An unconventional News Portal.

ಕಂಬಿ ಹಿಂದಿನ ಕತೆ- 3: ಗುಂಡಿಸಿದ್ದನ ಮೇಲೆ ಸಮಾಜ ಹೊರಿಸಿದ ಆರೋಪಕ್ಕೆ ಜೈಲಿನ ಗೋಡೆಗಳ ನಡುವೆ ನ್ಯಾಯ ಸಿಕ್ತು!

ಕಂಬಿ ಹಿಂದಿನ ಕತೆ- 3: ಗುಂಡಿಸಿದ್ದನ ಮೇಲೆ ಸಮಾಜ ಹೊರಿಸಿದ ಆರೋಪಕ್ಕೆ ಜೈಲಿನ ಗೋಡೆಗಳ ನಡುವೆ ನ್ಯಾಯ ಸಿಕ್ತು!

ಸಮಾಜದ ಕುರುಡು ನಂಬಿಕೆಗಳು, ಸಣ್ಣತನಗಳು ವ್ಯಕ್ತಿಯೊಬ್ಬನನ್ನು ಅನ್ಯಾಯವಾಗಿ 5 ವರ್ಷ ಜೈಲಿಗೆ ತಳ್ಳಿದ ದುರಂತ ಕತೆ ಇದು. ಇಲ್ಲಿ ಸಮಾಜ, ಪೊಲೀಸ್, ನ್ಯಾಯಾಂಗ ನಾವು ನೀವು ಎಲ್ಲರೂ ಪಾಲುದಾರರೇ. ಸೋತಿದ್ದು ಮಾತ್ರ ಈ ಮುಗ್ದ ಮನುಷ್ಯ ಗುಂಡಿಸಿದ್ದ; ಇದು ಕಂಬಿನ ಹಿಂದಿನ ಕತೆಯ ಮೂರನೇ ಕಂತು.

ಆತನ ಊರು ತುಮಕೂರು. ಆತನನ್ನು ಎಲ್ಲರೂ ಗುಂಡಿಸಿದ್ಧ (ಬದಲಾಯಿಸಲಾಗಿದೆ) ಎಂದು ಕರೆಯುತ್ತಿದ್ದರು. ಹೆಸರಿನ ಜೊತೆಗೆ ಗುಂಡಿ ಅಂಟಿಕೊಂಡಿದ್ದಕ್ಕೂ ಕಾರಣ ಉಂಟು. ಆತ ಮುಗ್ಧನಾಗಿದ್ದ; ಮುಗ್ಧ ಅಂದರೆ ಮುಗ್ಧ. ಬಡಕೃಷಿಕ; ಮದುವೆಯಾಗಿತ್ತು. ಕೃಷಿ ನಡೆಸಿಕೊಂಡು ಸಂಸಾರ ಸರಿದೂಗಿಸಿಕೊಂಡು ಹೋಗುತ್ತಿದ್ದ. ಮಗುವೂ ಹುಟ್ಟಿತು. ತಪ್ಪಾಗಿದ್ದು ಇಲ್ಲೇ; ಆತನಿಗೆ ಹೆಣ್ಣು ಮಗುವಾಗಿತ್ತು.

ಮುಗ್ಧ ಗುಂಡಿಸಿದ್ಧನಿಗೆ ಗಂಡು-ಹೆಣ್ಣು ಎಲ್ಲಾ ಒಂದೇ. ಆದರೆ ಸುತ್ತಲಿನ ಸಮಾಜ ಜನ ಈತನ ಮುಗ್ಧತನವನ್ನೇ ಬಂಡವಾಳ ಮಾಡಿಕೊಂಡು ಸಿದ್ಧನಿಗೆ ಹೀಯಾಳಿಸತೊಡಗಿದರು. ಪ್ರತಿ ಮಾತಿಗೂ ಹೆಣ್ಣು ಮಗು ಎಂದು ಛಾಳಿಸುತ್ತಿದ್ದರು. ಹೇಗೂ ಮುಗ್ಧ, ಹೆಂಡತಿ ಕೈ ಸ್ವಲ್ಪ ಜೋರಾಗೇ ಇತ್ತು. “ನೀನೆಂಥ ಗಂಡಸು? ಹೆಣ್ಣು ಹುಟ್ಟಿಸಿ ಬಿಟ್ಟೆಯಲ್ಲಾ,” ಅಂತೆಲ್ಲಾ ಹೆಣ್ಣಾಗಿಯೂ ಆಕೆ ಗಂಡನ ಮೇಲೆ ಆರೋಪ ಹೊರಿಸುತ್ತಿದ್ದಳು.

Farmerಎಷ್ಟೆಂದು ಸಹಿಸಿಕೊಳ್ಳುವುದು. ಒಂದು ದಿನ ಗುಂಡಿಸಿದ್ಧ ಇವರನ್ನೆಲ್ಲಾ ತಾರಾಮಾರು ಬೈದು ಬಿಟ್ಟ. ತನ್ನ ಸುತ್ತಲಿನ ಜನರ ವಿರೋಧ ಕಟ್ಟಿಕೊಂಡ. ಅದೇ ಆತನಿಗೆ ಮುಂದೆ ಮುಳುವಾಯಿತು.

ಅದೊಂದು ದಿನ ಆಗಬಾರದ ಘಟನೆ ನಡೆದು ಹೋಯಿತು. ಗುಂಡಿಸಿದ್ದ ತನ್ನ ದನದ ಹಾಲು ಕರೆಯುತ್ತಿದ್ದ. ಹಾಲು ನೋಡಿಯೋ, ಅಪ್ಪನನ್ನು ನೋಡಿಯೋ ಅಂಬೆಗಾಲಿಡುತ್ತಿದ್ದ ಒಂದೂವರೆ ವರಷದ ಪುಟ್ಟ ಮಗು ತಕತಕ ಕುಣಿಯುತ್ತಾ ಓಡೋಡಿ ಬಂತು. ಮೈ ಕುಣಿಸುತ್ತಾ ಬಂದ ಮಗುವನ್ನು ನೋಡಿ ದನಕ್ಕೆ ಏನನ್ನಿಸಿತೋ ಏನೋ. ಝಾಡಿಸಿ ಒದ್ದು ಬಿಟ್ಟಿತು. ಒದ್ದ ರಭಸಕ್ಕೆ ಮಗು ಮಾರು ದೂರ ಹೋಗಿ ಬಿತ್ತು.

ಹಾಲಿನ ಬಕೆಟ್ ಬಿಟ್ಟವನೇ ಗುಂಡಿಸಿದ್ದ ಮಗುವನ್ನು ಎತ್ತಿಕೊಂಡು ಮನೆಬಳಿಗೆ ಓಡಿ ಹೋದ. ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಪ್ರಾಣ ಬಿಟ್ಟಾಗಿತ್ತು. ಎದೆ ಭಾಗಕ್ಕೆ ಬಿದ್ದ ದನದ ಗೊರಸಿನ ಹೊಡೆತ ಮಗುವನ್ನು ಬಲಿ ಪಡೆದಿತ್ತು. ಮಗುವನ್ನು ಕಳೆದುಕೊಂಡ ಸಿದ್ಧನಿಗೆ ದುಖಃ ತಡೆದುಕೊಳ್ಳಲಾಗಲಿಲ್ಲ.

ಇದಕ್ಕೆ ತುಪ್ಪ ಸುರಿಯುವಂತೆ ಆತನ ಹೆಂಡತಿಯೂ ಸೇರಿ ಊರಿನವರೆಲ್ಲಾ ಸಿದ್ಧನ ವಿರುದ್ಧವೇ ಪೊಲೀಸರಿಗೆ ದೂರು ನೀಡಿದರು. ಹೆಣ್ಣು ಮಗುವೆಂದು, ಸಿದ್ದನೇ ಮಗುವನ್ನು ಮೇಲಿಂದ ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎಂಬುದು ಅವರ ಆರೋಪವಾಗಿತ್ತು. ವಿಪರ್ಯಾಸ ನೋಡಿ, ಯಾವ ಸಮಾಜ ಹೆಣ್ಣು ಮಗು ಎಂದು ಜರೆಯುತ್ತಿತ್ತೋ ಅದೇ ಮಗುವನ್ನು ಸಿದ್ಧ ಪ್ರೀತಿಸುತ್ತಿದ್ದ. ಅದೇ ಮಗು ಸತ್ತಾಗ ಮಾತ್ರ ಅದೇ ಜನ ಬಂದು ಇದೇ ಸಿದ್ಧನ ವಿರುದ್ಧ ದೂರು ನೀಡಿದ್ದರು!

ಪ್ರಕರಣ ಕೋರ್ಟ್ ಮೆಟ್ಟಿಲು ಹತ್ತಿತು. ಆತನ ಹೆಂಡತಿಯೂ ಸೇರಿದಂತೆ ಸುತ್ತ ಮುತ್ತಲ ಜನವರೆಲ್ಲಾ ಕೋರ್ಟಿಗೆ ಬಂದು ಸಾಕ್ಷಿ ಹೇಳಿದರು. ಅವರಿಗೆ ಗುಂಡಿಸಿದ್ಧನ ಮೇಲೆ ಸಿಟ್ಟಿತ್ತು. ವೈದ್ಯರು ನೀಡಿದ ಮಗುವಿನ ಮರಣೋತ್ತರ ಪರೀಕ್ಷೆಯ ವರದಿಯನ್ನು ಸರಿಯಾಗಿ ಪರಿಶೀಲಿಸದೇ ಮಗುವನ್ನು ಸಿದ್ಧನೇ ಕೊಂದಿದ್ದಾನೆ ಎಂಬ ತೀರ್ಮಾನಕ್ಕೆ ಬಂತು ಕೆಳ ನ್ಯಾಯಾಲಯ. ಜೀವಾವಧಿ ಶಿಕ್ಷೆಯಾಯಿತು. ಸಿದ್ಧನನ್ನು ತುಮಕೂರಿನಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಗೃಹಕ್ಕೆ ವರ್ಗಾಯಿಸಿದರು.

ಇಲ್ಲಿಗೆ ಬಂದ ಸಿದ್ಧನಿಗೆ ಕೆಲವೇ ದಿನಗಳಲ್ಲಿ ಮಾನಸಿಕ ರೋಗ ಹುಚ್ಚಿನ ಆರಂಭಿಕ ಲಕ್ಷಣಗಳು ಕಾಣಿಸಿಕೊಳ್ಳತೊಡಗಿದವು. ಜೈಲಿನ ವಾತಾವರಣ ಅದಕ್ಕೆ ಪೂರಕವಾಗಿತ್ತು. ಮಾಡಬಾರದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವ ನೋವು, ಸ್ವಂತ ಹೆಂಡತಿಯೇ ತನ್ನ ವಿರುದ್ಧ ಸಾಕ್ಷಿ ಹೇಳಿದ್ದು, ತನಗೆ ಯಾರೂ ಇಲ್ಲ ಎಂಬ ಅಸಹಾಯಕತೆಗಳಲ್ಲಿ ಸಿದ್ಧ ಜರ್ಝರಿತನಾಗಿ ಇನ್ನೇನು ಹುಚ್ಚನೇ ಆಗುವ ಪರಿಸ್ಥಿಗೆ ಬಂದು ತಲುಪಿದ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜೈಲಿನಲ್ಲಿದ್ದ ಮಾನಸಿಕ ತಜ್ಞರು, ಜೈಲೊಳಗಿದ್ದ ಒಂದಷ್ಟು ಪ್ರಜ್ಞಾವಂತರು ಆತನ ಸಮಸ್ಯೆಗಳಿಗೆ ಕಿವಿಯಾದರು. ಆಪ್ತ ಸಮಾಲೋಚನೆಯಿಂದ ಒಂದಷ್ಟು ಸರಿಯಾದ. ಮಾತ್ರವಲ್ಲ ನಿಜವಾಗಿ ನಡೆದಿದ್ದು ಏನು ಎಂಬುದೂ ತಿಳಿಯಿತು. ಕೊನೆಗೆ ಹೈಕೋರ್ಟಿಗೆ ಅಪೀಲು ಹೋಗುವುದೆಂದು ತೀರ್ಮಾನವಾಯಿತು. ಇಂತಹ ಪ್ರಕರಣಗಳಲ್ಲಿ ಹಣವಿಲ್ಲದ ಆರೋಪಿಗಳ ಪರ ವಾದ ಮಾಡಲೆಂದೇ ಕಾನೂನಿನಲ್ಲಿ ‘ಧರ್ಮ ಅಪೀಲು’ಗೆ ಅವಕಾಶಗಳಿವೆ. ಕಾನೂನು ಸೇವಾ ಪ್ರಾಧಿಕಾರ, ಸೇರಿದಂತೆ ಸರಕಾರೇತರ ಸಂಸ್ಥೆಗಳಿಂದ ನ್ಯಾಯವಾದಿಗಳನ್ನು ನ್ಯಾಯಾಲಯವೇ ನೇಮಿಸುತ್ತದೆ. ಹೆಚ್ಚಾಗಿ ಇಂಥ ಪ್ರಕರಣಗಳನ್ನು ಜೂನಿಯರ್ ಲಾಯರ್ಗಳು ಕೈಗೆತ್ತಿಕೊಳ್ಳುತ್ತಾರೆ. ಅವರಲ್ಲಿ ಕೆಲವರು ತಮಗೆ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಆಸಕ್ತಿ ವಹಿಸಿ ವಾದ ಮಂಡಿಸುತ್ತಾರೆ.

ಸಿದ್ಧಿಗೂ ಒಬ್ಬರು ಜೂನಿಯರ್ ವಕೀಲರನ್ನು ಕೊಡಲಾಯಿತು. ಅವರು ಎಲ್ಲವನ್ನೂ ಕೂಲಂಕಷವಾಗಿ ಅಧ್ಯಯನ ಮಾಡಿ ವಾದ ಮಂಡನೆ ಆರಂಭಿಸಿದರು. ಮನೆಯವರು, ಸಮಾಜದ ಜನ ಹೇಳಿದ ಕಟ್ಟು ಕತೆಗೂ ವೈದ್ಯರು ನೀಡಿದ್ದ ವರದಿಗೂ ತಾಳಮೇಳಲ್ಲ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು. ಆತನ ಪರಿಪರಿಯಾಗಿ ನನ್ನದೇನೂ ತಪ್ಪಿಲ್ಲ ಎಂದು ಬೇಡಿಕೊಂಡ. ನ್ಯಾಯಾಲಯ ಇವರ ಬೇಡಿಕೆ ಮತ್ತು ವಾದವನ್ನು ಮಾನ್ಯ ಮಾಡಿತು. ಗುಂಡಿಸಿದ್ದನನ್ನು ನ್ಯಾಯಾಲಯ ನಿರಪರಾಧಿ ಎಂದು ದೋಷ ಮುಕ್ತಗೊಳಿಸಿತು.

ಅಷ್ಟೊತ್ತಿಗಾಗಲೇ ಐದು ವರ್ಷಗಳನ್ನು ಅನ್ಯಾಯವಾಗಿ ಸಿದ್ಧ ಜೈಲಿನಲ್ಲಿ ಕಳೆದು ಬಿಟ್ಟಿದ್ದ. ಬಿಡುಗಡೆಯಾಗುವ ದಿನ ಬಂದೇ ಬಿಟ್ಟಿತು. ಇಷ್ಟು ದಿವಸ ಜೈಲಿಗೆ ಹೆದರುತ್ತಿದ್ದ ಸಿದ್ದ, ಈಗ ತನ್ನ ಸುತ್ತ ಮುತ್ತಲಿನ ಸಮಾಜಕ್ಕೆ ಹೆದರತೊಡಗಿದರು. ವಿರೋಧ ಕಟ್ಟಿಕೊಂಡು ಬಂದವರು ನನ್ನನ್ನು ಬದುಕಲು ಬಿಡುವುದಿಲ್ಲ, ಹೆಂಡತಿ ಮನೆ ಒಳಕ್ಕೆ ಸೇರಿಸುವುದಿಲ್ಲ. ಹೀಗೆ ಆತನದ್ದು ಸುಮಾರು ತಾಪತ್ರಯಗಳಿದ್ದವು. ಆದರೆ ಬಿಡುಗಡೆ ಆದೇಶ ಬಂದ ನಂತರ ಒಂದು ಕ್ಷಣವೂ ಜೈಲಿನಲ್ಲಿ ಇಟ್ಟುಕೊಳ್ಳುವಂತಿಲ್ಲ ಎಂಬ ನಿಯಮವಿದೆ. ಜೈಲಿನ ಸಹವರ್ತಿಗಳು, ಅಧಿಕಾರಿಗಳು ಹೇಗಾದರೂ ಧೈರ್ಯ ತುಂಬಿ ಗುಂಡಿಸಿದ್ದನನ್ನು ಊರಿಗೆ ಅಟ್ಟಿದರು.

ಹೆದರುತ್ತಲೇ ಆತ ಮನೆ ದಾರಿ ಹಿಡಿದ. ನಿಧಾನವಾಗಿ ಗಂಡನ ತಪ್ಪಿಲ್ಲ ಎನ್ನುವುದನ್ನು ಹೆಂಡತಿಯೂ ಒಪ್ಪಿಕೊಂಡಳು. ಸಮಾಜಕ್ಕೆ ಮೊದಲೇ ಮರೆವು.

ಹೀಗೆ ಗುಂಡಿಸಿದ್ಧ ಜೈಲಿನಿಂದ ಬಿಡುಗಡೆಯಾಗಿ 4-5 ವರ್ಷವೇ ಕಳೆದು ಹೋಗಿದೆ. ಈಗ ಆತನಿಗೆ ಮತ್ತೊಂದು ಮಗುವಾಗಿದೆ. ಈ ಬಾರಿ ಸಮಾಜದ ಹೀಯಾಳಿಕೆಗೋ ಏನೋ ಗಂಡು ಮಗು ಹುಟ್ಟಿದೆ. ಗುಂಡಿಸಿದ್ಧ, ಆತನ ಹೆಂಡತಿ, ಜತೆಗೊಂದು ಪುಟ್ಟ ಪಾಪು; ಬದುಕಿಗೆ ಹಸು, ಸಣ್ಣ ಹೊಲದಲ್ಲಿ ಕೃಷಿ. ಒಟ್ಟಾರೆಯಾಗಿ ಸಿದ್ಧನ ಸಂಕಟ ದೂರವಾಗಿದೆ. ಹೊಸ ಜೀವನ ನಡೆಸುತ್ತಿದ್ದಾನೆ.

ಹೀಗೆ ಸಮಾಜ ಒಬ್ಬರ ಮೇಲೆ ಸುಖಾ ಸುಮ್ಮನೆ ಆರೋಪ ಮಾಡುವುದು. ಅದನ್ನು ಸಾಬೀತು ಮಾಡಲು ಸುಳ್ಳು ಸಾಕ್ಷಿ ಹೇಳುವುದು. ಸಮಾಜದ ಜನರೇ ಹೆಣ್ಣು ಹೆತ್ತರೆ ಒಳ್ಳೆಯದಲ್ಲ ಎಂಬ ತಮ್ಮ ಸಣ್ಣತನಗಳನ್ನು ಇನ್ನೊಬ್ಬರ ಮೇಲೆ ಹೇರುವುದು. ಇವೇ ಮುಂತಾಗಿ ಕೊನೆಗೊಮ್ಮೆ ಜೈಲಿನ ಗೋಡೆಗಳ ನಡುವೆ ಪರಿಹಾರ ಕಂಡುಕೊಳ್ಳುವ ಕತೆಗೆ ಇದು ಉದಾಹರಣೆ ಅಷ್ಟೆ.

ENTER YOUR E-MAIL

Name
Email *
August 2017
M T W T F S S
« Jul    
 123456
78910111213
14151617181920
21222324252627
28293031  

Top