An unconventional News Portal.

‘ಜಪಾನ್ & ಕ್ರೈಮ್’: ಇದು ಸುದ್ದಿಯಾದವರ ಪಾಲಿಗೆ ಸುದ್ದಿಯಾಗದ ಸುದ್ದಿ!

‘ಜಪಾನ್ & ಕ್ರೈಮ್’: ಇದು ಸುದ್ದಿಯಾದವರ ಪಾಲಿಗೆ ಸುದ್ದಿಯಾಗದ ಸುದ್ದಿ!

ಮಂಗಳವಾರ ಜಪಾನಿನಲ್ಲಿ ಚಾಕು ಹಾಕಿ 19 ಜನರನ್ನು ಕೊಲೆ ಮಾಡಿದ ಸುದ್ದಿ ಸರಿಸುಮಾರು ಜಗತ್ತಿನ ಎಲ್ಲಾ ಮಾಧ್ಯಮಗಳಲ್ಲೂ ಮುಖ್ಯ ಸುದ್ದಿಯಾಗಿ ಜಾಗ ಆಕ್ರಮಿಸಿಕೊಂಡಿತ್ತು. ವಿದೇಶಗಳಿಗೆಲ್ಲಾ ಸುದ್ದಿ ನೀಡಿದ ಜಪಾನಿಗೆ ಮಾತ್ರ ಅದು ಮುಖ್ಯ ಸುದ್ದಿಯಾಗಿರಲೇ ಇಲ್ಲ.

ವಿಶ್ವದ ಮುಂಚೂಣಿ ಆರ್ಥಿಕ ಶಕ್ತಿ; ವಿಶಿಷ್ಟ ಸಂಸ್ಕೃತಿ, ಶಿಸ್ತು ಬದ್ಧ ಜೀವನ ಶೈಲಿ ಹೊಂದಿರುವ ಜಪಾನಿನ ಅಪರಾಧ ಲೋಕವೇ ಭಿನ್ನ. ಇಲ್ಲಿನ ಮಾಧ್ಯಮಗಳು, ಜನರು, ಇವರೆಲ್ಲರಿಗೂ ಅಪರಾಧಗಳೆಂದರೆ ಅಸಡ್ಡೆ. ಜಪಾನಿನ ವಿಶಿಷ್ಟ ಅಪರಾಧ ಲೋಕದ ಕಥೆಯನ್ನು ‘ಸಮಾಚಾರ’ ವಿಭಿನ್ನವಾಗಿ ನಿಮ್ಮ ಮುಂದಿಡುತ್ತಿದೆ.

ಮಂಗಳವಾರ ಮುಂಜಾನೆ ಜಾಪಾನಿನಲ್ಲಿ ವ್ಯಕ್ತಿಯೊಬ್ಬ ಚಾಕು ಹಿಡಿದುಕೊಂಡು ವಿಕಲಚೇತನರ ಆಶ್ರಮದ ಮೇಲೆ ದಾಳಿ ಮಾಡಿ 19 ಜನರ ಸಾವಿಗೆ ಕಾರಣನಾದ. ಇದರಲ್ಲಿ 20 ಜನ ಗಾಯಗೊಂಡರು.

ಜಪಾನಿನ ಕನಗವ ಪ್ರದೇಶದ ಸಾಗಮಿಹರದಲ್ಲಿ ‘ಸುಕುಯಿ ಯಮುಯುರಿ ಎನ್ ಫೆಸಿಲಿಟಿ’ ಹೆಸರಿನ ವಿಕಲಚೇತನ ಆಶ್ರಮವಿದೆ. ಸಿಬ್ಬಂದಿ ಸೇರಿ 160 ಜನರು ಇರಬಹುದಾದ ಆಶ್ರಮವಿದು. ರಾತ್ರಿ ಹೊತ್ತು ಈ ಆಶ್ರಮದ ಬಾಗಿಲು ಭದ್ರ ಮಾಡಿ ಕಾವಲಿಗೆ ಜನ ನಿಂತಿರುತ್ತಾರೆ. ಆದರೆ ಮಂಗಳವಾರ ಮಧ್ಯರಾತ್ರಿ 2.30ರ ಸುಮಾರಿಗೆ, ಸಟಾಶಿ ಉಮಾಟ್ಸು ಎಂಬ 26 ವರ್ಷ ವಯಸ್ಸಿನ ಇಲ್ಲಿನ ಮಾಜಿ ನೌಕರನೊಬ್ಬ, ಪಕ್ಕದ ಕಟ್ಟಡ ಬಳಸಿ, ಕಿಟಕಿ ಒಡೆದು ಒಳನುಗ್ಗಿದ್ದಾನೆ. ಹೀಗೆ ಬಂದವನು 19 ಜನರನ್ನು ಕೊಂದು, 20 ಜನರನ್ನು ಗಾಯಗೊಳಿಸಿದ್ದಾನೆ. ಈತ 2012ರಲ್ಲಿ ವೈಯಕ್ತಿಕ ಕಾರಣಗಳಿಗಾಗಿ ಈ ಆಶ್ರಮದಿಂದ ಕೆಲಸ ತೊರೆದಿದ್ದ ಎಂದು ತಿಳಿದು ಬಂದಿದೆ.

ಅಪರಾಧಗಳಿಂದ ಜಪಾನ್ ಮಾರು ದೂರ

ಈ ಘಟನೆ ಬೆನ್ನಿಗೆ ‘ಅಲ್ ಜಜೀರಾ’ಗೆ ಹೇಳಿಕೆ ನೀಡಿರುವ ಜಪಾನ್ ಪತ್ರಕರ್ತ ಮಿಖಾಯೆಲ್ ಪೆನ್ನ್ “ಇಷ್ಟು ದೊಡ್ಡ ಮಟ್ಟದ ಅಪರಾಧಗಳು ತೀರಾ ಅಪರೂಪ . ಇದು ತುಂಬಾ ಗಂಭೀರವಾದುದು ಮತ್ತು ದೊಡ್ಡ ಮಟ್ಟಕ್ಕೆ ನಡೆದಿದೆ,” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ವಿಶ್ವದ ಮುಂದುವರಿದ ದೇಶಗಳಲ್ಲಿ ಒಂದಾಗಿರುವ ಜಪಾನಿನಲ್ಲಿ ಅಪರಾಧ ಚಟುವಟಿಕೆಗಳು ತೀರಾ ಕಡಿಮೆ. ಇದಕ್ಕೆ ಇಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆಯೇ ಸಾಕ್ಷಿ. 13 ಕೋಟಿ ಜನಸಂಖ್ಯೆ ಇರುವ ಜಪಾನಿನಲ್ಲಿ, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದರಿಂದ ಹಿಡಿದು ಕೊಲೆವರೆಗೆ 2012ರಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ ಕೇವಲ 13 ಲಕ್ಷ. ಇಲ್ಲಿ ಕಳೆದ 5 ವರ್ಷಗಳ ಅಪರಾಧ ಚಟುವಟಿಕೆಗಳು ಅರ್ಧಕರ್ಧ ಇಳಿಕೆಯಾಗಿವೆ. ಅಂದರೆ ಜನಸಂಖ್ಯೆಯ ಶೇ. 1ರಷ್ಟು.

ಇಲ್ಲಿನ ಹೆಚ್ಚಿನ ಅಪರಾಧಗಳೆಂದರೆ ಕಳ್ಳತನ ಮತ್ತು ದರೋಡೆ. ಹೀಗೆ ದಾಖಲಾದ ಪ್ರಕರಣಗಳಲ್ಲಿ ಶೇ. 75 ರಷ್ಟು ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ. ಇಲ್ಲಿ ಅಪರಾಧಗಳಿಂದ ಸಾಯುವವರ ಸಂಖ್ಯೆ ಲಕ್ಷಕ್ಕೆ ಒಬ್ಬರಿಗಿಂತಲೂ ಕಡಿಮೆ ಇದೆ.

ಕಠಿಣ ಬಂದೂಕು ನೀತಿಯನ್ನು ಹೊಂದಿರುವ ದೇಶಗಳಲ್ಲಿ ಜಪಾನ್ ಕೂಡಾ ಒಂದು. ಇಲ್ಲಿ ಬೇಟೆಗಾಗಿ ಬಂದೂಕುಗಳನ್ನ ಇಟ್ಟುಕೊಳ್ಳಬಹುದಾದರೂ ಅದಕ್ಕೂ ಪೊಲೀಸ್ ಠಾಣೆಯಿಂದ ಪರವಾನಿಗೆ ಪಡೆದುಕೊಳ್ಳಬೇಕು. ಅಷ್ಟೇಕೆ ಕತ್ತಿ(ಲಾಂಗ್) ಇಟ್ಟುಕೊಳ್ಳಲೂ ಲೈಸೆನ್ಸ್ ಪಡೆಯುವುದು ಕಡ್ಡಾಯ. ಇನ್ನು ಮಾದಕ ವಸ್ತುಗಳಿಗೆ ಸಂಬಂಧಿಸಿದ ಪ್ರಕರಣಗಳೂ ಇಲ್ಲಿ ತೀರಾ ವಿರಳ.

ಇಲ್ಲಿ ಅಪರಾಧಗಳಲ್ಲಿ ಜಪಾನಿಗರಿಗಿಂತ ವಿದೇಶಿಯರೇ ಜಾಸ್ತಿ ತೊಡಗಿಸಿಕೊಂಡಿದ್ದಾರೆ. ಇತ್ತೀಚಿಗಿನ ವರ್ಷಗಳಲ್ಲಿ ಆನ್ಲೈನ್ ವಂಚನೆಗಳಂತ ವೈಟ್ ಕಾಲರ್ ಕ್ರೈಂಗಳು ಮಾತ್ರ ಹೆಚ್ಚಾಗುತ್ತಿವೆ.

ಇಡೀ ಜಪಾನಿನಲ್ಲಿ ಹತ್ತಕ್ಕಿಂತ ಹೆಚ್ಚಿನ ಜನರು ಸಾವಿಗೀಡಾದ ಪ್ರಕರಣಗಳು ನಡೆಯದೇ 31 ವರ್ಷಗಳೇ ಕಳಿದಿವೆ. 1995 ರಲ್ಲಿ ಜಪಾನ್ ಮೆಟ್ರೋದಲ್ಲಿ ದಾಳಿ ನಡೆದು 11 ಜನ ಸಾವನ್ನಪ್ಪಿದ್ದೇ ಕೊನೆ.

ಅಲ್ಲಿನ ಸಾಮಾಜದಲ್ಲಿ ಅಪರಾಧ ಚಟುವಟಿಕೆಗಳು ಸ್ಥಾನ ಪಡೆದಿಲ್ಲ ಎಂಬುದಕ್ಕೆ ಮಾಧ್ಯಮಗಳೂ ಸಾಕ್ಷಿಯಾಗಿ ನಿಲ್ಲುತ್ತವೆ. “ಜಪಾನಿನಲ್ಲಿ ಅಪರಾಧ ಸುದ್ದಿಗಳು ಅಲ್ಲಿನ ಪತ್ರಿಕೆಗಳ ಮೂರು ನಾಲ್ಕನೇ ಪುಟದಲ್ಲಿ ಸಣ್ಣದಾಗಿ ಮುದ್ರಿತವಾಗಿರುತ್ತವೆ,” ಎನ್ನುವುದನ್ನು ಜಪಾನ್ ಪ್ರವಾಸ ಮುಗಿಸಿ ಬಂದ ಒಬ್ಬರು ಹೇಳುತ್ತಾರೆ.

ರಾಷ್ಟ್ರೀಯ ಸುದ್ದಿಯಡಿಯಲ್ಲಿ ಸಣ್ಣದಾಗಿ ವರದಿ ಮಾಡಿದ 'ದಿ ಜಪಾನ್ ಟೈಮ್ಸ್'

ರಾಷ್ಟ್ರೀಯ ಸುದ್ದಿಯಡಿಯಲ್ಲಿ ಸಣ್ಣದಾಗಿ ವರದಿ ಮಾಡಿದ ‘ದಿ ಜಪಾನ್ ಟೈಮ್ಸ್’

ಇದಕ್ಕೆ ಪುರಾವೆ ಎಂಬಂತೆ ಜಗತ್ತಿನ ಎಲ್ಲಾ ಮಾಧ್ಯಮಗಳಲ್ಲಿ ಮಂಗಳವಾರದ ಚಾಕು ದಾಳಿ ಪ್ರಾಮುಖ್ಯತೆ ಪಡೆದುಕೊಂಡಿದ್ದರೆ, ಜಪಾನಿನ ಪತ್ರಿಕೆ, ವೆಬ್ ಸೈಟ್ಗಳಿಗೆ ಮಾತ್ರ ಅದು ಮುಖ್ಯ ಸುದ್ದಿಯಾಗಲೇ ಇಲ್ಲ. ಒಂದು ಕೋಟಿ ಪ್ರಸಾರ ಹೊಂದಿರುವ ಜಪಾನಿನ ನಂಬರ್ ವನ್ ಪತ್ರಿಕೆ ‘ದಿ ಯಮುಯುರಿ ಶಿಂಬುನ್’ ಒಡೆತನಕ್ಕೆ ಸೇರಿದ ‘ದಿ ಜಪಾನ್ ನ್ಯೂಸ್’ ವೆಬ್ ಪೋರ್ಟಲ್ ಕೇವಲ 150 ಶಬ್ದಗಳಲ್ಲಿ ಇಡೀ ಘಟನೆ ಬಗ್ಗೆ ವರದಿ ಮಾಡಿ ಮುಗಿಸಿತ್ತು. ಅಲ್ಲಿ ರಕ್ತ, ಚೀರಾಟ, ನರಳಾಟಗಳ ಯಾವ ಸುಳಿವೂ ಇರಲಿಲ್ಲ. ಆಕಾಶದಿಂದ ತೆಗೆದ ಸ್ಥಳದ ಚಿತ್ರ ಮಾತ್ರ ಇತ್ತು. ಜಪಾನಿನ ಎರಡನೇ ಪ್ರಮುಖ ಪತ್ರಿಕೆ ‘ದಿ ಆಶಿ ಶೀಂಬುನ್’ ವೆಬ್ ಸೈಟ್ ಘಟನೆಯನ್ನು ಲೀಡ್ ಮಾಡಿತ್ತದರೂ ಹೆಚ್ಚಿನ ವಿವರಗಳಿಗೇನೂ ಹೊರಟು ಹೋಗಿರಲಿಲ್ಲ. ಇನ್ನು ‘ದಿ ಜಪಾನ್ ಟೈಮ್ಸ್’ ಅಂತೂ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ‘ರಾಷ್ಟ್ರೀಯ’ ವಿಚಾರದಡಿಯಲ್ಲಿ ಸಣ್ಣದಾಗಿ ಚಾಕು ದಾಳಿಯ ಸುದ್ದಿ ನೀಡಿತ್ತು.

ನಮ್ಮಲ್ಲಿ ಇಡೀ ಅರ್ಧ ಗಂಟೆ ಬುಲೆಟಿನ್ ತುಂಬಾ ಅಪರಾಧ ಸುದ್ದಿಗಳನ್ನೇ ತುಂಬುವ, ಮುಖಪುಟದಲ್ಲೆಲ್ಲಾ ರಕ್ತದ ಕಲೆ ಚೆಲ್ಲುವ ಪತ್ರಿಕೆಗಳ ನಡುವೆ, ಜಪಾನ್ ಮಾಧ್ಯಮಗಳು ವಿಭಿನ್ನವಾಗಿ ಕಾಣಿಸುತ್ತವೆ.

ಚಿತ್ರ ಕೃಪೆ: ಹಫಿಂಗ್ಟನ್ ಪೋಸ್ಟ್

ENTER YOUR E-MAIL

Name
Email *
September 2017
M T W T F S S
« Aug    
 123
45678910
11121314151617
18192021222324
252627282930  

Top