An unconventional News Portal.

‘ಇದುವೇ ನ್ಯಾಯ’: ವಿಳಂಬ ಗತಿ ಬಗ್ಗೆ ಚರ್ಚೆ ಹುಟ್ಟುಹಾಕಿದ ಎನ್ಐಎ ಸ್ಪೆಷಲ್ ಕೋರ್ಟ್ ಆದೇಶ!

‘ಇದುವೇ ನ್ಯಾಯ’: ವಿಳಂಬ ಗತಿ ಬಗ್ಗೆ ಚರ್ಚೆ ಹುಟ್ಟುಹಾಕಿದ ಎನ್ಐಎ ಸ್ಪೆಷಲ್ ಕೋರ್ಟ್ ಆದೇಶ!

ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಪ್ರಕರಣಕ್ಕೆ ಇದೀಗ ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ಸಿಕ್ಕಿರುವ ಅಂತ್ಯ ಯಾವ ಆಯಾಮದಿಂದಲೂ ತಾರ್ಕಿಕವಾಗಿದ್ದಲ್ಲ…

ಹೀಗೊಂದು ಅಭಿಪ್ರಾಯ ನ್ಯಾಯಾಂಗ ವ್ಯವಸ್ಥೆ ಒಳಗಿನಿಂದಲೇ ಕೇಳಿ ಬರುತ್ತಿದೆ. 2012ರ ಆಗಸ್ಟ್ ತಿಂಗಳ ಅಂತ್ಯದಲ್ಲಿ ಒರ್ವ ಪತ್ರಕರ್ತ, ಡಿಆರ್ಡಿಓ ಸಹಾಯಕ ಎಂಜಿನಿಯರ್ ಸೇರಿದಂತೆ 11 ಮುಸ್ಲಿಂ ಯುವಕರನ್ನು ಒಂದೇ ದಿನ ಸಿಸಿಬಿ ಪೊಲೀಸರು ಬಂಧಿಸಿದಾಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ನಂತರದ ದಿನಗಳಲ್ಲಿ ಪತ್ರಕರ್ತರು, ಬಿಜೆಪಿ ನಾಯಕರು ಹಾಗೂ ಹಿಂದೂ ಪರ ಸಂಘಟನೆಗಳ ಮುಖಂಡರನ್ನು ಹತ್ಯೆ ಮಾಡಲು ದೊಡ್ಡದೊಂದು ಜಾಲ ಇದರ ಹಿಂದಿದೆ ಎಂದು ತನಿಖೆ ಬೆಳಕು ಚೆಲ್ಲಿತ್ತು.

ಪ್ರಕರಣ ರಾಷ್ಟ್ರೀಯ ತನಿಖಾ ದಳ (ಎನ್ಐಎ)ಗೆ ವರ್ಗಾವಣೆಯಾಗಿತ್ತು. ಬಂಧಿತರ ಮೇಲೆ ದೇಶದ್ರೋಹವೂ ಸೇರಿದಂತೆ ಐಪಿಸಿಯ ಹಲವು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು. ಇದರ ಜತೆಗೆ, ಭಯೋತ್ಪಾದನಾ ಪ್ರಕರಣಗಳಲ್ಲಿ ಮಾಧ್ಯಮ ಸಂಹಿತೆಗಳ ಬಗ್ಗೆಯೂ ಚರ್ಚೆ ಹುಟ್ಟು ಹಾಕಿದ್ದ ಪ್ರಕರಣ ಇದಾಗಿತ್ತು.

ಇದೀಗ ನಾಲ್ಕು ವರ್ಷಗಳ ನಂತರ, ನ್ಯಾಯಾಂಗದ ನಿಧಾನಗತಿಯಿಂದಾಗಿ ತಪ್ಪೊಪ್ಪಿಕೊಂಡ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಎನ್ಐಎ ಹೆಸರಿಸಿದ್ದ ಸುಮಾರು 350 ಸಾಕ್ಷಿಗಳ ಪೈಕಿ ಕೇವಲ 23 ಜನರನ್ನು ಮಾತ್ರವೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಜತೆಗೆ, ಇನ್ನೂ 10 ಪ್ರಮುಖ ಆರೋಪಿಗಳು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ದೋಷಾರೋಪ ಪಟ್ಟಿ ಹೇಳುತ್ತಿದೆ. ಈ ಹಿನ್ನೆಲೆಯಲ್ಲಿ, ಈಗ ಸಿಕ್ಕಿರುವ ಅಂತ್ಯ ತಾರ್ಕಿಕವಾದುದ್ದು ಅಲ್ಲ ಎಂಬ ಕಾಳಜಿಗಳು ವ್ಯಕ್ತವಾಗುತ್ತಿವೆ.

ಶಿಕ್ಷೆ ಪ್ರಮಾಣ ಕಡಿಮೆ: 

ಗುರುವಾರ ತೀರ್ಪು ಹೊರಬೀಳುತ್ತಿದ್ದ ಹಾಗೆ ‘ಸಮಾಚಾರ’ ಜತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನ್ಯಾಯಾಲಯದ ತೀರ್ಪಿನ ಕುರಿತು ತಮ್ಮ ಅಸಮಾಧಾನವನ್ನು ಹೊರಹಾಕಿದರು. “ನಮ್ಮ ಹಣೆಬರಹ ಗಟ್ಟಿ ಇತ್ತು ಬಚಾವಾದೆವು. ಬಂಧಿತರಿಗೆ ಭಯೋತ್ಪಾದಕ ಸಂಘಟನೆಗಳ ಲಿಂಕ್ ಇತ್ತು ಎಂದು ತನಿಖಾ ಸಂಸ್ಥೆಯೇ ಹೇಳಿದೆ. ಹೀಗಿರುವಾಗ ಅವರು ತಪ್ಪೊಪ್ಪಿಕೊಂಡರು ಎಂಬ ಕಾರಣಕ್ಕೆ ಕೇವಲ ಐದು ವರ್ಷಗಳ ಶಿಕ್ಷೆ ವಿಧಿಸಿರುವುದು ಸರಿಯಲ್ಲ. ಜತೆಗೆ, ಪ್ರಕರಣದಲ್ಲಿ ಆರೋಪ ಮುಕ್ತವಾಗಿರುವ ಪತ್ರಕರ್ತನ ಕೈವಾಡ ಬಗ್ಗೆಯೂ ಹೆಚ್ಚಿನ ತನಿಖೆ ನಡೆಯಬೇಕಿತ್ತು. ಈ ಪ್ರಕರಣದಲ್ಲಿ ತನಿಖಾ ಸಂಸ್ಥೆ ಮೇಲ್ಮನವಿ ಸಲ್ಲಿಸಬೇಕಿದೆ,” ಎಂದರು.

ಪ್ರಕರಣದಲ್ಲಿ, ಎನ್ಐಎ ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳ ಪ್ರಕಾರ, 2012ರ ಆಗಸ್ಟ್ 29ರಂದು ಬೆಳಗ್ಗೆ, ಅವತ್ತಿಗೆ ಪತ್ರಕರ್ತರಾಗಿದ್ದ ಪ್ರತಾಪ್ ಸಿಂಹ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲು ಸಂಚು ರೂಪಿಸಿದ್ದ ಸಮಯದಲ್ಲಿಯೇ ಇಬ್ಬರು ಮುಸ್ಲಿಂ ಯುವಕರನ್ನು ಬಂಧಿಸಲಾಗಿತ್ತು. ನಂತರ, ಪ್ರತಾಪ್ ಸಿಂಹ ಹಾಗೂ ಪ್ರಧಾನಿ ಮೋದಿ ಜತೆಗಿದ್ದ ಫೊಟೋವನ್ನು ವಶಕ್ಕೆ ಪಡೆದುಕೊಂಡಿದ್ದಾಗಿ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದರು. ಇದರ ಜತೆಗೆ, ಪತ್ರಕರ್ತರಾದ ವಿಶ್ವೇಶ್ವರ ಭಟ್ ಸೇರಿದಂತೆ ಹಲವರ ಹತ್ಯೆಗೂ ಸಿದ್ಧತೆ ನಡೆದಿತ್ತು ಎಂದು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿತ್ತು. “ತನಿಖಾಧಿಕಾರಿಗಳೇ ಹೇಳುವ ಪ್ರಕಾರ, ಆರೋಪಿಗಳಾಗಿದ್ದವರು ನಮ್ಮನ್ನು ಹತ್ಯೆ ಮಾಡುವ ಮೂಲಕ ಭಯವನ್ನು ಹುಟ್ಟು ಹಾಕುವ, ಒಂದು ವರ್ಗಕ್ಕೆ ಸಂದೇಶವನ್ನು ಕಳುಹಿಸುವ ಇರಾದೆಯನ್ನು ಇಟ್ಟುಕೊಂಡಿದ್ದರು. ಅಂತವರಿಗೆ ಐದು ವರ್ಷಗಳ ಶಿಕ್ಷೆ ಪ್ರಮಾಣ ಕಡಿಮೆಯಾಯಿತು,” ಎನ್ನುತ್ತಾರೆ ಪ್ರತಾಪ್ ಸಿಂಹ.

ನ್ಯಾಯದಾನ ವಿಫಲ:

ಪ್ರಕರಣದಲ್ಲಿ ಹೊರಬಿದ್ದಿರುವ ತೀರ್ಪಿನ ಆಚೆಗೆ, ನ್ಯಾಯದಾನ ಪ್ರಕ್ರಿಯೆ ಕುರಿತು ಗಮನವನ್ನು ಹಿರಿಯ ವಕೀಲ ಬಿ. ಟಿ. ವೆಂಕಟೇಶ್ ಸೆಳೆಯುತ್ತಾರೆ. “ಇಂತಹ ಗಂಭೀರ ಪ್ರಕರಣಗಳಲ್ಲಿ ಪ್ರತಿದಿನದ ಆಧಾರದ ಮೇಲೆ ವಿಚಾರಣೆ ನಡೆಯಬೇಕು. ಅದಕ್ಕಾಗಿಯೇ ಸುಪ್ರಿಂ ಕೋರ್ಟ್ ಕೆಲವು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದೆ. ಆದರೆ, ನಾಲ್ಕು ವರ್ಷಗಳು ಕಳೆದ ನಂತರವೂ 23 ಸಾಕ್ಷಿಗಳಷ್ಟೆ ವಿಚಾರಣೆಯಲ್ಲಿ ಭಾಗಿಯಾಗಿದ್ದರು ಎಂದರೆ ನ್ಯಾಯಾಂಗ ವ್ಯವಸ್ಥೆಯ ವೈಫಲ್ಯವನ್ನು ಇದು ತೋರಿಸುತ್ತಿದೆ,” ಎಂಬುದು ಅವರ ಸ್ಪಷ್ಟ ಅಭಿಪ್ರಾಯ.

“ಬಿಲಾಲ್ ಪ್ರಕರಣದಲ್ಲಿ ಕಳೆದ ಹತ್ತು ವರ್ಷಗಳಿಂದ ವಿಚಾರಣೆ ನಡೆಯುತ್ತಲೇ ಇದೆ. ಈ ಪ್ರಕರಣದಲ್ಲಿಯೂ ಹೀಗೆ ನಿಧಾನಗತಿಯಲ್ಲಿ ವಿಚಾರಣೆ ನಡೆದುಕೊಂಡು ಬಂದಿದೆ. ಇದು ನ್ಯಾಯಾಂಗ ವ್ಯವಸ್ಥೆ ವಿಚಾರಣೆ ಹಂತದಲ್ಲಿರುವ ಆರೋಪಿಗಳ ಬಗ್ಗೆ ಹೊಂದಿರುವ ಅಸೂಕ್ಷ್ಮತೆಯನ್ನು ತೋರಿಸುತ್ತದೆ,” ಎನ್ನುತ್ತಾರೆ ವೆಂಕಟೇಶ್.

ಎರಡೂ ಒಂದೇ:

“ಒಂದು ವೇಳೆ ಪ್ರಕರಣದ ವಿಚಾರಣೆ ನಡೆದಿದ್ದರೆ 10 ವರ್ಷಗಳ ನಂತರ ಆರೋಪಗಳು ನಿರಾಧಾರ ಎಂಬ ತೀರ್ಪು ಹೊರಬೀಳುವ ಸಾಧ್ಯತೆ ಇತ್ತು. ಇದೀಗ ಐದು ವರ್ಷಗಳ ಶಿಕ್ಷೆ ವಿಧಿಸಿ ಆದೇಶ ಹೊರಬಿದ್ದಿದೆ. ಆರೋಪಿಗಳು ಅಪರಾಧಿಗಳಾಗಿದ್ದಾರೆ. ಸಮಾಜದ ಕಣ್ಣಲ್ಲಿ ಎರಡೂ ಒಂದೇ. ಪೇಪರ್ಗಳ ಮೇಲಷ್ಟೆ ವ್ಯತ್ಯಾಸ ಕಾಣಿಸುತ್ತದೆ,” ಎನ್ನುತ್ತಾರೆ ಇನ್ನೊಬ್ಬ ವಕೀಲ ಸುಲ್ತಾನ್ ಬ್ಯಾರಿ. ಸುಲ್ತಾನ್ 2012ರಲ್ಲಿ ಪ್ರಕರಣ ದಾಖಲಾದ ಸಮಯದಲ್ಲಿ ಆರೋಪಿಗಳ ಪರವಾಗಿ ವಕಾಲತ್ತು ವಹಿಸಿದ ವಕೀಲರ ತಂಡದಲ್ಲಿ ಇದ್ದವರು.

“ಸುಪ್ರಿಂ ಕೋರ್ಟ್ ಆರೋಪಿಗಳ ಮೇಲೆ ಹೊರಿಸಿರುವ ಆರೋಪಗಳು ಸಾಬೀತಾಗಿ ಶಿಕ್ಷೆ ಆಗುವ ಸಾಧ್ಯತೆ ಇದ್ದ ಸಮಯದಲ್ಲಿ, ಶಿಕ್ಷೆ ಪ್ರಮಾಣದ ಅರ್ಧದಷ್ಟನ್ನು ಜೈಲಿನಲ್ಲಿ ಕಳೆದರೆ  ಶಾಸನಬದ್ಧ ಜಾಮೀನು ನೀಡಬೇಕು ಎಂದು ಹೇಳಿದೆ. ಈ ಪ್ರಕರಣದಲ್ಲಿ ಈಗ ಶಿಕ್ಷೆಯಾದ ನಂತರವೂ ಅಪರಾಧಿಗಳಿಗೆ 5 ವರ್ಷ ಶಿಕ್ಷೆಯಾಗಿದೆ. ಈಗಾಗಲೇ ಅವರು 4 ವರ್ಷಗಳನ್ನು ಜೈಲಿನಲ್ಲಿಯೇ ಕಳೆದಿದ್ದಾರೆ. ಅಂದರೆ, ಈಗಾಗಲೇ ಅವರಿಗೆ ಜಾಮೀನು ನೀಡುವ ಅವಕಾಶ ಇತ್ತು. ಅತ್ತ ಜಾಮೀನು ನೀಡದೆ, ಇತ್ತ ಸಾಕ್ಷಿಗಳ ವಿಚಾರಣೆಯನ್ನೂ ಸರಿಯಾಗಿ ನಡೆಸದೆ ಇರುವ ಹಿನ್ನೆಲೆಯಲ್ಲಿ ಮಧ್ಯದಲ್ಲಿಯೇ ತಪ್ಪೊಪ್ಪಿಕೊಂಡಿದ್ದಾರೆ. ಇದರಿಂದ ನ್ಯಾಯಾಂಗ ವ್ಯವಸ್ಥೆಗೆ ಕಪ್ಪು ಚುಕ್ಕೆ ಬಿದ್ದಿದೆ,” ಎನ್ನುತ್ತಾರೆ ಸುಲ್ತಾನ್.

ಒಟ್ಟಾರೆ, ಭಾರಿ ಸದ್ದು ಮಾಡಿದ್ದ ಪ್ರಕರಣಕ್ಕೆ ಅತಾರ್ಕಿಕವಾದ ಅಂತ್ಯವೊಂದು ಸಿಕ್ಕಿದೆ. ಇದು ಆರೋಪಿಗಳಿಗೆ ಹಾಗೂ ತನಿಖಾ ಸಂಸ್ಥೆಗೆ- ಎನ್ಐಎಗೆ ಮಾತ್ರವೇ ಸಮಾನ ಪ್ರಮಾಣದ ಖುಷಿ ತಂದಿದೆ. ಅದರಾಚೆಗೆ, ನ್ಯಾಯದಾನ ಪ್ರಕ್ರಿಯೆಯಲ್ಲಿ ಆಗುತ್ತಿರುವ ನಿಧಾನಗತಿಯನ್ನು ಈ ಬೆಳವಣಿಗೆಗಳು ಮತ್ತೊಮ್ಮೆ ಮುನ್ನಲೆಗೆ ತಂದು ಬಿಟ್ಟಿವೆ.

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top