An unconventional News Portal.

ಹಿತ್ತಲಲ್ಲಿ ಬೆಳೆಯುವ ಹಲಸಿನ ಹಣ್ಣನ್ನು ಈ ಕಾರಣಗಳಿಗಾದರೂ ಮಿಸ್ ಮಾಡ್ಕೊಬೇಡಿ!

ಹಿತ್ತಲಲ್ಲಿ ಬೆಳೆಯುವ ಹಲಸಿನ ಹಣ್ಣನ್ನು ಈ ಕಾರಣಗಳಿಗಾದರೂ ಮಿಸ್ ಮಾಡ್ಕೊಬೇಡಿ!

ರಾಜ್ಯದಲ್ಲಿ ಬಿರುಬಿಸಿಲಿನ ಬರದ ಛಾಯೆ ನಿಧಾನಕ್ಕೆ ಕರಗುತ್ತಿದೆ. ಬಿದ್ದ ಮಳೆ ಹನಿಗಳು ಧರೆಯನ್ನು ತಂಪಾಗಿಸುವ ಪ್ರಯತ್ನದಲ್ಲಿವೆ. ಪ್ರಕೃತಿಯಲ್ಲಿ ನವ ಚೈತನ್ಯ ಗೋಚರವಾಗುತ್ತಿದೆ. ಚಿಗುರೆಲೆಗಳ ಹಸಿರು ಹೂವುಗಳ ಸೊಬಗು ಪ್ರಕೃತಿಯ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ. ಪ್ರಕೃತಿಯ  ಈ ಚೆಲುವಿಗೆ ಮಾದಕ ಕಳೆಕೊಟ್ಟಿದ್ದು ಮಾತ್ರ ಮಾವು ಹಾಗೂ ಹಲಸಿನ ಹಣ್ಣುಗಳು.

ಹಣ್ಣುಗಳ ರಾಜ ಎಂಬ  ಹೆಗ್ಗಳಿಕೆ ಮಾವಿನ ಹಣ್ಣಿನದ್ದು. ಆದರೆ ಬಡವರ ಪಾಲಿಗೆ ಪೋಷಕಾಂಶಗಳ ಕಣಜವಾಗಿರುವುದು ಮಾತ್ರ ಹಲಸಿನ ಹಣ್ಣು. ಮಳೆಗಾಲದಲ್ಲಿ ಹೇರಳವಾಗಿ ಸಿಗುವ ಈ ಹಲಸು ಹಸಿದವರ ಪಾಲಿಗೆ ನಿಜವಾದ ಮೃಷ್ಟಾನ್ನ. ಕೇವಲ ಹಲಸಿನ ಹಣ್ಣನ್ನು ತಿಂದು ತಮ್ಮ ಹಸಿವನ್ನು ನೀಗಿಸಿಕೊಂಡವರ ಕತೆಗಳು ಮಲೆನಾಡು, ಕರಾವಳಿ ಹಾಗೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಸಿಗುತ್ತವೆ. ಅದರಲ್ಲೂ ಹಿರಿಯ ತಲೆಮಾರಿನ ಮಾತುಗಳಿಗೆ ಕಿವಿಯಾದರೆ, ಈ ಹಲಸಿನ ಹಣ್ಣಿನ ಕುರಿತು ಆಪ್ತತೆಯೊಂದು ಬೆಳೆಯುತ್ತದೆ.

ಭೂಮಿಯ ಮೇಲಿನ ಅತ್ಯಂತ ದೊಡ್ಡ ಹಣ್ಣು ಎಂಬ ಹೆಗ್ಗಳಿಕೆ ಇದರದ್ದು. ದಕ್ಷಿಣ ಏಷಿಯಾದಲ್ಲಿ ಮೂವತ್ತೈದು ಕೆಜಿ ಯಷ್ಟು ಬೃಹತ್ ಗಾತ್ರದ ಹಲಸಿನ ಹಣ್ಣುಗಳು ಬೆಳೆಯುತ್ತವೆ. ಕಬ್ಬಿನ ಸಿಹಿ, ಆಲೂಗೆಡ್ಡೆಯ ಸವಿಯನ್ನು ಒಳಗೊಂಡ ಹಲಸಿನ ಹಣ್ಣು ನಾಲಗೆಗೆ ಎಷ್ಟು ರಚಿಕರವೋ, ಪೋಷಕಾಂಶಗಳ ದೃಷ್ಟಿಯಿಂದ ಆರೋಗ್ಯಕ್ಕೂ ಅಷ್ಟೇ ಉತ್ತಮ. ನಾರಿನ ಅಂಶ, ಪ್ರೊಟೀನ್, ಕ್ಯಾಲ್ಸಿಯಂ, ಮತ್ತು ಕಬ್ಬಿಣದ ಅಂಶಗಳು ಈ ಹಣ್ಣಿನಲ್ಲಿ ಹೇರಳವಾಗಿವೆ. ಹೀಗಾಗಿಯೇ ‘ಹಸಿದಾಗ ಹಲಸಿನ ಹಣ್ಣು’ ಎಂಬ ಗಾದೆ ಮಾತು ಹುಟ್ಟಿಕೊಂಡಿರಬಹುದು.

Artocarpus heterophyllus - Jackfruit 01

ಹಲಸಿನ ಹಣ್ಣಿನಲ್ಲಿ ಅನೇಕ ರೀತಿಯ ಆರೋಗ್ಯಕರ ಗುಣಗಳಿವೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ. ಮೂಳೆ ಸವೆತವನ್ನು ತಡೆಗಟ್ಟುತ್ತದೆ. ರಕ್ತದೊತ್ತಡ ಕೂಡ ಹಲಸಿನ ಹಣ್ಣಿನ ಸೇವನೆಯಿಂದ ನಿಯಂತ್ರಣದಲ್ಲಿರುತ್ತದೆ. ಜೀರ್ಣ ಶಕ್ತಿಯೂ ಉತ್ತಮವಾಗಿರುತ್ತದೆ. ರಕ್ತ ಹೀನತೆಗೂ ಹಲಸು ರಾಮಬಾಣ. ಇನ್ನು ಹಲಸಿನ ಹಣ್ಣು  ತಿನ್ನುವುದರಿಂದ ಯಾವುದೇ ಕಾಯಿಲೆಗಳು ಬರವುದಿಲ್ಲ. ಆದರೆ, ಜ್ವರ ಬಂದಾಗ ಮಾತ್ರ ಹಲಸಿನಹಣ್ಣು ಒಳ್ಳೆಯದಲ್ಲ.

ಇಷ್ಟೊಂದು ಪೊಷಕಾಂಶಯುಕ್ತವಾದ ಈ ಹಣ್ಣು ಇತ್ತೀಚಿನ ವರ್ಷಗಳಲ್ಲಿ ಬೇಡಿಕೆಯನ್ನು ಕಳೆದುಕೊಳ್ಳುತ್ತಿದೆ. ಮಲೆನಾಡಿನಲ್ಲಿ ಸ್ವಾಭಾವಿಕವಾಗಿ ಹೇರಳವಾಗಿ ಈ ಹಣ್ಣುಗಳು ಬೆಳೆಯುತ್ತದೆ. ಆದರೆ ಇಷ್ಟೊಂದು ಪೋಷಕಾಂಶವನ್ನು ಹೊಂದಿರುವ ಹಣ್ಣು ತಿನ್ನುವವರಿಲ್ಲದೆ ಮರದಲ್ಲಿಯೇ ಕೊಳೆತು ಹೋಗುತ್ತಿವೆ.

ವಿಶ್ವಾದ್ಯಂತ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಈ ಸಮಯದಲ್ಲಿ ಏಷಿಯಾದ ಕಾಡುಗಳಲ್ಲಿ ನಿರುಪಯುಕ್ತವಾಗಿ ಹೋಗುತ್ತಿರುವ ಹಲಸಿನ ಹಣ್ಣುಗಳನ್ನು ಪೋಷಕಾಂಶಗಳ ಹೊಸ ಮೂಲವಾಗಿ ಬಳಸಿಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯಗಳು ಚರ್ಚೆಯಾಗುತ್ತಿವೆ. ಅದೇನೆ ಇರಲಿ, ನಿಮ್ಮ ಹಿತ್ತಲಲ್ಲಿ ಬೆಳೆಯುವ ಹಲಸಿನ ಹಣ್ಣನ್ನು ಆರೋಗ್ಯ ಕಾರಣಕ್ಕಾದರೂ ಮಿಸ್ ಮಾಡ್ಕೋಬೇಡಿ.

Top