An unconventional News Portal.

ಇದು ವಿರುದ್ಧ ನೆಲೆಯ ಗುಜರಾತ್ ‘ಅಸ್ಮಿತೆ’: ಜಿಗ್ನೇಶ್ ಮೆವಾನಿ ಜತೆ 4 ನಿಮಿಷದ ಸಂದರ್ಶನ!

ಇದು ವಿರುದ್ಧ ನೆಲೆಯ ಗುಜರಾತ್ ‘ಅಸ್ಮಿತೆ’: ಜಿಗ್ನೇಶ್ ಮೆವಾನಿ ಜತೆ 4 ನಿಮಿಷದ ಸಂದರ್ಶನ!

ಅಸ್ಮಿತೆ ಹಾಗೂ ಅಸ್ಥಿತ್ವ…

ಗುಜರಾತ್ ರಾಜ್ಯದ ರಾಜಕಾರಣವನ್ನು ಹತ್ತಿರದಿಂದ ಬಲ್ಲವರಿಗೆ ಈ ಎರಡು ಪದಗಳ ಬಗ್ಗೆ ವಿಶೇಷ ತಿಳಿವಳಿಕೆ ಇದ್ದೇ ಇರುತ್ತದೆ. ಗುಜರಾತ್ ‘ಅಸ್ಮಿತೆ’ ಎಂಬುದು ಅಲ್ಲಿ ಮಾತ್ರವಲ್ಲ ದೇಶದ ರಾಜಕೀಯ, ಆರ್ಥಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಪಾತ್ರವನ್ನು ವಹಿಸಿಕೊಂಡು ಬರುತ್ತಿದೆ.

ಅದಕ್ಕಾಗಿಯೇ ಇವತ್ತು ಕೇಂದ್ರದಲ್ಲಿ ಗುಜರಾತಿನ ಹಿಂದುಳಿದ ವರ್ಗದಿಂದ ಬಂದ ನರೇಂದ್ರ ಮೋದಿ ಪ್ರಧಾನಿಯಾಗಿ ರಾಜಕೀಯ ಅಧಿಕಾರವನ್ನು ಪಡೆದುಕೊಂಡಿದ್ದಾರೆ. ಉದ್ಯಮಗಳ ವಿಚಾರಕ್ಕೆ ಬಂದರೆ ಧೀರೂಬಾಯಿ ಅಂಬಾನಿ ಎಂಬ ‘ಪಾಲಿಸ್ಟರ್ ಪ್ರಿನ್ಸ್’ನ ಮಕ್ಕಳು ‘ರಿಲಯನ್ಸ್’ ಉದ್ಯಮವನ್ನು ಕಟ್ಟಿ ನಿಲ್ಲಿಸಿದ್ದಾರೆ. ಇಂತಹ ಸಮಯದಲ್ಲಿಯೇ, ಅದಕ್ಕೆ ತದ್ವಿರುದ್ಧವಾದ ಇನ್ನೊಂದು ‘ಅಸ್ಮಿತೆ’ ಕೂಡ ಅದೇ ರಾಜ್ಯದಿಂದ ಹರಡಲು ಶುರುವಾಗಿದೆ. ಅದು ಜಿಗ್ನೇಶ್ ಮೆವಾನಿ ಎಂಬ ಮಾಜಿ ಪತ್ರಕರ್ತನೊಬ್ಬನ ಮೂಲಕ ಹಲವರಲ್ಲಿ ಹೊಸ ಉತ್ಸಾಹವನ್ನು, ಸ್ಪಷ್ಟತೆಯನ್ನು, ಗೊಂದಲಗಳನ್ನು, ಪ್ರಶ್ನೆಗಳನ್ನು ಹುಟ್ಟುಹಾಕಿದೆ. ‘ಅಸ್ತಿತ್ವ’ದ ವಿಚಾರವನ್ನು ಮುಂದಿಟ್ಟಿದೆ.

ಇದಕ್ಕೆ ಸಾಂಸ್ಕೃತಿಕ ವಿರೋಧವನ್ನು ಹುಟ್ಟು ಹಾಕುವ ನಿಟ್ಟಿನಲ್ಲಿ ಕರ್ನಾಟಕದ ಇಬ್ಬರು ಯುವಕರು ನಡಿಗೆ ಆರಂಭಿಸುವ ತಯಾರಿಯಲ್ಲಿದ್ದಾರೆ. ‘ಬ್ರಿಗೇಡ್ ಬ್ರದರ್ಸ್’ ಹಿನ್ನೆಲೆ ಇರುವವರು  ಹುಟ್ಟು ಹಾಕಿದ ಸಂಘಟನೆ ‘ಯುವ ಬ್ರಿಗೇಡ್’ ಬ್ಯಾನರ್ ಅಡಿಯಲ್ಲಿ, ಗಾಂಧಿಯನ್ನು ಊರುಗೋಲನ್ನಾಗಿ ಹಿಡಿದುಕೊಂಡು ‘#ಕನಕನಡೆ’ಗೆ ಹೊರಟಿದ್ದಾರೆ. ಈಗಾಗಲೇ #ಚಲೋಉಡುಪಿ ಆಯೋಜಕರ ಮೇಲೆ ವೈಯುಕ್ತಿಕ ದಾಳಿಗಳು ಶುರುವಾಗಿವೆ. ಮುಂದಿನ ಬೆಳವಣಿಗೆಗಳನ್ನು ಇನ್ನೂ ಗಮನಿಸಬೇಕಿದೆ.

ಇದೇ ಸಮಯದಲ್ಲಿ- ಇನ್ನೇನು ಗುಜರಾತಿಗೆ ವಿಮಾನ ಏರುವ ಗಡಿಬಿಡಿಯಲ್ಲಿದ್ದ, ಸಾಕಷ್ಟು ದಣಿದಿದ್ದ ಜಿಗ್ನೇಶ್ ಮೆವಾನಿ ಎಂಬ ತರುಣ ಸಂಘಟಕನನ್ನು ‘ಸಮಾಚಾರ’ ಸೋಮವಾರ ಸಂಜೆ ಬೆಂಗಳೂರಿನಲ್ಲಿ ಭೇಟಿ ಮಾಡಿತು. ಈ ಸಮಯದಲ್ಲಿ ಅವರ ಜತೆ ನಡೆದ 4. 07 ನಿಮಿಷದ ಸಂಭಾಷಣೆಯ ಅಕ್ಷರ ರೂಪ ಇಲ್ಲಿದೆ:


jignesh-mevani-int-1

*ನೀವು ಪತ್ರಕರ್ತರಾಗಿದ್ದವರು ಎಂದು ಕೇಳಿ ಸಂತೋಷವಾಯಿತು. ಪತ್ರಿಕೋದ್ಯಮ ಬೇಡ ಅಂತ ಅನ್ನಿಸಿತಾ?
ಜಿ: ಹೌದು.. ಹೌದು… ನಮಗೆ 22-23 ವರ್ಷವಿದ್ದಾಗ, ಈ ಸಮಾಜವನ್ನು ಬರವಣಿಗೆಯಿಂದ ಬದಲಾಯಿಸಬಹುದು ಎಂಬ ರಮ್ಯವಾದ ಕಲ್ಪನೆಯೊಂದು ಇರುತ್ತದೆ. ಅಂತಹ ಕಲ್ಪನೆಗಳು ಪತ್ರಿಕೋದ್ಯಮದ ಒಳಗೆ ಪ್ರವೇಶ ಪಡೆದ ನಂತರ ಬಹುಬೇಗ ನಿರಾಶೆಗೆ ಒಳಗಾಗುತ್ತವೆ. ಪತ್ರಕರ್ತ ಆಗುವುದಕ್ಕಿಂತ, ನಾನು ‘ಗ್ರಾಸ್ ರೂಟ್’ ಆಕ್ಟಿವಿಸ್ಟ್ (ಭೀಮ ಸೈನಿಕ) ಆಗುವುದು ಪ್ರಮುಖವಾದ ಅಂಶ ಅಂತ ಅನ್ನಿಸಿತು. ಹಾಗೆ ನಾನು ಪತ್ರಿಕೋದ್ಯಮ ಬಿಟ್ಟೆ. ಈಗಲೂ ಬರೆಯುತ್ತೇನೆ…
*ಯಾವ ಸಂಸ್ಥೆಗೆ ಕೆಲಸ ಮಾಡುತ್ತಿದ್ದಿರಿ? 
ಜಿ: ‘ಗುಜರಾತಿ ಅಭಿಯಾನ’ ನಿಯತಕಾಲಿಕೆ.
*ಏನಾಗಿದ್ರಿ? 
ಜಿ: ರಿಪೋರ್ಟ್ ಮತ್ತು ಡೆಸ್ಕ್ ಎರಡರಲ್ಲೂ ಕೆಲಸ ಮಾಡಿದ್ದೀನಿ.
*ಎಷ್ಟು ವರ್ಷ ಕೆಲಸ ಮಾಡಿದ್ರಿ?
ಜಿ: ಮೂರುವರೆ ವರ್ಷ.
*ಆಮೇಲೆ ನೀವು ಜರ್ನಲಿಸಂ ಬಿಟ್ಟು…
ಜಿ: ಟ್ರೇಡ್ ಯೂನಿಯನ್ ಸೇರಿದೆ. ಅಲ್ಲಿಂದ ಪೂರ್ಣಾವಧಿ ಕಾರ್ಯಕರ್ತ ಆದೆ. ಮಾಧ್ಯಮಗಳ ಬಗ್ಗೆ ನನಗೆ ಈಗಲೂ ನಂಬಿಕೆ ಇದೆ. ಅಲ್ಲಿ ಕೆಲವು ಜನ ಅತ್ಯುತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ.
*ಮುಖ್ಯ ವಾಹಿನಿಯ ಮಾಧ್ಯಮಗಳಿಲ್ಲದೆ ನೀವು ನಿಮ್ಮ ಹೋರಾಟವನ್ನು ಉಳಿಸಿಕೊಳ್ಳಬಲ್ಲಿರಿ ಅನ್ನಿಸುತ್ತಿದೆಯಾ?
ಜಿ: ನೋಡಿ… ಕೆಳ ವರ್ಗ, ಕೆಳ ಜಾತಿ ಜನರ ಸಮಸ್ಯೆಗಳ ಸುದ್ದಿಗಳಿಗೆ ಮುಖ್ಯವಾಹಿನಿಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಇಲ್ಲ. ಈಗಲೂ ಒಳಗೆ ಒಂದು ಹೋರಾಟ ನಡೆಯುತ್ತಿದೆ.
ಅದೇ ವೇಳೆ, ಇವತ್ತು ನಮ್ಮ ಈ ಹೋರಾಟಕ್ಕೆ ಎಲ್ಲಾ ಕಡೆಗಳಿಂದ ಪ್ರತಿಕ್ರಿಯೆ ಬರುತ್ತಿರುವುದು ನೋಡಿದರೆ, ಜನರ ಕಲ್ಪನೆಯಲ್ಲಿ ಹೀಗೊಂದು ಹೋರಾಟದ ಕುರಿತು ಸುದ್ದಿಗಳನ್ನು ಭಿತ್ತಿದ್ದೇ ಕಾರಣ. ಅವರು ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲ್ಲ. ಹಾಗಂತ ಈ ಎಲ್ಲಾ ಬೆಳವಣಿಗೆಗಳಿಗೆ ಅವರು ಮಾತ್ರವೇ ಕಾರಣ ಅಂತಲ್ಲ.
*ಅಂಬೇಡ್ಕರ್ ಕೂಡ ಹೋರಾಟಕ್ಕೆ ಸ್ವಂತದ ಪತ್ರಿಕೆಗಳನ್ನು ನಡೆಸಲು ತೀರ್ಮಾನಿಸಿದ್ದರು. ಹಾಗೆಯೇ ನಿಮಗೂ ಏನಾದರೂ ಮಾಧ್ಯಮಗಳ ಅಗತ್ಯತೆ ಕುರಿತು ದೂರಗಾಮಿ ಆಲೋಚನೆ ಇದೆಯಾ?
ಜಿ: ಮಾಧ್ಯಮಗಳ ಕುರಿತು ಅನ್ನಿಸುವುದಕ್ಕಿಂತ ನಾನು ಪ್ರತಿಭಟನಾ ವಿಧಾನಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತೇನೆ. ಅದಕ್ಕಾಗಿ, ಕ್ರೀಯಾಶೀಲ ಅಭಿವ್ಯಕ್ತಿಯನ್ನು ಆಯ್ದುಕೊಂಡೇ ಮುಂದೆ ಬರುತ್ತೇವೆ. 20 ಸಾವಿರ ದಲಿತರು ಅಂಬೇಡ್ಕರ್ ಹೆಸರಿನಲ್ಲಿ ಶಪಥ ಮಾಡುವುದು ಸಹಜವಾಗಿಯೇ ಹೊರಗಿನ ಗಮನ ಸೆಳೆಯುತ್ತದೆ. ನಾವು ಯಾವಾಗ ‘ದಲಿತ ಅಸ್ಮಿತೆ ಯಾತ್ರೆ’ ಆರಂಭಿಸಿದೆವೋ, ಕೆಲವೇ ಸಮಯದಲ್ಲಿ ಜನರ ಗಮನವನ್ನು ಇದು ಸೆಳೆಯುತ್ತದೆ ಎಂದು ಗೊತ್ತಾಗಿತ್ತು… ಅದಕ್ಕಾಗಿ ಕ್ರೀಯಾಶೀಲತೆ ಹೆಚ್ಚು ಕೆಲಸ ಮಾಡುತ್ತದೆ.
*ಮಾಧ್ಯಮಗಳ ವಿಚಾರದಲ್ಲಿ ಏನಾದರೂ ಆಲೋಚನೆ ಇಟ್ಟುಕೊಂಡಿದ್ದೀರಾ?
ಜಿ: ನಮಗೆ ಅಂತಹದ್ದೇನೂ ಇಲ್ಲ. ವೆಲ್ ಇರಬಹುದೇನೋ. ನಮ್ಮ ಚಟುವಟಿಕೆಗಳು ಮಾಧ್ಯಮಗಳನ್ನು ಸೆಳೆಯುತ್ತಿವೆ. (ನಗು)
*ನೀವು ಇನ್ನೂ ಬರವಣಿಗೆ ಮುಂದುವರಿಸಿದ್ದೀರಿ ಎಂದು ಹೇಳಿದಿರಿ. ಈ ಸಮಯದಲ್ಲಿ, ನಿಮಗೆ ಪತ್ರಕರ್ತ ಅಂತ ಅನ್ನಿಸಿಕೊಳ್ಳುವುದಕ್ಕಿಂತ ಹೋರಾಟಗಾರ ಅಂತ ಅನ್ನಿಸಿಕೊಳ್ಳುವುದೇ ಖುಷಿ ಕೊಡುತ್ತಾ?
ಜಿ: ಇವತ್ತಿಗೆ ನಾನು ಹೋರಾಟಗಾರನೇ. ಪತ್ರಿಕೋದ್ಯಮ ಏನು ಮಾಡಬೇಕು? ದನಿ ಇಲ್ಲದವರಿಗೆ ದನಿಯಾಗಬೇಕು. ನಾನು ಮಾಡುತ್ತಿರುವ ಕೆಲಸ ಕೂಡ ಅದೆನೇ. ರ್ಯಾಲಿ ಮಾಡುತ್ತೀವಿ; ಅದು ಸಹಜವಾಗಿಯೇ ಮಾಧ್ಯಮಗಳಲ್ಲಿ ಬರುತ್ತದೆ.
*ನೀವು ಪರ್ಯಾಯ ಮಾಧ್ಯಮಗಳನ್ನು ಬಳಸಿಕೊಳ್ಳಬೇಕಾದ ಅಗತ್ಯತೆ ಹಾಗೂ ಮಾಧ್ಯಮಗಳ ಪ್ರಚಾರದ ಪಾತ್ರದ ಕುರಿತು ಭಾಷಣದಲ್ಲಿ ಪ್ರಸ್ತಾಪಿಸಿದ್ದೀರಿ. ಹೀಗಾಗಿ ಈ ಕುರಿತು ಪ್ರಶ್ನೆಗಳನ್ನು ಕೇಳಲು ಹೋಗುವುದಿಲ್ಲ. ಕೊನೆಯ ಪ್ರಶ್ನೆ; ಒಂದು ವೇಳೆ ಮುಂದೊಂದು ದಿನ ನೀವು ದೇಶದ ನಾಯಕನಾಗಿ ಹೊರಹೊಮ್ಮಿದರೆ, ಅವತ್ತು ನಿಮ್ಮದೇ ರಾಜ್ಯದ ಉದ್ಯಮಿ ಅಂಬಾನಿ ಮಾಲೀಕತ್ವದ ‘ರಿಲಯನ್ಸ್’ ಮಾಧ್ಯಮಗಳ ಸಹಾಯ ಪಡೆದುಕೊಳ್ಳುವುದಿಲ್ಲವಾ? 
ಜಿ: ಸಿಎನ್ಎನ್ ನೆಟ್ವರ್ಕ್ 18 ಗ್ರೂಪ್ ನಮ್ಮ ಹೋರಾಟಕ್ಕೆ ಒಳ್ಳೆಯ ಪ್ರಚಾರವನ್ನೇ ನೀಡಿದೆ. ಅವರು ಇವತ್ತಿಗೂ ನಮ್ಮನ್ನು ಫಾಲೋ ಮಾಡುತ್ತಿದ್ದಾರೆ. ಯೂ- ಟ್ಯೂಬ್ನಲ್ಲಿ ವಿಡಿಯೋ ಸಿಗುತ್ತವೆ….ನಾವು ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿದ್ದೀವಿ. ಆಲೋಚನೆಯಲ್ಲಿ ಕ್ರೀಯಾಶೀಲರಾಗಿದ್ದೇವೆ. ನೋಡೋಣ, ಮುಂದೆ ಹೇಗೆ ಅಂತ…
*ಧನ್ಯವಾದಗಳು…

ಇದಕ್ಕೂ ಮುಂಚೆ, ‘ದಲಿತ ದಮನಿತರ ಸಂಘಟನಾ ಸಮಿತಿ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಗ್ನೇಶ್ ಹಲವು ವಿಚಾರಗಳ ಕುರಿತು ಮಾತನಾಡಿದರು. ತಮ್ಮ ಹಿನ್ನೆಲೆಯನ್ನು ಪರಿಚಯ ಮಾಡಿಕೊಳ್ಳುವ ಮೂಲಕವೇ ಮಾತು ಆರಂಭಿಸಿದ ಅವರು ಕಾನೂನು ಕಲಿತದ್ದನ್ನು ನೆನಪಿಸಿಕೊಂಡರು. ಜತೆಗೆ, ತಾವು ಸಾಹಿತ್ಯದ ವಿದ್ಯಾರ್ಥಿ ಎಂದರು. ತಮ್ಮ ಹೋರಾಟದ ಕುರಿತು ಪ್ರಶ್ನೋತ್ತರಗಳಿಗೆ ಉತ್ತರವನ್ನೂ ನೀಡಿದರು; ಹೋರಾಟವನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಸಲಹೆಗಳನ್ನೂ ಕೇಳಿದರು.

“ಸೋಮವಾರ ಬೆಳಗ್ಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ದಕ್ಷಿಣ ಭಾರತದ ಪ್ರಮುಖ ರಾಜ್ಯಗಳೂ ಸೇರಿದಂತೆ ದೇಶದ ಸುಮಾರು 7-8 ರಾಜ್ಯಗಳ ಹೋರಾಟಗಾರರ ಜತೆ ಜಿಗ್ನೇಶ್ ಮಾತುಕತೆ ನಡೆಸಿದರು. ಅದರಲ್ಲಿ, ಮುಂದಿನ ದಿನಗಳಲ್ಲಿ ದಲಿತ ಹೋರಾಟಕ್ಕೆ ಹೊಸ ಆಯಾಮ ನೀಡುವ ಮತ್ತು ತಾರ್ಕಿತ ಅಂತ್ಯವನ್ನು ಮುಟ್ಟಲು ಗಡುವು ಇಟ್ಟುಕೊಂಡು ಕೆಲಸ ಮಾಡುವ ಬಗ್ಗೆ ಚಿಂತನೆ ನಡೆಯಿತು,” ಎಂದು ಆಯೋಜಕರೊಬ್ಬರು ಮಾಹಿತಿ ನೀಡಿದರು.

ಒಟ್ಟಾರೆ, ಕಾವೇರಿ ವಿಚಾರದ ಬಿಸಿ ತಣ್ಣಗಾದ ಹೊತ್ತಿನಲ್ಲಿ, ರಾಜ್ಯದಲ್ಲಿ ಹೊಸ ಆಲೋಚನೆಯೊಂದು ಮೊಳಕೆ ಒಡೆದಿದೆ. ಇದಕ್ಕೆ ಪ್ರತಿಕ್ರಿಯೆಗಳು, ವಿರೋಧಗಳೂ ಶುರುವಾಗಿವೆ. ‘ಅಸ್ಮಿತೆ’ಯ ಮುಂದುವರಿಕೆಯಂತೆ, ಅಸ್ಥಿತ್ವದ ಪ್ರಶ್ನೆಯನ್ನು ಮುಂದಿಡುತ್ತಿದೆ.

Top