An unconventional News Portal.

JNUSU ಚುನಾವಣೆ ಅಂತಿಮ ಫಲಿತಾಂಶ: ಕೆಂಬಾವುಟದ ‘ಐಕ್ಯತೆ’ಗೆ ಭರ್ಜರಿ ಗೆಲುವು; ಗಮನ ಸೆಳೆದ ‘ಬಾಪ್ಸಾ’!

JNUSU ಚುನಾವಣೆ ಅಂತಿಮ ಫಲಿತಾಂಶ: ಕೆಂಬಾವುಟದ ‘ಐಕ್ಯತೆ’ಗೆ ಭರ್ಜರಿ ಗೆಲುವು; ಗಮನ ಸೆಳೆದ ‘ಬಾಪ್ಸಾ’!

ಜೆಎನ್ಯು (ಜವಹರ್ ಲಾಲ್ ನೆಹರೂ ಯುನಿವರ್ಸಿಟಿ) ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ‘Left Unity’ ಎಲ್ಲಾ ನಾಲ್ಕು ಸ್ಥಾನಗಳಲ್ಲಿ ಜಯಗಳಿಸಿದೆ. ಈ ಮೂಲಕ ಎಡಪಂಥೀಯ ಚಿಂತನೆಯ ‘ಕುಲುಮೆ’ ಎನ್ನಿಸಿಕೊಂಡಿರುವ ದೇಶದ ಪ್ರತಿಷ್ಠಿಯ ವಿಶ್ವವಿದ್ಯಾನಿಲಯದಲ್ಲಿ ಮತ್ತೊಮ್ಮೆ ಕೆಂಬಾವುಟ ಹಾರಾಡಿದೆ. ಇದರ ಜತೆಗೆ, ‘ಬಿರ್ಸಾ ಪುಲೆ ಅಂಬೇಡ್ಕರ್ ವಿದ್ಯಾರ್ಥಿ ಸಂಘ’ (ಬಾಪ್ಸಾ) ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಅತಿ ಹೆಚ್ಚು ಮತ ಪಡೆದ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಯಾವುದೇ ಸ್ಥಾನಗಳಲ್ಲಿ ಗೆಲುವು ಕಾಣುವಲ್ಲಿ ಬಾಪ್ಸಾ ಅಭ್ಯರ್ಥಿಗಳು ವಿಫಲವಾಗಿದ್ದಾರೆ. ಬಿಜೆಪಿ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಮತ್ತು ಕಾಂಗ್ರೆಸ್ ಬೆಂಬಲಿತ ಎನ್ಎಸ್ಯುಐ ಸಂಘಟನೆಗಳು ಅತ್ಯಲ್ಪ ಮತಗಳಿಗೆ ತೃಪ್ತಗೊಂಡಿವೆ.

ಸಂಘದ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ, ‘ಲೆಫ್ಟ್ ಯುನಿಟಿ’ (ಎಸ್ಎಫ್ಐ– ಎಐಎಸ್ಎ)  ನಾಲ್ಕು ಸ್ಥಾನಗಳಲ್ಲಿಯೂ ಭರ್ಜರಿ ಜಯ ದಾಖಲಿಸಿದೆ. ಎಎನ್ಯು ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಕಾ. ಮೋಹಿಕ್. ಕೆ. ಪಾಂಡೆ, 1954 ಮತಗಳಿಂದ ಆಯ್ಕೆಯಾಗಿದ್ದಾರೆ. ಇವರ ಸಮೀಪದ ಪ್ರತಿಸ್ಪರ್ಧಿ, ಬಾಪ್ಸಾದ ರಾಹುಲ್, 1545 ಮತಗಳನ್ನು ಪಡೆದುಕೊಂಡಿದ್ದಾರೆ. ಎಬಿವಿಪಿಯಿಂದ ಸ್ಪರ್ಧಿಸಿದ್ದ ಜಾಹ್ನವಿ 1048 ಮತಗಳನ್ನು ಗಳಿಸಿದ್ದಾರೆ.

ಸಂಘದ ಉಪಾಧ್ಯಕ್ಷರಾಗಿ ಕಾ. ಅಮಲ್ 2461 ಮತಗಳ ಭರ್ಜರಿ ವಿಜಯ ದಾಖಲಿಸಿದ್ದಾರೆ. ಎಬಿವಿಪಿ ಸಂಘಟನೆಯ ರವಿ ರಾಜನ್ 1157 ಮತಗಳನ್ನು ಪಡೆಯುವ ಮೂಲಕ ಸೋಲನ್ನು ಅನುಭವಿಸಿದ್ದಾರೆ. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾ. ಸತರೂಪ 2424 ಮತಗಳ ಮೂಲಕ ಉಳಿದ ಅಭ್ಯರ್ಥಿಗಳ ವಿರುದ್ಧ ಜಯ ದಾಖಲಿಸಿದ್ದಾರೆ. ಇವರಿಗೆ ಕೊನೆಯ ಕ್ಷಣದವರೆಗೂ ಸ್ಪರ್ಧೆ ಒಡ್ಡಿದ್ದ ಎಬಿವಿಪಿಯ ವಿಜಯ್ 1330 ಮತಗಳನ್ನು ಪಡೆದುಕೊಂಡಿದ್ದಾರೆ. ಜಂಟಿ ಕಾರ್ಯದರ್ಶಿಯಾಗಿ ಕಾ. ತಬ್ರೇಸ್ 1670 ಮತಗಳನ್ನು ಪಡೆಯುವ ಮೂಲಕ ವಿಜಯಿಯಾಗಿದ್ದಾರೆ. ಡಿಎಸ್ಎಫ್ ಸಂಘಟನೆಯ ಪ್ರಥಿಮ್ 1308 ಮತಗಳನ್ನು ಪಡೆದುಕೊಂಡಿದ್ದಾರೆ. ವಿಶೇಷ ಅಂದರೆ, ಎಡಪಂಥೀಯ ಚಿಂತನೆಗಳನ್ನು ಹೊಂದಿರುವ ಡಿಎಸ್ಎಫ್ ‘ಲೆಫ್ಟ್ ಯೂನಿಟಿ’ಯಿಂದ ಹೊರಗುಳಿದಿತ್ತು ಮತ್ತು ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಮಾತ್ರವೇ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು.JNU Final Result

ಕಳೆದ ಫೆಬ್ರವರಿಯಲ್ಲಿ ದೇಶದ್ರೋಹ ಪ್ರಕರಣದಲ್ಲಿ ಇಲ್ಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಬಂಧಿತರಾಗುವ ಮೂಲಕ ದೇಶಾದ್ಯಂತ ದೊಡ್ಡ ಮಟ್ಟದ ಹುಯಿಲೆಬ್ಬಿತ್ತು. ಹೀಗಾಗಿ 2016-17ರ ಜೆಎನ್ಯೂ ಸ್ಟೂಡೆಂಟ್ ಯೂನಿಯನ್ ಚುನಾವಣೆ ದೇಶದ ಗಮನ ಸೆಳೆದಿತ್ತು.

ಈ ಬಾರಿಯ ‘ಸ್ಟೂಡೆಂಟ್ ಯೂನಿಯನ್’ಗೆ ಜೆಎನ್ಯುನಲ್ಲಿ ಶುಕ್ರವಾರ ಮತದಾನ ನಡೆದಿತ್ತು. ಒಟ್ಟು 8600 ಮತದಾರರಲ್ಲಿ ಶೇಕಡಾ 59.6 ವಿದ್ಯಾರ್ಥಿಗಳು ಮತದಾನ ಮಾಡಿದ್ದರು. ಇದರಲ್ಲಿ ಕೇಂದ್ರ ಸಮಿತಿಗೆ 18 ಜನ ಮತ್ತು ಕೌನ್ಸಿಲರ್ ಸ್ಥಾನಕ್ಕೆ 79 ಜನ ಸ್ಪರ್ಧಿಸಿದ್ದರು. ವಿಶೇಷವೆಂದರೆ ಕಳೆದ ಸಲದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಸದಸ್ಯರಾಗಿರುವ ಆಲ್ ಇಂಡಿಯಾ ಸ್ಟೂಡೆಂಟ್ ಫೆಡರೇಷನ್ (ಎಐಎಸ್ಎಫ್) ಈ ಬಾರಿ ಚುನಾವಣೆಗೆ ಸ್ಪರ್ಧಿಸಿರಲಿಲ್ಲ.

ಜೆಎನ್ಯೂ ಈವರೆಗೆ ಎಡಪಂಥೀಯರ ಭದ್ರ ಕೋಟೆಯಾಗಿದ್ದು, 14 ವರ್ಷಗಳ ನಂತರ ಕಳೆದ ಬಾರಿ ಜಂಟಿ ಕಾರ್ಯದರ್ಶಿ ಸ್ಥಾನವನ್ನು ಎಬಿವಿಪಿ ಗೆದ್ದುಕೊಂಡಿತ್ತು. ಆದರೆ ಈ ಬಾರಿ ಅದೂ ಇಲ್ಲದೇ ಕೇಸರಿ ಪಕ್ಷದ ಅಂಗ ಸಂಸ್ಥೆ ನಿರಾಸೆ ಅನುಭವಿಸಿದೆ.

ಮಹತ್ವ ಯಾಕೆ?:

ಜೆಎನ್ಯೂ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎರಡು ಎಡಪಂಥೀಯ ಸಂಘಟನೆಗಳು ಒಗ್ಗೂಡಿ ಸ್ಪರ್ಧಿಸಿದ್ದವು. ಒಂದೊಮ್ಮೆ ಬದ್ಧ ಎದುರಾಳಿಗಳಾಗಿದ್ದ ಎಸ್ಎಫ್ಐ (ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ) ಮತ್ತು ಎಐಎಸ್ಎ (ಆಲ್ ಇಂಡಿಯಾ ಸ್ಟೂಡೆಂಟ್ ಅಸೋಸಿಯೇಷನ್) ಈ ಬಾರಿ ‘ಲೆಫ್ಟ್ ಯುನಿಟಿ’ ಹೆಸರಿನಲ್ಲಿ ಕಣಕ್ಕಿಳಿದಿದ್ದವು. ಕಳೆದ ಬಾರಿ ತಮ್ಮ ನಡುವಿನ ಭಿನ್ನಾಭಿಪ್ರಾಯದಿಂದ ‘ಎಬಿವಿಪಿ’ಗೆ ಜಾಯಿಂಟ್ ಸೆಕ್ರೆಟರಿ ಸ್ಥಾನ ದಕ್ಕಿತ್ತು. ಈ ಬಾರಿ ಎರಡೂ ಬಣಗಳು ಒಂದಾಗಿ ಎಬಿವಿಪಿಯನ್ನು ಸಂಪೂರ್ಣವಾಗಿ ಯೂನಿಯನ್’ನಿಂದ ಹೊರಗಿಡಬೇಕು ಎಂಬ ಈ ತೀರ್ಮಾನಕ್ಕೆ ಬಂದಿದ್ದವು. ಎಐಎಸ್ಎಫ್ (ಆಲ್ ಇಂಡಿಯಾ ಸ್ಟೂಡೆಂಟ್ ಫೆಡರೇಷನ್) ತನ್ನ ಅಭ್ಯರ್ಥಿಗಳನ್ನು ನಿಲ್ಲಿಸದೆ ‘ಲೆಫ್ಟ್ ಯುನಿಟಿ’ಗೆ ಬೆಂಬಲ ಘೋಷಿಸಿತ್ತು. ಇನ್ನು ಇತರ ಕೆಲವು ಸಂಘಟನೆಗಳೂ ಅಭ್ಯರ್ಥಿಗಳನ್ನು ನಿಲ್ಲಿಸದೆ, ಲೆಫ್ಟ್ ಯುನಿಟಿಗೆ ಪರೋಕ್ಷ ಬೆಂಬಲ ಘೋಷಿಸಿದ್ದವು. ಬಾಪ್ಸಾ (BAPSA-Birsa Ambedkar Phule Students Association) ಮಾತ್ರ ಎಡಪಕ್ಷಗಳೊಂದಿಗೆ ಕೈಜೋಡಿಸದೆ ಪ್ರತ್ಯೇಕವಾಗಿ ಸ್ಪರ್ಧಿಸಿತ್ತು.

ಎಸ್ಎಫ್ಐ ಮತ್ತು ಎಐಎಸ್ಎ ಈ ಹಿಂದೆ ಹಲವಾರು ಹೋರಾಟಗಳಲ್ಲಿ ಒಟ್ಟಾಗಿ ಭಾಗವಹಿಸಿದ ಉದಾಹರಣೆಯೂ ಇದೆ. ಕಳೆದ ಅಕ್ಟೋಬರ್ನಲ್ಲಿ ‘ಆಕ್ಯುಪೈ ಯುಜಿಸಿ’, ಜನವರಿಯಲ್ಲಿ ರೋಹಿತ್ ವೇಮುಲ ಆತ್ಮಹತ್ಯೆ ನಂತರ ಹುಟ್ಟಿಕೊಂಡ ‘ಜಸ್ಟಿಸ್ ಫಾರ್ ರೋಹಿತ್’, ಫೆಬ್ರವರಿ ಮತ್ತು ನಂತರದ ‘ಸ್ಟ್ಯಾಂಡ್ ವಿದ್ ಜೆಎನ್ಯು’ ಹೋರಾಟಗಳಲ್ಲಿ ಈ ಎರಡು ವಿದ್ಯಾರ್ಥಿ ಬಣಗಳು ಒಗ್ಗೂಡಿ ಹೋರಾಡಿದ್ದವು. ವಿದ್ಯಾರ್ಥಿಗಳ ಅಭಿವ್ಯಕ್ತಿ ಸ್ವಾತಂತ್ರ್ಯ, ಮೂಲಭೂತ ಹಕ್ಕುಗಳ ಪರ ಹೋರಾಡುವ ಈ ಸಂಘಟನೆಗಳು, ಹಾಸ್ಟೆಲ್ ಸಮಸ್ಯೆ, ಸ್ಕಾಲರ್ಶಿಪ್ ವಿವಾದ, ಕ್ಯಾಂಪಸ್ ತಾರತಮ್ಯ ಮೊದಲಾದವುಗಳಿಗಾಗಿ ನಿರಂತರ ಹೋರಾಟ ನಡೆಸುತ್ತಾ ವಿದ್ಯಾರ್ಥಿಗಳ ವಲಯದಲ್ಲಿ ತನ್ನದೇ ಛಾಪು ಮೂಡಿಸಿದ್ದವು.

“ಸುಮಾರು 3 ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು RSS ನಡೆಸುತ್ತಿರುವ ಶಾಲೆಗಳಲ್ಲಿ ಓದುತ್ತಿದ್ದಾರೆ. ನಾವು ಸಂಘಟಿತರಾಗದ ಹೊರತು ಅವರ ದಬ್ಬಾಳಿಕೆಯನ್ನು ತಡೆಯಲಾಗದು. ಆ ಸಿದ್ಧಾಂತದ ಜನರು ತಾರತಮ್ಯದಿಂದಲೇ ಕ್ಯಾಂಪಸ್’ನಲ್ಲಿ ಒಡಕು ಮೂಡಿಸುತ್ತಾರೆ” ಎಂದಿದ್ದ ಎಐಎಸ್ಐ – ಎಸ್ಎಫ್ಐ ಐಕ್ಯ ಬಣ, ನ್ಯಾಯಯುತ, ಜಾತ್ಯತೀತ, ಪ್ರಜಾಸತ್ತಾತ್ಮಕ ಹಾಗೂ ಸ್ವಾಭಿಮಾನಿ ಸಮಾಜದ ನಿರ್ಮಾಣಕ್ಕಾಗಿ ನಾವು ಒಗ್ಗೂಡಿದ್ದೇವೆ ಎಂದಿತ್ತು.

‘ಶಟ್ ಡೌನ್ ಜೆನ್ಯೂ’ ಮತ್ತು ಎಡಪಂಥೀಯರ ಪ್ರಾಭಲ್ಯ: 

ಕೆಲ ತಿಂಗಳ ಹಿಂದೆ ಒಂದಷ್ಟು ವಿದ್ಯಾರ್ಥಿ ಸಂಘಟನೆಗಳ ಬೆಂಬಲದೊಂದಿಗೆ ‘ಶಟ್ ಡೌನ್ ಜೆಎನ್’ಯು’ ಹೆಸರಿನಲ್ಲಿ ಆಂದೋಲನವೊಂದು ಶುರುವಾಗಿತ್ತು. ಜೆಎನ್ಯೂ ಎಡಪಂಥೀಯ ಚಿಂತನೆಯ ಕೇಂದ್ರವಾಗಿದ್ದು ಇಂದು ನಿನ್ನೆಯಲ್ಲ.

1971ರಲ್ಲೇ ಇಲ್ಲಿನ ವಿದ್ಯಾರ್ಥಿಗಳು ಜೆಎನ್ಯೂ ಸ್ಟೂಡೆಂಟ್ ಯೂನಿಯನ್ ಸಂವಿಧಾನವನ್ನು ತಾವೇ ರಚಿಸಿಕೊಂಡಿದ್ದರು. ಇವತ್ತಿಗೆ ಜನಪ್ರಿಯ ರಾಜಕಾರಣಿಯಾಗಿರುವ ಪ್ರಕಾಶ್ ಕಾರಟ್ ಇದೇ ರೀತಿ ಐಕ್ಯ ಬಣದಿಂದ 1973 ರಲ್ಲಿ ಜಯಶಾಲಿಯಾಗಿ ‘ಜೆಎನ್ಯೂ ಸ್ಟೂಡೆಂಟ್ ಯೂನಿಯನ್’ ಅಧ್ಯಕ್ಷರಾಗಿದ್ದರು. ಬಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಜೆಎನ್ಯೂನಲ್ಲಿ ಪ್ರವೇಶ ದೊರೆಯಬೇಕು, ಅದಕ್ಕಾಗಿ ನಿಯಮಗಳಲ್ಲಿ ಬದಲಾವಣೆಯಾಗಬೇಕು ಎಂದು ದೊಡ್ಡಮಟ್ಟದ ಹೋರಾಟ ಆಗ ಆರಂಭವಾಗಿತ್ತು. ಮುಂದೆ ಹಲವು ವಿಚಾರಗಳಿಗೆ ಇದೇ ರೀತಿಯಲ್ಲಿ ಹೋರಾಟಗಳನ್ನು ಇಲ್ಲಿನ ಎಡಪಂಥೀಯ ವಿದ್ಯಾರ್ಥಿಗಳು ನಡೆಸಿದ್ದಾರೆ.

ಇಂದಿರಾ ಗಾಂಧಿ 1975-77 ತುರ್ತು ಪರಿಸ್ಥಿತಿ ಘೋಷಿಸಿದಾಗ, ಇಲ್ಲಿನ ಎಡಪಂಥೀಯ ವಿದ್ಯಾರ್ಥಿಗಳು ಜೈಲಿಗೂ ಹೋಗಿ ಬಂದಿದ್ದರು. 1998-99ರಲ್ಲಿ ಮಂಡಲ್ ಆಯೋಗದ ಶಿಫಾರಸ್ಸು ಜಾರಿಗೆ ಈ ವಿದ್ಯಾರ್ಥಿಗಳು ಹೋರಾಟಕ್ಕೆ ಇಳಿದರೆ, 90ರ ದಶಕದಲ್ಲಿ JNUನಲ್ಲಿ ಹಾಸ್ಟೆಲ್ ಸೌಲಭ್ಯಗಳ ಕುರಿತು ನಿರಂತರ ಪ್ರತಿಭಟನೆಗಳನ್ನು ಈ ವಿದ್ಯಾರ್ಥಿಗಳು ನಡೆಸುತ್ತಾ ಬಂದಿದ್ದರು.

ಈ ಕಾರಣದಿಂದ ಈ ಯುನಿವರ್ಸಿಟಿಯನ್ನೇ ಮುಚ್ಚಬೇಕು ಎಂದು ಹಲವು ಸರಕಾರಗಳು ಯತ್ನ ನಡೆಸುತ್ತಲೇ ಬಂದಿವೆ. 1996 – 97ರ ಸಾಲಿನಲ್ಲಿ ಅಡ್ವಾನಿಯನ್ನು ಕಾರ್ಯಕ್ರಮವೊಂದಕ್ಕೆ ಇಲ್ಲಿಗೆ ಆಹ್ವಾನಿಸಿದ್ದಾಗ ಉಂಟಾದ ಸಂಘರ್ಷದ ವೇಳೆ ಕಾಲೇಜನ್ನು, ಮ್ಯಾನೇಜ್ಮೆಂಟ್ ಕಾಲೇಜ್ ಆಗಿ ಬದಲಾಯಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಸ್ವಪನ್ ದಾಸ್ ಗುಪ್ತಾ, ‘ಇಂಡಿಯನ್ ಎಕ್ಸ್’ಪ್ರೆಸ್ ನಲ್ಲಿ ಬರೆದಿದ್ದರು. 2002ರ ಗುಜರಾತ್ ಗಲಭೆಯ ಬೆನ್ನಿಗೆ ಇಲ್ಲಿನ ವಿದ್ಯಾರ್ಥಿಗಳು ದನಿ ಎತ್ತಿದ್ದರು. ಆಗ ಅಶೋಕ್ ಸಿಂಘಾಲ್, ಪ್ರವೀಣ್ ತೊಗಾಡಿಯಾ ಮೊದಲಾದವರು ಜೆಎನ್ಯು ಹಿಂದೂರಾಷ್ಟ್ರಕ್ಕೆ ಮಾರಕ, ಇದನ್ನು ಮುಚ್ಚಿ ಎಂದು ಕೂಗಾಡಿದ್ದರು.

ಸ್ಮೃತಿ ಇರಾನಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವರಾಗಿದ್ದ ಸಮಯದಲ್ಲಿ ಇಲ್ಲಿನ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಹಾಗೂ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಹೋರಾಟ ಹುಟ್ಟಿಕೊಂಡಿತ್ತು. ಅದರ ಮುಂದುವರಿದ ಭಾಗ ಎಂಬಂತೆ ನಡೆದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ‘ಲೆಫ್ಟ್ ಯುನಿಟಿ’ ಗೆದ್ದು ಬಂದಿದೆ. ಮುಂದಿನ ದಿನಗಳಲ್ಲಿ ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ಅಂಗಳದಿಂದ ಎಡ ಮತ್ತು ಅಂಬೇಡ್ಕರ್ ಚಿಂತನೆಯ ವಿಚಾರಗಳು ಕೇಳಿಬರುವ ಸೂಚನೆಯನ್ನು ಚುನಾವಣೆಯ ಫಲಿತಾಂಶ ನಿಚ್ಚಳವಾಗಿಸಿದೆ.

ದೆಹಲಿ ವಿಶ್ವವಿದ್ಯಾನಿಯ (DU) ದಲ್ಲಿ ಎಬಿವಿಪಿಗೆ ಜಯ

ಇದೇ ವೇಳೆ ದೆಹಲಿ ವಿಶ್ವವಿದ್ಯಾಲಯದ ಸ್ಟೂಡೆಂಟ್ ಯೂನಿಯನ್ಗೆ ನಡೆದ ಚುನಾವಣೆಯಲ್ಲಿ ಎಬಿವಿಪಿ ಮೂರು ಸ್ಥಾನಗಳನ್ನು ಗೆದ್ದುಕೊಂಡಿದ್ದು ಒಂದು ಸ್ಥಾನ ಎನ್ಎಸ್ಯುಐ ಪಾಲಾಗಿದೆ. ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಹುದ್ದೆಗಳನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಗೆದ್ದುಕೊಂಡರೆ, ಜಂಟಿ ಕಾರ್ಯದರ್ಶಿವನ್ನು ಕಾಂಗ್ರೆಸ್ ಬೆಂಬಲಿತ ಎನ್ಎಸ್ಯುಐ ಗೆದ್ದು ಬೀಗಿದೆ.

ENTER YOUR E-MAIL

Name
Email *
September 2017
M T W T F S S
« Aug    
 123
45678910
11121314151617
18192021222324
252627282930  

Top