An unconventional News Portal.

ಕಳಚಿಟ್ಟಿದ್ದೇನೆ ಇದೋ ನಿರ್ವಾಣ: ‘ಬೇಕು’ಗಳ ಹುಡುಕಾಟದಲ್ಲಿ ಸಿಕ್ಕ ಅಕ್ಷರದ ಫಲ!

ಕಳಚಿಟ್ಟಿದ್ದೇನೆ ಇದೋ ನಿರ್ವಾಣ: ‘ಬೇಕು’ಗಳ ಹುಡುಕಾಟದಲ್ಲಿ ಸಿಕ್ಕ ಅಕ್ಷರದ ಫಲ!

ಗೃಹಿಣಿಯಾಗಿದ್ದುಕೊಂಡೇ ಕಾವ್ಯದ ಬಗ್ಗೆ ವಿಶೇಷ ಆಸಕ್ತಿವಹಿಸಿ ಕಾವ್ಯಕೃಷಿಯಲ್ಲಿ ತೊಡಗಿಕೊಂಡಿರುವ ಹೇಮಲತಾಮೂರ್ತಿ ಹುಟ್ಟಿದ್ದು ಬೆಳೆದದ್ದೆಲ್ಲಾ ಬೆಂಗಳೂರಿನಲ್ಲಿ. ಮದುವೆಯ ನಂತರ ಕೆಲವರ್ಷಗಳ ಕಾಲ ಭದ್ರಾವತಿಯಲ್ಲಿ ನೆಲೆಸಿದವರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಅವರ ಹಲವು ಕವನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಈಗಾಗಲೇ ಒಂದು ಕವನ ಸಂಕಲನ ಹೊರತಂದಿದ್ದಾರೆ. ‘ಕಳಚಿಟ್ಟಿದ್ದೇನೆ, ಇದೋ ನಿರ್ವಾಣ’ ಇವರ ಎರಡನೇ ಕವನ ಸಂಕಲನ. ಭಾನುವಾರ (ಡಿ. 29) ಬೆಂಗಳೂರಿನ ಸಾಹಿತ್ಯ ಪರಿಷತ್ತಿನಲ್ಲಿ ಬಿಡುಗಡೆಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ, ಅವರ ಪುಸ್ತಕದಲ್ಲಿರುವ ಈ ಬರವಣಿಗೆ, ಗೃಹಿಣಿಯೊಬ್ಬರ ಒಳಗೆ ಕವಯತ್ರಿಯ ಹುಟ್ಟಿನ ಕುರಿತು ಬೆಳಕು ಚೆಲ್ಲುತ್ತದೆ. ಮುಂದೆ ಓದಿ…

hemalatha-invitation-1


  • ಹೇಮಲತಾ ಮೂರ್ತಿ

ಕಾವ್ಯಕೃಷಿ ಅಥವಾ ಕಾವ್ಯಸೃಷ್ಟಿ ಅಥವಾ ಅಭಿವ್ಯಕ್ತಿ ಇಂತಹ ಯಾವ ವಿಶೇಷಣಗಳಿಗೂ ನಾನು ಭಾಧ್ಯತಳಲ್ಲ. ನನ್ನೊಳಗೇ ಕುದಿಯುತ್ತಿದ್ದ ಭಾವಾಗ್ನಿಯನ್ನು ಹೊರಚೆಲ್ಲಿ ನಾನು ತಣ್ಣಗಾಗಿ ಹಗುರಾಗಿ ನಿರಾಳವಾಗಿಬಿಡುವ ಕ್ರಿಯೆಅಷ್ಟೇ.

ಚಿಕ್ಕವಳಿದ್ದಾಗಲಿಂದಲೂ ನಾನು ಏಕಾಂತ ಪ್ರಿಯೆ ಹಾಗೂ ಮೌನಿ. ಏನುಬೇಕು ಎಂದು ಎಂದಿಗೂ ಕೇಳದ ನಾನು, ಒಳಮನಸ್ಸಿನ ಬೇಕುಗಳಿಗೆ ಉತ್ತರವನ್ನು ಕಂಡುಕೊಳ್ಳಲು ಅಕ್ಷರಗಳ ಮೊರೆ ಹೋಗುತ್ತಿದ್ದೆ. ಆ ಬೇಕುಗಳಲ್ಲಿ ನನ್ನನ್ನು ಹೆಚ್ಚು ಕಾಡುತ್ತಿದ್ದುದು
ಪ್ರೀತಿ ಮತ್ತು ಅಭದ್ರತೆ. ತುಂಬು ಕುಟುಂಬಗಳಲ್ಲಿ ಹಿರಿಯ ಮಕ್ಕಳಿಗೆ ಪ್ರೀತಿ ಸಿಗುವುದಕ್ಕಿಂತ ಜವಾಬ್ದಾರಿಯ ಭಾರ ಕೊರಳಿಗೆ ಜೋತು ಬೀಳುತ್ತದೆ. ಇದರೊಟ್ಟಿಗೆ ಹೆಣ್ಣುಮಕ್ಕಳಿಗೆ ಕಟ್ಟುಪಾಡುಗಳು ನೀತಿನಿಯಮಗಳು ಅತಿಹೆಚ್ಚು. ಅಂತಹಾ ಸಂದರ್ಭದಲ್ಲಿ
ಭಾವಜೀವಿಯಾದ ನನ್ನಲ್ಲೂ ಒಬ್ಬ ಬಂಡಾಯಗಾರ್ತಿ ಉದ್ಭವಿಸಿ ಬಿಡುತ್ತಿದ್ದಳು. ಅದಕ್ಕೇ ಏನೋ ಅಕ್ಕನ ಬದುಕು, ಸ್ವತಂತ್ರ ಪ್ರಿಯತೆ ನನಗೆ ಯಾವತ್ತಿಗೂ ಪ್ರಿಯ. ಅವಳ ದಿಟ್ಟತನ ಸಮಾಜವನ್ನು ಧಿಕ್ಕರಿಸಿ ತನ್ನ ಚನ್ನಮಲ್ಲಿಕಾರ್ಜುನನ ಸಂಗಾತ ಬಯಸಿ ಅಂಗ ಸಂಗವನ್ನೂ ಮೀರಿ ಆಧ್ಯಾತ್ಮವನ್ನು ಜೀವನ ಕ್ರಮವಾಗಿಸಿಕೊಂಡು ನಿರ್ವಾಣಗೊಂಡ ಅವಳ ಬದುಕು ನನಗೆ ಎಂದಿಗೂ ಆದರ್ಶಪ್ರಾಯ. ಇದೇ ರೀತಿ ನನ್ನ ತುಡಿತವೂ ಪ್ರೀತಿಯನ್ನೇ ಹಪಹಪಿಸುತ್ತಾ ಅದರೊಳಗೇ ಇಳಿದು ಆಧ್ಯಾತ್ಮವನ್ನು ಅರಸುವುದು. ದಕ್ಕಿದ್ದಷ್ಟು, ದಕ್ಕದ್ದು ಮತ್ತಿನ್ನಷ್ಟು. ಈ ಹುಡುಕಾಟ ನನ್ನೊಳಗಿನ ನೋವು ಅಭದ್ರತೆ, ತಲ್ಲಣಗಳನ್ನು ಮೀರಲು
ನಾಕಂಡುಕೊಂಡ ಹಾದಿಯಾ…? ಉಹೂಂ. ಗೊತ್ತಿಲ್ಲ.

ಚಿಕ್ಕಂದಿನಿಂದಲೂ ಪುಸ್ತಕಗಳೆಂದರೆ ನನಗೆ ಬಹಳ ಅಚ್ಚುಮೆಚ್ಚು. ಕೈಗೆ ಸಿಕ್ಕಯಾವ ಪುಸ್ತಕಗಳನ್ನೂ ಬಿಡದೇ ಓದುತ್ತಿದ್ದೆ. ಕಥೆ, ಕವನ, ಕಾದಂಬರಿ, ಆತ್ಮಕಥೆ, ಪ್ರಬಂಧಗಳು, ನಾಟಕಗಳು, ಎಲ್ಲವೂ ಪ್ರಿಯ. ಆದರೆ ಹೆಚ್ಚುಇಷ್ಟವಾಗುತ್ತಿದ್ದದ್ದು ಕಾವ್ಯ. ಅನ್ನಿಸಿದ್ದನ್ನು ಬರೆಯ ಹೊರಟಾಗ ಗದ್ಯಪದ್ಯವಾಗಿರುತಿತ್ತು. ಸಣ್ಣ ಪುಟ್ಟ ಕವಿತೆಗಳನ್ನು ಪತ್ರಿಕೆಗಳಿಗೆ ಕಳುಹಿಸುತ್ತಿದ್ದೆ. ಇದು ಎಂಟರಿಂದ ಹತ್ತನೆಯ ತರಗತಿಯವರೆಗಿನ ಮಾತು.

ಪಿಯುಸಿ ಸೇರಿದ ಸ್ವಲ್ಪ ದಿನಗಳಲ್ಲಿ ಮದುವೆಯಾದ್ದರಿಂದ ವಿದ್ಯಾಭ್ಯಾಸ ಸ್ಥಗಿತಗೊಂಡಿತು. ಆಮೇಲೆ ಬರವಣಿಗೆ ಇಳಿಮುಖವಾಗತೊಡಗಿತು. ಆನಂತರದಲ್ಲಿ ಮಕ್ಕಳು ಸಂಸಾರದ ಜಂಜಡ. ಅರ್ಧಕ್ಕೆ ನಿಂತ ವಿಧ್ಯಾಭ್ಯಾಸವನ್ನು ಅಂಚೆತೆರಪಿನ ಶಿಕ್ಷಣದ ಮೂಲಕ ಮುಂದುವರೆಸತೊಡಗಿದ್ದರಿಂದ ಬರವಣಿಗೆ ಪೂರ್ಣವಾಗಿ ಬಿಟ್ಟುಹೋಯಿತು.

ಮಕ್ಕಳು ಬೆಳೆದ ನಂತರ ಸಂಸಾರದ ಜವಾಬ್ದಾರಿ ಸ್ವಲ್ಪ ಹಗುರಾದ ತರುವಾಯ, ನನ್ನ ಬಗ್ಗೆ ಯೋಚಿಸಲು ತೊಡಗಿದೆ. ಹೌದು ನಾನು ಯಾರು? ನನ್ನ ಅಸ್ತಿತ್ವವೇನು? ನನ್ನದಾದ ಅಸ್ಮಿತೆ ಎಲ್ಲಿದೆ? ಪ್ರಶ್ನೆಗಳು ಮೂಡಿದಂತೆಲ್ಲಾ ಒಂದು ರೀತಿಯ ಶೂನ್ಯವಸ್ಥೆ
ಆವರಿಸಿಕೊಳ್ಳತೊಡಗಿತು. ಬದುಕಿನ ಪಲ್ಲಟಗಳು ಅವು ಕೊಟ್ಟ ಬೆರಗು, ತಲ್ಲಣ, ದುಃಖ, ಖಾಲಿತನ, ಘಾತಗಳು ಎಲ್ಲವೂ ನನ್ನೊಳಗೆ ಹೆಪ್ಪುಗಟ್ಟಿ ಜಡತ್ವ ಆವರಿಸಿಬಿಟ್ಟಿತು. ಆಗ ಮತ್ತೆ ಹಗುರಾಗಲೂ ನಾಕಂಡುಕೊಂಡ ಲೋಕವೇ ಅಕ್ಷರಲೋಕ. ಎಲ್ಲವೂ ಕರಗಿ ಅಕ್ಷರರೂಪಕ್ಕಿಳಿಯತೊಡಗಿತು. ಸುಮ್ಮನೇ ಬರೆದು ಇಟ್ಟುಕೊಳ್ಳುತ್ತಿದ್ದ ಕವಿತೆಗಳನ್ನು ಫೇಸ್ಬುಕ್ ನಲ್ಲಿ ಹಾಕಬಹುದು ಎಂದು ನನ್ನ ಮಗ ಒಂದು ಅಕೌಂಟ್ ಕ್ರಿಯೆಟ್ ಮಾಡಿಕೊಟ್ಟ ಅಲ್ಲಿ ಕವನಗಳನ್ನು ಪೋಸ್ಟ್ ಮಾಡತೊಡಗಿದೆ. ನನ್ನೊಳಗಿನ ಕವಯತ್ರಿ ಹೊರ ಪ್ರಪಂಚಕ್ಕೆ ಕಾಲಿಟ್ಟಿದ್ದು ಹಾಗು ಗುರುತಿಸಿಕೊಳ್ಳತೊಡಗಿದ್ದೇ ಆಗ. ‘ಕಳಚಿಟ್ಟಿದ್ದೇನೆ, ಇದೋ ನಿರ್ವಾಣ’ ಕವನ ಸಂಕಲನ ಮಾಡಬೇಕೆಂದುಕೊಂಡ ಸಮಯಯದಲ್ಲಿ ನನ್ನ ಕಾವ್ಯಾಸಕ್ತಿಗೆ ಪೂರಕವಾಗಿ ಕಾವ್ಯದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ, ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಾಮಾಣಿಕ ಸೇವೆಗೈಯ್ಯುತ್ತಿರುವ ಬೇಲೂರು ರಘುನಂದನ್ ಅವರು ನನ್ನ ಈ ಕವನ ಸಂಕಲನವನ್ನು ಪ್ರಕಟಿಸಲು ಸಹಕರಿಸಿದರು. ಅಷ್ಟೇ ಅಲ್ಲದೆ ‘ಶ್ವೇತಪ್ರಿಯ’ ಪ್ರಕಾಶನದಿಂದ ಹೊರಬರುತ್ತಿರುವ ಮೊದಲ ಕವನ ಸಂಕಲನ ಎಂದು ಹೇಳಲು ಹೆಮ್ಮೆಪಡುತ್ತೇನೆ. ಇದಕ್ಕಾಗಿ ಪ್ರಕಾಶಕರು ಮತ್ತು ಬೇಲೂರು ರಘುನಂದನ್ ಅವರಿಗೆ ಎಂದಿಗೂ ಆಭಾರಿ. ಡಾ. ರಾಜಶೇಖರ ಮಠಪತಿ(ರಾಗಂ) ಯವರು ನನ್ನ ಕವನಗಳ ಬಗ್ಗೆ ಮೆಚ್ಚುಗೆಯ ಮಾತನ್ನಷ್ಟೇ ಆಡಿದ್ದಲ್ಲದೇ ಪ್ರೀತಿಯಿಂದ ಮುನ್ನುಡಿಯನ್ನು ಬರೆದುಕೊಟ್ಟಿದ್ದಾರೆ. ಅವರಿಗೆ ನನ್ನ ಮನಃಪೂರ್ವಕ
ಕೃತಜ್ನತೆಗಳು. ಕೇಳಿದ ತಕ್ಷಣವೇ ಪ್ರೀತಿಯಿಂದಬೆನ್ನುಡಿ ಬರೆದುಕೊಟ್ಟ ನೆಚ್ಚಿನ ಕವಯತ್ರಿ ಎಮ್.ಆರ್.ಕಮಲ ಅವರಿಗೆ ಹೃದಯಪೂರ್ವಕ ನಮನಗಳು. ಸುಂದರವಾದ ಮುಖಪುಟ ವಿನ್ಯಾಸ ಮಾಡಿಕೊಟ್ಟ ಅರುಣ್ ಕುಮಾರ್ ಅವರಿಗೆ ಮತ್ತು ಕವನಕ್ಕೆ ತಕ್ಕಂತ ರೇಖಾಚಿತ್ರ ಬರೆದು ಪುಟ ವಿನ್ಯಾಸ ಮಾಡಿಕೊಟ್ಟ ಪ್ರೀತಿಯ ಮದನ್ ಗೂ ಧನ್ಯವಾದಗಳು.

ಸಾಹಿತ್ಯ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹಿಸುವ ನನ್ನ ಪತಿ ನಾರಾಯಣ ಮೂರ್ತಿ, ಮಕ್ಕಳಾದ ಅರುಣ್ ಹಾಗೂ ಭರಣ್ ಗೆ ನಾನು ಸದಾಋಣಿ. ಮತ್ತು ನನ್ನನ್ನು ಗುರುತಿಸಿ ಬೆಳೆಸಿದ ನನ್ನೆಲ್ಲಾ ಮುಖಪುಸ್ತಕದ ಸ್ನೇಹಿತ ಬಳಗಕ್ಕೂ ಪ್ರೀತಿ ಪೂರ್ವಕ
ಕೃತಜ್ಞತೆಗಳು.

ಇಲ್ಲಿ ಹೇಳಲೇಬೇಕಾದ ವಿಷಯವೊಂದಿದೆ. ಮತ್ತೊಂದು ಕವನ ಸಂಕಲನದ ಕನಸನ್ನ ನನ್ನೊಳಗೆ ಬಿತ್ತಿ, ಅದಕ್ಕೆ ಅತಿ ಶ್ರಮ ವಹಿಸಿ ಕವನಗಳ ಆಯ್ಕೆಯಿಂದ ಹಿಡಿದು ಪುಸ್ತಕ ಪ್ರಕಟಣೆಯವರೆಗೂ ಎಲ್ಲಾ ಕೆಲಸವನ್ನು ಮುತುವರ್ಜಿ ವಹಿಸಿ ಮಾಡಿದ ನನ್ನಾತ್ಮದ ಕೂಸು ಪ್ರಗತ್ ಮತ್ತು ಮುದ್ದು ತಮ್ಮ ಪುರಂದರನಿಗೆ ತುಂಬು ಪ್ರೀತಿಗಳು.

Leave a comment

Top