಿದ್ಧ – ಸ್ವಾಭಿಮಾನದ ನಡಿಗೆ.
ಇದು ದಲಿತ ದಮನಿತರ ಕರೆ.
ಗಟ್ಟಿಯಾಗಿ ಹೇಳಿ ಒಮ್ಮೆ- ಜೈ ಭೀಮ್ ಜೈ ಭೀಮ್”  ಎನ್ನುವ ಸಂದೇಶಗಳು ‘ಚಲೋ ಉಡುಪಿ’ ವಾಟ್ಸಾಪ್ ಗ್ರೂಪುಗಳಲ್ಲಿ ಹರಿದಾಡುತ್ತಿವೆ.

ಹೀಗಾಗಿ ಅಂತಿಮವಾಗಿ ಉಡುಪಿಯಲ್ಲಿ ಏನು ನಡೆಯಲಿದೆ? ಯಾರ ನಡೆ ನಡೆಯಲಿದೆ ಎಂಬ ಗೊಂದಲಗಳು ಹಾಗೇ ಉಳಿದುಕೊಂಡಿವೆ.

ಆದರೆ ಸದ್ಯದ ಮಾಹಿತಿಗಳ ಪ್ರಕಾರ ‘ಕಾನೂನು ಸುವ್ಯವಸ್ಥೆಗೆ ಭಂಗ’ ತರುವ ಅಪಾಯದ ಹಿನ್ನಲೆಯಲ್ಲಿ ಎರಡೂ ನಡೆಗಳಿಗೆ ಸರಕಾರ ನಿಷೇಧ ಹೇರಲಿದೆ. ಶನಿವಾರ ಈ ಘೋಷಣೆಯನ್ನು ಜಿಲ್ಲಾಧಿಕಾರಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

‘ಕನಕ ನಡೆ’ ಮತ್ತು ‘ಸ್ವಾಭಿಮಾನಿ ನಡೆ’ಗಳ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು, ವೈಯುಕ್ತಿಕ ನೆಲೆಯಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥರಿಗೆ ಬಹಿರಂಗ ಪತ್ರವನ್ನು ಫೇಸ್ಬುಕ್ಕಿನಲ್ಲಿ ಬರೆದಿದ್ದಾರೆ. ಇದಕ್ಕೆ ಪ್ರತಿಯಾಗಿ ಪೇಜಾವರ ಮಠಾಧೀಶರು ಕರೆ ಮಾಡಿ ತಮ್ಮ ಜೊತೆ ಮಾತನಾಡಿದ್ದನ್ನೂ ಅಮೀನ್ ಮಟ್ಟು ಫೇಸ್ಬುಕ್ಕಿನಲ್ಲಿ ಹಂಚಿಕೊಂಡಿದ್ದು ಒಂದು ಹಂತಕ್ಕೆ ವೈರಲ್ ಆಗಿದೆ.

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top