An unconventional News Portal.

ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ತಡೆ ಒಡ್ಡಿದ ಅಂತರರಾಷ್ಟ್ರೀಯ ಕೋರ್ಟ್; ಸದ್ಯಕ್ಕೆ ಭಾರತ ನಿರಾಳ

ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ತಡೆ ಒಡ್ಡಿದ ಅಂತರರಾಷ್ಟ್ರೀಯ ಕೋರ್ಟ್; ಸದ್ಯಕ್ಕೆ ಭಾರತ ನಿರಾಳ

ಭಾರತೀಯ ಪ್ರಜೆ ಕುಲಭೂಷಣ್ ಸುಧೀರ್ ಜಾಧವ್ ಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ ನೀಡಿದ್ದ ಗಲ್ಲು ಶಿಕ್ಷೆಗೆ ಅಂತರರಾಷ್ಟ್ರೀಯ ನ್ಯಾಯಾಲಯ ಬುಧವಾರ ತಡೆ ನೀಡಿದೆ. ಇದರಿಂದ ಸದ್ಯಕ್ಕೆ ಭಾರತ ನಿರಾಳವಾಗಿದೆ. ಆದರೆ ಪಾಕಿಸ್ತಾನ ಸರಕಾರ ಅಲ್ಲಿನ ನಾಗರೀಕರ ಪ್ರಭಲ ವಿರೋಧವನ್ನು ಎದುರಿಸಬೇಕಾಗಿ ಬಂದಿದೆ.

ತೀರ್ಪಿನ ಆರಂಭದಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಈ ಪ್ರಕರಣ ತನ್ನ ವ್ಯಾಪ್ತಿಯದ್ದು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿತು. 1977 ವಿಯೆನ್ನಾ ಒಪ್ಪಂಧದಲ್ಲಿ ಗೂಢಚರ್ಯೆ ಮಾಡುವವರನ್ನು ಹೊರಗಿಟ್ಟಿಲ್ಲ. ಮತ್ತು ಇದಕ್ಕೆ ಎರಡೂ ದೇಶಗಳೂ ಸಹಿ ಮಾಡಿವೆ. ಹೀಗಾಗಿ ಇದು ತನ್ನ ವ್ಯಾಪ್ತಿಗೆ ಬರುತ್ತದೆ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಈ ಹಿಂದೆ ಪಾಕಿಸ್ತಾನ, ಜಾಧವ್ ಪ್ರಕರಣ ಅಂತರರಾಷ್ಟ್ರೀಯ ಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ ಎಂದು ವಾದಿಸಿತ್ತು. ಇದರೊಂದಿಗೆ ನ್ಯಾಯಾಲಯದ ಅಧ್ಯಕ್ಷ ರೋನಿ ಅಬ್ರಹಾಂ ಭಾರತದ ವಾದವನ್ನೂ ಎತ್ತಿ ಹಿಡಿದಿದ್ದಾರೆ. ವಿಯೆನ್ನಾ ಒಪ್ಪಂದದಂತೆ ಗೂಢಚರರನ್ನು ಬಂಧಿಸಿದಾಗ ಧೂತವಾಸ ಕಚೇರಿಗೆ ಮಾಹಿತಿ ನೀಡಬೇಕು ಮತ್ತು ದೂತವಾಸ ಕಚೇರಿಯನ್ನು ಸಂಪರ್ಕಿಸಲು ಬಂಧಿತರಿಗೆ ಅವಕಾಶ ನೀಡಬೇಕು ಎಂದು ವಾದಿಸಿದ್ದ ಭಾರತದ ವಾದಕ್ಕೆ ಮನ್ನಣೆ ಸಿಕ್ಕಿದೆ.

ವಿಯೆನ್ನಾ ಒಪ್ಪಂದದಂತೆ ಭಾರತದ ಹೂಡಿರುವ ವಾದ ಸರಿಯಾಗಿದೆ. ಜತೆಗೆ ವಿಚಾರಣೆ ವೇಳೆಯಲ್ಲಿ ಕುಲಭೂಷಣ್ ಜಾಧವ್ ರನ್ನು ಪಾಕಿಸ್ತಾನ ಗಲ್ಲು ಶಿಕ್ಷೆಗೆ ದೂಡಬಹುದು ಎಂಬ ಭಾರತದ ಆತಂಕವೂ ಸಮಂಜಸವಾಗಿದೆ,” ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ವಿಚಾರಣೆ ವೇಳೆಯಲ್ಲಿ ಪಾಕಿಸ್ತಾನ ಶಿಕ್ಷೆ ವಿಧಿಸಿಬಿಡಬಹುದು ಎಂದು ಭಾರತ ಆಂತಕ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಂತರರಾಷ್ಟ್ರೀಯ ನ್ಯಾಯಾಲಯ, ಹೇಗ್ (ನೆದರ್ಲೆಂಡ್)

ಅಂತರರಾಷ್ಟ್ರೀಯ ನ್ಯಾಯಾಲಯ, ಹೇಗ್ (ನೆದರ್ಲೆಂಡ್)

ಜಾಧವ್ ಗಲ್ಲು ಶಿಕ್ಷೆ 2017ರ ಆಗಸ್ಟಿಗೂ ಮೊದಲು ಜಾರಿಗೆ ಬರುವಂತಿಲ್ಲ ಎಂದು ಕೋರ್ಟ್ ಪಾಕಿಸ್ತಾನಕ್ಕೆ ಸ್ಪಷ್ಟವಾದ ನಿರ್ದೇಶನಗಳನ್ನು ನೀಡುತ್ತದೆ. ತನ್ನ ಅಂತಿಮ ಆದೇಶ ನೀಡುವ ಮೊದಲು ಯಾವುದೇ ಕ್ಷಣದಲ್ಲಾದರೂ ಗಲ್ಲು ಶಿಕ್ಷೆ ವಿಧಿಸುವ ಅಪಾಯಗಳಿರುತ್ತವೆ. ಜತೆಗೆ ಪಾಕಿಸ್ತಾನ ತಾನು ಗಲ್ಲು ಶಿಕ್ಷೆ ನೀಡುವುದಿಲ್ಲ ಎಂದು ಯಾವ ಭರವಸೆಯನ್ನೂ ನೀಡಿಲ್ಲ ಎಂಬುದನ್ನು ಕೋರ್ಟ್ ಗಮನಿಸಿದೆ. ಹೀಗಾಗಿ ಈ ಪ್ರಕರಣದ ತ್ವರಿತ ವಿಚಾರಣೆ ಅಗತ್ಯವಾಗಿತ್ತು ಎಂಬುದನ್ನು ಕೋರ್ಟ್ ಒಪ್ಪಿಕೊಳ್ಳುತ್ತದೆ,” ಎಂದು ತನ್ನ ಆದೇಶದಲ್ಲಿ ನ್ಯಾ. ರೋನಿ ಅಬ್ರಹಾಂ ಹೇಳಿದ್ದಾರೆ.

ಜತೆಗೆ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಪಾಕಿಸ್ತಾನ ಯಾವುದೇ ಕಾರಣಕ್ಕೂ ಜಾಧವ್ ಗೆ ಗಲ್ಲು ಶಿಕ್ಷೆ ವಿಧಿಸದಂತೆ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ನ್ಯಾಯಾಲಯ ಪುನುರುಚ್ಛರಿಸಿದೆ. ಹೀಗಾಗಿ ಪಾಕಿಸ್ತಾನ ಯಾವುದೇ ಕಾರಣಕ್ಕೂ ಕುಲಭೂಷಣ್ ಜಾಧವ್ ಗೆ ಗಲ್ಲು ಶಿಕ್ಷೆಯನ್ನು ವಿಧಿಸುವಂತಿಲ್ಲ. ಇಷ್ಟೇ ಅಲ್ಲದೆ ಆದೇಶ ಪಾಲನೆಗೆ ಪಾಕಿಸ್ತಾನ ತೆಗೆದುಕೊಂಡ ಮಾರ್ಗಗಳನ್ನೂ ತನ್ನ ಗಮನಕ್ಕೂ ತರಬೇಕು ಎಂದು ನ್ಯಾಯಾಲಯ ಹೇಳಿದೆ.

ಐಸಿಜೆ ಅಧಿಕಾರವಿಲ್ಲ– ಪಾಕಿಸ್ತಾನ ವಾದ

ತೀರ್ಪಿನ ಬೆನ್ನಲ್ಲೇ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ತನ್ನ ಹಳೇ ವಾದವನ್ನು ಮುಂದುವರಿಸಿದೆ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರಗಳಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಮಧ್ಯಪ್ರವೇಶಿಲು ಅಧಿಕಾರ ಇಲ್ಲ ಎಂದು ಅದು ಮತ್ತೆ ಮೊಂಡುವಾದ ಹೂಡಿದೆ.

ಈ ಕುರಿತು ಮಾತನಾಡಿರುವ ವಿದೇಶಾಂಗ ಇಲಾಖೆ ವಕ್ತಾರ ನಫೀಜ್‌ ಝಕಾರಿಯಾ ಕುಲಭೂಷಣ್ ಜಾಧವ್‌ ಪ್ರಕರಣದಲ್ಲಿ ಐಸಿಜೆಗೆ ದೂರು ನೀಡುವ ಮೂಲಕ ಭಾರತವು ತನ್ನ ನೈಜ ಮುಖವನ್ನು ಬಚ್ಚಿಡಲು ಯತ್ನಿಸುತ್ತಿದೆ. ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯದ ಮುಂದೆ ಪ್ರಬಲ ಸಾಕ್ಷ್ಯಗಳನ್ನು ಮಂಡಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಹೀಗೆ ಪಾಕಿಸ್ತಾನದ ರಾಜಕಾರಣಿಗಳು ಜನ ವಿರೋಧವನ್ನು ಎದುರಿಸುತ್ತಿದ್ದರೆ ಇತ್ತ ಭಾರತದಲ್ಲಿ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಹಿರಿಯ ವಕೀಲ ಹರೀಶ್ ಸಾಳ್ವೆ ಸಮಯೋಚಿತ ನಿರ್ಧಾರದಿಂದ ಭಾರತಕ್ಕೆ ಪೂರಕ ತೀರ್ಪು ಹೊರ ಬಿದ್ದಿದೆ.

ಇನ್ನೇನು ಆಗಸ್ಟಿನಲ್ಲಿ ಹೊರ ಬೀಳಲಿರುವ ತೀರ್ಪನ್ನು ಉಭಯ ದೇಶಗಳ ಜನ ಎದುರು ನೋಡುತ್ತಿದ್ದಾರೆ.

ಪೂರಕ ಮಾಹಿತಿ: ದಿ ವೈರ್

ಚಿತ್ರ ಕೃಪೆ: ಸ್ಕ್ರಾಲ್ ಡಾಟ್ ಇನ್

Leave a comment

Top