An unconventional News Portal.

ಹೀಗೊಂದು ವಿಚಿತ್ರ ಪ್ರಕರಣ: ಸುಪ್ರಿಂ ಕೋರ್ಟ್‌ನಿಂದ 14 ಕೋಟಿ ಪರಿಹಾರ ಕೋರಿದ ನ್ಯಾಯಾಧೀಶ

ಹೀಗೊಂದು ವಿಚಿತ್ರ ಪ್ರಕರಣ: ಸುಪ್ರಿಂ ಕೋರ್ಟ್‌ನಿಂದ 14 ಕೋಟಿ ಪರಿಹಾರ ಕೋರಿದ ನ್ಯಾಯಾಧೀಶ

ದೇಶದ ಹೈಕೋರ್ಟ್‌ಗಳಿಗೆ ನ್ಯಾಯಾಧೀಶರ ನೇಮಕಾತಿ ಸಂಬಂಧಪಟ್ಟ ಹಾಗೆ ‘ಕೊಲಿಜಿಯಂ’ ವ್ಯವಸ್ಥೆ ಕುರಿತು ಸುಪ್ರಿಂ ಕೋರ್ಟ್ ಮತ್ತು ಕೇಂದ್ರ ಸರಕಾರದ ನಡುವೆ ತಿಕ್ಕಾಟ ನಡೆಯುತ್ತಿದೆ. ಇದೇ ಹೊತ್ತಿನಲ್ಲಿ ‘ತಮ್ಮ ಮನಸ್ಸನ್ನು ಕೆಡಿಸಿದ್ದಕ್ಕಾಗಿ ಹಾಗೂ ಸಾರ್ವಜನಿಕವಾಗಿ ಅಪಮಾನ ಮಾಡಿದ್ದಕ್ಕಾಗಿ’ ಹೈಕೋರ್ಟ್ ನ್ಯಾಯಾಧೀಶರೊಬ್ಬರು 14 ಕೋಟಿ ಪರಿವಾರ ನೀಡಿವಂತೆ ಕೋರಿರುವ ಅಚ್ಚರಿಯ ಘಟನೆ ವರದಿಯಾಗಿದೆ.

ಪಶ್ಚಿಮ ಬಂಗಾಳದ ಹೈಕೋರ್ಟ್ ನ್ಯಾಯಾಧೀಶ ಚಿನ್ನಸ್ವಾಮಿ ಸ್ವಾಮಿನಾಥನ್ ಕರ್ಣನ್ ಪರಿಹಾರ ಕೋರಿ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಸಾಂವಿಧಾನಿಕ ಪೀಠಕ್ಕೆ ಪತ್ರ ಬರೆದವರು.

ಕಳೆದ ವಾರವಷ್ಟೆಸುಪ್ರಿಂ ಕೋರ್ಟ್, ‘ಆಡಳಿತಾತ್ಮಕ ವಿಚಾರಗಳಿಗೆ ಸಂಬಂಧಪಟ್ಟಂತೆ ಚರ್ಚೆ ನಡೆಸಲು’ ಹಾಜರಾಗುವಂತೆ ಸಮನ್ಸ್ ನೀಡಿದರೂ ನ್ಯಾಯಾಲಯಕ್ಕೆ ಹಾಜರಾಗದ ನ್ಯಾ. ಕರ್ಣನ್ ವಿರುದ್ಧ ವಾರೆಂಟ್ ಹೊರಡಿಸಿತ್ತು. ಇದಕ್ಕೆ ಪ್ರತಿಯಾಗಿ  ನ್ಯಾ. ಕರ್ಣನ್ ಸುಪ್ರಿಂ ಕೋರ್ಟ್‌ನ ಸಾಂವಿಧಾನಿಕ ಪೀಠದ ಏಳೂ ನ್ಯಾಯಾಧೀಶರ ವಿರದ್ಧ ಸಿಬಿಐ ತನಿಖೆಗೆ ಆದೇಶ ನೀಡಿದ್ದರು. ತಮ್ಮ ಅಧಿಕೃತ ನಿವಾಸದಲ್ಲಿಯೇ ಕಲಾಪ ನಡೆಸಿದ ಅವರು ಸಿಬಿಐ ತನಿಖೆಗೆ ಆದೇಶ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದರು.

ಇದಾದ ನಂತರ, ತಮಗೆ ಖುದ್ದಾಗಿ ಹಾಜರಾಗುವಂತೆ ಸಮನ್ಸ್ ನೀಡಿದ ಮುಖ್ಯನ್ಯಾಯಮೂರ್ತಿಗಳಿಗೆ ಫಾಕ್ಸ್ ಸಂದೇಶವನ್ನೂ ಕಳುಹಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್ ಫ್ಯಾಕ್ಸ್ ಸಂದೇಶವನ್ನು ನ್ಯಾ. ಕರ್ಣನ್ ಕಡೆಯಿಂದ ಬಂದ ಪ್ರತಿಕ್ರಿಯೆ ಎಂದು ಪರಿಗಣಿಸಲು ನಿರಾಕರಿಸಿತು. ಇದೇ ತಿಂಗಳ ಕೊನೆಯಲ್ಲಿ ಕರ್ಣನ್‌ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪಶ್ಚಿಮ ಬಂಗಾಳ ಪೊಲೀಸ್ ಮುಖ್ಯಸ್ಥರಿಗೆ  ಸೂಚನೆಯನ್ನೂ ನೀಡಿತು.

ಈ ಬೆಳವಣಿಗೆ ನಂತರ ನ್ಯಾ. ಕರ್ಣನ್ ಪತ್ರ ಬರೆದಿದ್ದು, ‘ತಮ್ಮ ಮನಸ್ಸನ್ನು ಕೆಡಿಸಿದ್ದಕ್ಕಾಗಿ ಮತ್ತು ಸಾರ್ವಜನಿಕವಾಗಿ ಅವಮಾನ ಮಾಡಿದ್ದಕ್ಕಾಗಿ’ 14 ಕೋಟಿ ಪರಿಹಾರ ನೀಡುವಂತೆ ಕೋರಿ ಪತ್ರ ಬರೆದಿದ್ದಾರೆ.

 

 

ಜನವರಿ ತಿಂಗಳಲ್ಲಿ ನ್ಯಾ. ಕರ್ಣನ್ ಸುಮಾರು 20 ಜನ ನ್ಯಾಯಾಧೀಶರ ಮೇಲೆ ಭ್ರಷ್ಟಾಚಾರದಂತಹ ಗುರುತನ ಆರೋಪವನ್ನು ಮಾಡಿದ್ದರು. ಈ ವೇಳೆಯಲ್ಲಿ ಒಬ್ಬರು ನ್ಯಾಯಾಧೀಶರ ಪತ್ನಿಗೆ ಅವಮಾನವಾಗಿದೆ ಎಂಬ ಆರೋಪವೂ ನ್ಯಾ. ಕರ್ಣನ್ ವಿರುದ್ಧ ಕೇಳಿ ಬಂದಿತ್ತು. ಹೀಗಾಗಿ ನ್ಯಾ. ಕರ್ಣನ್ ವಿಚಾರಣೆ ನಡೆಸಲು ಸುಪ್ರಿಂ ಕೋರ್ಟ್ ಮುಂದಾಗಿತ್ತು.

ಸುಪ್ರಿಂ ಕೋರ್ಟ್ನ ಹೊಸ ಆದೇಶದ ನಂತರ ತುರ್ತು ಪತ್ರಿಕಾಗೋಷ್ಠಿ ನಡೆಸಿದ ನ್ಯಾ. ಕರ್ಣನ್, “ದಲಿತ ಸಮುದಾಯದಿಂದ ಬಂದ ಕಾರಣಕ್ಕೆ ತಮ್ಮನ್ನು ಮುಗಿಸಲು ಪ್ರಯತ್ನ ನಡೆಯುತ್ತಿದೆ,” ಎಂದು ಆರೋಪ ಮಾಡಿದರು.

ಸದ್ಯ ಸುಪ್ರಿಂ ಕೋರ್ಟ್ ನ್ಯಾ. ಕರ್ಣನ್ ಪ್ರಕರಣದ ವಿಚಾರಣೆ ಮುಗಿಯುವವರೆಗೂ ಅವರು ಯಾವುದೇ ಕಲಾಪದಲ್ಲಿಯೂ ಪಾಲ್ಗೊಳ್ಳಬಾರದು ಎಂದು ಹೇಳಿದೆ.

 

ದೇಶದ ನ್ಯಾಯಾಂಗದ ಇತಿಹಾಸದಲ್ಲಿಯೇ ಸುಪ್ರಿಂ ಕೋರ್ಟ್ ಹೈಕೋರ್ಟ್ನ ನ್ಯಾಯಾಧೀಶರೊಬ್ಬರ ಮೇಲೆ ಕ್ರಮಕ್ಕೆ ಮುಂದಾಗಿರುವ ಮೊದಲ ಪ್ರಕರಣ ಇದಾಗಿದೆ.

Leave a comment

Top