An unconventional News Portal.

ಪತ್ರಿಕೋದ್ಯಮ ಮತ್ತು ತಂತ್ರಜ್ಞಾನದ ನಡುವಿನ ಹಗ್ಗಜಗ್ಗಾಟಕ್ಕೆ ‘ಸ್ನಾಪ್’ ಉತ್ತರ!

ಪತ್ರಿಕೋದ್ಯಮ ಮತ್ತು ತಂತ್ರಜ್ಞಾನದ ನಡುವಿನ ಹಗ್ಗಜಗ್ಗಾಟಕ್ಕೆ ‘ಸ್ನಾಪ್’ ಉತ್ತರ!

ಪತ್ರಿಕೋದ್ಯಮ ಮತ್ತು ತಂತ್ರಜ್ಞಾನ ಒಂದಕ್ಕೊಂದು ಸಮಾನಾಂತರವಾಗಿ ಬೆಳೆಯದ ಹಿನ್ನೆಲೆಯಲ್ಲಿ ಹಲವು ಸಮಸ್ಯೆಗಳನ್ನು ಕ್ಷೇತ್ರ ಎದುರಿಸುತ್ತಿದೆ ಎಂಬ ಮಾತಿದೆ. ಇದು ನ್ಯೂಸ್ ರೂಮ್ ಅಂತರಾಳವನ್ನು ಬಲ್ಲವರಿಗೆ ಸರಿಯಾಗಿ ಅರ್ಥವಾಗಿರುತ್ತದೆ.

ಹೀಗಾಗಿಯೇ, ‘ಲಾಸ್ ಏಂಜಲೀಸ್ ಟೈಮ್ಸ್’ ತನ್ನ ಪತ್ರಕರ್ತರ ಬರವಣಿಗೆಗೆ ಅನುಕೂಲವಾಗುವಂತಹ ಪ್ರತ್ಯೇಕ ಸಾಫ್ಟ್ವೇರ್ ಒಂದನ್ನು ಪರಿಚಯಿಸಿದೆ. ವಿಶೇಷ ಎಂದರೆ, ಟೈಮ್ಸ್ ಒಳಗಿನ ಒಬ್ಬರು ಸಿಬ್ಬಂದಿಯೂ ಸೇರಿ ರೂಪಿಸಿರುವ ಈ ಸಾಫ್ಟ್ವೇರ್, ಪತ್ರಕರ್ತರ ಬರವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತದೆ.

latimes-snap-1

ಲಾಸ್ ಏಂಜಲೀಸ್ ಟೈಮ್ಸ್ ರೂಪಿಸಿರುವ ‘ಸ್ನಾಪ್’ ಸಿಎಂಎಸ್.

ಈ ಕುರಿತು ಇನ್ನಷ್ಟು ಆಳಕ್ಕಿಳಿಯುವ ಮುನ್ನ ಸಿಎಂಎಸ್ ಎಂದರೇನು ಎಂಬುದನ್ನು ಮೊದಲ ಅರ್ಥಮಾಡಿಕೊಳ್ಳಬೇಕಿದೆ. ಇಂಗ್ಲಿಷ್ನಲ್ಲಿ ಇದನ್ನು ‘ಕಂಟೆಂಟ್ ಮ್ಯಾನೇಜ್ಮೆಂಟ್ ಸಿಸ್ಟಂ’ ಎಂದು ಕರೆಯುತ್ತಾರೆ. ಯಾವುದೇ ದೊಡ್ಡ ಮಾಧ್ಯಮ ಸಂಸ್ಥೆಗಳಿಗೆ ಹೋದರೂ, ಅವರದ್ದೇ ಆದ ಒಂದು ಸಿಎಂಎಸ್ ಇರುತ್ತದೆ. ಆ ಮೂಲಕ ಪತ್ರಕರ್ತರು ತಮ್ಮ ವರದಿಗಳನ್ನು ಟೈಪ್ ಮಾಡಿ, ಅದಕ್ಕೆ ಪೂರಕ ಫೊಟೋ, ವಿಡಿಯೋ ಹಾಗೂ ಕೋಟ್ಗಳನ್ನು ಹಾಕಿ ಮುಂದಕ್ಕೆ ಕಳುಹಿಸುತ್ತಾರೆ. ಆನ್ಲೈನ್ ಪತ್ರಿಕೋದ್ಯಮ ಬೆಳೆಯುತ್ತಿರುವ ಈ ದಿನಗಳಲ್ಲಿ ವರದಿ, ತಲೆಬರಹದಂತಹ ಮೂಲ ಪತ್ರಿಕೋದ್ಯಮದ ಕಸುಬುದಾರಿಕೆ ಜತೆಗೆ, ಪ್ರತಿ ವರದಿಗೂ ಟ್ಯಾಗ್ (ಗೂಗಲ್ನಂತಹ ಸರ್ಚ್ ಎಂಜಿನ್ಗಳ ಹುಡುಕಾಟಕ್ಕೆ ನೆರವಾಗಲು), ರೆಫರೆನ್ಸ್ ಲಿಂಕ್ ಹೀಗೆ ಹೆಚ್ಚುವರಿ ಕೆಲಸಗಳನ್ನು ಪತ್ರಕರ್ತರು ಮಾಡಬೇಕಿದೆ. ಹೀಗೆ ಹೊಸ ಮಾದರಿಯಲ್ಲಿ ವರದಿಗಳನ್ನು ಪೋಸ್ಟ್ ಮಾಡಲು ನೆರವಾಗುವುದು ಸಿಎಂಎಸ್. ಇದೀಗ ‘ಲಾಸ್ ಏಂಜಲೀಸ್ ಟೈಮ್ಸ್’ ರೂಪಿಸಿರುವ ಸಾಫ್ಟ್ವೇರ್ ಅದರದ್ದೇ ಆದ ಒಂದು ಸಿಎಂಎಸ್.

ಇದು ಉಳಿದ ಮಾಧ್ಯಮ ಸಂಸ್ಥೆಗಳು ಬಳಸುತ್ತಿರುವ ಕಷ್ಟಕರವಾದ ಸಿಎಂಎಸ್ಗೆ ಹೋಲಿಸಿದರೆ, ಟೈಮ್ಸ್ ರೂಪಿಸಿರುವ ‘ಸ್ನಾಪ್’ ಹೆಸರಿನ ಸಿಎಂಎಸ್ನಲ್ಲಿ ಪತ್ರಿಕೋದ್ಯಮ ಮತ್ತು ತಂತ್ರಜ್ಞಾನವನ್ನು ನಾಜೂಕಾಗಿ ಬೆಸೆಯಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. “ನ್ಯೂಸ್ ರೂಮ್ಗಳು ತಂತ್ರಜ್ಞಾನದಿಂದ ಸಂಪರ್ಕವನ್ನು ಕಳೆದುಕೊಂಡಿವೆ ಎಂಬ ಪರಿಸ್ಥಿತಿ ಇದೆ. ಹೀಗಾಗಿ ನಮ್ಮ ಹೊಸ ಪ್ರಯತ್ನ ಪತ್ರಿಕೋದ್ಯಮ ಮತ್ತು ತಂತ್ರಜ್ಞಾನವನ್ನು ಬೆಸೆಯುವ ನಿಟ್ಟಿನಲ್ಲಿ ಹೊಚ್ಚ ಹೊಸ ಪ್ರಯತ್ನ,” ಎನ್ನುತ್ತಾರೆ ‘ಸ್ನಾಪ್’ ರೂಪಿಸಿದ ಟೈಮ್ಸ್ ಉದ್ಯೋಗಿ ಇವಾನ್ ವಾಗ್ಸ್ಟಾಫ್.

ಹಗ್ಗ ಜಗ್ಗಾಟ ನಿರಂತರ:

ಇವತ್ತು ಪತ್ರಿಕೋದ್ಯಮ ನಿಂತಿರುವುದು ತಂತ್ರಜ್ಞಾನದ ಮೇಲೆ. ಅದು ಸುದ್ದಿ ವಾಹಿನಿಗಳಿರಲಿ, ದಿನ ಪತ್ರಿಕೆಗಳಿರಲಿ ಅಥವಾ ಆನ್ಲೈನ್ ಪೋರ್ಟಲ್ಗಳಿರಲಿ… ಎಲ್ಲವಕ್ಕೂ ತಂತ್ರಜ್ಞಾನವೇ ಮೂಲ ಸೆಲೆಯಾಗಿ ಕೆಲಸ ಮಾಡುತ್ತಿದೆ.

ಆದರೆ, ಪತ್ರಕರ್ತರಿಗೆ ತಂತ್ರಜ್ಞಾನ ಅಂದರೆ ಅಲರ್ಜಿ, ತಂತ್ರಜ್ಞರಿಗೆ ಪತ್ರಿಕೋದ್ಯಮದ ಕುರಿತು ಆಸಕ್ತಿ ಕಡಿಮೆ. ಈ ಹಿನ್ನೆಲೆಯಲ್ಲಿ, ಪತ್ರಕರ್ತರು ಮತ್ತು ತಂತ್ರಜ್ಞರ ನಡುವೆ ಸಣ್ಣಮಟ್ಟದ ತಿಕ್ಕಾಟ ನಡೆಯುತ್ತಲೇ ಇರುತ್ತದೆ. ಇವರು ಹೇಳುವುದು, ಅವರಿಗೆ ಅರ್ಥವಾಗುವುದಿಲ್ಲ; ಅವರು ಮುಂದಿಡುವ ಸಮಸ್ಯೆಗಳು ಇವರಿಗೆ ಸರಿಕಾಣುವುದಿಲ್ಲ. ಹೀಗೊಂದು ಹಗ್ಗ ಜಗ್ಗಾಟದ ಪ್ರಕ್ರಿಯೆ ನಿರಂತರವಾಗಿ ನಡೆದುಕೊಂಡು ಬರುತ್ತಲೇ ಇರುತ್ತದೆ. ಹಿಂದೆ, ಡೆಸ್ಕ್ ಹಾಗೂ ವರದಿಗಾರರ ನಡುವೆ ನಡೆಯುತ್ತಿದ್ದ ತಿಕ್ಕಾಟಗಳ ಹೊಸ ರೂಪವಿದು.

ಹಾಗೆ ನೋಡಿದರೆ, ಇವತ್ತು ಭಾರತದಲ್ಲಿ ಟೈಮ್ಸ್ ಸಮೂಹ ಗೂಗಲ್ ಇಮೇಜ್ ಬದಲಿಗೆ ತನ್ನದೇ ಒಂದು ‘ಕಾಮಿಯಾನ್’ ಎಂಬ ಸಿಎಂಎಸ್ ರೂಪಿಸಿಕೊಂಡಿದೆ. ಇಲ್ಲಿ ಟೈಮ್ಸ್ ಗ್ರೂಪ್ ಅಡಿಯಲ್ಲಿ ಬರುವ ಅಷ್ಟೂ ಮಾಧ್ಯಮ ಸಂಸ್ಥೆಗಳು ಛಾಯಾಗ್ರಾಹಕರು ತೆಗೆಯುವ ಚಿತ್ರಗಳು ಲಭ್ಯವಾಗುತ್ತದೆ. ಯಾವುದೇ ಕಾಪಿರೈಟ್ ಸಮಸ್ಯೆ ಇಲ್ಲದೆ ಫೊಟೋಗಳನ್ನು ‘ಕಾಮಿಯಾನ್’ ಒದಗಿಸುತ್ತದೆ. ಇಂತಹದ್ದೇ ಪ್ರತ್ಯೇಕ ಸಿಎಂಎಸ್ ವ್ಯವಸ್ಥೆ ಸುದ್ದಿಗಳನ್ನು ಬರೆದು, ಫೈಲ್ ಮಾಡುವ ಪತ್ರಕರ್ತರಿಗೂ ಇದೆ. ಆದರೆ, ಇದು ಬಳಸಲು ಕಷ್ಟಕರವಾಗಿದ್ದು, ಮತ್ತು ವಿಪರೀತ ಸಮಯವನ್ನು ಬೇಡುತ್ತದೆ.

ಸುದ್ದಿ ವಾಹಿನಿಗಳಲ್ಲೂ ಸುದ್ದಿಗಳನ್ನು ಬರೆಯಲು, ಮುಂದಕ್ಕೆ ಕಳುಹಿಸಲು ಖಾಸಗಿಯಾದ ಸಾಫ್ಟ್ವೇರ್ ವ್ಯವಸ್ಥೆ ಇರುತ್ತದೆ. ಆದರೆ, ಇವುಗಳಲ್ಲಿ ಬಹುತೇಕ ಸಾಫ್ಟ್ವೇರ್ಗಳು ಪತ್ರಕರ್ತರ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳದೆ ರೂಪಿಸಿದಂತವು. ಹೀಗಾಗಿ, ಇವುಗಳ ಬಳಕೆ ಪತ್ರಕರ್ತರ ಪಾಲಿಗೆ ಬಿಸಿ ತುಪ್ಪವಾಗಿರುತ್ತದೆ. ಬಳಸುವುದು ಕಷ್ಟ; ಹಾಗಂತ ಬಳಸದೆಯೂ ಬಿಡುವಂತಿಲ್ಲ. ಹಿಂದೊಮ್ಮೆ ಅಮೆರಿಕಾದಲ್ಲಿ ನಡೆದ ಮಾಧ್ಯಮ ಸಮೀಕ್ಷೆಯೊಂದು ಪತ್ರಕರ್ತರ ಒತ್ತಡ ಹೆಚ್ಚಾಗಲು ಇಂತಹ ಅವೈಜ್ಞಾನಿಕ ಸಾಫ್ಟ್ವೇರ್ಗಳೂ ಕಾರಣ ಎಂದು ಹೇಳಿತ್ತು.

ಈ ಹಿನ್ನೆಲೆಯಲ್ಲಿ, ‘ಲಾಸ್ ಏಂಜಲೀಸ್ ಟೈಮ್ಸ್’ ರೂಪಿಸಿರುವ ಸಿಎಂಎಸ್ ಪತ್ರಿಕೋದ್ಯಮ ಮತ್ತು ತಂತ್ರಜ್ಞಾನದ ನಡುವಿನ ಹಗ್ಗ ಜಗ್ಗಾಟಕ್ಕೆ ಪೂರ್ಣವಿರಾಮ ಇಡುವ ಸಾಧ್ಯತೆಯನ್ನು ತೋರಿಸಿಕೊಟ್ಟಿದೆ.

ಚಿತ್ರ ಕೃಪೆ: edynamiclearning.com

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top