An unconventional News Portal.

‘ಗುಜರಾತ್ ನಕಲಿ ಎನ್‌ಕೌಂಟರ್‌’ ಪ್ರಕರಣವನ್ನು ಸಿಬಿಐಗೆ ನೀಡಿದ್ದ ಹಿರಿಯ ನ್ಯಾ. ಪಟೇಲ್ ರಾಜೀನಾಮೆ ನೀಡಿದ್ದೇಕೆ?

‘ಗುಜರಾತ್ ನಕಲಿ ಎನ್‌ಕೌಂಟರ್‌’ ಪ್ರಕರಣವನ್ನು ಸಿಬಿಐಗೆ ನೀಡಿದ್ದ ಹಿರಿಯ ನ್ಯಾ. ಪಟೇಲ್ ರಾಜೀನಾಮೆ ನೀಡಿದ್ದೇಕೆ?

ಕರ್ನಾಟಕದ ಹೈಕೋರ್ಟ್‌ನಲ್ಲಿ ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ ಹಿರಿಯ ನ್ಯಾಯಾಧೀಶ, ಗುಜರಾತ್‌ ಮೂಲದ ಜಯಂತ್ ಪಟೇಲ್ ರಾಜೀನಾಮೆ ಸಲ್ಲಿಸಿದ್ದಾರೆ.

ನ್ಯಾ. ಪಟೇಲ್‌ ಅವರ ರಾಜೀನಾಮೆಯನ್ನು ಸುಪ್ರಿಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಅಂಗೀಕರಿಸಿದ್ದಾರೆ ಎಂಬ ಸುದ್ದಿ ಬಂದಿದೆ. ಹಿರಿತನದ ಆಧಾರದ ಮೇಲೆ ಈ ಹಿಂದೆಯೇ ನ್ಯಾ. ಜಯಂತ್ ಪಟೇಲ್‌ ಗುಜರಾತ್‌ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಬೇಕಿತ್ತು. ಅವರನ್ನು ಹಂಗಾಮಿ ಮುಖ್ಯನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿತ್ತಾದರೂ, 2016ರಲ್ಲಿ ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿತ್ತು. ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ ಎಸ್‌. ಕೆ. ಮುಖರ್ಜಿ ಅಕ್ಟೋಬರ್‌ 9ಕ್ಕೆ ನಿವೃತ್ತರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಹಿರಿತನದ ಆಧಾರದ ಮೇಲೆ ನ್ಯಾ. ಪಟೇಲ್‌ ಅವರ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ಅವರನ್ನು ಮತ್ತೆ ಅಲಹಬಾದ್‌ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಯಿತು. ಹೀಗಾಗಿ, ಪ್ರತಿಭಟನಾ ರೂಪದಲ್ಲಿ ನ್ಯಾ. ಪಟೇಲ್ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

ಅವರ ಮೊಬೈಲ್‌ ನಂಬರ್‌ ಸ್ವಿಚ್ ಆಫ್‌ ಆಗಿದ್ದು ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ಯಾರಿದು ನ್ಯಾ. ಪಟೇಲ್‌?:

ಗುಜರಾತ್‌ನ ರಾಜ್‌ಕೋಟ್‌ ಮೂಲದ ಜಯಂತ್ ಪಟೇಲ್‌ 1979ರಲ್ಲಿ ವಕೀಲರಾಗಿ ನ್ಯಾಯಾಂಗ ಕ್ಷೇತ್ರದಲ್ಲಿ ವೃತ್ತಿ ಜೀವನ ಆರಂಭಿಸಿದವರು. 1985ರಿಂದ ಅವರು ಗುಜರಾತ್‌ ಹೈಕೋರ್ಟ್‌ಗೆ ತಮ್ಮ ಕಾರ್ಯಸ್ಥಾನವನ್ನು ಬದಲಾಯಿಸಿದರು. 1990ರಲ್ಲಿ ಅವರನ್ನು ಕೇಂದ್ರ ಸರಕಾರದ ವಕೀಲರಾಗಿ ನೇಮಕ ಮಾಡಲಾಯಿತು. ಮುಂದಿನ ಒಂದು ದಶಕಗಳಿಗೂ ಹೆಚ್ಚು ಕಾಲ ನ್ಯಾ. ಪಟೇಲ್ ಕೇಂದ್ರ ಸರಕಾರದ ನಾನಾ ಇಲಾಖೆಗಳ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಹಣಕಾಸು ಇಲಾಖೆ, ಆದಾಯ ತೆರಿಗೆ ಇಲಾಖೆ ಸೇರಿದಂತೆ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ ಅವರು, ‘ತೆರಿಗೆ ವ್ಯವಸ್ಥೆ ಬಗ್ಗೆ ಅಪಾರ ಜ್ಞಾನ ಇದ್ದ ಅಪರೂಪದ ನ್ಯಾಯಾಧೀಶ’ ಎಂಬ ಹೆಸರು ಗಳಿಸಿದರು.

ಈ ಅವಧಿಯಲ್ಲಿ ನ್ಯಾ. ಪಟೇಲ್‌ ಅಮೆರಿಕಾ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಕೆನಡಾ ಸೇರಿದಂತೆ ಹಲವು ದೇಶಗಳ ನ್ಯಾಯಾಲಯಗಳಿಗೆ ಭೇಟಿ ನೀಡಿದ್ದರು. 2001ರಲ್ಲಿ ಅವರನ್ನು ಹೆಚ್ಚುವರಿ ನ್ಯಾಯಧೀಶರಾಗಿ ಗುಜರಾತ್‌ ಹೈಕೋರ್ಟ್‌ಗೆ ನೇಮಕ ಮಾಡಲಾಯಿತು. 2004ರಿಂದ ಈಚೆಗೆ ಅವರು ಪೂರ್ಣಪ್ರಮಾಣದ ನ್ಯಾಯಧೀಶರಾಗಿ ಕೆಲಸ ಮಾಡುತ್ತಿದ್ದರು.

2004ರಲ್ಲಿ ಗುಜರಾತ್‌ ರಾಜ್ಯದ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಕೊಲೆ ಸಂಚಿನ ಆರೋಪದ ಮೇಲೆ 19 ವರ್ಷದ ಯುವತಿ ಇಶ್ರತ್ ಜಹಾನ್‌ ಹಾಗೂ ಮೂವರನ್ನು ಅಲ್ಲಿನ ಪೊಲೀಸರು ಎನ್‌ಕೌಂಟರ್‌ ನಡೆಸಿದರು. ಈ ಪ್ರಕರಣ ಇವತ್ತಿಗೂ ವಿಚಾರಣೆ ಹಂತದಲ್ಲಿದೆ. ಇದೊಂದು ನಕಲಿ ಎನ್‌ಕೌಂಟರ್‌ ಎಂದು ಅಲ್ಲಿನ ಜಿಲ್ಲಾ ನ್ಯಾಯಾಧೀಶರೊಬ್ಬರ ತನಿಖಾ ವರದಿ ಹೇಳಿತ್ತು. ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಮೂಲಕ ನ್ಯಾ. ಜಯಂತ್ ಪಟೇಲ್‌ ದೇಶದ ಮಟ್ಟದಲ್ಲಿ ಸುದ್ದಿಯಾಗಿದ್ದರು. ಇವರ ತೀರ್ಪು ಮೋದಿ ಸರಕಾರಕ್ಕೆ ಭಾರಿ ಮುಜುಗುರ ತಂದಿತ್ತು.

2015ರಲ್ಲಿ ಇವರನ್ನು ಗುಜರಾತ್‌ ಹೈಕೋರ್ಟ್‌ನ ಹಂಗಾಮಿ ಮುಖ್ಯನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿತ್ತು. ಆದರೆ ಪೂರ್ಣಪ್ರಮಾಣದಲ್ಲಿ ಹುದ್ದೆ ನಿಭಾಯಿಸಲು ಅವಕಾಶ ನೀಡದೆ, ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿತ್ತು. ಈ ಕುರಿತು ಕಳೆದ ವರ್ಷ ತಮ್ಮ ಪ್ರತಿಭಟನೆ ಸೂಚಿಸಿ ಗುಜರಾತ್‌ ಹೈಕೋರ್ಟ್‌ ನ್ಯಾಯಾಧೀಶರು ಕೇಂದ್ರ ಸರಕಾರಕ್ಕೆ ಹಾಗೂ ಸುಪ್ರಿಂ ಕೋರ್ಟ್‌ ಮುಖ್ಯನ್ಯಾಯಮೂರ್ತಿಗೆ ಪತ್ರ ಬರೆದಿದ್ದರು.

ಇದೀಗ ಕರ್ನಾಟಕ ಹೈಕೋರ್ಟ್‌ನಲ್ಲಿಯೂ ಅವರ ಸೇವಾ ಹಿರಿತನಕ್ಕೆ ಬೆಲೆ ಸಿಗದೆ ಹೋಗಿದೆ. ಅವರನ್ನು ಕೊನೆಯ ಹಂತದಲ್ಲಿ ಅಲಹಾಬಾದ್‌ ಹೈಕೋರ್ಟ್‌ಗೆ ವರ್ಗಾವಣೆ ಮಾಡುವ ಮೂಲಕ ಮುಖ್ಯನ್ಯಾಯಮೂರ್ತಿ ಹುದ್ದೆಯಿಂದ ವಂಚಿತರಾನ್ನಾಗಿ ಮಾಡುವ ತಂತ್ರ ಅನುಸರಿಸಲಾಗಿದೆ ಎಂದು ನ್ಯಾಯಾಂಗದ ಮೂಲಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿವೆ.

“ನ್ಯಾ. ಪಟೇಲ್‌ ಅಪರೂಪದ ನ್ಯಾಯಧೀಶರು. ಕಾರ್ಯಕ್ರಮವೊಂದಕ್ಕೆ ಅವರನ್ನು ಅಹ್ವಾನಿಸಲು ಹೋಗಿದ್ದಾಗ ನಿರಾಕರಿಸಿದ್ದರು. ನ್ಯಾಯಾಲಯದ ಅವಧಿಯಲ್ಲಿ ನಾನು ಬೇರೆ ಕೆಲಸ ಮಾಡುವುದಿಲ್ಲ ಎಂದು ನೇರವಾಗಿ ಹೇಳಿದ್ದರು. ಅವರು ರಜೆ ತೆಗೆದುಕೊಂಡಿದ್ದನ್ನು ನಾವು ನೋಡಿಯೇ ಇಲ್ಲ,” ಎನ್ನುತ್ತಾರೆ ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲರಾಗಿರುವ ಜೆ. ಡಿ. ಕಾಶೀನಾಥ್‌.

ಸಮಸ್ಯೆ ಏನು?: 

ತಮ್ಮ 38 ವರ್ಷಗಳ ನ್ಯಾಯಾಂಗ ಬದುಕಿನಲ್ಲಿ ನ್ಯಾ. ಜಯಂತ್ ಪಟೇಲ್‌ ಕಳಂಕಗಳಿಂದ ದೂರವೇ ಉಳಿದವರು. ತಮ್ಮ ಸೇವಾವಧಿಯ ದಿನಗಳಲ್ಲಿ ನೇರ ಹಾಗೂ ನಿಷ್ಠೂರ ನ್ಯಾಯದಾನಕ್ಕೆ ಹೆಸರು ಮಾಡಿದ್ದವರು. ಅವರ ಸೇವಾಹಿರಿತನವನ್ನು ಕಡೆಗಣಿಸಿ, ಎರಡೆರಡು ಬಾರಿ ವರ್ಗಾವಣೆ ಮಾಡಿದ್ದರ ಹಿಂದೆ ಕೇಂದ್ರ ಸರಕಾರದ ಹಿತಾಸಕ್ತಿಗಳು ಕೆಲಸ ಮಾಡಿವೆ ಎಂಬ ಆರೋಪಗಳಿಗೂ ನ್ಯಾಯಾಂಗ ವಲಯದಿಂದಲೇ ಕೇಳಿ ಬರುತ್ತಿವೆ.

ಗುಜರಾತ್‌ ಹೈಕೋರ್ಟ್‌ ನ್ಯಾಯಮೂರ್ತಿಯಾಗಿದ್ದಾರೆ ಇಶ್ರತ್ ಜಹಾನ್‌ ನಕಲಿ ಎನ್‌ಕೌಂಟರ್‌ ಪ್ರಕರಣವನ್ನು ಸಿಬಿಐಗೆ ವಹಿಸಿದ್ದು ಈ ಎಲ್ಲಾ ಬೆಳವಣಿಗೆಗಳಿಗೆ ಮೂಲ ಕಾರಣ ಎನ್ನಲಾಗುತ್ತಿದೆ. ಅಂದು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಇವತ್ತು ದೇಶದ ಪ್ರಧಾನಿಯಾಗಿದ್ದಾರೆ. ಗುಜರಾತ್‌ನಲ್ಲಿ ಸದ್ದು ಮಾಡಿದ್ದ ಇನ್ನೊಂದು ನಕಲಿ ಎನ್‌ಕೌಂಟರ್‌ ಪ್ರಕರಣ, ಸೊಹ್ರಾಬುದ್ದೀನ್‌ ಎನ್‌ಕೌಂಟರ್‌ ಕೇಸಿನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿರುವ ಅಮಿತ್‌ ಶಾ ಜೈಲು ಪಾಲಾಗಿದ್ದರು. ಇದೀಗ, ಅಧಿಕಾರ ಕೇಂದ್ರಕ್ಕೆ ಬರಳಿರುವ ಮೋದಿ ಮತ್ತು ಶಾ ಜೋಡಿ ನ್ಯಾಯಾಂಗ ಇಲಾಖೆಯಲ್ಲಿರುವ ಕೊಲಿಜಿಯಂ ವ್ಯವಸ್ಥೆಯನ್ನು ಬಳಸಿಕೊಂಡು ನ್ಯಾ. ಪಟೇಲ್‌ ಅವರನ್ನು ಹುದ್ದೆಯಿಂದ ವಂಚಿಸುವ ಪ್ರಯತ್ನ ಮಾಡಿರಬಹುದು ಎಂಬ ದಟ್ಟ ಅನುಮಾನ ಈಗ ಕರ್ನಾಟಕ ಹೈಕೋರ್ಟ್‌ನ್ನು ವ್ಯಾಪಿಸಿಕೊಂಡಿದೆ.

Leave a comment

Top