An unconventional News Portal.

ಆರ್‌ಎಸ್‌ಎಸ್‌ ಸಂದರ್ಶನ: ‘ಗೋ ರಕ್ಷಣೆಗೆ ದಾಳಿಗಳು; ಆತ್ಮ ರಕ್ಷಣೆಗಾಗಿ ನಡೆಯುತ್ತಿರುವ ಘಟನೆಗಳು’

ಆರ್‌ಎಸ್‌ಎಸ್‌ ಸಂದರ್ಶನ: ‘ಗೋ ರಕ್ಷಣೆಗೆ ದಾಳಿಗಳು; ಆತ್ಮ ರಕ್ಷಣೆಗಾಗಿ ನಡೆಯುತ್ತಿರುವ ಘಟನೆಗಳು’

“ಗೋ ರಕ್ಷಣೆ ಮಾಡುವವರು ಎಲ್ಲರೂ ಆರ್‌ಎಸ್‌ಎಸ್‌ ಎಂಬ ಗ್ರಹಿಕೆ ಇದೆ. ಭಾರತದಲ್ಲಿ ಇವತ್ತು ಆರ್‌ಎಸ್‌ಎಸ್‌ ಹೊರತಾಗಿಯೂ ಗೋವಿನ ರಕ್ಷಣೆ ಮಾಡುವವರು ಇದ್ದಾರೆ. ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಕ್ರಿಮಿನಲ್ ಚಟುವಟಿಕೆಗಳಿಗೂ, ಆರ್‌ಎಸ್‌ಎಸ್‌ಗೂ ಸಂಬಂಧ ಇಲ್ಲ. ಗೋ ರಕ್ಷಣೆ ಹೆಸರಿನಲ್ಲಿ ಹೊರಗಡೆ ನಡೆಯುತ್ತಿರುವುದು ‘ಆತ್ಮರಕ್ಷಣೆ’ಗಾಗಿ ನಡೆಯುತ್ತಿರುವ ಘಟನೆಗಳು…”

ಇವತ್ತು ಕರ್ನಾಟಕವೂ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಮುಸ್ಲಿಂರ ಮೇಲಿನ ಹಲ್ಲೆಗಳು, ಸಾಮೂಹಿಕ ದಾಳಿಗಳು, ಕೊಲೆಗಳ ಕುರಿತು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ನೀಡಿದ ಅಧಿಕೃತ ಪ್ರತಿಕ್ರಿಯೆ ಇದು.

ಧರ್ಮದ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ನಡೆಯುತ್ತಿರುವ ಟ್ರಾಲಿಂಗ್‌ಗಳಿಂದ ಹಿಡಿದು, ಗೋ ರಕ್ಷಣೆವರೆಗೆ ಪ್ರಮುಖ ಬೆಳವಣಿಗೆಗಳ ಹಿಂದೆ ಕೇಳಿಬರುವ ಹೆಸರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಥವಾ ಆರ್‌ಎಸ್‌ಎಸ್‌. ವಿಶೇಷವಾಗಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೇರಿದ ನಂತರ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ವಿಚಾರಗಳ ಚರ್ಚೆಗಳಲ್ಲಿ ಆರ್‌ಎಸ್‌ಎಸ್‌ ಕೇಂದ್ರದಲ್ಲಿರುತ್ತದೆ. ತನ್ನನ್ನು ತಾನು ‘ಸಾಂಸ್ಕೃತಿಕ ಸಂಘಟನೆ’ ಎಂದು ಹೇಳಿಕೊಳ್ಳುವ ಆರ್‌ಎಸ್‌ಎಸ್‌ ಭಾರತದ ಹೊಸ ತಲೆಮಾರಿನ ರಾಜಕೀಯ ಚರ್ಚೆಗಳ ಭಾಗವಾಗಿದೆ.

ದೇಶದ ಮತ್ಯಾವುದೇ ಸಂಘಟನೆ ಹೊಂದದಷ್ಟು ಸಂಖ್ಯಾಬಲ, ಸೈದ್ಧಾಂತಿಕ ವಿರೋಧಗಳ ಹೊರತಾಗಿಯೂ ಹಿಂದುತ್ವದ ಚಿಂತನೆಗಳನ್ನು ಹರಡುವ ಕೆಲಸವನ್ನು ‘ಸಂಘ’ದ ಪೂರ್ಣಾವಧಿ ಕಾರ್ಯಕರ್ತರು ಕಳೆದ 91 ವರ್ಷಗಳಿಂದ ವ್ಯವಸ್ಥಿತವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಅಂತವರಲ್ಲಿ ಒಬ್ಬರು ಆರ್‌ಎಸ್‌ಎಸ್‌ನ ಪ್ರಚಾರ ಪ್ರಮುಖ್‌ ಆಗಿರುವ ಮೈಸೂರು ಮೂಲದ ಪ್ರದೀಪ್‌. ‘ಕರ್ನಾಟಕದ ರಾಮ್‌ಮಾಧವ್‌’ ಎಂದು ತಮ್ಮ ವಲಯದಲ್ಲಿ ಗುರುತಿಸಿಕೊಂಡಿರುವ ಅವರು ಕರ್ನಾಟಕದ ಪ್ರಾಂತ್ಯ ಆರ್‌ಎಸ್‌ಎಸ್‌ ಪರವಾಗಿ ‘ಸಮಾಚಾರ’ದ ಜತೆ ಮಾತುಕತೆಗೆ ಕುಳಿತರು.

ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳೂ ಸೇರಿದಂತೆ, ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ಮಂಗಳೂರು ಕೋಮು ಸಂಘರ್ಷದ ಬಗ್ಗೆ ನೀಡಿದ ಪ್ರತಿಕ್ರಿಯೆ, ಪ್ರಧಾನಿ ಮೋದಿ ಅವರ ಆರ್ಥಿಕ ನೀತಿಗಳು, ಕರ್ನಾಟಕದಲ್ಲಿ ಬಿಜೆಪಿ ಒಳಗಿನ ಸಂಘರ್ಷ, ದೇಶಾದ್ಯಂತ ಆರ್‌ಎಸ್‌ಎಸ್‌ ನಡೆಸುತ್ತಿರುವ ಚಟುವಟಿಕೆಗಳು… ಹೀಗೆ ನಾನಾ ವಿಚಾರಗಳನ್ನು ಪ್ರದೀಪ್ ಈ ಅಪರೂಪದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಅದರ ಆಯ್ದ ಭಾಗಗಳು ಇಲ್ಲಿವೆ;

ಸಮಾಚಾರ: 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಬಂದ ನಂತರ ಆರ್‌ಎಸ್‌ಎಸ್‌ ಗಣನೀಯ ಪ್ರಮಾಣದ ಬೆಳವಣಿಗೆ ಕಂಡಿದೆ ಎಂದು ವರದಿಗಳು ಹೇಳುತ್ತಿವೆ. ಇದು ಎಷ್ಟರ ಮಟ್ಟಿಗೆ ನಿಜ?

ಪ್ರದೀಪ್‌: ಇದು ಸಂಪೂರ್ಣ ಸತ್ಯವಲ್ಲ. ಹೊರಗಿನ ಕಾರಣಕ್ಕೆ ಆರ್‌ಎಸ್‌ಎಸ್‌ ನಡೆಸುವ ಶಾಖೆಗಳ ಸಂಖ್ಯೆ ಹೆಚ್ಚಾಗುತ್ತೆ ಅನ್ನೋದು ವಾಸ್ತವಕ್ಕೆ ದೂರವಾದ ವಿಚಾರ. ನಮ್ಮ ಕಾರ್ಯಕರ್ತರು ಊರಿಂದ ಊರಿಗೆ ಹೋಗಿ ಪ್ರಚಾರದ ಮೂಲಕವೇ ಶಾಖೆಗಳನ್ನು ವಿಸ್ತರಿಸಿಕೊಂಡು ಬಂದಿದ್ದಾರೆ. ಸ್ವಲ್ಪ ಹಿಂದಕ್ಕೆ ಹೋಗಿ ನೋಡುವುದಾದರೆ 2006ನೇ ಇಸವಿಯಲ್ಲಿ ಸಂಘದ ಎರಡನೇ ಮುಖ್ಯಸ್ಥರಾದ ಗುರೂಜೀ ಅವರ ಜನ್ಮ ಶತಮಾನೋತ್ಸವ ನಡೆಸಿದ ನಂತರ ಶಾಖೆಗಳ ಸಂಖ್ಯೆಯಲ್ಲಿ ಪ್ರತಿ ವರ್ಷ ಶೇ. 10-20ರಷ್ಟು ಹೆಚ್ಚಳವಾಗುತ್ತ ಬಂದಿದೆ. ಸಂಘದ ಸಂಘಟನಾ ಬೆಳವಣಿಗೆಯಲ್ಲಿ ಇರುವ ಏರುಮುಖ 2014ರ ನಂತರವೂ ಕಾಯ್ದುಕೊಂಡಿದೆ.

ಸಮಾಚಾರ: ಈ ಕುರಿತು ಅಂಕಿ ಅಂಶಗಳು ಏನಾದ್ರೂ ಇವೆಯಾ?

ಪ್ರದೀಪ್‌: ನಾವು ವರ್ಷದಲ್ಲಿ ಎರಡು ಬಾರಿ ದೇಶಾದ್ಯಂತ ಅಂಕಿ ಅಂಶಗಳನ್ನು ಸಂಗ್ರಹಿಸುತ್ತೇವೆ. ಕಳೆದ ಮಾರ್ಚ್‌ ತಿಂಗಳ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಆರ್‌ಎಸ್‌ಎಸ್‌ ನಡೆಸುತ್ತಿರುವ ಪ್ರತಿ ದಿನದ ಶಾಖೆಗಳ ಸಂಖ್ಯೆ 57,233. ಇದರ ಜತೆಗೆ ವಾರಕ್ಕೊಮ್ಮೆ ನಡೆಯುವ ‘ಮಿಲನ್‌’ಗಳ ಸಂಖ್ಯೆ 14,896. ಮಾಸಿಕ ಮಿಲನ್‌ಗಳ ಸಂಖ್ಯೆ 8,226. ದಕ್ಷಿಣ ಕರ್ನಾಟಕದ ವಿಚಾರಕ್ಕೆ ಬಂದರೆ, 1,943 ಶಾಖೆಗಳನ್ನು ನಡೆಸುತ್ತಿದ್ದೇವೆ. ವಾರಕ್ಕೊಮ್ಮೆ 468 ಕಡೆಗಳಲ್ಲಿ ಮಿಲನ್‌ಗಳು ನಡೆಯುತ್ತಿವೆ. ಮಾಸಿಕ ಮಿಲನ್‌ಗಳ ಸಂಖ್ಯೆ 63ರಷ್ಟಿದೆ. ಪೂರ್ಣಾವಧಿ ಕಾರ್ಯಕರ್ತರ ಸಂಖ್ಯೆ ನಮ್ಮಲ್ಲಿ 100ರಷ್ಟಿದೆ.

ಇದರ ಜತೆಗೆ, ಕಳೆದ 13-14 ವರ್ಷಗಳಿಂದ ಐಟಿ ಉದ್ಯೋಗಿಗಳಿಗಾಗಿಯೇ ವಿಶೇಷ ಶಾಖೆಗಳನ್ನು ನಡೆಸುತ್ತಿದ್ದೇವೆ. ಅವರ ವೃತ್ತಿ ಸಮಯದ ಹಿನ್ನೆಲೆಯಲ್ಲಿ ವೀಕೆಂಡ್‌ಗಳಲ್ಲಿ ‘ಐಟಿ ಮಿಲನ್’ಗಳನ್ನು ಆಯೋಜಿಸುತ್ತಿದ್ದೇವೆ. ಸದ್ಯ ಬೆಂಗಳೂರಿನಲ್ಲಿ 130 ಕಡೆಗಳಲ್ಲಿ ಈ ಮಿಲನ್‌ಗಳು ನಡೆಯುತ್ತಿವೆ. ಒಂದು ಮಿಲನ್‌ನಲ್ಲಿ 10- 15 ಜನ ಇರುತ್ತಾರೆ. ಇಷ್ಟು ವರ್ಷಗಳಲ್ಲಿ ನಮ್ಮ ವ್ಯಾಪ್ತಿಗೆ ಬಂದವರು, ಸಂಪರ್ಕದಲ್ಲಿ 3.5- 4 ಸಾವಿರ ಐಟಿ ಉದ್ಯೋಗಿಗಳಿದ್ದಾರೆ. ಇದರ ಜತೆಗೆ ಸುಮಾರು 40ಕ್ಕೂ ಹೆಚ್ಚು ಅಂಗ ಸಂಸ್ಥೆಗಳಿಂದ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದೇವೆ. ಸಂಘದ್ದೇ ಔಟ್‌ರೀಚ್‌ ಕಾರ್ಯಕ್ರಮಗಳೂ ಜಾರಿಯಲ್ಲಿವೆ.

ಸಮಾಚಾರ: ಇದು ನಿಮ್ಮ ಸಂಘಟನಾ ಶಕ್ತಿಯನ್ನು ತೋರಿಸುತ್ತಿದೆ. ಇದೇ ವೇಳೆ, ಒಂದು ಪ್ರಶ್ನೆಯೂ ಮೂಡುತ್ತದೆ. ಒಂದು ಕಡೆ ಶಾಖೆಗಳು, ಮಿಲನ್‌ಗಳು, ಸೇವಾ ಕಾರ್ಯಕ್ರಮಗಳು ಹೀಗೆ ಹಲವು ಕ್ಷೇತ್ರಗಳಲ್ಲಿ, ಹಲವು ಆಯಾಮಗಳಲ್ಲಿ ಕೆಲಸ ಮಾಡುತ್ತಿದ್ದೀರಾ. ಆದರೆ ಇವೆಲ್ಲವೂ ಯಾಕಾಗಿ? ಇದರಿಂದ ಸಮಾಜದ ಮೇಲೆ ಆಗುವ ಪರಿಣಾಮಗಳೇನು?

ಪ್ರದೀಪ್‌: ಬಹಳ ಒಳ್ಳೆಯ ಪ್ರಶ್ನೆ. ನಮ್ಮ ಚಟುವಟಿಕೆಗಳು ಅಂತಿಮವಾಗಿ ವ್ಯಕ್ತಿ ನಿರ್ಮಾಣದ ಕಾರ್ಯ ಅಷ್ಟೆ. ಸ್ವಸ್ಥ ಸಮಾಜವನ್ನು ಕಟ್ಟಲು, ಸ್ವಾವಲಂಬಿ ದೇಶವನ್ನು ನಿರ್ಮಾಣ ಮಾಡಲು ನಾವು ಸಂಘಟನೆಯಲ್ಲಿ ತೊಡಗಿಕೊಂಡಿದ್ದೇವೆ. ನಾವು ಯಾರನ್ನೋ ನಕಲು ಮಾಡುತ್ತಿಲ್ಲ. ಸ್ವಂತಿಕೆ ಇರುವ, ಗಡಿಗಳು ಸುರಕ್ಷವಾಗಿರುವ, ಆಂತರಿಕ ವಿಚಾರಗಳಲ್ಲಿ ಸಮಸ್ಯೆಗಳಿಲ್ಲದ, ಸ್ವತಂತ್ರ ದೇಶವೊಂದನ್ನು ನಿರ್ಮಾಣ ಮಾಡುವ ಕೆಲಸ ಮಾಡುತ್ತಿದ್ದೇವೆ.

ಸಮಾಚಾರ: ನೀವು ಸ್ವಾವಲಂಬಿ ದೇಶ ಕಟ್ಟುವ ಕೆಲಸ ಎನ್ನುತ್ತೀರಾ? ಆದರೆ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕೇಂದ್ರದ ನರೇಂದ್ರ ಮೋದಿ ಸರಕಾರ ಪ್ರೋತ್ಸಾಹ ನೀಡುತ್ತಿದೆ…?

ಪ್ರದೀಪ್‌: ಸ್ವಾವಲಂಬಿ ಸಮಾಜ ಎಂದರೆ ಪ್ರಪಂಚದಿಂದ ಪ್ರತ್ಯೇಕವಾಗಿ ಇರಬೇಕು ಎಂಬುದಲ್ಲ. ಎಲ್ಲರ ಜತೆ ಇದ್ದುಕೊಂಡೇ ನಮ್ಮ ಕಾಲ ಮೇಲೆ ನಾವು ನಿಲ್ಲುವುದು ಸ್ವಾವಲಂಬನೆ. ಜಾಗತೀಕರಣದ ಈ ಯುಗದಲ್ಲಿ ಎಲ್ಲರಿಂದಲೂ ಕೊಡುಕೊಳ್ಳುವಿಕೆ ಮುಖ್ಯ. ಅದರಿಂದಲೇ ನಾವೂ ಕೂಡ ಬೆಳೆಯಬೇಕು. ಚೈನಾ, ಜಪಾನ್‌ಗಳು ಇವತ್ತು ಸ್ವಾವಲಂಬಿ ದೇಶಗಳು ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಅವು ಇತರೆ ದೇಶಗಳ ಜತೆಗೆ ವ್ಯಾಪಾರ ವಹಿವಾಟಿನ ಸಂಬಂಧಗಳನ್ನು ಇಟ್ಟುಕೊಂಡಿವೆ. ಭಾರತಕ್ಕೂ ಕೂಡ ಸಾವಿರಾರು ವರ್ಷಗಳ ವ್ಯಾಪಾರಿ ಸಂಬಂಧಗಳು ಇತರೆ ದೇಶಗಳ ಜತೆ ಇದೆ. ಆದರೆ ಅದು ಎಷ್ಟರ ಪ್ರಮಾಣದಲ್ಲಿ ಇರಬೇಕು ಎಂಬುದನ್ನು ನಾವು ನಿರ್ಧರಿಸಬೇಕು.

ಇವತ್ತು ವಿದೇಶಿ ನೇರ ಬಂಡವಾಳ ಹೂಡಿಕೆ ಅಗತ್ಯವಿದೆ. ಹಾಗಂತ ಅದರ ಮೇಲೆ ನಮಗೊಂದು ಹಿಡಿತವೂ ಇದೆ. ಹೂಡಿಕೆ ಮಾಡುವಾಗಲೇ ಒಂದು ಲಕ್ಷ್ಮಣ ರೇಖೆ ವಿಧಿಸಿಕೊಂಡಿದ್ದೇವೆ. ನಮ್ಮ ನಿರ್ಬಂಧಗಳನ್ನು ಮೀರುತ್ತಿವೆ ಎಂದು ಅನ್ನಿಸಿದರೆ ನಾವು ಅಂತಹ ಒಡಂಬಡಿಕೆಗಳಿಂದ ಹೊರಬರುತ್ತೇವೆ. ಅಭಿವೃದ್ಧಿಯ ಮಾನದಂಡಗಳು ಬದಲಾಗುತ್ತಿರುವ ಈ ದಿನಗಳಲ್ಲಿ ನಾವೂ ಕೂಡ ಬದಲಾಗಲೇ ಬೇಕಾಗುತ್ತದೆ.

ಆರ್‌ಎಸ್‌ಎಸ್‌ ದಕ್ಷಿಣ ಪ್ರಾಂಥ್ಯ ಪ್ರಚಾರ ಪ್ರಮುಖ್‌ ಪ್ರದೀಪ್‌ಜಿ.

ಆರ್‌ಎಸ್‌ಎಸ್‌ ದಕ್ಷಿಣ ಪ್ರಾಂತ್ಯ ಪ್ರಚಾರ ಪ್ರಮುಖ್‌ ಪ್ರದೀಪ್‌ಜಿ.

ಸಮಾಚಾರ: ಆರ್ಥಿಕ ವಿಚಾರಗಳು ಬಂದಾಗ ನೀವು ಕಾಲದ ಜತೆಗೆ ಬದಲಾಗಬೇಕು ಎಂದು ಹೇಳಿದಿರಿ. ಆದರೆ ಅದೇ ಸಾಂಸ್ಕೃತಿಕ, ಧಾರ್ಮಿಕ ವಿಚಾರಗಳು ಬಂದಾಗ ಆರ್‌ಎಸ್‌ಎಸ್‌ ಇನ್ನೂ ಹಳೆಯ ಚಿಂತನೆಗಳಿಂದ ಹೊರ ಬಂದಿದೆ ಎಂದು ಅನೇಕರಿಗೆ ಅನ್ನಿಸುತ್ತಿಲ್ಲ. ಉದಾಹರಣೆಗೆ ಇತ್ತೀಚೆಗೆ ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಕೊಲೆಗಳು. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ಪ್ರದೀಪ್‌: ಗೋ ರಕ್ಷಣೆ ಮಾಡುವವರೆಲ್ಲರೂ ಆರ್‌ಎಸ್‌ಎಸ್‌ ಎಂಬ ಗ್ರಹಿಕೆ ಇದೆ. ಇದು ತಪ್ಪು. ಇವತ್ತು ಹಿಂದೂ ಸಮಾಜ ಕ್ರೀಯಾಶೀಲವಾಗಿದೆ. ಗೋವಿನ ರಕ್ಷಣೆಗೆ ಮುಂದಾಗಿದೆ. ಅವರ ಧಾರ್ಮಿಕ ನಂಬಿಕೆಗಳ ಸಂಕೇತಗಳನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅದು ಆತ್ಮರಕ್ಷಣೆಗಾಗಿ ನಡೆಯುತ್ತಿರುವ ಘಟನೆಗಳು ಅಷ್ಟೆ. ಆದರೆ ಹೊರಗಡೆ ಇರುವುದು ಏನು ಅಂದರೆ, ಗೋ ರಕ್ಷಣೆ ಹೆಸರಿನಲ್ಲಿ ದಾಳಿ ಮಾಡುವವರೆಲ್ಲರೂ ಆರ್‌ಎಸ್‌ಎಸ್‌, ಭಜರಂಗ ದಳ ಎಂಬ ಭಾವನೆ ಇದೆ.

ಸಮಾಚಾರ: ಆತ್ಮರಕ್ಷಣೆಗಾಗಿ ನಡೆಯುತ್ತಿರುವ ದಾಳಿಗಳು ಎಂದರೆ ಏನರ್ಥ? ಸ್ವಲ್ಪ ವಿವರಿಸಿ. ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಕ್ರಿಮಿನಲ್‌ ಚಟುವಟಿಕೆಗಳನ್ನು ನೀವು ಬೆಂಬಲಿಸುತ್ತೀರಾ? 

ಪ್ರದೀಪ್‌: ಗೋ ರಕ್ಷಣೆಯನ್ನು ಯಾವಾಗ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿ. ಯಾಕೆ ರಾತ್ರಿಯೇ ಇಂತಹ ಘಟನೆಗಳು ನಡೆಯುತ್ತಿವೆ? ಯಾಕೆ ಹಾಲು, ಮೊಸರು ಮಾರುವವರ ಮೇಲೆ ಹಲ್ಲೆ ನಡೆಯುತ್ತಿಲ್ಲ? ದನಗಳನ್ನು ರಕ್ಷಿಸಿದ ಎಂದು ಹೇಳುವ ಘಟನೆಗಳು ನಡೆಯುತ್ತಿವೆ ಎಂದರೆ ಯಾರೋ ದನಗಳನ್ನು ಕದ್ದು ಸಾಗಿಸುತ್ತಿದ್ದಾರೆ ಎಂದು ಅರ್ಥ. ಅಂತಹ ಸಮಯದಲ್ಲಿ ಮಾತ್ರವೇ ಗೋ ರಕ್ಷಕರು ಅಗ್ರೆಶನ್‌ ತೋರಿಸುತ್ತಿದ್ದಾರೆ. ಹೊರಗಡೆ ದಾಳಿ ನಡೆಸಿದ ಸಂಗತಿಗಳು ಮಾತ್ರ ಬರುತ್ತಿವೆಯಾದರೂ, ಸಮಾಜ ಯಾಕೆ ಹಾಗೆ ಪ್ರತಿಕ್ರಿಯೆ ನೀಡಿತು ಎಂದು ಯೋಚನೆ ಮಾಡುತ್ತಿಲ್ಲ. ಅದು ಆತ್ಮ ರಕ್ಷಣೆಗಾಗಿ ನಡೆಯುತ್ತಿರುವ ದಾಳಿಗಳು. ಆತ್ಮ ಎಂದರೆ ನಾನು, ನನ್ನ ಸಮಾಜ, ಸಮಾಜದ ಜನ ಜೀವನದ ಜತೆ ಬೆರೆತು ಹೋಗಿರುವ ಸಂಗತಿಗಳ ರಕ್ಷಣೆ ಅಂತ ಅರ್ಥ. ಹಾಗಂತ ನಾವು ಕ್ರಿಮಿನಲ್‌ ಚಟುವಟಿಕೆಗಳನ್ನು ಬೆಂಬಲಿಸುತ್ತೇವೆ ಅಂತ ಅರ್ಥ ಅಲ್ಲ.

ಸಮಾಚಾರ: ಆರ್‌ಎಸ್‌ಎಸ್‌ನ ರಾಜಕೀಯ ಮುಖ ಬಿಜೆಪಿ. ಇವತ್ತು ಬಿಜೆಪಿಗೆ ಹಿಂದೆಂದೂ ಇಲ್ಲದ ನಾಯಕತ್ವದ ವರ್ಚಸ್ಸು ಸಿಕ್ಕಿದೆ- ಅದು ಮೋದಿ ಮೂಲಕ. ಅವರು ಆರ್‌ಎಸ್‌ಎಸ್‌ಗಿಂತ, ಬಿಜೆಪಿಗಿಂತ ದೊಡ್ಡ ಇಮೇಜ್‌ ಬೆಳೆಸಿಕೊಂಡಿದ್ದಾರೆ. ಇದನ್ನು ಆರ್‌ಎಸ್‌ಎಸ್‌ ಹೇಗೆ ಪರಿಗಣಿಸುತ್ತಿದೆ?

ಪ್ರದೀಪ್‌: ಯಾರೋ ಒಬ್ಬರು ಸಂಘಕ್ಕಿಂತ ದೊಡ್ಡವರಾಗುತ್ತಾರೆ ಎಂಬುದೇ ಒಪ್ಪಲು ಸಾಧ್ಯವಿಲ್ಲದ ವಿಚಾರ. ವ್ಯಕ್ತಿ ಫೇಸ್‌ ಆಫ್‌ ದಿ ಆರ್ಗನೈಸೇಶನ್‌ (ಸಂಘಟನೆಯ ಚಹರೆ) ಮಾತ್ರವೇ ಹೊರತು ಸೈಸ್‌ ಆಫ್‌ ದಿ ಆರ್ಗನೈಸೇಶನ್‌ ಅಲ್ಲ. ನರೇಂದ್ರ ಮೋದಿ ಅಥವಾ ಅಮಿತ್‌ ಶಾ ಬಿಜೆಪಿಯನ್ನು ಈ ಕಾಲಘಟ್ಟದಲ್ಲಿ ಮುನ್ನಡೆಸುತ್ತಿದ್ದಾರೆ. ಅದು ರಾಜಕೀಯ ಪಕ್ಷಕ್ಕೆ ಅನಿವಾರ್ಯ ಇರಬಹುದು. ಅವರು ಸಂಘಕ್ಕಿಂತ ದೊಡ್ಡದಾಗಿ ಬೆಳೆದಿದ್ದಾರೆ ಎಂಬುದು ರಾಜಕೀಯ ವಲಯದಲ್ಲಿ ನಡೆಯುವ ಚರ್ಚೆಗಳು ಅಷ್ಟೆ. ಆದರೆ ನಮ್ಮೊಳಗೆ ಅವರು ಈ ಕಾಲದಲ್ಲಿ ಫೇಸ್‌ ಆಫ್‌ ದಿ ಆರ್ಗನೈಸೇಶನ್‌ ಅಷ್ಟೆ. ಕಾಲಕಾಲಕ್ಕೆ ಪ್ರತಿನಿಧಿಗಳು ಬದಲಾಗಲೂಬಹುದು, ಬದಲಾಗುತ್ತಾರೆ ಕೂಡ.

ಸಮಾಚಾರ: ಕರ್ನಾಟಕದ ವಿಚಾರಕ್ಕೆ ಬರುವುದಾದರೆ ಸದ್ಯ ಬಿಜೆಪಿ ಒಳಗೆ ನಡೆಯುತ್ತಿರುವ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಸಂಘರ್ಷದ ಬೇರುಗಳು ಆರ್‌ಎಸ್‌ಎಸ್‌ನಲ್ಲಿವೆ ಎನ್ನುತ್ತಾರೆ. ಇದು ಎಷ್ಟರ ಮಟ್ಟಿಗೆ ನಿಜ?

ಪ್ರದೀಪ್‌: ನೋಡಿ, ಆರ್‌ಎಸ್‌ಎಸ್‌ ರೀತಿಯಲ್ಲಿಯೇ ಬಿಜೆಪಿಗೂ ಕೂಡ ಪ್ರತ್ಯೇಕ ಸಂವಿಧಾನ ಇದೆ. ರಾಜ್ಯಾಧ್ಯಕ್ಷ, ಕಾರ್ಯದರ್ಶಿಗಳು ಇದ್ದಾರೆ. ನಾವು ಅವರ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ. ಹಾಗಂತ ಅವರೊಳಗೆ ಏನು ನಡೆಯುತ್ತಿದೆ ಎಂದು ನಮಗೆ ಗೊತ್ತಾಗುತ್ತಿರುತ್ತದೆ. ಒಂದು ವೇಳೆ, ಅವರಿಂದಲೇ ಮಧ್ಯಸ್ಥಿಕೆ ವಹಿಸಿಕೊಳ್ಳಲು ನಮಗೆ ಕೋರಿಕೆ ಬಂದರೆ ನಾವು ಸಭೆಯಲ್ಲಿ ಪಾಲ್ಗೊಳ್ಳುತ್ತೇವೆ. ಅಲ್ಲಿಯೂ ಕೂಡ ನಾವು ಸಲಹೆಗಳನ್ನು ನೀಡುತ್ತೇವೆಯೇ ಹೊರತು ಸೂಚನೆಗಳನ್ನು ಅಲ್ಲ.

ಸಮಾಚಾರ: ಮೊನ್ನೆ ನಡೆದ ಮಂಗಳೂರು ಕೋಮು ಘಟನೆ ನಂತರ ಸಿಎಂ ಸಿದ್ದರಾಮಯ್ಯ ಆರ್‌ಎಸ್‌ಎಸ್‌ನ್ನೂ ಒಳಗೊಂಡಂತೆ ಒಂದಷ್ಟು ಸಂಘಟನೆಗಳನ್ನು ಮತೀಯವಾದಿ ಗೂಂಡಾಗಳು ಎಂದು ಕರೆದಿದ್ದಾರೆ? ಇದಕ್ಕೆ ನಿಮ್ಮ ಕಡೆಯಿಂದ ಈವರೆಗೂ ಪ್ರತಿಕ್ರಿಯೆ ಬರಲಿಲ್ಲ…

ಪ್ರದೀಪ್‌: ಕಳೆದ ನಾಲ್ಕು ವರ್ಷಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರ ಆಡಳಿತವನ್ನು ಎಲ್ಲರೂ ನೋಡಿದ್ದಾರೆ. ಅವರು ಯಾರ ಪರವಾಗಿದ್ದಾರೆ; ಯಾರ ವಿರುದ್ಧವಾಗಿದ್ದಾರೆ ಎಂದು ವಿವರವಾಗಿ ಹೇಳುವ ಅವಶ್ಯಕತೆಯೇ ಇಲ್ಲ. ತಾನು ಯಾರ ಪರವಾಗಿದ್ದೀನಿ ಎಂಬ ಬಗ್ಗೆ ಒಂದು ಸ್ಪಷ್ಟವಾದ ನಿಲುವು ತೆಗೆದುಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ ಯಾರ ವಿರುದ್ಧವಾಗಿದ್ದೀನಿ ಅಂತನೂ ತೋರಿಸಿದ್ದಾರೆ. ಈಗೇನಾಗಿದೆ ಎಂದರೆ ಒಂದೊಂದಾಗಿ ಅವರು ಹೆಸರುಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಯಾರನ್ನು ಕಂಡರೆ ಅವರಿಗೆ ಭಯ ಇದೆ ಅಂತ ಈ ಮೂಲಕ ಗೊತ್ತಾಗುತ್ತಿದೆ.

ಸಮಾಚಾರ: ಕೊನೆಯದಾಗಿ, ಆರ್‌ಎಸ್‌ಎಸ್‌ ಕೆಲವು ವಿಚಾರಗಳಲ್ಲಿ ಸಾಕಷ್ಟು ಬದಲಾಗಿದೆ ಎಂದು ಅನ್ನಿಸುತ್ತಿದೆ. ಇತ್ತೀಚಿಗೆ ನಿಮ್ಮ ನಾಯಕರ ಭಾಷಣದಲ್ಲಿ ಹಿಂದೆ ಕೇಳಿಬರುತ್ತಿದ್ದ ಅಖಂಡ ಹಿಂದೂ ರಾಷ್ಟ್ರ, ಹಿಂದೂ ತರಹದ ಪದಗಳು ಕೇಳಿಸುತ್ತಿಲ್ಲ. ಅಲ್ವಾ? 

ಪ್ರದೀಪ್‌: ನೀವು ಗಮನಿಸಿದಂತೆ ನಾವೂ ಕೂಡ ಕಾಲಕ್ಕೆ ತಕ್ಕಂತೆ ಬದಲಾಗುತ್ತಲೇ ಬಂದಿದ್ದೇವೆ. ಆದರೆ ಬೇರುಗಳು ಗಟ್ಟಿಯಾಗಿವೆ. ಅದೊಂದು ರೀತಿಯಲ್ಲಿ ಫ್ಲೆಕ್ಸಿಬಿಲಿಟಿ ಅನ್ನಬಹುದು. ನಾವು ಬಳಸುವ ಒಂದು ಪದ (ಹಿಂದೂ) ದ ಕಾರಣಕ್ಕೆ ಅನೇಕರು ಒಂದು ಹೆಜ್ಜೆ ಹಿಂದೆ ಹೋಗುತ್ತಾರೆ. ಆದರೆ ನಮಗೂ ಅವರಿಗೂ ಅನೇಕ ವಿಚಾರಗಳಲ್ಲಿ ಸಾಮ್ಯತೆ ಇರುತ್ತದೆ. ಹೀಗಾಗಿ ನೀವು ಭಾರತ ಅಂದುಕೊಂಡು ಬನ್ನಿ, ಇಂಡಿಯಾ ಅಂದುಕೊಂಡು ಬನ್ನಿ, ನಮಗೇನೂ ಸಮಸ್ಯೆ ಇಲ್ಲ ಎನ್ನುತ್ತಿದ್ದೇವೆ.  ಯಾವತ್ತಿಗೂ ಸಮಾಜ ದೊಡ್ಡದು, ಸಂಘ ಚಿಕ್ಕದು. ಅದು ನಮಗೆ ಈ 91 ವರ್ಷಗಳಲ್ಲಿ ಅರ್ಥವಾಗಿದೆ.

 

Leave a comment

Top