An unconventional News Portal.

ಆನ್ಲೈನ್ ಶಾಪಿಂಗ್: 470 ಕೋಟಿಗೆ ಫ್ಲಿಪ್ ಕಾರ್ಟ್ ಪಾಲಾದ ಜಬಾಂಗ್

ಆನ್ಲೈನ್ ಶಾಪಿಂಗ್: 470 ಕೋಟಿಗೆ ಫ್ಲಿಪ್ ಕಾರ್ಟ್ ಪಾಲಾದ ಜಬಾಂಗ್

ಆನ್ಲೈನ್ ಶಾಪಿಂಗ್ ತಾಣ ‘ಫ್ಲಿಪ್ ಕಾರ್ಟ್’ ಒಡೆತನಕ್ಕೆ ಸೇರಿದ ‘ಮಿಂತ್ರಾ ಡಾಟ್ ಕಾಂ’, ತಾನು ‘ಜಬಾಂಗ್ ಡಾಟ್ ಕಾಂ’ ಖರೀದಿಸಿರುವುದಾಗಿ ಹೇಳಿಕೊಂಡಿದೆ. ಸುಮಾರು 470 ಕೋಟಿಗೆ ಆನ್ಲೈನ್ ಫ್ಯಾಶನ್ ಶಾಪಿಂಗ್ ತಾಣ ಜಬಾಂಗ್ ಮಿಂತ್ರಾ ತೆಕ್ಕೆ ಸೇರಲಿದೆ.myntra-

ಜಾಬಾಂಗ್ ಕಳೆದ ಆರ್ಥಿಕ ವರ್ಷದಲ್ಲಿ ಭಾರೀ ನಷ್ಟಕ್ಕೆ ಗುರಿಯಾಗಿತ್ತು. ಆಡಳಿತ ಮಂಡಳಿಯಲ್ಲಿ ಆದ ಬದಲಾವಣೆಗಳು ಮತ್ತು ಮಾರಾಟದಲ್ಲಾದ ಕುಸಿತ ಈ ನಷ್ಟಕ್ಕೆ ಕಾರಣವಾಗಿತ್ತು. ಇದರಿಂದ ಎಚ್ಚೆತ್ತುಕೊಳ್ಳುವ ಸತತ ಪ್ರಯತ್ನಗಳು ವಿಫಲವಾಗಿದ್ದವು. ಇದೀಗ ನಷ್ಟಕ್ಕೆ ಗುರಿಯಾಗಿದ್ದ ಕಂಪೆನಿಯನ್ನು ಸರಿಯಾದ ಸಮಯ ನೋಡಿ ಫ್ಲಿಪ್ ಕಾರ್ಟ್ ಕೈವಶ ಮಾಡಿಕೊಂಡಿದೆ.

ಈ ಖರೀದಿಯೊಂದಿಗೆ ಆನ್ಲೈನ್ ಮಾರುಕಟ್ಟೆ ನಿಧಾನವಾಗಿ ಏಕಸ್ವಾಮ್ಯ ಪಡೆದುಕೊಳ್ಳುತ್ತಿದ್ದು, ದೇಶದ ಆನ್ಲೈನ್ ಶಾಪಿಂಗ್ ವ್ಯವಹಾರವನ್ನು ಅಮೆಜಾನ್ ಮತ್ತು ಫ್ಲಿಪ್ ಕಾರ್ಡ್ ಮುನ್ನಡೆಸುತ್ತಿವೆ. ಎರಡೂ ಜಾಲತಾಣಗಳಿಗೆ ಸ್ನಾಪ್ ಡೀಲ್ ವಿಫಲ ಪೈಪೋಟಿ ನೀಡುತ್ತಿರುವುದನ್ನು ಹೊರತು ಪಡಿಸಿದರೆ ಮತ್ಯಾರಿಗೂ ಹತ್ತಿರವೂ ಸುಳಿಯಲು ಸಾಧ್ಯವಾಗುತ್ತಿಲ್ಲ.

ಈಗಾಗಲೇ ಅಮೆಜಾನ್ ಈ ವರ್ಷ ಭಾರತದಲ್ಲಿ ಸುಮಾರು 20 ಸಾವಿರ ಕೋಟಿ ಹೂಡಿಕೆ ಮಾಡುವ ಘೋಷಣೆ ಮಾಡಿದ್ದು, ಒಟ್ಟು ಹೂಡಿಕೆ 34 ಸಾವಿರ ಕೋಟಿಗೆ ಏರಿಕೆಯಾಗಲಿದೆ. ಈ ಮೂಲಕ ದೈತ್ಯ ಕಂಪೆನಿಗಳಾದ ಅಮೆಜಾನ್ ಮತ್ತು ಫ್ಲಿಪ್ ಖಾರ್ಟ್ ನಡುವೆ ನಿರೀಕ್ಷಿತ ವಿಪರೀತ ಪೈಪೋಟಿ ಹುಟ್ಟಿಕೊಂಡಿದೆ.

ಫ್ಲಿಪ್ ಕಾರ್ಟಿನ ಈ ನಡೆ ಬಗ್ಗೆ ಮಾರುಕಟ್ಟೆಯಲ್ಲಿ ವಿಭಿನ್ನ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಸದ್ಯ ಭಾರತದಲ್ಲಿ ಆನ್ಲೈನ್ ಮಾರಾಟದಲ್ಲಾಗುತ್ತಿರುವ ಏರಿಕೆಯ ಹೊರತಾಗಿಯೂ ಕಳೆದ ಆರ್ಥಿಕ ವರ್ಷದಲ್ಲಿ ಫ್ಲಿಪ್ ಕಾರ್ಟ್ 2 ಸಾವಿರ ಕೋಟಿ ನಷ್ಟ ಅನುಭವಿದೆ. ಇದರ ಜೊತೆಗೆ ಭಾರತಕ್ಕೆ ಚೀನಾದ ದೈತ್ಯ ಆನ್ಲೈನ್ ಶಾಪಿಂಗ್ ತಾಣ ‘ಅಲಿಬಾಬಾ’ ಕಾಲಿಡುವ ಸಾಧ್ಯತೆಗಳಿವೆ. ಈ ಸಂದರ್ಭ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನೆಲೆಯೂರಲು ಫ್ಲಿಪ್ ಕಾರ್ಟ್ ಈ ಖರೀದಿಗೆ ಮುಂದಾಗಿದೆ ಎನ್ನಲಾಗುತ್ತಿದೆ.

ಸದ್ಯ ವಿಪರೀತ ದರ ಕಡಿತದ ಮಾರಾಟದಿಂದಾಗಿ ಆನ್ಲೈನ್ ಶಾಪಿಂಗ್ ತಾಣಗಳು ನಷ್ಟ ಅನುಭವಿಸುತ್ತಿವೆ. ಒಂದು ವೇಳೆ ಮಾರುಕಟ್ಟೆಯಲ್ಲಿ ಕೊನೆಗೆ ಎರಡೇ ಕಂಪೆನಿಗಳು ಉಳಿದುಕೊಂಡರೆ ಆಗ ಲಾಭ ಮಾಡಿಕೊಳ್ಳಬಹುದು ಎಂಬ ತಂತ್ರಕ್ಕೆ ಕಂಪೆನಿಗಳು ಮೊರೆ ಮೊರೆ ಹೋಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಅದರ ಭಾಗವಾಗಿ ಸಣ್ಣ ಆನ್ಲೈನ್ ಶಾಪಿಂಗ್ ಕಂಪನಿಗಳ ಖರೀದಿಗೆ ಒಳಗಾಗುತ್ತಿವೆ.

ಇನ್ನೊಂದು ಕಡೆ ಫ್ಲಿಪ್ ಕಾರ್ಟ್ ವೆಬ್ ತಾಣವನ್ನೇ ಖರೀದಿಸಲು ಅಮೆಜಾನ್ ಗಾಳ ಹಾಕುತ್ತಿದೆ. ಅಲಿಬಾಬ ಭಾರತಕ್ಕೆ ಬಂದಲ್ಲಿ ಅಮೆಜಾನ್ ಫ್ಲಿಪ್ ಖಾರ್ಟ್ ಖರೀದಿ ನಡೆಸಲಿದೆ ಎಂಬ ಸುದ್ದಿಗಳು ಆನ್ಲೈನ್ ಮಾರುಕಟ್ಟೆಯಲ್ಲಿ ಓಡಾಡುತ್ತಿವೆ. ಈ ಬಗ್ಗೆ ಬಿಬಿಸಿಯೂ ವರದಿ ಮಾಡಿದೆ.

“ನಾವು ಫ್ಯಾಶನ್ ಮತ್ತು ಲೈಫ್ಟೈಲ್ ನಲ್ಲಿ ನಂಬಿಕೆ ಇಟ್ಟಿದ್ದೇವೆ. ನಮ್ಮ ನಂಬಿಕೆಯನ್ನು ಮಿಂತ್ರ ಸಾಧಿಸಿ ತೋರಿಸಿದೆ. ಈ ಖರೀದಿ ಭಾರತದಲ್ಲಿ ಆನ್ಲೈನ್ ಮಾರುಕಟ್ಟೆ ವಿಸ್ತರಿಸುವ ನಮ್ಮ ಗುಂಪಿನ ಅಜೆಂಡಾದ ಒಂದು ಭಾಗ,” ಎಂದು ಫ್ಲಿಪ್ ಕಾರ್ಟ್ ಸಿಇಒ ಮತ್ತು ಸಂಸ್ಥಾಪಕ ಬಿನ್ನಿ ಬನ್ಸಾಲ್ ಹೇಳಿದ್ದಾರೆ.

ಇನ್ನು ‘ಮಿಂತ್ರ ಡಾಟ್ ಕಾಂ’ನ್ನು ಕೂಡಾ ಫ್ಲಿಪ್ ಕಾರ್ಟ್ 2014ರಲ್ಲಿ ಖರೀದಿಸಿತ್ತು. ಸದ್ಯ ಮಿಂತ್ರಾ ಜಬಾಂಗ್ ಖರೀದಿಸಿದ್ದು, 2017ರ ಜನವರಿ ಅಂತ್ಯಕ್ಕೆ ಖರೀದಿ ವ್ಯವಹಾರಗಳು ಮುಗಿಯಲಿವೆ ಎಂದು ಹೇಳಲಾಗಿದೆ.

Leave a comment

Top