An unconventional News Portal.

ಪತ್ರಿಕೋದ್ಯಮ ಸರಣಿ-1: ‘ಪೀತ ಪತ್ರಿಕೋದ್ಯಮಿ’ಯೊಬ್ಬನ ಬದುಕಿನ ಪುಟಗಳಿಂದ…

ಪತ್ರಿಕೋದ್ಯಮ ಸರಣಿ-1: ‘ಪೀತ ಪತ್ರಿಕೋದ್ಯಮಿ’ಯೊಬ್ಬನ ಬದುಕಿನ ಪುಟಗಳಿಂದ…

ಕಾಲೇಜು ಅರ್ಧಕ್ಕೆ ಬಿಟ್ಟವನಿಗೆ ಸಿಕ್ಕಿದ ಆ ಯಶಸ್ಸು ಪತ್ರಿಕೋದ್ಯಮ ಚಹರೆಯನ್ನೇ ಬದಲಿಸಿತು!

(ಭಾಗ-1)

hearst_1ಜಾಗತಿಕ ಪತ್ರಿಕೋದ್ಯಮದ ಇತಿಹಾಸದ ಪುಟಗಳನ್ನು ತೆರೆದರೆ ಮತ್ತೆ ಮತ್ತೆ ಕಾಡುವ ಹೆಸರು ವಿಲಿಯಂ ರಾಂಡೋಲ್ಫ್ ಹರ್ಸ್ಟ್. ಪತ್ರಿಕೆಗಳು ಹೇಗಿರಬಾರದು? ಪತ್ರಿಕೋದ್ಯಮ ಯಾವ ಮಟ್ಟಕ್ಕೆ ಇಳಿಯಬಾರದು? ಎಂಬುದಕ್ಕೆ ಈತನ ಬದುಕು ಅತ್ಯುತ್ತಮ ಪಾಠ. ಶತಮಾನದ ಹಿಂದೆಯೇ ದರ ಸಮರ, ಅತಿ ರಂಜಕ ಸುದ್ದಿಗಳು ಹಾಗೂ ಪತ್ರಿಕೋದ್ಯಮವನ್ನು ಅಸಹ್ಯಕರ ಉದ್ಯಮವನ್ನಾಗಿ ಪರಿವರ್ತಿಸಿದ ಕುಖ್ಯಾತಿ ಈತನಿಗೇ ಸಲ್ಲುತ್ತದೆ. ಇಲ್ಲಿರುವ ಆತನ ಸುದೀರ್ಘ ಕತೆಯನ್ನು, ಸರಣಿ ರೂಪದಲ್ಲಿ ನಿಮ್ಮೆದುರಿಗೆ ಇಡಲಿದ್ದೇವೆ. ಈ ಮೂಲಕ ಪತ್ರಿಕೋದ್ಯಮದ ಮೂಲಕ್ಕೆ ನಿಮ್ಮನ್ನು ಕರೆದೊಯ್ಯುವ ಪ್ರಯತ್ನವಿದು, ಅಷ್ಟೆ…


 

ಅದು ಹತ್ತೊಂಬತ್ತನೆಯ ಶತಮಾನದ ಕೊನೆಯ ವರ್ಷಗಳು. ಅಮೆರಿಕಾದಲ್ಲಿ ಪತ್ರಿಕೋದ್ಯಮ ತನ್ನ ಬೆಳವಣಿಗೆಯನ್ನು ನಿಧಾನವಾಗಿ ಕಾಣುತ್ತಿದ್ದ ಕಾಲ. ಅವತ್ತಿಗೆ ಅಲ್ಲಿನ ಮಾಧ್ಯಮ ಲೋಕದ ಅನಭಿಷಕ್ತ ದೊರೆ ಎಂದು ಗುರುತಿಸಿಕೊಳ್ಳುತ್ತಿದ್ದವನು ಜೋಸೆಫ್ ಪುಲಿಟ್ಜರ್. ಇವತ್ತು ಪುಲಿಟ್ಜರ್ ಅಂದಾಕ್ಷಣ ನೆನಪಾಗುವುದು ತನಿಖಾ ಪತ್ರಿಕೋದ್ಯಮಕ್ಕೆ ಕೊಡಮಾಡುವ ಬಹುಮಾನ. ಆತನಿಗೆ ಎದುರಾಳಿಯಾಗಿ ನಿಂತುಕೊಂಡು ಪತ್ರಿಕೋದ್ಯಮದ ದಿಕ್ಕು, ದೆಸೆಯನ್ನು ಬದಲಾಯಿಸಿದವನು ವಿಲಿಯಂ ರಾಂಡೋಲ್ಫ್ ಹರ್ಸ್ಟ್.

ಹರ್ಸ್ಟ್ ಶ್ರೀಮಂತ ಉದ್ಯಮಿಯ ಮಗ. ಆತನ ತಂದೆ ಜಾರ್ಜ್ ಹರ್ಸ್ಟ್ ಚಿನ್ನದ ಗಣಿ ಮಾಲೀಕನಾಗಿದ್ದ. ಜತೆಗೆ ಹಲವು ಉದ್ಯಮಗಳ ಒಡೆಯನಾಗಿದ್ದ. ಮೆಕ್ಸಿಕೋ ದೇಶವೊಂದರಲ್ಲೇ 10 ಲಕ್ಷ ಎಕರೆ ಗೋಮಾಳ ಆತನಿಗಿತ್ತು. 1980ರ ಸುಮಾರಿಗೆ ಜೂಜಾಟದಲ್ಲಿ ಗೆದ್ದಾಗ, ಆಕಸ್ಮಿಕವಾಗಿ ಪತ್ರಿಕೆಯೊಂದರ ಒಡೆತನವೂ ಆತನಿಗೆ ಸಿಕ್ಕಿತ್ತು. ಶ್ರೀಮಂತ ಉದ್ಯಮಿ, ಜತೆಗೊಂದು ಪತ್ರಿಕೆ. ಹೀಗಾಗಿ ಜಾರ್ಜ್ ಹರ್ಸ್ಟ್ ಗೆ ಸಿಗುತ್ತಿದ್ದ ಗೌರವ ಕೊಂಚ ಇಮ್ಮಡಿಯಾಗಿತ್ತು.

ಇಂತಹ ತಂದೆಯ ಮಗನಾದ ವಿಲಿಯಂ ಅಮೆರಿಕಾದ ಪ್ರತಿಷ್ಠಿತ ವಿಶ್ವವಿದ್ಯಾನಿಲಯ ಹಾರ್ವರ್ಡ್ ಸೇರಿಕೊಂಡ. ಆದರೆ ಅಲ್ಲಿ ಅವನ ಹುಡುಗಾಟದ ಕಾರಣಕ್ಕೆ ಕಾಲೇಜಿನ ಆಡಳಿತ ಮಂಡಳಿ ಸ್ವಲ್ಪ ದಿನಗಳಲ್ಲೇ ಸೋಡಾ ಚೀಟಿ ಕೊಟ್ಟು ಕೈ ತೊಳೆದುಕೊಂಡಿತು. ಹಾಗೆ, ಅರ್ಧದಲ್ಲಿಯೇ ಕಾಲೇಜು ಬಿಟ್ಟು ಹೊರಬಿದ್ದ ತುಂಟ ಹುಡುಗ ವಿಲಿಯಂ, ತನ್ನ ತಂದೆಯ ಮುಂದೆ ಹೋಗಿ ನಿಂತ. ಅಷ್ಟೊತ್ತಿಗಾಗಲೇ ಪುಲಿಟ್ಜರ್ ಒಡೆತನದ ‘ನ್ಯೂಯಾರ್ಕ್ ವರ್ಲ್ಡ್’ ಪತ್ರಿಕೆಯಲ್ಲಿ ಕೆಲ ಕಾಲ ಕೆಲಸ ಮಾಡಿದ್ದ. ಹೀಗಾಗಿ, ಸೀನಿಯರ್ ಹರ್ಸ್ಟ್ ಮಗನಿಗೆ ತಾನು ಜೂಜಾಟದಲ್ಲಿ ಗೆದ್ದಿದ್ದ ‘ಸ್ಯಾನ್ ಪ್ರಾನ್ಸಿಸ್ಕೋ ಎಕ್ಸಾಮಿನರ್’ ಪತ್ರಿಕೆಯನ್ನು ಕೈಗಿಟ್ಟು, ಹೊಸ ಬದುಕು ಆರಂಭಿಸಲು ಅನುವು ಮಾಡಿಕೊಟ್ಟ. ಅದು  ಮುಂದೆ ವಿಲಿಯಂ ಬದುಕನ್ನೇ ಬದಲಾಯಿಸಿತು; ಜತೆಗೆ ಜಗತ್ತಿನ ಪತ್ರಿಕೋದ್ಯಮದ ಚಹರೆಯನ್ನೇ ಮಾರ್ಪಡಿಸಿತು.

ಅಖಾಡಕ್ಕೆ:

hearst_nyex-3ಅದಾಗ 1887ರ ವರ್ಷ ಕಾಲಿಟ್ಟಿತ್ತು. ವಿಲಿಯಂ ತನ್ನ ಹೊಸ ಸಾಹಸಕ್ಕೆ ಅಣಿಯಾಗಿದ್ದ. ತಂದೆ ಬಳುವಳಿಯಾಗಿ ನೀಡಿದ ‘ಸ್ಯಾನ್ ಫ್ರಾನ್ಸಿಸ್ಕೋ ಎಕ್ಸಾಮಿನರ್’ ಪತ್ರಿಕೆಯಲ್ಲಿಯೇ ತನ್ನ ಭವಿಷ್ಯ ಇರುವುದು ಆತನಿಗೆ ಖಾತ್ರಿಯಾಗಿತ್ತು. ಅದಕ್ಕಾಗಿ ತನ್ನೆಲ್ಲಾ ಶ್ರಮವನ್ನು ಹಾಕತೊಡಗಿದ. ಆ ಕಾಲದ ಪ್ರಸಿದ್ಧ ಬರಹಗಾರರನ್ನು ತನ್ನ ಪತ್ರಿಕೆಯಲ್ಲಿ ಬರೆಸಲು ಶುರು ಮಾಡಿದ. ಹೊಸ ತಂತ್ರಜ್ಞಾನದ ಮೂಲಕ ಪತ್ರಿಕೆಯನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಅಚ್ಚು ಹಾಕತೊಡಗಿದ. ಹೊಸ ಬಗೆಯ ಆಲೋಚನೆ ಪತ್ರಿಕೆಯನ್ನು ಕೆಲವೇ ದಿನಗಳಲ್ಲಿ ಜನರ ಮನಸ್ಸಿನಲ್ಲಿ ಮೂಡಿಸಲು ಯಶಸ್ವಿಯಾಯಿತು. ಆಗಷ್ಟೆ ಪತ್ರಿಕೋದ್ಯಮ ಎಂಬ ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದ ಹರ್ಸ್ಟ್ಗೆ ಮೊದಲ ಯಶಸ್ಸು ಸಿಕ್ಕಿತ್ತು. ‘ಸ್ಯಾನ್ ಫ್ರಾನ್ಸಿಸ್ಕೋ ಎಕ್ಸಾಮಿನರ್’ ತನ್ನ ಛಾಪನ್ನು ಮೂಡಿಸಿ ಬಿಟ್ಟಿತ್ತು.

ಇಷ್ಟಕ್ಕೆ ಸುಮ್ಮನಿದ್ದಿದ್ದರೆ, ವಿಲಿಯಂ ಹರ್ಸ್ಟ್ ಹೆಸರನ್ನು ಇವತ್ತು ನೆನಪು ಮಾಡಿಕೊಳ್ಳುವ ಅಗತ್ಯವೇ ಬೀಳುತ್ತಿರಲಿಲ್ಲವೇನೋ? ಆತನ ಮೊದಲ ಯಶಸ್ಸು, ಹೊಸ ಬಗೆಯ ಸಾಹಸಕ್ಕೆ ಆತನನ್ನು ಪ್ರೇರೇಪಿಸಿತು. ಅವತ್ತಿಗೆ ಅಮೆರಿಕಾ ಪತ್ರಿಕೋದ್ಯಮದಲ್ಲಿ ಯಾರೂ ಮುಟ್ಟಲಾಗದ ದೊರೆ, ಒಂದು ಕಾಲದಲ್ಲಿ ಕೆಲಸ ಕೊಟ್ಟಿದ್ದ ಮಾಲೀಕ, ಪುಲಿಟ್ಜರ್ ಆತನಿಗೆ ಎದುರಾಳಿಯಾಗಿ ಕಾಣತೊಡಗಿದ್ದ. ವಿಲಿಯಂನ ಮುಂದಿನ ನಡೆ ಪುಲಿಟ್ಜರ್ ಸಾಮ್ರಾಜ್ಯವನ್ನು ಒಡೆದು, ಅಲ್ಲಿ ತನ್ನ ಹೊಸ ಸಾಮ್ರಾಜ್ಯವನ್ನು ಸ್ಥಾಪಿಸುವುದಾಗಿತ್ತು. ಹೀಗಾಗಿ, ಕಣ್ಣು ಸಹಜವಾಗಿಯೇ ‘ನ್ಯೂಯಾರ್ಕ್ ವರ್ಲ್ಡ್’ ಮೇಲೆ ಬಿತ್ತು. ಪುಲಿಟ್ಜರ್ ಸಾಮ್ರಾಜ್ಯದ ಮುಕುಟದಂತಿದ್ದ ಪತ್ರಿಕೆ ಅದು. ಅವತ್ತಿಗೆ ಎರಡು ಸೆಂಟ್ಗೆ ಅದು ಮಾರಾಟವಾಗುತ್ತಿತ್ತು. ವಿದ್ಯಾವಂತ ವರ್ಗ ಪ್ರತಿ ದಿನ ‘ನ್ಯೂಯಾರ್ಕ್ ವರ್ಲ್ಡ್’ ಓದದೆ ದಿನಚರಿಯನ್ನು ಆರಂಭಿಸುವುದಿಲ್ಲ ಎಂಬ ಮಾತಿತ್ತು. ಅದನ್ನು ಕೆಡವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅದಕ್ಕಾಗಿ ವಿಲಿಯಂ ತನ್ನದೇ ಹೊಸ ಬಗೆಯ ಪತ್ರಿಕೋದ್ಯಮದ ಅ-ಶಿಷ್ಟಾಚಾರಗಳನ್ನು ಸೃಷ್ಠಿಮಾಡಬೇಕಿತ್ತು. ಮುಂದೆ, ಅವೇ ‘ಪೀತ ಪತ್ರಿಕೋದ್ಯಮ’ದ ಗುಣಲಕ್ಷಣಗಳು ಎಂದು ಗುರುತಿಸಲ್ಪಟ್ಟಿದ್ದು ಇತಿಹಾಸ.

ವಿಲಿಯಂ ರಾಂಡೋಲ್ಫ್ ಹರ್ಸ್ಟ್ ಹಾಗೂ ಪುಲಿಟ್ಜರ್ ನಡುವೆ ನಡೆದ ಕದನದ ಪ್ರತಿ ವಿವರಗಳೂ ರೋಚಕ ಮತ್ತು ಪತ್ರಿಕೋದ್ಯಮದ ಐತಿಹಾಸಿಕ ಘಟನೆಗಳು. ಅವುಗಳನ್ನು ಎಳೆಎಳೆಯಾಗಿ ನಿಮ್ಮ ಮುಂದಿಡುತ್ತೀವಿ, ಅದಕ್ಕಾಗಿಯೇ ಈ ಮಾಲಿಕೆ…

(ನಾಳೆಗೆ)

Top