An unconventional News Portal.

‘ಜಿಂದಾಲ್ ರಿಪಬ್ಲಿಕ್’ಗೆ ಸ್ವಾಗತ: ಕುಡತನಿ ಡಾಂಬರ್ ಘಟಕ ಮತ್ತು 4 ನತದೃಷ್ಟ ಕಾರ್ಮಿಕರು

‘ಜಿಂದಾಲ್ ರಿಪಬ್ಲಿಕ್’ಗೆ ಸ್ವಾಗತ: ಕುಡತನಿ ಡಾಂಬರ್ ಘಟಕ ಮತ್ತು 4 ನತದೃಷ್ಟ ಕಾರ್ಮಿಕರು

ಅಕ್ರಮ ಗಣಿಗಾರಿಕೆಯಿಂದ ನಲುಗಿದ್ದ ಬಳ್ಳಾರಿಯ ಜನ ಅಂದು ನಡೆದ ಪರಸರ ಮಾಲಿನ್ಯ ಮತ್ತು ಬದುಕಿನ ಮೇಲಾದ ಪರಿಣಾಮಗಳಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಿರುವಾಗಲೇ ಉತ್ತರ ಕರ್ನಾಟಕದ ಈ ಜಿಲ್ಲೆಯ ತೋರಣಗಲ್ಲಿನಲ್ಲಿ ಜಿಂದಾಲ್ ಉಕ್ಕು ಕಂಪನಿ (ಜಿಂದಾಲ್ ಸೌತ್ ವೆಸ್ಟ್ ಸ್ಟೀಲ್ ಲಿ.) ಅದೇ ಹಳೆಯ ಮಾದರಿಯ ಪರಿಸರ ಹಾನಿಗಳ ಜತೆಗೆ ಹಣ ಬಲ, ತೋಳ್ಬಲ ಮತ್ತು ಕಾನೂನಿನ ಬಲವನ್ನು ಜನರಿಗೆ ನೆನಪು ಮಾಡಿಕೊಡಲಾರಂಭಿಸಿದೆ.

ತೋರಣಗಲ್ಲಿನಲ್ಲಿರುವ ಜಿಂದಾಲ್ ಕಂಪನಿಯ ಆವರಣಗೊಳಗಡೆಯೇ ಇತ್ತೀಚೆಗೆ ಆರಂಭಿಸಿರುವ ಡಾಂಬರ್ ತಯಾರಿಕಾ ಘಟಕದ ವಿರುದ್ಧ ಜನ ಸಿಡಿದೆದ್ದಿದ್ದಾರೆ. ಹೋರಾಟಕ್ಕಿಳಿದವರ ಮೇಲೆ ಪೊಲೀಸರ ಮೂಲಕ ಕಾನೂನಿನ ಪ್ರಹಾರ ನಡೆಸಲಾಗುತ್ತಿದೆ. ಜತೆಗೆ, ಗೂಂಡಾಗಳನ್ನೂ ಬಿಟ್ಟು ಹೊಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಹೀಗಿರುವಾಗಲೇ ಭಾನುವಾರ ಸಂಜೆ ಕುಡತಿನಿ ಸಮೀಪದ ಈ ಡಾಂಬರು ಘಟಕದಲ್ಲಿ ಅವಘಡವೊಂದು ನಡೆದಿದೆ. ಇದರ ಮಾಹಿತಿ ಪಡೆಯಲು ಹೋದವರನ್ನು ಆಸ್ಪತ್ರೆಯಿಂದ ಹೊರಹಾಕಲಾಗಿದೆ. ದೂರು ನೀಡಲು ಹೋದಾಗ ಪೊಲೀಸರೇ ಹರಿಹಾಯ್ದಿದ್ದಾರೆ.

ಇದು ‘ಜಿಂದಾಲ್ ರಿಪಬ್ಲಿಕ್’ ಆಗಿ ಬದಲಾಗಿರುವ ತೋರಣಗಲ್ಲು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರ ಪ್ರತಿರೋಧ ಮತ್ತು ಅದನ್ನು ಹತ್ತಿಕ್ಕಲು ನಡೆಯುತ್ತಿರುವ ಪ್ರಯತ್ನಗಳ ಮೇಲೆ ಬೆಳಕು ಚೆಲ್ಲುತ್ತಿದೆ.

ಏನಿದು ಘಟನೆ?:

ಇಪಿಸಿಎಲ್ ಫ್ರೀ ಫಿಸಿಬಿಲಿಟಿ ರಿಪೋರ್ಟ್. ಇದನ್ನೇ ಎನ್ವಿರಾನ್ಮೆಂಟ್ ಕ್ಲಿಯರೆನ್ಸ್ ರಿಪೋರ್ಟ್ ಎಂದು ಬಿಂಬಿಸುವ ಪ್ರಯತ್ನ ನಡೆಸಿದೆ.

ಇಸಿಪಿಎಲ್  ಪ್ರೀ ಫೀಸಿಬಿಲಿಟಿ ರಿಪೋರ್ಟ್. ಇದನ್ನೇ ಎನ್ವಿರಾನ್ಮೆಂಟ್ ಕ್ಲಿಯರೆನ್ಸ್ ರಿಪೋರ್ಟ್ ಎಂದು ಬಿಂಬಿಸುವ ಪ್ರಯತ್ನ ನಡೆಸಿದೆ.

ತೋರಣಗಲ್ಲು ತಾಲೂಕಿನ ಕುಡತಿನಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ‘ಎಪ್ಸಿಲಾನ್ ಕಾರ್ಬನ್ ಪ್ರೈವೆಟ್ ಲಿಮಿಟೆಡ್'(ಇಸಿಪಿಎಲ್) ಎಂಬ ಕಂಪನಿ ತಲೆ ಎತ್ತಿದೆ. ಇಲ್ಲಿನ ಸುಮಾರು 34. 65 ಎಕರೆ ಜಾಗದಲ್ಲಿ, 350 ಕೋಟಿ ವೆಚ್ಚದಲ್ಲಿ ಫ್ಯಾಕ್ಟರಿಯನ್ನು ಸ್ಥಾಪಿಸಲಾಗಿದೆ. ‘ಈ ಪ್ರದೇಶದಲ್ಲಿ ಕೈಗಾರಿಕೆಗೆ ಬೇಕಾದ ಕೋಲ್ ಟಾರ್, ಅನಿಲ, ವಿದ್ಯುತ್ ಇಂಧನದ ಜತೆಗೆ ರಸ್ತೆ ಸಂಪರ್ಕಗಳು ಹೇಳಿ ಮಾಡಿಸಿದಂತಿರುವ’ ಕಾರಣಕ್ಕೆ ಘಟಕವನ್ನು ಸ್ಥಾಪಿಸಲಾಗುತ್ತಿದೆ ಎಂದು ಇಸಿಪಿಎಲ್ ಘಟಕದ ‘ಪ್ರಿ- ಫೀಝಿಬಲಿಟಿ’ ವರದಿ ಹೇಳುತ್ತದೆ.

ಈ ಫ್ಯಾಕ್ಟರಿಯ ಒಳಗಿರುವ ‘ಪಿಚ್ ಫರ್ನೇಸ್’ ಕೆಲವು ದಿನಗಳಿಂದ ಕಟ್ಟಿಕೊಂಡಿತ್ತು. ಇದನ್ನು ಸರಿಪಡಿಸಲು ಕಂಪನಿ ‘ಪೈಪ್ ಟೆಕ್’ ಎಂಬ ಕಂಪನಿಗೆ ಹೊರಗುತ್ತಿಗೆ ನೀಡಿತ್ತು. ಪೈಪ್ ಟೆಕ್ ಕಡೆಯಿಂದ ಫರ್ನೇಸ್ ಸರಿಪಡಿಸಲು ಬಂದ ಕಾರ್ಮಿಕರ ಮೇಲೆ ಬಿಸಿ ಟಾರ್ ಸುರಿದ ಪರಿಣಾಮ ಆರು ಜನ ಗಾಯಗೊಂಡಿದ್ದಾರೆ. ಇವರಲ್ಲಿ ಲೋಕನಾಥ್ ಮತ್ತು ದಿನೇಶ್ ಎಂಬುವವರನ್ನು ಬೆಂಗಳೂರಿನ ಸೈಂಟ್ ಜಾನ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆಗೆ ಭಾನುವಾರ ಮಧ್ಯರಾತ್ರಿ ಸ್ಥಳಾಂತರಿಸಲಾಗಿದೆ. ಕಣ್ಣಬಾಬು ಮತ್ತು ಪ್ರಕಾಶ್ ಎಂಬ ಕಾರ್ಮಿಕರಿಗೆ ಇದೇ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜರಿಯನ್ನು ಸೋಮವಾರ ಮಾಡಲಾಗಿದೆ. “ಇವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಆಗಿರುವ ಗಂಭೀರ ಗಾಯಗಳ ನೆನಪು ಜೀವನ ಪರ್ಯಂತ ಕಾಡುವಂತಿದೆ,” ಎಂದು ಆಸ್ಪತ್ರೆ ಮೂಲಗಳು ‘ಸಮಾಚಾರ’ಕ್ಕೆ ತಿಳಿಸಿವೆ.

“ಇನ್ನಿಬ್ಬರು ಕಾರ್ಮಿಕರು ತೋರಣಗಲ್ಲಿನ ಸಂಜೀವಿನಿ ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ,” ಎಂದು ಕುಡತಿನಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಸುಕುಮಾರ್ ಮಾಹಿತಿ ನೀಡಿದರು.

ಎಸ್ಐ ವಿರುದ್ಧ ದೂರು:

ಎಸ್ಐ ರಫೀಕ್.

ಎಸ್ಐ ರಫೀಕ್.

ಭಾನುವಾರ ಸಂಜೆ ಇಸಿಪಿಎಲ್ ಘಟಕದಲ್ಲಿ ದುರಂತವೊಂದು ಘಟಿಸಿದೆ ಎಂಬ ಮಾಹಿತಿ ಬರುತ್ತಲೇ ಘಟಕದ ವಿರುದ್ಧ ನಿರಂತರ ಹೋರಾಟ ನಡೆಸಿಕೊಂಡು ಬಂದ ಡಿವೈಎಫ್ಐ ಸಂಘಟನೆಯ ಸ್ಥಳೀಯ ಕಾರ್ಯಕರ್ತರು, ಗಾಯಾಳುಗಳ ಮಾಹಿತಿಗಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. “ಈ ಸಮಯದಲ್ಲಿ ನಮ್ಮನ್ನು ಗುರುತಿಸಿದ ಜಿಂದಾಲ್ ಕಡೆಯವರು ಆಸ್ಪತ್ರೆಯಿಂದ ಬಲತ್ಕಾರವಾಗಿ ಹೊರಹಾಕಿದರು. ಈ ಕುರಿತು ತೋರಣಗಲ್ಲು ಪೊಲೀಸ್ ಠಾಣೆಗೆ ದೂರು ನೀಡಲು ಹೋದೆವು. ಆದರೆ ಈ ಸಮಯದಲ್ಲಿ ಎಸ್ಐ ರಫೀಕ್ ನಮ್ಮ ವಿರುದ್ಧವೇ ಗುಡುಗಿ, ಕೇಸು ಹಾಕುವುದಾಗಿ ಬೆದರಿಕೆ ಹಾಕಿದರು,” ಎನ್ನುತ್ತಾರೆ ವೀರೇಶ್. ಈ ಬಗ್ಗೆ ಸೋಮವಾರ ಬಳ್ಳಾರಿ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿಗೆ ದೂರು ಸಲ್ಲಿಸಲಾಗಿದೆ.

ತೋರಣಗಲ್ಲು ಠಾಣೆಯ ಅಧಿಕಾರಿ ರಫೀಕ್ ವಿರುದ್ಧ ಗುರುತರ ಆರೋಪವನ್ನು ಮಾಡುತ್ತಾರೆ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ. “ರಫೀಕ್ ಮನೆ ಇರುವುದು ಜಿಂದಾಲ್ ಟೌನ್ ಶಿಪ್ ಒಳಗೆ. ಅವರು ಪೊಲೀಸ್ ಕ್ವಾಟ್ರಸ್ ಬಳಸುವುದಿಲ್ಲ. ಕಂಪನಿಯ ಮರ್ಜಿಯಲ್ಲಿರುವ ಇಂತವರಿಂದ ನ್ಯಾಯವನ್ನು ಹೇಗೆ ನಿರೀಕ್ಷಿಸಲು ಸಾಧ್ಯ,” ಎನ್ನುತ್ತಾರೆ ಅವರು.

ಈ ಕುರಿತು ರಫೀಕ್ ಅವರನ್ನು ಪ್ರಶ್ನಿಸಿದರೆ, “ಭಾನುವಾರ ಆಸ್ಪತ್ರೆ ಬಳಿ ಕೆಲವರು ಹೋಗಿ ವಿಡಿಯೋ ಮಾಡಲು ನೋಡಿದ್ದಾರೆ. ಈ ಸಮಯದಲ್ಲಿ ಜಿಂದಾಲ್ ಕಡೆಯವರು ಅವರನ್ನು ಹೊರಕ್ಕೆ ಕಳುಹಿಸಿದ್ದಾರೆ. ಆಮೇಲೆ ನನ್ನ ಬಳಿ ಬಂದಿದ್ದು ನಿಜ. ನಾನು ಸಮಾಧಾನಪಡಿಸಿ ಕಳುಹಿಸಲು ಪ್ರಯತ್ನಿಸಿದೆ. ಆದರೆ ಅವರು ಹೋರಾಟ ಮಾಡ್ತೀವಿ ಅಂತ ಕೂಗಾಡುತ್ತಿದ್ದರು,” ಎಂದು ಪ್ರತಿಕ್ರಿಯೆ ನೀಡಿದರು. ಅವರ ವಾಸ್ತವ್ಯದ ಕುರಿತು ಖಚಿತ ಉತ್ತರ ಸಿಗಲಿಲ್ಲ.

ಸದ್ಯ ಘಟನೆ ಸಂಬಂಧ ಇಪಿಸಿಎಲ್ ಹಾಗೂ ಪೈಪ್ ಟೆಕ್ ಕಂಪನಿಯ ಕಡೆಯಿಂದ ನಿರ್ಲಕ್ಷ್ಯವಾಗಿದೆ ಎಂದು ಕುಡುತಿನಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಕಂಪನಿಯ ರಾಜೇಂದ್ರನ್, ಹಿಮಾಂಷು ಚಬ್ಬಿ, ಸಮಾಧಾನ್ ಖಾತೆ ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಎಫ್ಐಆರ್ ಹರಿಯಲಾಗಿದೆ.

ಇದು ಜಿಂದಾಲ್ ಕುಟುಂಬದ ಕೂಸು:

ಸದರಿ ಇಸಿಪಿಎಲ್ ಕಂಪನಿ ಜಿಂದಾಲ್ ಕುಟುಂಬಕ್ಕೆ ಸೇರಿದೆ. ಇದರ ನಿರ್ದೇಶಕರ ಪಟ್ಟಿಯಲ್ಲಿ ಸಜ್ಜನ್ ಜಿಂದಾಲ್ ಅವರ ಹಿರಿಯ ಪುತ್ರಿ ತಾರಿಣಿ ಜಿಂದಾಲ್ ಹಂಡ ಮತ್ತು ಅವರ ಪತಿ, ವಿಕ್ರಂ ಹಂಡ ಅವರ ಹೆಸರಿದೆ. ಜೆಎಸ್ಡಬ್ಲ್ಯು ಸಮೂಹ ಸಂಸ್ಥೆಗಳಲ್ಲಿ ಪಾಲು ಹೊಂದಿರುವ ನಿರ್ಮಲ್ ಕುಮಾರ್ ಜೈನ್ ಈ ಕಂಪನಿಯ ಹೆಚ್ಚುವರಿ ನಿರ್ದೇಶಕರಾಗಿದ್ದಾರೆ.

ಇಸಿಪಿಎಲ್ ಕಂಪನಿ ನಿರ್ದೇಶಕರ ಮಾಹಿತಿ. (ಕೃಪೆ: ಝೂಬಾ ಕಾರ್ಪ್)

ಇಸಿಪಿಎಲ್ ಕಂಪನಿ ನಿರ್ದೇಶಕರ ಮಾಹಿತಿ. (ಕೃಪೆ: ಝೂಬಾ ಕಾರ್ಪ್)

ತೋರಣಗಲ್ಲಿಗೆ ಜಿಂದಾಲ್ ಕಂಪನಿ ಕಾಲಿಟ್ಟಿದ್ದು ಒಂದು ದೊಡ್ಡ ಕತೆ. ಸದ್ಯ ತೋರಣಗಲ್ಲಿನ ಬಸ್ ನಿಲ್ದಾಣದಿಂದ ಹಿಡಿದು ಪೊಲೀಸ್ ಠಾಣೆವರೆಗೆ ಜಿಂದಾಲ್ ಕಂಪನಿಯ ಕೊಡುಗೆ ಇದೆ. ಅಷ್ಟು ಪ್ರಮಾಣದಲ್ಲಿ ತೋರಣಗಲ್ಲನ್ನು ಆಕ್ರಮಿಸಿಕೊಂಡಿರುವ ಜಿಂದಾಲ್ ಕಂಪನಿಯ ಮುಖ್ಯಸ್ಥ ಸಜ್ಜನ್ ಜಿಂದಾಲ್ ತಮ್ಮ ಹಿರಿಯ ಪುತ್ರಿ ಹಾಗೂ ಅಳಿಯ ನಿರ್ದೇಶಕರಾಗಿರುವ ಕಂಪನಿಗೆ ತಮ್ಮ ವ್ಯಾಪ್ತಿಯೊಳಗೆ ಘಟಕವನ್ನು ಸ್ಥಾಪಿಸಲು ಅನುಮತಿ ನೀಡಿದ್ದಾರೆ. “ಜಿಂದಾಲ್ ಕಂಪನಿ ಡಾಂಬರ್ ಘಟಕವನ್ನು ಸ್ಥಾಪಿಸಲು ಹೊರಟಾಗ ಪರಿಸರದ ಮೇಲಾಗುವ ಪರಿಣಾಮಗಳ ಹಿನ್ನೆಲೆಯಲ್ಲಿ ‘ಎನ್ವಿರಾನ್ಮೆಂಟಲ್ ಕ್ಲಿಯರೆನ್ಸ್’ ಪಡೆದುಕೊಳ್ಳಬೇಕಿತ್ತು. ‘ಎ’ ಕೆಟಗರಿಯಲ್ಲಿ ಬರುವ ಈ ತರಹದ ಕೈಗಾರಿಕೆಗಳ ಸ್ಥಾಪನೆಗೂ ಮುನ್ನ ಸ್ಥಳೀಯ ಅಭಿಪ್ರಾಯವನ್ನು ಕೇಳಬೇಕಿತ್ತು. ಆದರೆ, ಇದ್ಯಾವುದನ್ನೂ ಮಾಡದೆ ಡಾಂಬರು ಘಟಕವನ್ನು ಸ್ಥಾಪಿಸಲಾಗಿದೆ. ಹೀಗಾಗಿ, ಜನರು ಇದರ ವಿರುದ್ಧ ಹೋರಾಟ ಆರಂಭಿಸಿದ್ದಾರೆ,” ಎನ್ನುತ್ತಾರೆ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜು.

“ಹೋರಾಟ ಆರಂಭವಾಗುತ್ತಿದ್ದಂತೆ ನಮ್ಮ ಮೇಲೆ ಪೊಲೀಸ್ ಬಲಪ್ರಯೋಗ ನಡೆಸಲಾಯಿತು. ಮನೆ ಮನೆಗೆ ನುಗ್ಗಿ ಯುವಕರನ್ನು ಎಳೆದುಕೊಂಡು ಹೋಗಿ ಜೈಲಿಗೆ ಹಾಕಲಾಯಿತು. ಇದು ಇಲ್ಲಿನ ಸದ್ಯದ ಪರಿಸ್ಥಿತಿ. ನಾವು ಜಿಲ್ಲಾಧಿಕಾರಿಗೆ, ಜಿಲ್ಲಾ ಉಸ್ತುವಾರಿ ಮಂತ್ರಿ (ಸಂತೋಷ್ ಲಾಡ್)ಗೆ, ಮುಖ್ಯಮಂತ್ರಿ (ಸಿದ್ದರಾಮಯ್ಯ)ಗೆ ಘಟಕವನ್ನು ಮುಚ್ಚಿ, ಜನಾಭಿಪ್ರಾಯವನ್ನು ಸಂಗ್ರಹಿಸಿ ಎಂದು ಬೇಡಿಕೆ ಸಲ್ಲಿಸುತ್ತಲೇ ಇದ್ದೇವೆ. ಜತೆಗೆ, ಡಾಂಬರು ಘಟಕದಿಂದ ಪರಿಸರದ ಮೇಲಾಗುತ್ತಿರುವ ಹಾನಿಯನ್ನು ತಜ್ಞರ ಸಮಿತಿ ಮೂಲಕ ಪರಿಶೀಲನೆ ನಡೆಸಿ ಎಂದು ಹೇಳುತ್ತಿದ್ದೇವೆ. ಆದರೆ, ಕಂಪನಿಯ ಹಣ ಮತ್ತು ಅಧಿಕಾರದ ಬಲದ ಮುಂದೆ ನಮ್ಮ ದನಿ ಕೇಳಿಸುತ್ತಿಲ್ಲ,” ಎಂದು ನೋವಿನಿಂದ ವಿವರಿಸುತ್ತಾರೆ ಬಸವರಾಜು.

(ಮುಂದುವರಿಯುವುದು)

Leave a comment

Top