An unconventional News Portal.

ಚುನಾವಣೆ ಘೋಷಣೆ ಮತ್ತು ವಾಸ್ತವ: ಮದ್ಯಕ್ಕೆ ನಿಷೇಧ ಹೇರುತ್ತಾ ಸಿದ್ದರಾಮಯ್ಯ ಸರಕಾರ?

ಚುನಾವಣೆ ಘೋಷಣೆ ಮತ್ತು ವಾಸ್ತವ: ಮದ್ಯಕ್ಕೆ ನಿಷೇಧ ಹೇರುತ್ತಾ ಸಿದ್ದರಾಮಯ್ಯ ಸರಕಾರ?

-ಕಿರಣ್ ಕುಮಾರ್ ಎಂ. ಎಲ್. 


ಸಂಪೂರ್ಣ ಮದ್ಯಪಾನ ನಿಷೇಧ…

ಹೀಗೊಂದು ಕೂಗು ಮುಂದಿನ ಚುನಾವಣೆ ವೇಳೆಗೆ ಬಲವಾಗಿ ಕೇಳಿಬರುವ ಸಾಧ್ಯತೆ ಇದೆ. ಇತ್ತೀಚೆಗೆ ರಾಯಚೂರಿನಲ್ಲಿ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ನೇತೃತ್ವದಲ್ಲಿ ಮದ್ಯ ನಿಷೇಧ ಜಾರಿಗಾಗಿ ಭಾರಿ ಪ್ರತಿಭಟನೆಯೂ ನಡೆದಿದೆ. ಬಿಹಾರ, ಗುಜರಾತ್ ರಾಜ್ಯಗಳಲ್ಲಿ ಜಾರಿಗೆ ಬಂದಿರುವ ಸಂಪೂರ್ಣ ಮದ್ಯ ನಿಷೇಧ ಕಾಯ್ದೆ ನಮ್ಮ ರಾಜ್ಯದಲ್ಲಿ ಏಕೆ ಸಾದ್ಯವಿಲ್ಲ? ಎನ್ನುವುದು ಅಂದು  ನೆರೆದಿದ್ದ ನಾಯಕರು ಸಿದ್ದರಾಮಯ್ಯ ಸರಕಾರವನ್ನು ಪ್ರಶ್ನಿಸಿದ್ದಾರೆ. ಕಾಕತಾಳೀಯ ಎಂಬಂತೆ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್ ನೇತೃತ್ವದಲ್ಲಿ ಬಿಹಾರಕ್ಕೆ ತೆರಳಿರುವ ಕಾಂಗ್ರೆಸ್ ಮುಖಂಡರು, ಮದ್ಯ ನಿಷೇಧದ ಕುರಿತು ವರದಿ ನೀಡುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಚುನಾವಣಾ ಘೋಷಣೆಯಲ್ಲಿ ಮದ್ಯ ನಿಷೇಧವನ್ನೂ ಪ್ರಸ್ತಾಪಿಸುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ‘ಸಮಾಚಾರ’ ಮದ್ಯಪಾನ, ಮದ್ಯಪಾನ ನಿಷೇಧಕ್ಕಾಗಿ ಸ್ವಾತಂತ್ರ್ಯ ನಂತರ ನಡೆದ ಪ್ರಯೋಗಗಳು, ಸಂಪೂರ್ಣ ಪಾನ ನಿಷೇಧಗೊಂಡ ರಾಜ್ಯಗಳ ಪರಿಸ್ಥಿತಿ ಮತ್ತು ಕರ್ನಾಟಕದಲ್ಲಿ ಮದ್ಯಪಾನ ನಿಷೇಧದ ಸಾಧ್ಯತೆಗಳ ಕುರಿತು ವಿವರವಾದ ಮಾಹಿತಿಯನ್ನೊಳಗೊಂಡ ವರದಿಯಲ್ಲಿ ಇಲ್ಲಿ ನೀಡುತ್ತಿದೆ. 


REALTED: ಮದ್ಯಪಾನದ ಮೇಲೆ ಸಂಪೂರ್ಣ ನಿಷೇಧಕ್ಕೆ ಆಗ್ರಹ: ಮಹಿಳೆಯರ ಭಾರಿ ಪ್ರತಿಭಟನೆ


ಕೂಗಿನ ಹಿನ್ನೆಲೆ: 
1948-50ರ ಮಧ್ಯಭಾಗದಲ್ಲಿ ಮದ್ರಾಸ್ ಹಾಗೂ ಬಾಂಬೆ ಪ್ರಾಂತ್ಯದ ಸರಕಾರ ಮದ್ರಾಸ್, ಮಹಾರಾಷ್ಟ್ರ ಗುಜರಾತ್ ಸೇರಿದಂತೆ ಆಂಧ್ರಪ್ರದೇಶದ 11 ಜಿಲ್ಲೆಗಳಲ್ಲಿ 1958ರಿಂದ 1969ರವರೆಗೆ ಮದ್ಯಪಾನವನ್ನು ನಿಷೇಧಿಸಿತ್ತು. ಭಾರತದಲ್ಲಿ ಶೇ.25 ರಷ್ಟು ಜನಸಂಖ್ಯೆಯು 1954ರ ಹೊತ್ತಿಗೆ ಮದ್ಯಪಾನ ನಿಷೇಧದ ವ್ಯಾಪ್ತಿಯ ಒಳಗೆ ಬಂದಿತ್ತು. ಆದರೂ ದೇಶಾದ್ಯಂತ ಮದ್ಯ ನಿಷೇಧ ಜಾರಿಗೊಳಿಸಲು ಏಪ್ರಿಲ್ 1958ರಲ್ಲಿ ಕೇಂದ್ರ ಸರಕಾರದಿಂದ ‘ತಾತ್ಕಾಲಿಕ ವಿಚಾರಣಾ ಸಮಿತಿ’ ರಚಿಸಲ್ಪಟ್ಟಿತ್ತು.
ಸಂಪೂರ್ಣ ಮದ್ಯಪಾನ ನಿಷೇಧಕ್ಕೆ ಒಳಪಟ್ಟ ಬಹುತೇಕ ರಾಜ್ಯಗಳ ಒಟ್ಟು ಆದಾಯದಲ್ಲಿ 10ರಷ್ಟು ಕುಸಿತ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ, 1964ರಲ್ಲಿ ಕೇಂದ್ರ ಸರಕಾರ ರಾಜ್ಯಗಳಲ್ಲಿ ಮದ್ಯ ನಿಷೇಧದಿಂದ ಉಂಟಾದ ನಷ್ಟದಲ್ಲಿ ಶೇ. 50ರಷ್ಟನ್ನು ತಾನೇ ಭರಿಸಿತು. ಒಟ್ಟಾರೆ ಸಂಪನ್ಮೂಲ ಕ್ರೂಢೀಕರಣಕ್ಕೆ ಈ ರಾಜ್ಯಗಳು ಹರಸಾಹಸ ಪಡಬೇಕಾಯಿತು. ಇಷ್ಟೆಲ್ಲ ಆರ್ಥಿಕ ಸಂಕಷ್ಟಗಳ ನಡುವೆ 1977ರಲ್ಲಿ ಮೊರಾರ್ಜಿ ದೇಸಾಯಿ ಸರಕಾರವು ಮತ್ತೆ ಹೊಸ ಕಾನೂನಿನೊಂದಿಗೆ ದೇಶಾದ್ಯಂತ ಮದ್ಯ ನಿಷೇಧ ಮಾಡಲು ಪ್ರಯತ್ನ ಪಟ್ಟಾಗ, ಬಹುತೇಕ ರಾಜ್ಯಗಳು (ಗುಜರಾತ್ ಹೊರತುಪಡಿಸಿ) ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದವು. ಅಷ್ಟೆ ಅಲ್ಲ ತಮ್ಮ ರಾಜ್ಯಗಳಲ್ಲಿ ಮದ್ಯ ನಿಷೇಧ ಕಾಯ್ದೆಯನ್ನು ಹಿಂತೆಗೆದುಕೊಂಡಿದ್ದು ಈಗ ಇತಿಹಾಸ.
ಸಂವಿಧಾನದ ಆರ್ಟಿಕಲ್ 47 ರಲ್ಲಿ ತಿಳಿಸಿದಂತೆ, ರಾಜ್ಯ ನೀತಿಗಳ ನಿರ್ದೇಶನ ತತ್ವಗಳಲ್ಲಿ ತಿಳಿಸಿದಂತೆ, ಆಯಾ ರಾಜ್ಯಗಳು ವೈದ್ಯಕೀಯ ಉದ್ದೇಶಗಳಿಗೆ ಹೊರತುಪಡಿಸಿ, ಮದ್ಯ ನಿಷೇಧಿಸುವ ಬಗ್ಗೆ ಪ್ರಯತ್ನಪಡಬೇಕು ಎಂದಿದೆ.
ಸಂಪೂರ್ಣ ಮದ್ಯ ನಿಷೇಧ: 
ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ಈ ಹಿಂದೆ ಹೇಳಿದಂತೆ ಗುಜರಾತ್‌ನಲ್ಲಿ 1961ರಿಂದಲೂ ಮದ್ಯ ನಿಷೇಧ ಜಾರಿಯಲ್ಲಿದೆ. 1600ಕಿ.ಮೀ ಉದ್ದದ ಸಮುದ್ರ ತೀರ ಇರುವ ಹಾಗೂ ಅನೇಕ ಪ್ರವಾಸೋದ್ಯಮ ತಾಣಗಳಿರುವ ಗುಜರಾತ್‌ನಲ್ಲಿ ಮದ್ಯ ನಿಷೇಧದ ಪರಿಣಾಮ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಗುಜರಾತ್‌ನಲ್ಲಿ ಸಾಂಧರ್ಬಿಕವಾಗಿ ಮದ್ಯ ಮಾರಾಟ ಮಾಡಲು ತಾತ್ಕಾಲಿಕವಾಗಿ ಪರವಾನಗಿ ನೀಡುತ್ತಿದ್ದರೂ, ಅದನ್ನು ಪಡೆಯುವುದು ಸಹ ದೊಡ್ಡ ತಲೆ ನೋವಾಗಿದೆ. ಪ್ರವಾಸಿಗರನ್ನು ಆಕರ್ಷಿಸಲು ವಿಮಾನ ನಿಲ್ದಾಣಗಳಲ್ಲಿ ಪರ್ಮಿಟ್ ಹೊಂದಿರುವ ಅಂಗಡಿಗಳಲ್ಲಿ ಮದ್ಯ ಖರೀದಿಸಿದರೆ, ಖರೀದಿ ಮಾಡಿದ ಮದ್ಯ ಕೊಂಡೊಯ್ಯಲೂ ಪರ್ಮಿಟ್ ಪಡೆಯಬೇಕೆಂಬ ನಿಯಮವಿದೆ. ಹೀಗಾಗಿ ಸರ್ಕಾರ ಆದಾಯದ ನಷ್ಟದ ಜೊತೆ,ಕಾನೂನು ಬಾಹಿರವಾಗಿ ಮದ್ಯ ಕಳ್ಳ ಸಾಗಾಣಿಕೆ, ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಕುಂಠಿತ, ನಿರುದ್ಯೋಗ ಹೆಚ್ಚಳ, ಕಳಪೆ ಮದ್ಯ ಮಾರಾಟದಂತ ಪ್ರಕರಣಗಳು ಕಂಡುಬಂದಿವೆ.

1989ರಲ್ಲಿ ಮದ್ಯ ನಿಷೇಧ ಕಾನೂನು ಜಾರಿಗೆ ತಂದ ಮತ್ತೊಂದು ರಾಜ್ಯ ನಾಗಾಲ್ಯಾಂಡ್ಬಂ. ಸ್ಥಳೀಯವಾಗಿ ತಯಾರಿಸುವ ‘ಜೀತೂ’ ಅನ್ನುವ ಮದ್ಯ ಇಲ್ಲಿ ಈಗಲೂ ಲಭ್ಯವಿದೆ. ಆದರೂ ಆಸ್ಸಾಂ , ಬಾಂಗ್ಲಾ ಮತ್ತು ಮಯನ್ಮಾರ್ ಗಳಿಂದ ಮದ್ಯದ ಕಳ್ಳ ಸಾಗಾಣಿಕೆ ಇಲ್ಲಿ ನಡೆಯುತ್ತಲೇ ಇದೆ.
ಮೀಜೋರಾಂ ಕೂಡ 1997ರಲ್ಲಿ ಮದ್ಯ ನಿಷೇಧ ಕಾನೂನು ಜಾರಿಗೆ ತಂದಿದೆ. ಸ್ಥಳೀಯವಾಗಿ ಸೀಬೆ ಹಣ್ಣು ಮತ್ತು  ದ್ರಾಕ್ಷಿಯಿಂದ ಮಾಡಿದ ವೈನ್ ಉತ್ಪಾದನೆಗೆ ಇಲ್ಲಿ ಅವಕಾಶ ಇದೆ. ಅದನ್ನು ಸ್ಥಳೀಯವಾಗಿಯೇ ಮಾರಾಟ ಮಾಡಬೇಕೆಂಬ ನಿಯಮವಿತ್ತು. ಹೀಗಿದ್ದೂ, 2014ರಲ್ಲಿ, ಬಿಗಿ ನಿಯಮಗಳೊಂದಿಗೆ ಮದ್ಯದ ಅಂಗಡಿಗಳನ್ನು ತೆರೆಯುವ ಬಗ್ಗೆ ಕಾನೂನು ರೂಪಿಸಲಾಯಿತು.
ಈಶಾನ್ಯ ಭಾರತದ ಮತ್ತೊಂದು ಪುಟ್ಟ ರಾಜ್ಯ ಮಣಿಪುರದಲ್ಲಿ 1991ರಲ್ಲಿ ಆರ್. ಕೆ. ರಣಬಿರ್ ಸಿಂಗ್ ನೇತೃತ್ವದ ಸರಕಾರ ಸಂಪೂರ್ಣ ಮದ್ಯ ನಿಷೇಧ ಜಾರಿಗೆ ತಂದಿತು. ಸ್ಥಳೀಯವಾಗಿ ‘ಅಶೀಭಾ’ ಮತ್ತು ‘ಅತಿಂಗ್ಪಾ’ ಎನ್ನುವ ಮದ್ಯವನ್ನು ತಯಾರಿಸುವ ಪ್ರಕ್ರಿಯೆ ಇಲ್ಲಿ ಜಾರಿಯಲ್ಲಿದೆ. ನಾನಾ ಕಾರಣಗಳಿಗಾಗಿ ಬೆಟ್ಟ-ಗುಡ್ಡಗಾಡು ಪ್ರದೇಶ ಹೊಂದಿರುವ ಮಣಿಪುರದ 5 ಜಿಲ್ಲೆಗಳಲ್ಲಿ ಜಾರಿಗೆ ಬರುವಂತೆ 2002 ರಲ್ಲಿ ಮದ್ಯ ನಿಷೇಧವನ್ನು ಹಿಂತೆಗೆದುಕೊಂಡಿದ್ದೂ ನಡೆಯಿತು.

ಕೇರಳ ಮತ್ತು ಬಿಹಾರಗಳಲ್ಲಿ 2014ರಲ್ಲಿ ಮದ್ಯ ನಿಷೇಧ ಕಾನೂನು ಜಾರಿಗೆ ಬಂತು. ಕೇರಳದ ಮುಖ್ಯಮಂತ್ರಿ ಉಮನ್ ಚಾಂಡಿ ನೇತೃತ್ವದ ಯುಡಿಎಫ್  ಸರಕಾರ ಮದ್ಯ ನಿಷೇಧ ಮಾಡಿತ್ತಾದರೂ,ಆದಾಯ ಕುಸಿತದ ಪರಿಣಾಮ, 2016ರಲ್ಲಿ, ಎಲ್‌ಡಿಎಫ್‌  ಸರಕಾರ,  ಟೂ ಸ್ಟಾರ್ ಹಾಗೂ ಮೇಲ್ಪಟ್ಟ ಹೊಟೆಲ್‌ಗಳಲ್ಲಿ ಮದ್ಯ ಮಾರಾಟ ಮಾಡಲು ಅನುಮತಿ ನೀಡಿತು. ಇನ್ನು ಬಿಹಾರದಲ್ಲಿ ನಿತಿಶ್ ಕುಮಾರ್ ಸರಕಾರ ಚುನಾವಣೆ ಪೂರ್ವದಲ್ಲಿ ತಮ್ಮ ಜನಪ್ರಿಯ ಘೋಷಣೆ ಮಾಡಿದಂತೆ 2016ರಂದು ಸಂಪೂರ್ಣ ಮದ್ಯ ನಿಷೇಧ ಮಾಡಿತು. ಅದರಿಂದಾದ ಅವಘಡಗಲೇ ಹೆಚ್ಚು. ಮದ್ಯ ನಿಷೇದದಿಂದ ಕಳಪೆ ಮದ್ಯ ಸೇವಿಸಿ ನೂರಾರು ಜನ ಪ್ರಾಣ ಕಳೆದುಕೊಂಡರು. ಕಳಪೆ ಮದ್ಯ ಸೇವನೆ ಮತ್ತು ಪಕ್ಕದ ರಾಜ್ಯಗಳಿಂದ ಮದ್ಯ ಕಳ್ಳಸಾಗಾಣಿಕೆ ತಡೆಗಟ್ಟುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿದೆ. ಬೆಂಕಿಯಿಂದ ಬಾಣಲೆಗೆ ಬಿದ್ದ ಪರಿಸ್ಥಿತಿ ಅಲ್ಲಿಯ ಮದ್ಯ ಪ್ರಿಯರಿಗಾಗಿದೆ.


ALSO READ: ಬಿಹಾರದಾದ್ಯಂತ ಮದ್ಯ ಮಾರಾಟ ನಿಷೇಧ: ಸಿಎಂ ನಿತೀಶ್ ಕುಮಾರ್ ದಿಟ್ಟ ಹೆಜ್ಜೆ


ಕಳಪೆ ಮದ್ಯ ಸೇವನೆಯಿಂದ ಪ್ರಾಣ ಹಾನಿ ಹಾಗೂ ಕಾನೂನು ಬಾಹಿರ ವ್ಯವಹಾರ ಹಾಗೂ ಆದಾಯ ನಷ್ಟ ಆಗುವುದನ್ನು ತಡೆಯಲು ಆಂಧ್ರಪ್ರದೇಶ, ಹರಿಯಾಣ, ಕೇರಳ, ಮೀಜೋರಾಂ ಹಾಗೂ ತಮಿಳುನಾಡು ರಾಜ್ಯಗಳು ಮದ್ಯ ನಿಷೇಧದ ಕಾನೂನನ್ನು ಹಿಂತೆಗೆದುಕೊಂಡಿದ್ದು ಕಣ್ಣೆದುರಿಗೆ ಇದೆ.
ಕರ್ನಾಟಕದಲ್ಲಿ ಸಾಧ್ಯವೇ? :
2017-18 ಸಾಲಿನಲ್ಲಿ ರಾಜ್ಯದ ಅಬಕಾರಿ ಇಲಾಖೆ 18,000 ಕೋಟಿ ರೂ. ಆದಾಯದ ಗುರಿ ಇಟ್ಟುಕೊಂಡಿದೆ. ಇಲ್ಲಿಯವರೆಗೂ ಶೇ. 50ರಷ್ಟು ಗುರಿ ಸಾಧಿಸಿದೆ ಎನ್ನುತ್ತವೆ ಅಂಕಿ ಅಂಶಗಳು. ಅಬಕಾರಿ ಇಲಾಖೆಯ ಆದಾಯ ರಾಜ್ಯದ ಒಟ್ಟು ಆದಾಯದ ಶೇ. 20ರಷ್ಟಿದೆ. ಒಂದುವೇಳೆ ಮದ್ಯ ನಿಷೇಧ ಮಾಡಿದರೆ ಅಷ್ಟು ಆದಾಯವನ್ನು ಹೇಗೆ ಸರಿದೂಗಿಸಬೇಕು ಎನ್ನುವುದರ ಬಗ್ಗೆ ಚಿಂತನೆ ನಡೆಯಬೇಕು. ಮದ್ಯ ನಿಷೇಧದ ಪರ ಮಾತನಾಡುವ ರಾಜಕೀಯ ಪಕ್ಷಗಳ ಉದ್ದೇಶ ಮೇಲ್ನೋಟಕ್ಕೆ ಓಟು ಗಿಟ್ಟಿಸುವುದಕ್ಕೆ ಸೀಮಿತವಾದಂತೆ ಕಾಣುತ್ತದೆ.
ಈ ಹಿಂದೆ ಜಿ.ಎಚ್.ಪಟೇಲ್ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಸಚಿವರಾದ ಪಿ.ಜಿ.ಆರ್.ಸಿಂಧ್ಯ, ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಆಂದ್ರ ಹಾಗೂ ಗುಜರಾತ್ ರಾಜ್ಯಗಳಿಗೆ ಬೇಟಿ ನೀಡಿ, ಮದ್ಯ ನಿಷೇಧ ಮಾಡುವ ಕುರಿತು ಅಧ್ಯಯನ ಮಾಡಲಾಗಿತ್ತು. ಅಲ್ಲಿ ಮದ್ಯ ನಿಷೇಧದಿಂದಾಗುವ ಅನುಕೂಲಗಳಿಗಿಂತ ಅನಾನುಕೂಲತೆಗಳ ಬಗ್ಗೆ ವರದಿ ನೀಡಿದ್ದು ಗೊತ್ತಿರುವ ವಿಚಾರ.
ಸಂಪೂರ್ಣ ಮದ್ಯಪಾನ ನಿಷೇಧ ಮಾಡುತ್ತಲೇ ಸಮಸ್ಯೆ ಎದುರಾಗುವುದು ಕಳಪೆ ಮದ್ಯದ ಅಕ್ರಮ ಮಾರಾಟದ ವಿಚಾರ. ಈ ಹಿಂದೆ, ರಾಜ್ಯದಲ್ಲಿ ನಡೆದ ಕಳಪೆ ಮದ್ಯದ ಅವಘಡಗಳನ್ನೂ ಈ ಸಮಯದಲ್ಲಿ ನೆನಪು ಮಾಡಿಕೊಳ್ಳಬೇಕಿದೆ. 1981 ಬೆಂಗಳೂರು ಸಾವನ್ನಪ್ಪಿದ್ದು 307 ಜನ. 2005ರಲ್ಲಿ ಚಿಕ್ಕಬಿದರಕಲ್ಲುನಲ್ಲಿ ಕಳಪೆ ಮದ್ಯಕ್ಕೆ 21 ಮಂದಿ ಬಲಿಯಾಗಿದ್ದರು. 2008ರಲ್ಲಿ ಕೋಲಾರ ಜಿಲ್ಲೆಯಲ್ಲಿ 180 ಜನ ಸಾವನ್ನಪ್ಪಿದ ನಿದರ್ಶನಗಳೂ ಇವೆ.
ಕೆಲ ತಿಂಗಳುಗಳ ಹಿಂದೆ ಹೆದ್ದಾರಿಗಳಲ್ಲಿ  500 ಮೀಟರ್ ವ್ಯಾಪ್ತಿಯಲ್ಲಿ ಇರುವ ಮದ್ಯದ ಅಂಗಡಿಗಳನ್ನು ಮುಚ್ಚಬೇಕೆಂಬ ಸುಪ್ರೀಂ ಕೋರ್ಟ್ ಆದೇಶವನ್ನು ಮೀರಿ, ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ಸಾಗುವ ಹೆದ್ದಾರಿಗಳನ್ನು ಡಿನೋಟಿಫೈ ಮಾಡಿದೆ ಸಿದ್ದರಾಮಯ್ಯ ಸರಕಾರ. 18000 ಕೋಟಿಯಷ್ಟು ಆದಾಯ ಇರುವ ಒಂದು ಇಲಾಖೆಯನ್ನು ಶಾಶ್ವತವಾಗಿ ಮುಚ್ಚಿ ಆದಾಯಕ್ಕೆ ಪರ್ಯಾಯವನ್ನು ಹುಡುಕುತ್ತಾರಾ? ಕಾದು ನೋಡಬೇಕು.
ಓಟು ಗಿಟ್ಟಿಸಿಕೊಳ್ಳಲು ಮದ್ಯ ನಿಷೇಧದಂತಹ ಘೋಷಣೆ ಮಾಡುವ ರಾಜಕೀಯ ಪಕ್ಷಗಳು ಇದರ ಕುರಿತು ಸಾಧಕ ಬಾಧಕಗಳ ಬಗ್ಗೆ ವಿಚಾರ ಮಾಡಿ ನಿರ್ಧಾರ ಕೈಗೊಳ್ಳುವುದು ಇವತ್ತಿನ ಅಗತ್ಯವಾಗಿದೆ. 11 ಬಾರಿ ರಾಜ್ಯ ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯನವರಿಗೆ ಮದ್ಯದ ಹಿಂದಿರುವ ಸಿಂಪಲ್ ಎಕನಾಮಿಕ್ಸ್ ಗೊತ್ತೇ ಇರುತ್ತದೆ.
ಒಂದಷ್ಟು ಸಲಹೆಗಳು: 
ಸಂಪೂರ್ಣ ಮದ್ಯ ನಿಷೇಧದ ಮೊದಲು ಈ ಕೆಳಕಂಡ ಅಂಶಗಳನ್ನು ಗಮನದಲ್ಲಿಟ್ಟುಕೊಡು ಸರಕಾರ ಜನರ ಮದ್ಯ ಸೇವನೆಯ ಚಟವವನ್ನು ಹತೋಟಿಗೆ ತರಬಹುದು.
  • ಮದ್ಯದ ಅಂಗಡಿಗಳಿಗೆ, ದಿನದಲ್ಲಿ  9-10 ತಾಸುಗಳ ಅವಧಿಗೆ ಮದ್ಯ ಮಾರಾಟ ಸಮಯ ನಿಗಧಿ ಪಡಿಸಬೇಕು.
  • ಬಡವರ್ಗದ ಜನ ಹೆಚ್ಚಾಗಿ ಸೇವಿಸುವ ಚೀಪ್ ಲಿಕ್ಕರ್ ಮೇಲಿನ ಟ್ಯಾಕ್ಸ್ ಏರಿಸಬೇಕು. ದರ ಹೆಚ್ಚಾದಾಗ ಮದ್ಯ ಸೇವನೆ ಪ್ರಮಾಣ ತಾನಾಗಿಯೇ ಕಡಿಮೆಯಾಗುತ್ತದೆ.
  • ಅಬಕಾರಿ ಇಲಾಖೆ, ಇಂತಿಷ್ಟು ಮದ್ಯ ದಾಸ್ತಾನು ಮಾಡಬೇಕು ಎಂದು ಮದ್ಯದಂಗಡಿಗಳಿಗೆ ಒತ್ತಡ ಹೇರಿ ಸರ್ಕಾರದ ಬೊಕ್ಕಸ ತುಂಬಿಸುವ ಕೆಲಸ ಮಾಡುತ್ತಿದೆಯೇ ವಿನಃ, ಮದ್ಯ ಸೇವನೆಯಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿಲ್ಲ. ಜಾಗೃತಿಗಾಗಿ ಕ್ರೀಯಾಶೀಲವಾದ ಕಾರ್ಯಕ್ರಮ ರೂಪಿಸುವುದು ಸೂಕ್ತ.
  • ಹಳ್ಳಿಗಳಲ್ಲಿ ನಡೆಯುವ ಅನಧಿಕೃತ ಮದ್ಯ ಮಾರಾಟ ನಿಲ್ಲಿಸಬೇಕು.
  • 20,000 ಜನಸಂಖ್ಯೆಗಿಂತ ಕಡಿಮೆ ಇರುವ ಪ್ರದೇಶಗಳಲ್ಲಿ/ಗ್ರಾಮಿಣ ಪ್ರದೇಶಗಳಲ್ಲಿ ಅಧಿಕೃತ ಮದ್ಯದ ಅಂಗಡಿ ಸ್ಥಾಪಿಸಲು ಅನುಮತಿ ನೀಡಬಾರದು.

    – ಲೇಖಕರು ಬ್ಯಾಡಗಿ ಮೂಲದ ಹವ್ಯಾಸಿ ಬರಹಗಾರರು. 

Top