An unconventional News Portal.

ರಿಲಯನ್ಸ್ ಜಿಯೋ ಗ್ರಾಹಕರ ಖಾಸಗಿ ಮಾಹಿತಿ ಬಹಿರಂಗ: ಸಮಜಾಯಿಷಿ ನೀಡಿದ ಟೆಲಿಕಾಂ ಸಂಸ್ಥೆ

ರಿಲಯನ್ಸ್ ಜಿಯೋ ಗ್ರಾಹಕರ ಖಾಸಗಿ ಮಾಹಿತಿ ಬಹಿರಂಗ: ಸಮಜಾಯಿಷಿ ನೀಡಿದ ಟೆಲಿಕಾಂ ಸಂಸ್ಥೆ

ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ ಗ್ರಾಹಕರ ಖಾಸಗಿ ವಿವರಗಳು ಬಹಿರಂಗವಾಗಿವೆ.

ಉಚಿತ ಸೇವೆ ಹೆಸರಿನಲ್ಲಿ ಟೆಲಿಕಾಂ ಮಾರುಕಟ್ಟೆಗೆ ಕಾಲಿಟ್ಟ ಜಿಯೋ ಶೇಖರಿಸಿಕೊಂಡಿದ್ದ ಗ್ರಾಹಕರ ಮಾಹಿತಿಯನ್ನು ವೆಬ್‌ಸೈಟ್‌ ಒಂದು ಭಾನುವಾರ ರಾತ್ರಿ ಬಹಿರಂಗಪಡಿಸಿದೆ. ಈ ಮೂಲಕ ದೇಶದಲ್ಲಿ ನಡೆದ ಬಹೊದೊಡ್ಡ ಮಾಹಿತಿ ಸೋರಿಕೆ ಇದಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ‘ಹ್ಯಾಕಿಂಗ್‌’ ಆಗಿರುವ ಸಾಧ್ಯತೆಯನ್ನು ತಳ್ಳಿ ಹಾಕಿರುವ ರಿಲಯನ್ಸ್ ಜಿಯೋ, “ಗ್ರಾಹಕರು ನೀಡಿರುವ ಮಾಹಿತಿ ಭದ್ರವಾಗಿದೆ,” ಎಂದು ಸಮಜಾಯಿಷಿ ನೀಡಿದೆ.

ನಡೆದಿದ್ದೇನು?: 

ಭಾನುವಾರ ರಾತ್ರಿ ಮ್ಯಾಜಿಕ್‌ಪಿಕೆ ಎಂಬ ಹೆಸರಿನ ವೆಬ್‌ಸೈಟ್, ರಿಲಯನ್ಸ್ ಜಿಯೋ ಗ್ರಾಹಕರ ಮೊಬೈಲ್ ನಂಬರ್ ನೀಡಿದರೆ ಅವರ ಇ-ಮೇಲ್, ಸ್ಥಳ ಹಾಗೂ ಇತರೆ ಖಾಸಗಿ ಮಾಹಿತಿ ನೀಡತೊಡಗಿತು. ಇವು ಜಿಯೋ ಸಿಮ್‌ ನೀಡುವ ಹೊತ್ತಿನಲ್ಲಿ ಕಂಪನಿ ಪಡೆದುಕೊಂಡ ಮಾಹಿತಿಗಳಾಗಿದ್ದವು. ಇವುಗಳಲ್ಲಿ ಗ್ರಾಹಕರ ಆಧಾರ್ ನಂಬರ್‌ ಕುರಿತಾದ ಮಾಹಿತಿ ಇರಲಿಲ್ಲ. ಆದರೆ ಗ್ರಾಹಕರ ವಿಳಾಸವೂ ಸೇರಿದಂತೆ ಸೂಕ್ಷ್ಮ, ಖಾಸಗಿ ಮಾಹಿತಿಯನ್ನು ವೆಬ್‌ಸೈಟ್ ಸಾರ್ವಜನಿಕರಿಗೆ ನೀಡಲು ಶುರುಮಾಡಿತ್ತು.

 

jio-hacked-1

ಇದನ್ನು ‘ಮೀಡಿಯಾನಾಮ’ ವೆಬ್‌ಸೈಟ್ ಸ್ವತಂತ್ರ ತನಿಖೆಗೆ ಒಳಪಡಿಸಿತ್ತು. “ಮಾಹಿತಿ ನಿಖರವಾಗಿತ್ತು. ಜಿಯೋ ಹೊರತಾದ ಟೆಲಿಕಾಂ ಕಂಪನಿಗಳ ಮಾಹಿತಿ ಸಿಗುತ್ತಿರಲಿಲ್ಲ. ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಜಿಯೋ ನಂಬರ್‌ ನೀಡಿದರೆ ಸಿಗುವ ಮಾಹಿತಿಯನ್ನೂ ಅಪ್‌ಲೋಡ್ ಮಾಡಿದ್ದಾರೆ,’ ಎಂದು ವೆಬ್‌ಸೈಟ್ ಹೇಳಿದೆ.

ರಿಲಯನ್ಸ್ ಜಿಯೋ ಇದನ್ನು ಅಲ್ಲಗೆಳೆದಿದ್ದು, “ಮ್ಯಾಜಿಕ್‌ಪಿಕೆ ವೆಬ್‌ಸೈಟ್ ನೀಡುವ ಮಾಹಿತಿ ಸತ್ಯಕ್ಕೆ ದೂರವಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಗ್ರಾಹಕರು ನೀಡುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ರಿಲಯನ್ಸ್ ಜಿಯೋ ನೀಡುತ್ತಿರುವ ಸಮಜಾಯಿಷಿ ಸತ್ಯಕ್ಕೆ ದೂರವಾಗಿದೆ.

ಜಿಯೋ ಗ್ರಾಹಕರ ಮಾಹಿತಿ ಬಹಿರಂಗವಾಗುತ್ತಿದ್ದ ಸುದ್ದಿ ಹಬ್ಬುತ್ತಿದ್ದಂತೆ ರಾತ್ರಿ 11 ಗಂಟೆ ಸುಮಾರಿಗೆ ಮ್ಯಾಜಿಕ್‌ಪಿಕೆ ವೆಬ್‌ಸೈಟ್ ಸ್ಥಗಿತಗೊಂಡಿದೆ.

jio-hacked-2

ಒಂದಷ್ಟು ಪ್ರಶ್ನೆಗಳು: 

ಆಧಾರ್‌ ಕಾರ್ಡ್‌ ನಂಬರ್‌ ಪಡೆಯುವ ಮೂಲಕ ಸಿಮ್‌ ವಿತರಣೆ ಮಾಡಿದ ರಿಲಯನ್ಸ್ ಜಿಯೋ ಕೆಲವೊಂದಿಷ್ಟು ಪ್ರಶ್ನೆಗಳಿಗೆ ಈಗ ಉತ್ತರಿಸಬೇಕಾಗಿದೆ. ಗ್ರಾಹಕರ ಮಾಹಿತಿಯನ್ನು ರಿಲಯನ್ಸ್‌ ಜಿಯೋ ಹೇಗೆ ಶೇಖರಿಸಿಕೊಟ್ಟುಕೊಂಡಿದೆ, ಅದಕ್ಕಾಗಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೇ, ಆಧಾರ್‌ ನಂಬರ್ ಕೂಡ ಶೇಖರಿಸಿಕೊಟ್ಟುಕೊಳ್ಳಲಾಗಿದೆಯೇ, ಮಾಹಿತಿ ಹೊರಗಿನ ವ್ಯಕ್ತಿಗಳಿಗೆ ಸೋರಿಕೆಯಾಗಿದ್ದು ಹೇಗೆ, ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಪ್ರಶ್ನೆಗಳನ್ನು ಜಿಯೋ ಮುಂದಿಡಲಾಗುತ್ತಿದೆ.

ಸದ್ಯ ವೆಬ್‌ಸೈಟ್ ಸ್ಥಗಿತಗೊಂಡಿದ್ದರೂ, ಗ್ರಾಹಕರ ಮಾಹಿತಿ ಹೊರಗಿನ ವ್ಯಕ್ತಿಗಳಿಗೆ ತಲುಪಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಮ್ಯಾಜಿಕ್‌ಪಿಕೆ ಮಾದರಿಯಲ್ಲಿಯೇ ಇನ್ನಷ್ಟು ವೆಬ್‌ಸೈಟ್‌ಗಳು ಹುಟ್ಟಿಕೊಂಡರೂ ಅಚ್ಚರಿ ಏನಿಲ್ಲ. ಆಧಾರ್‌ ನಂಬರ್ ಮೂಲಕ ನೋಂದಣಿ ಪ್ರಕ್ರಿಯೆಗೆ ನಾಂದಿ ಹಾಡಿದ ಜಿಯೋ ಖಾಸಗಿ ಮಾಹಿತಿಯನ್ನು ಸಂರಕ್ಷಣೆ ಮಾಡುವಲ್ಲಿ ವಿಫಲವಾಗಿರುವುದು ಮೇಲ್ನೋಟಕ್ಕೆ ಎದ್ದು ಕಾಣಿಸುತ್ತಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಹೆಚ್ಚಲಿರುವ ‘ಹ್ಯಾಕಿಂಗ್‌’ ಹೇಗೆ ಖಾಸಗಿ ಮಾಹಿತಿಗಳನ್ನು ಸಾರ್ವಜನಿಕಗೊಳಸಬಹುದು ಎಂಬುದಕ್ಕೆ ಈ ಪ್ರಕರಣ ಮತ್ತೊಂದು ಉದಾಹರಣೆ ಅಷ್ಟೆ.

ಚಿತ್ರಗಳು: ಎನ್‌ಡಿಟಿವಿ, ಮೀಡಿಯಾ ನಾಮ.

Top