An unconventional News Portal.

ದ್ರಾವಿಡ ಸಂಪ್ರದಾಯದಂತೆ ಜಯಾ ಅಂತಿಮ ಸಂಸ್ಕಾರ: ಲಕ್ಷಾಂತರ ಜನರ ಸಮ್ಮುಖದಲ್ಲಿ ಚಿರನಿದ್ರೆಗೆ ಜಾರಿದ ಅಮ್ಮ

ದ್ರಾವಿಡ ಸಂಪ್ರದಾಯದಂತೆ ಜಯಾ ಅಂತಿಮ ಸಂಸ್ಕಾರ: ಲಕ್ಷಾಂತರ ಜನರ ಸಮ್ಮುಖದಲ್ಲಿ ಚಿರನಿದ್ರೆಗೆ ಜಾರಿದ ಅಮ್ಮ

‘ಅಮ್ಮ’, ಜಯಲಲಿತಾ ಜಯರಾಮನ್ ಪಾರ್ಥಿವ ಶರೀರದ ಅಂತಿಮ ಸಂಸ್ಕಾರಗಳು ಚೆನ್ನೈನ ಮರೀನಾ ಬೀಚಿನಲ್ಲಿ ದ್ರಾವಿಡ ಸಂಪ್ರದಾಯದಂತೆ ಮಂಗಳವಾರ ಸಂಜೆ ನಡೆಯಿತು. ಅವರ ಇಚ್ಚೆಯಂತೆಯೇ, ದ್ರಾವಿಡ ಚಳುವಳಿಯ ಹರಿಕಾರ ಅಣ್ಣಾ ಮತ್ತು ಗುರು ಎಂಜಿಆರ್ ಸಮಾಧಿಗಳ ಪಕ್ಕದಲ್ಲಿಯೇ ಜಯಲಲಿತಾ ಕೂಡ ಚಿರನಿದ್ರೆಗೆ ಜಾರಿದರು.

ಅದಕ್ಕೂ ಮುನ್ನ ಲಕ್ಷಾಂತರ ಸಂಖ್ಯೆಯಲ್ಲಿ ನೆರೆದ ಅಭಿಮಾನಿಗಳು ರಾಜಾಜಿ ಹಾಲಿನಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಪಡೆದರು. ಸಾಮಾನ್ಯ ಜನರ ಪಾಲಿಗೆ ಆರಾಧ್ಯ ದೈವವೇ ಆಗಿ ಹೋಗಿದ್ದ ಸೆಲ್ವಿ, ಇನ್ನಿಲ್ಲ ಎಂಬ ಕಾರಣಕ್ಕೆ ಕಂಬನಿ ಮಿಡಿದರು.

ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ಮತ್ತು ಚಿತ್ರರಂಗದ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿಯೂ ಜಯಲಲಿತಾ ಅವರ ಸಾವಿಗೆ ಸಂತಾಪವನ್ನು ವ್ಯಕ್ತಪಡಿಸಲಾಯಿತು.

ಭವಿಷ್ಯದ ಸಂಕೇತ:

ಜಯಲಲಿತಾ ಅಂತಿಮ ದರ್ಶನಕ್ಕೆ ಅಣಿಮಾಡಿದ್ದ ರಾಜಾಜಿ ಹಾಲಿನಲ್ಲಿ ಪಾರ್ಥಿವ ಶರೀರದ ಪಕ್ಕದಲ್ಲಿಯೇ ನಿಂತ ದುಃಖತಪ್ತೆ ಶಶಿಕಲಾ ನಟರಾಜನ್.

ಜಯಲಲಿತಾ ಅಂತಿಮ ದರ್ಶನಕ್ಕೆ ಅಣಿಮಾಡಿದ್ದ ರಾಜಾಜಿ ಹಾಲಿನಲ್ಲಿ ಪಾರ್ಥಿವ ಶರೀರದ ಪಕ್ಕದಲ್ಲಿಯೇ ನಿಂತ ದುಃಖತಪ್ತೆ ಶಶಿಕಲಾ ನಟರಾಜನ್.

ಜಯಲಲಿತಾ ನಂತರ ಎಐಎಡಿಎಂಕೆ ಹಾಗೂ ತಮಿಳುನಾಡಿನ ರಾಜಕೀಯದಲ್ಲಿ ಬರಬಹುದಾದ ಬದಲಾವಣೆಗಳಿಗೆ ಸಾಂಕೇತವಾಗಿತ್ತು ‘ಅಮ್ಮ’ ಅಂತಿಮ ಯಾತ್ರೆ. ರಾಜಾಜಿ ಹಾಲ್ನಿಂದ ಮರೀನಾ ಬೀಚ್ವರೆಗೆ ಸುಮಾರು ಒಂದು ಗಂಟೆ ಅಂತರದಲ್ಲಿ ಸಾಗಿ ಬಂದ ಮರವಣಿಗೆಯ ಸಿದ್ಧತೆಗಳೇ ಹಲವು ಆಯಾಮಗಳ ಒಳನೋಟಗಳನ್ನು ನೀಡುತ್ತಿತ್ತು.

ಮೆರವಣಿಗೆಯನ್ನು ಎಐಎಡಿಎಂಕೆ ಶಾಸಕರು ಹಾಗೂ ಸಚಿವರು ಮುನ್ನಡೆಸಿದರು. ಅವರ ಜತೆ ಸೋಮವಾರ ಮಧ್ಯರಾತ್ರಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿ ಓ. ಪನೀರ್ ಸೆಲ್ವಂ ಇದ್ದರು. ಅವರ ನಂತರ ಪೊಲೀಸರು ಸಾಗಿ ಬಂದರು. ಮಿಲಿಟರಿ ಟ್ರಕ್ನಲ್ಲಿ ಜಯಲಲಿತಾ ಪಾರ್ಥಿವ ಶರೀರವನ್ನು ತರಲಾಯಿತು.

ಜಯಲಲಿತಾರನ್ನು ನೆರಳಿನಂತೆ ದಶಕಗಳ ಕಾಲ ಹಿಂಬಾಲಿಸಿಕೊಂಡು ಬಂದ ಆಪ್ತೆ ಶಶಿಕಲಾ, ರಾಜಾಜಿ ಹಾಲ್ನಿಂದ ಹಿಡಿದು ಮರೀನಾ ಬೀಚ್ವರೆಗೂ ಇನ್ನು ಬಾರದ ಲೋಕಕ್ಕೆ ಹೊರಟಿರುವ ಸ್ನೇಹಿತೆಯನ್ನು ಹಿಂಬಾಲಿಸಿದರು. ಮುಂದಿನ ದಿನಗಳಲ್ಲಿ ಅವರು ಎಐಎಡಿಎಂಕೆ ಪಕ್ಷದ ಉನ್ನತ ಹುದ್ದೆಯನ್ನು ಅಲಂಕರಿಸಲಿದ್ದಾರೆ ಎಂಬ ಸುದ್ದಿ ಇದೆ. ಹೀಗಾಗಿ, ಜಯಲಲಿತಾ ಪಾರ್ಥಿವ ಶರೀರದ ಅಂತಿಮ ದರ್ಶನ ಮತ್ತು ಅಂತಿಮ ಯಾತ್ರೆಯಲ್ಲಿ ಶಶಿಕಲಾ ಮತ್ತು ಅವರ ಕುಟುಂಬ ವಹಿಸಿದ ಪಾತ್ರ ಗಮನ ಸೆಳೆಯುವಂತಿತ್ತು. ಪಾರ್ಥಿಕ ಶರೀರದ ಅಂತಿಮ ವಿಧಿವಿಧಾನಗಳನ್ನು ಅವರೇ ನಿರ್ವಹಿಸಿದರು.

ಮಹಿಳೆಯರ ಕಣ್ಣೀರು:

ಜಯಲಲಿತಾ ಅಭಿಮಾನಿ.

ಜಯಲಲಿತಾ ಅಭಿಮಾನಿ.

ಮಂಗಳವಾರ ಬೆಳಗ್ಗೆಯಿಂದ ಜಯಲಲಿತಾ ಪಾರ್ಥಿವ ಶರೀರದ ಅಂತಿಮ ದರ್ಶನದ ಪಡೆದವರಲ್ಲಿ ಮಹಿಳೆಯರೇ ಇದ್ದದ್ದು ವಿಶೇಷವಾಗಿತ್ತು. ಅವರ ಕಣ್ಣಾಲಿಗಳು ತುಂಬಿ ಬರುತ್ತಿದ್ದದ್ದು ಗಮನ ಸೆಳೆಯುತ್ತಿದ್ದವು. ಅಂತಿಮ ಯಾತ್ರೆಗೆ ಸೇರಿದ ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳಲ್ಲಿಯೂ ಮಹಿಳೆಯರ ಪಾಲು ದೊಡ್ಡದಿತ್ತು.

ಜಯಲಲಿತಾ ತಮ್ಮ ರಾಜಕೀಯ ಜೀವನದ ಮೊದಲ ಭಾಷಣವನ್ನು ಮಹಿಳೆಯರ ಪರಿಸ್ಥಿತಿಗಳ ಬಗ್ಗೆಯೇ ಮಾಡಿದ್ದರು. ನಂತರದ ದಿನಗಳಲ್ಲಿ ಜಯಲಲಿತಾ ಹಲವು ಯೋಜನೆಗಳನ್ನು ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡೇ ಜಾರಿಗೆ ತಂದಿದ್ದರು.

ಹೆಣ್ಣುಮಕ್ಕಳಿಗೆ ಸೈಕಲ್ ನೀಡುವ ಯೋಜನೆಯಿಂದ ಶುರುವಾಗಿ ಮನೆಮನೆಗೆ ಗ್ರೈಂಡರ್ ನೀಡುವವರೆಗೂ ಮಹಿಳೆಯರ ಮನೆಯ ಸಂಕಷ್ಟಗಳ ಕುರಿತು ವಾಸ್ತವವಾದ ಸುಧಾರಣಾ ಕ್ರಮಗಳನ್ನು ಅವರು ಗಮನದಲ್ಲಿಟ್ಟುಕೊಂಡಂತೆ ಕಾಣಿಸುತ್ತದೆ. ಅದು ಅವರ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ ಲಕ್ಷಾಂತರ ಮಹಿಳೆಯರಲ್ಲಿನ ಮಡುವುಗಟ್ಟಿದ ದುಃಖ ಸಾರಿ ಹೇಳುತ್ತಿತ್ತು.

ಸಂಘರ್ಷದಲ್ಲಿಯೇ ಹುಟ್ಟುತ್ತಾರೆ:

ಎಐಎಡಿಎಂಕೆ ಪಕ್ಷದ ಎರಡನೇ ಹಂತದ ನಾಯಕತ್ವದ ವಿಚಾರಕ್ಕೆ ಬಂದರೆ, ಜಯಲಲಿತಾ ಬದುಕಿರುವಾಗಲೂ ಆ ಕುರಿತು ಹೆಚ್ಚು ಆಸಕ್ತಿ ವಹಿಸಿರಲಿಲ್ಲ. ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಕುರಿತು ಅವರನ್ನು ಪ್ರಶ್ನಿಸಿದಾಗ, “ಸಂಘರ್ಷ ನಡೆದರೆ ನಾಯಕರು ತಾನಾಗೇ ಹುಟ್ಟಿ ಬರುತ್ತಾರೆ,” ಎಂದಷ್ಟೆ ಹೇಳಿದ್ದರು.

ಅದು ಅವರು ಸಾಗಿ ಬಂದ ಹಾದಿಯ ಪಾಠ ಕೂಡ. ತಮಿಳುನಾಡಿನ ಸಾಮಾನ್ಯ ಜನರನ್ನು, ಅದೇ ವೇಳೆ ಪಕ್ಷದ ನಾಯಕತ್ವವನ್ನೂ ತಮ್ಮ ಇಶಾರೆಯ ಮೇರೆಗೆ ಸಂಭಾಳಿಸಿಕೊಂಡು ಬಂದ ಜಯಾ ಇನ್ನಿಲ್ಲ. ಅವರಿಲ್ಲದ ತಮಿಳುನಾಡು ರಾಜಕೀಯ ಮುಂದಿನ ದಿನಗಳಲ್ಲಿ ಏನಾಗಲಿದೆ ಎಂಬುದನ್ನು ಭವಿಷ್ಯ ಹೇಳಲಿದೆ.

Top