An unconventional News Portal.

‘ಮರಳಿ ಅಧಿಕಾರಕ್ಕೆ’: ವಿವಾದಿತ ಜಾರ್ಜ್ ಮತ್ತೆ ಮಂತ್ರಿ

‘ಮರಳಿ ಅಧಿಕಾರಕ್ಕೆ’: ವಿವಾದಿತ ಜಾರ್ಜ್ ಮತ್ತೆ ಮಂತ್ರಿ

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದ ಕೆ.ಜೆ ಜಾರ್ಜ್ ಮತ್ತೆ ಸಂಪುಟ ಸೇರಲಿದ್ದಾರೆ. ಸಿಐಡಿ ‘ಬಿ-ರಿಪೋರ್ಟ್’ನಲ್ಲಿ ಜಾರ್ಜ್ ಕ್ಲೀನ್ ಚಿಟ್ ಪಡೆಯುತ್ತಿದ್ದಂತೆ ತರಾತುರಿಯಲ್ಲಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತಿದೆ.

ಸೋಮವಾರ 10.15ಕ್ಕೆ ರಾಜಭವನದಲ್ಲಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.

ಈ ಹಿಂದೆ ಜಾರ್ಜ್ ನಿರ್ವಹಿಸುತ್ತಿದ್ದ ಬೆಂಗಳೂರು ಅಭಿವೃದ್ಧಿ ಖಾತೆ ಸದ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಳಿಯಲ್ಲಿದ್ದು, ಅದೇ ಖಾತೆ ಮರಳಿ ಸಿಗುವ ಸಾಧ್ಯತೆ ಇದೆ.

ಪ್ರಕರಣ ಹಿನ್ನಲೆ

ಡಿವೈಎಸ್ಪಿ ಗಣಪತಿಯವರು ಜುಲೈ 7ರ ಸಂಜೆ ಮಡಿಕೇರಿಯ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮೊದಲು ಮಡಿಕೇರಿಯ ‘ಟಿವಿವನ್’ ವಾಹಿನಿಗೆ ಸಂದರ್ಶನ ನೀಡಿದ್ದ ಅವರು, ಸಂದರ್ಶನದಲ್ಲಿ ಅಂದಿನ ಗೃಹ ಸಚಿವರಾಗಿದ್ದ ಕೆ.ಜೆ ಜಾರ್ಜ್ ಹಾಗೂ ಅಧಿಕಾರಿಗಳಾದ ಎ.ಎಂ ಪ್ರಸಾದ್ ಹಾಗೂ ಪ್ರಣವ್ ಮೊಹಾಂತಿ ಹೆಸರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಜಾರ್ಜ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶ ಹೊರಡಿಸಿತ್ತು. ಜತೆಗೆ ಸಾರ್ವಜನಿಕ ಒತ್ತಡವೂ ಹೆಚ್ಚಾದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಇದೆಲ್ಲಾ ನಡೆದು ಮೂರು ತಿಂಗಳ ನಂತರ ಅಂದರೆ ಸೆಪ್ಟೆಂಬರ್ 17 ರಂದು ಮಡಿಕೇರಿಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಬಿ-ರಿಪೋರ್ಟ್ ಸಲ್ಲಿಸಿದ್ದರು. ಇದರಲ್ಲಿ ಜಾರ್ಜ್ ಸೇರಿ ಇಬ್ಬರೂ ಅಧಿಕಾರಿಗಳಿಗೂ ಕ್ಲೀನ್ ಚಿಟ್ ನೀಡಲಾಗಿತ್ತು.

ಈ ಹಿನ್ನಲೆಯಲ್ಲಿ ಕೆ.ಜೆ ಜಾರ್ಜ್ ಈಗ ಮತ್ತೆ ಸಂಪುಟ ಸೇರುತ್ತಿದ್ದಾರೆ. ಅವರು ಈ ಹಿಂದೆ ಗೃಹ ಸಚಿವ, ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿದ್ದರು. ಕಾವೇರಿ ವಿವಾದದ ಬಿಸಿಯಲ್ಲೇ ತರಾತುರಿಯಲ್ಲಿ ಜಾರ್ಜ್ ಸಂಪುಟಕ್ಕೆ ಸೇರಿಸಿಕೊಳ್ಳುತ್ತಿರುವುದರ ಹಿಂದೆ ಅವರ ಪ್ರಭಾವ ಕೆಲಸ ಮಾಡಿರುವಂತೆ ಕಾಣಿಸುತ್ತಿದೆ.

ವಿರೋಧ ಪಕ್ಷಗಳಿಂದ ವಿರೋಧ

“ಬಿ ರಿಪೋರ್ಟ್’ನ್ನೇ ಕ್ಲೀನ್ ಚಿಟ್ ಎಂದು ತಿಳಿಯುತ್ತಿರುವುದು ನಿಜಕ್ಕೂ ದುರಾದೃಷ್ಟಕರ. ಜಾರ್ಜ್ ಅವರು ಈ ಹಿಂದೆ ಗೃಹ ಸಚಿವರಾಗಿದ್ದರು ಎಂಬುದನ್ನು ಮರೆಯುವಂತಿಲ್ಲ. ಇಬ್ಬರು ಪೊಲೀಸರ ಹೆಸರು ಕೂಡ ಪ್ರಕರಣದಲ್ಲಿ ಕೇಳಿಬಂದಿದೆ. ಬಿ-ರಿಪೋರ್ಟ್ ಕುರಿತಂತೆ ಯಾರು ಬೇಕಾದರೂ ನ್ಯಾಯಾಲಯದಲ್ಲಿ ಸವಾಲೆಸೆಯಬಹುದು. ಜಾರ್ಜ್ ಅವರನ್ನು ಶೀಘ್ರಗತಿಯಲ್ಲಿ ಸಂಪುಟಕ್ಕೆ ಸೇರ್ಪಡೆಗೊಳಿಸಿಕೊಳ್ಳುತ್ತಿರುವುದು ಮೂರ್ಖತನ,” ಎಂದು ಬಿಜೆಪಿ ವಕ್ತಾರ ಗೋ ಮಧುಸೂದನ್ ಹೇಳಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಡಿ. ಕುಮಾರಸ್ವಾಮಿ ಅವರು ಮಾತನಾಡಿ, “ಉನ್ನತಾಧಿಕಾರಿಗಳು, ಹಿರಿಯ ಅಧಿಕಾರಿಗಳ ವಿರುದ್ಧ ಕಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರಭಾವಿ ವ್ಯಕ್ತಿಗಳು ಕಿರಿಯ ಅಧಿಕಾರಿಗಳ ಮೇಲೆ ಪ್ರಭಾವ ಬೀರುವುದು ಸಹಜ. ಬಿ-ರಿಪೋರ್ಟ್’ನಲ್ಲಿ ಆಶ್ಚರ್ಯವೇನು ತಂದಿಲ್ಲ. ಮೊನ್ನೆ ಸಿದ್ಧರಾಮಯ್ಯನವರು ದೆಹಲಿಗೆ ಹೋಗಿದ್ದು ಜಾರ್ಜ್’ರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಪರ್ಮಿಷನ್ ಪಡೆಯಲು ಇರಬಹುದು,” ಎಂದು ಹೇಳಿದ್ದಾರೆ.

ಇನ್ನಷ್ಟು: 

‘ದಿ ಸ್ಟೋರಿ ಆಫ್ ಕೆ. ಜೆ. ಜಾರ್ಜ್’: ಮಡಿಕೇರಿಯಿಂದ ಸರ್ವಜ್ಞ ನಗರಕ್ಕೆ; ಮರದ ಉದ್ಯಮದಿಂದ ರಾಜಕಾರಣಕ್ಕೆ!

‘ದಿ ಸ್ಟೋರಿ ಆಫ್ ರಾಣಾ ಜಾರ್ಜ್’: ಸಚಿವ ಕೆ. ಜೆ. ಜಾರ್ಜ್ ಸಾಮ್ರಾಜ್ಯದ ಉತ್ತರಾಧಿಕಾರಿ ಬಗ್ಗೆ ನಿಮಗೆಷ್ಟು ಗೊತ್ತು?

 

ENTER YOUR E-MAIL

Name
Email *
September 2017
M T W T F S S
« Aug    
 123
45678910
11121314151617
18192021222324
252627282930  

Top