An unconventional News Portal.

‘ಆದಾಯ ತೆರಿಗೆ ದಾಳಿ ಗಾಳಿ ಸುದ್ದಿ’: ವಿಶ್ವೇಶ್ವರ ಭಟ್

‘ಆದಾಯ ತೆರಿಗೆ ದಾಳಿ ಗಾಳಿ ಸುದ್ದಿ’: ವಿಶ್ವೇಶ್ವರ ಭಟ್

ಬೆಂಗಳೂರು ಮೂಲದ ಪತ್ರಕರ್ತರೊಬ್ಬರ ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ಸುದ್ದಿಗೆ ಶನಿವಾರ ಮಧ್ಯಾಹ್ನ ಆಹಾರವಾಯಿತು.

‘ವಿಶ್ವವಾಣಿ ಸಂಪಾದಕ ವಿಶ್ವೇಶ್ವರ್ ಭಟ್ ಮನೆಯ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು 19 ಕೋಟಿ ನಗದು ಮತ್ತು 119 ಕೋಟಿ ಮೌಲ್ಯದ ಆಸ್ತಿಪಾಸ್ತಿಯ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ’ ಎಂದು ವಾಟ್ಸಾಪ್ ಗ್ರೂಪುಗಳಲ್ಲಿ ಹರಿದಾಡಿತು.

ಇದೇ ಸಮಯದಲ್ಲಿ ಕನ್ನಡದ ಕೆಲವು ಸುದ್ದಿ ವಾಹಿನಿಗಳು ‘ರಾಜರಾಜೇಶ್ವರಿನಗರದ ಪತ್ರಕರ್ತರ ಮನೆ ಮೇಲೆ ದಾಳಿ’ ಎಂದು ಸ್ಕ್ರೋಲಿಂಗ್ ಭಿತ್ತರಿಸಿದವು. ಜತೆಗೆ ಅಪಾರ ಪ್ರಮಾಣದ ನಗದು ಮತ್ತು ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದೂ ಅವು ಹೇಳಿದವು.

suddi-tv-1

ಸುದ್ದಿ ವಾಹಿನಿಯಲ್ಲಿ ಶನಿವಾರ ಮಧ್ಯಾಹ್ನ ಬಂದ ಸ್ಕ್ರೋಲಿಂಗ್.

ಸುದ್ದಿ ವಾಹಿನಿಯಲ್ಲಿ ಶನಿವಾರ ಮಧ್ಯಾಹ್ನ ಬಂದ ಸ್ಕ್ರೋಲಿಂಗ್.

ವಿಶ್ವೇಶ್ವರ ಭಟ್ ಅವರ ಮನೆ ಮತ್ತು ಕಚೇರಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿವೆ.

ಈ ಸಮಯದಲ್ಲಿ ‘ಸಮಾಚಾರ’ದ ಜತೆ ದೂರವಾಣಿ ಮೂಲಕ ಎರಡು ಬಾರಿ ಮಾತನಾಡಿದ ವಿಶ್ವೇಶ್ವರ ಭಟ್, “ಇದೊಂದು ಗಾಳಿಸುದ್ದಿ. ಈ ದಿನಗಳಲ್ಲಿ ಸುದ್ದಿವಾಹಿನಿಗಳ ಬ್ರೇಕಿಂಗ್ ನ್ಯೂಸ್ ಸತ್ಯಾಸತ್ಯತೆ ನಿಮಗೆ ಗೊತ್ತೇ ಇದೆ. ನಾನು ನನ್ನ ಕಚೇರಿಯ ಚೇಂಬರಿನಲ್ಲಿ ಕುಳಿತುಕೊಂಡು ಟಿವಿಯನ್ನು ನೋಡುತ್ತಿದ್ದೇನೆ. ಅದರಲ್ಲಿ ನನ್ನ ಹೆಸರು ಹಾಕಿಲ್ಲ. ರಾಜರಾಜೇಶ್ವರಿ ನಗರದ ಪತ್ರಕರ್ತ ಎಂದಷ್ಟೆ ಬರುತ್ತಿದೆ. ನಾನು ಯಾಕೆ ತಲೆ ಕೆರೆದುಕೊಳ್ಳಲಿ. ನಿಮ್ಮ ಹಾಗೆ ಇನ್ನೂ ಮೂರು ನಾಲ್ಕು ಜನ ಕರೆ ಮಾಡಿ ಕೇಳಿದರು. ಕಚೇರಿಗೆ ಬಂದು ಮಾತನಾಡುವಂತೆ ತಿಳಿಸಿದ್ದೇನೆ,” ಎಂದರು.

ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿರು ಪತ್ರಕರ್ತ ವಿಶ್ವೇಶ್ವರ ಭಟ್ ಮನೆ.

ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿರು ಪತ್ರಕರ್ತ ವಿಶ್ವೇಶ್ವರ ಭಟ್ ಮನೆ.

ಈ ಹಿಂದೆ, ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣ ಬೆಳಕಿಗೆ ಬಂದ ಸಮಯದಲ್ಲಿ ಜನಾರ್ಧನ ರೆಡ್ಡಿ ಆಪ್ತ ಕಾರದಪುಡಿ ಮಹೇಶ್’ನಿಂದ ಲೋಕಾಯುಕ್ತ ಪೊಲೀಸರು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಇವುಗಳಲ್ಲಿ ಪತ್ರಕರ್ತರಿಗೆ ಹಣ ನೀಡಿರುವ ಬಗ್ಗೆ ಟಿಪ್ಪಣಿಗಳಿದ್ದದ್ದು ಸುದ್ದಿಯಾಗಿತ್ತು. ‘ವಿಬಿ’ ಮತ್ತು ‘ಆರ್ಬಿ’ ಎಂಬ ಸಾಂಕೇತಿಕ ಅಕ್ಷರಗಳನ್ನು ನಮೋದಿಸಲಾಗಿತ್ತು ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಮತ್ತು ನಂತರ ಗಣಿ ಅಕ್ರಮ ತನಿಖೆಗೆ ನೇಮಕಗೊಂಡಿದ್ದ ‘ವಿಶೇಷ ತನಿಖಾ ತಂಡ’ ವಿಶ್ವೇಶ್ವರ ಭಟ್ ಅವರನ್ನು ತನಿಖೆಗೆ ಗುರಿಪಡಿಸಲಿವೆ ಎಂದು ಗಾಳಿ ಸುದ್ದಿ ಹಬ್ಬಿತ್ತು. ನಂತರ ದಿನಗಳಲ್ಲಿ ಅಂತಹ ಯಾವುದೇ ಬೆಳವಣಿಗೆಗಳು ನಡೆದಿರಲಿಲ್ಲ.

ಇದೀಗ, ಇಡೀ ದೇಶಾದ್ಯಂತ ನೋಟು ಬದಲಾವಣೆ ಬಿರುಗಾಳಿ ಬೀಸುತ್ತಿರುವ ಸಮಯದಲ್ಲಿ ಮತ್ತೊಮ್ಮೆ ಗಾಳಿ ಸುದ್ದಿಗಳು ಹಬ್ಬಿವೆ. ವಿಶ್ವೇಶ್ವರ ಭಟ್ ಹೆಸರು ಮುನ್ನೆಲೆ ಬಂದಿದೆ. ಈ ಕುರಿತು ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಲಿಲ್ಲ.

Top