An unconventional News Portal.

ಮೂಲಭೂತವಾದಿ ನಾಯಕನ ಕೈಗೆ ದೇಶ ಕೊಟ್ಟರೆ ಏನಾಗುತ್ತದೆ? ಟರ್ಕಿ ಸಾಗಿ ಬಂದ ಹಾದಿಯಲ್ಲಿ…

ಮೂಲಭೂತವಾದಿ ನಾಯಕನ ಕೈಗೆ ದೇಶ ಕೊಟ್ಟರೆ ಏನಾಗುತ್ತದೆ? ಟರ್ಕಿ ಸಾಗಿ ಬಂದ ಹಾದಿಯಲ್ಲಿ…

ಇಸ್ಲಾಂ ಬಹುಸಂಖ್ಯಾತ ದೇಶಗಳ ಜಗತ್ತಿನಲ್ಲಿ ಮೊದಲಿನಿಂದಲೂ ಟರ್ಕಿಗೆ ವಿಶಿಷ್ಟ ಸ್ಥಾನ. ಗಣರಾಜ್ಯವನ್ನು ಅಳವಡಿಸಿಕೊಂಡು ಯಶಸ್ಸು ಕಂಡ ಮುಸ್ಲಿಂ ದೇಶ ಎನ್ನುವ ಕಾರಣಕ್ಕೆ ಈ ದೇಶದತ್ತ ಹೆಚ್ಚಿನವರು ಬೆರಗುಗಣ್ಣಿನಿಂದ ನೋಡುತ್ತಿದ್ದರು. ಸಿರಿಯಾ, ಇರಾಕ್ನಂತ ಯುದ್ಧ ಪೀಡಿತ ದೇಶಗಳೊಂದಿಗೆ ಗಡಿ ಹಂಚಿಕೊಂಡೂ ಸುಸ್ಥಿರವಾಗಿ ನಿಂತಿದ್ದು ಟರ್ಕಿಯ ಕಡಿಮೆ ಸಾಧನೆ ಏನಲ್ಲ. ಆದರೆ ಇದೀಗ ಟರ್ಕಿ ಅಸ್ಥಿರಗೊಳ್ಳುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ. ಶುಕ್ರವಾರದ ಸೇನಾ ಕ್ಷಿಪ್ರ ಕ್ರಾಂತಿ ಅದರ ಭಾಗ ಅಷ್ಟೆ.

ಮಧ್ಯ ಪೂರ್ವ ದೇಶಗಳು ಆಂತರಿಕ ಕಲಹದಿಂದ ನಲುಗುತ್ತಿದ್ದಾಗ ಎಲ್ಲರೂ ಟರ್ಕಿಯನ್ನು ಉದಾಹರಣೆಯಾಗಿ ನೀಡುತ್ತಿದ್ದರು. ಎಷ್ಟೋ ದೇಶಗಳಿಗೆ ಟರ್ಕಿ ‘ಅಭಿವೃದ್ಧಿ ಮಾಡೆಲ್’ ಆಗಿತ್ತು. ಇಲ್ಲಿನ ಪ್ರವಾಸೋದ್ಯಮ, ಮುಕ್ತ ವಾತಾವರಣ, ಇಸ್ತಾನ್ಬುಲ್ ನಗರದ ವಿನ್ಯಾಸ… ಹೀಗೆ ವಿಶ್ವದ ಗಮನ ಸೆಳೆಯುವ ಹಲವು ಅಂಶಗಳನ್ನು ಇದು ಒಳಗೊಂಡಿತ್ತು.

ಆದರೆ ದೇಶದ ಇತ್ತೀಚಿನ ಆಂತರಿಕ ಬೆಳವಣಿಗೆಗಳು ಆತಂಕ ಮೂಡಿಸುತ್ತಿವೆ.

ಇಲ್ಲಿನ ಅಧ್ಯಕ್ಷ ರೆಸೆಪ್ ತಯ್ಯೆಪ್ ಎರ್ಡೋಗನ್ ಅವರ ಪಕ್ಷ ‘ಎಕೆ ಪಾರ್ಟಿ’. ಟರ್ಕಿಯ ಸಂಪ್ರದಾಯವಾದಿಗಳು ಮತ್ತು ಮುಸ್ಲಿಮ್ ಪಂಗಡದವರ ಬೆಂಬಲ ಅವರ ಪಕ್ಷಕ್ಕಿದೆ. ಎರ್ಡೋಗನ್ ದೇಶದ ಜನಪ್ರಿಯ ನಾಯಕ ಬೇರೆ. ಆದರೆ ಇದೇ ಎರ್ಡೋಗನ್ ಮೇಲೆ ಆರೋಪಗಳೂ ಕೇಳಿ ಬರತೊಡಗಿದವು. ಕೆಲವು ವಿಚಾರಗಳಲ್ಲಿ ಅಧ್ಯಕ್ಷರ ಮೌನವಾಗಿದ್ದಾರೆ ಎಂದು ಆಪಾದಿಸಿ ಜನ ಬೀದಿಗಿಳಿದರು.

ಅಧ್ಯಕ್ಷರ ಕೆಲವು ನಡೆಗಳು ಅಲ್ಲಿನ ಪ್ರಗತಿಪರರಿಗೆ ಹಿಡಿಸಲಿಲ್ಲ. ಟರ್ಕಿಯ ಪತ್ರಕರ್ತರನ್ನು ವಿಚಾರಣೆಗೆ ಒಳಪಡಿಸಿದ್ದು, ಜೈಲಿಗಟ್ಟಿದ್ದು, ವಿದೇಶಿ ಪತ್ರಕರ್ತರ ಮೇಲಿನ ದೌರ್ಜನ್ಯ, ಗಡಿ ಪಾರು ಹೀಗೆ ಎರ್ಡೋಗನ್ ನಿರ್ದಯತೆಗೆ ಸಾಕ್ಷಿಗಳು ಸಿಗತೊಡಗಿದವು. ಈ ನಿರ್ದಯತೆಗಳ ಉತ್ತುಂಗ ಸ್ಥಿತಿ ಎಂಬಂತೆ ಕಳೆದ ತಿಂಗಳು ಟರ್ಕಿಯ ಅತಿ ದೊಡ್ಡ ಪತ್ರಿಕೆ ‘ಝಮಾನ್’ ಕಚೇರಿಗೆ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಪತ್ರಿಕೆಯ ಸಿಬ್ಬಂದಿಗಳ ಗಾಯಗೊಂಡರು. ತನ್ನ ಕೊನೆಯ ಆವೃತ್ತಿ ಹೊರ ತಂದ ‘ಝಮಾನ್’ ಟರ್ಕಿಯ ಪತ್ರಿಕೋದ್ಯಮ ‘ಕರಾಳ ದಿನ’ ಆಚರಿಸಿಕೊಳ್ಳುತ್ತಿದೆ ಎಂದು ಜರೆಯಿತು. ಕೊನೆಗೆ ಸರಕಾರ ಈ ಪತ್ರಿಕೆಯ ಪ್ರಕಟಣೆಯನ್ನು ಪುನರಾರಂಭ ಮಾಡಿದಾಗ, ಮೂಲ ಸ್ವರೂಪವನ್ನೇ ಕಳೆದುಕೊಂಡು, ಸರಕಾರಿ ಪರವಾದ ಲೇಖನಗಳೇ ತುಂಬಿ ತುಳುಕುತ್ತಿತ್ತು. ಇದನ್ನು ಪರೋಕ್ಷವಾಗಿ ಸರ್ವಾಧಿಕಾರಿ ನಡೆ ಎಂಬುದಾಗಿ ಅಲ್ಲಿನ ಪ್ರಗತಿಪರರು ಜರೆಯಲಾರಂಭಿಸಿದರು.

ಝಮಾನ್ ಪತ್ರಿಕೆಯ ಕಚೇರಿ ಮೇಲಿನ ದಾಳಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ನಾಗರಿಕರು

ಝಮಾನ್ ಪತ್ರಿಕೆಯ ಕಚೇರಿ ಮೇಲಿನ ದಾಳಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ನಾಗರಿಕರು

ಅಧ್ಯಕ್ಷರ ದೌರ್ಜನ್ಯ ಟರ್ಕಿ ಮಾಧ್ಯಮಗಳಿಗೆ ಮಾತ್ರ ಸೀಮಿತವಾಗಲಿಲ್ಲ. ಎರ್ಡೋಗನ್ ಅಂಗ ರಕ್ಷಕರು ಅಮೆರಿಕಾದಲ್ಲಿ ವರದಿಗಾರರ ಮೇಲೆ ದೌರ್ಜನ್ಯ ನಡೆಸಿದರು. ಟರ್ಕಿ ಅಧ್ಯಕ್ಷನನ್ನು ಟಿವಿ ಕಾರ್ಯಕ್ರಮದಲ್ಲಿ ತೋರಿಸಿದ್ದಕ್ಕಾಗಿ ಜರ್ಮನಿಯ ವಿಡಂಬನೆಕಾರನನ್ನು ಅದೇ ದೇಶದಲ್ಲಿ ವಿಚಾರಣೆ ನಡೆಸಲಾಯಿತು. ಹೀಗೆ ಹಿಟ್ಲರ್ ಮಾದರಿಯಲ್ಲಿ ಎರ್ಡೋಗನ್ ಹೆಜ್ಜೆ ಹಾಕತೊಡಗಿದರು.

ಇಷ್ಟಕ್ಕೂ ಎರ್ಡೋಗನ್ ಅವರಿಗೆ ಟರ್ಕಿ ದೇಶದ ರಾಜಕೀಯ ಪ್ರವೇಶ ಸಿಕ್ಕಿದ್ದೆ ಒಂದು ಅಪರೂಪದ ಕತೆ. 2002ರಲ್ಲಿ ಎರ್ಡೋಗನ್ ಟರ್ಕಿ ದೇಶದ ಪ್ರಧಾನಿಯಾಗಿ ಆಯ್ಕೆಯಾಗುತ್ತಾರೆ. ಅದೂ ‘ಎಕೆ ಪಕ್ಷ’ ಸ್ಥಾಪಿಸಿ ಕೇವಲ ಒಂದು ವರ್ಷದ ಅಂತರದಲ್ಲಿ. ಇದಾದ ಬಳಿಕ 11 ವರ್ಷ ಪ್ರಧಾನಿಯಾಗಿದ್ದ ಎರ್ಡೋಗನ್ ಕಳೆದ 2014ರಲ್ಲಿ ವಿಧ್ಯುಕ್ತವಾಗಿ ದೇಶದ ಅಧ್ಯಕ್ಷರಾಗುತ್ತಾರೆ. ಹೀಗೆ ಕಡಿಮೆ ಅಂತರದಲ್ಲಿ ದೇಶದ ಅತ್ಯುನ್ನತ ಅಧಿಕಾರಕ್ಕೇರಿದ ಅವರ ಮೇಲೆ ಸಹಜವಾಗಿಯೇ ಜನರ ನಿರೀಕ್ಷೆ ಹೆಚ್ಚಿತ್ತು. ಆದರೆ, ಅದನ್ನು ಉಳಿಸಿಕೊಳ್ಳುವಲ್ಲಿ ಅವರ ನಡೆಗಳು ಸೋಲತೊಡಗಿದವು.

ಮಿಲಿಟರಿ ಸವಾಲು:

ಎರ್ಡೋಗನ್ ಅಧ್ಯಕ್ಷರಾಗುತ್ತಿದ್ದಂತೆ ಅವರಿಗೆ ಮಿಲಿಟರಿ ಸವಾಲು ಎದುರಾಗುತ್ತದೆ. ಟರ್ಕಿಗೆ ಮಿಲಿಟರಿಯ ಸವಾಲೇನೂ ಹೊಸದಲ್ಲ. ಅಲ್ಲಿ ಎಕೆ ಪಕ್ಷ ಅಧಿಕಾರಕ್ಕೆ ಬರುವ ಮೊದಲೇ ಮಿಲಿಟರಿ ಹಲವು ಬಾರಿ ಕ್ಷಿಪ್ರ ಕ್ರಾಂತಿಗೆ ಯೋಜನೆ ರೂಪಿಸಿತ್ತು. ಇದೇ ರೀತಿ 1960, 1971, 1980 ಮತ್ತು 1997 ರಲ್ಲಿ ಸೇನಾ ಕ್ರಾಂತಿ ನಡೆದಿತ್ತು.

2013ರಲ್ಲಿ ‘ಎಕೆಪಿ’ ಕಿತ್ತೆಸೆಯಲು ಯೋಜನೆ ರೂಪಿಸಿದ್ದ 17 ಹಿರಿಯ ಅಧಿಕಾರಿಗಳನ್ನು ಎರ್ಡೋಗನ್ ಜೀವಾವಧಿ ಶಿಕ್ಷೆಗೆ ದೂಡಿದ್ದರು. ಇದೇ ಆರೋಪದಲ್ಲಿ 100ಕ್ಕೂ ಹೆಚ್ಚು ಅಧಿಕಾರಿಗಳು, ಪತ್ರಕರ್ತರು, ಜಾತ್ಯಾತೀತ ರಾಜಕಾರಣಿಗಳನ್ನು ವಿಚಾರಣೆಗೆ ಒಳಪಡಿಸಲಾಯಿತು. ಸೇನೆ ಮತ್ತು ಸರಕಾರದ ನಡುವೆ ಕಂದಕ ನಿಧಾನವಾಗಿ ಬೆಳೆಯೊಡಗಿತು.

ಅಧ್ಯಕ್ಷರ ವಿರುದ್ಧ ಇಸ್ತಾಂಬುಲ್ನಲ್ಲಿ 2013ರಲ್ಲಿ ನಡೆದ ಬೃಹತ್ ರ್ಯಾಲಿ

ಅಧ್ಯಕ್ಷರ ವಿರುದ್ಧ ಇಸ್ತಾಂಬುಲ್ನಲ್ಲಿ 2013ರಲ್ಲಿ ನಡೆದ ಬೃಹತ್ ರ್ಯಾಲಿ

ಆದರೆ 2014ರಲ್ಲಿ ವಿಚಾರಣೆ ವೇಳೆ 200 ಅಧಿಕಾರಿಗಳಿಂದ ಯಾವುದೇ ತಪ್ಪಾಗಿಲ್ಲ ಎಂಬುದು ಖಾತ್ರಿಯಾಗುತ್ತಿದ್ದಂತೆ, ಭೂ ಸೇನೆ, ನೌಕಾ ಸೇನೆ ಮತ್ತು ವಾಯು ಸೇನೆಯ ಮುಖ್ಯಸ್ಥರು ತಮ್ಮ ಪ್ರತಿಭಟನಾರ್ಥವಾಗಿ ರಾಜೀನಾಮೆ ನೀಡಿ ಹೊರ ನಡೆದರು. ತನ್ನ ವಿರೋಧಿಗಳ ಬಾಯಿ ಮುಚ್ಚಿಸಲು ನ್ಯಾಯಾಂಗವನ್ನು ದುರುಪಯೋಗ ಪಡಿಸಿಕೊಂಡ ಆರೋಪ ಅಧ್ಯಕ್ಷರ ವಿರುದ್ಧ ಕೇಳಿ ಬಂತು.

ಇದರ ಜೊತೆ ಜೊತೆಗೆ ‘ಎಕೆಪಿ’ ಇಸ್ಲಾಂನ್ನು ಆಡಳಿತದಲ್ಲಿ ಹೇರುತ್ತಿದೆ ಎಂದು ಆಪಾದಿಸಿ ಪ್ರಗತಿಪರ ನಾಯಕರು ದೇಶದೆಲ್ಲೆಡೆ ಪ್ರತಿಭಟನೆಗೆ ಇಳಿದರು. ಇದನ್ನು ಪರೋಕ್ಷವಾಗಿ ಸೇನೆಯೂ ಬೆಂಬಲಿಸಿತ್ತು. ಇದಾದ ಬೆನ್ನಿಗೆ ಸರಕಾರದ ವಿರುದ್ದ 2014ರಲ್ಲಿ ಪ್ರಮುಖ ಭ್ರಷ್ಟಾಚಾರ ಆರೋಪ ಕೇಳಿ ಬಂತು. ಸಂಪುಟದ ಸಚಿವರ ಮೂವರು ಮಕ್ಕಳೂ ಇದರಲ್ಲಿ ಬಂಧಿತರಾದರು. ಆದರೆ ಇಷ್ಟೆಲ್ಲಾ ನಡೆಯುವಾಗ ಎರ್ಡೋಗನ್ ಆರೋಪ ಹೊರಿಸಿದ್ದು ಅಮೆರಿಕಾ ಮೂಲದ ಧಾರ್ಮಿಕ ನಾಯಕ ಫಥೆಲ್ಲುಹ್ ಗುಲೇನ್ ಮೇಲೆ.

ಇಷ್ಟೆಲ್ಲಾ ಬೆಳವಣಿಗೆಗಳ ನಂತರ ಆಡಳಿತದಲ್ಲಿ ಇಸ್ಲಾಂ ಪರವಾಗಿದೆ ಎಂಬ ಆರೋಪದಿಂದ ಹೊರಬರಲು ಸುಧಾರಣಾವಾದಿ ಕಾನೂನುಗಳನ್ನು ಜಾರಿಗೆ ತಂದರು. ಮಹಿಳೆಯರ ಬುರ್ಖಾ ಕಡ್ಡಾಯ ನಿಯಮವನ್ನು ತೆಗೆದು ಹಾಕಿದರು. ಎಲ್ಲಾ ಮುಸ್ಲಿಂ ದೇಶಗಳು ಪ್ಯಾಲೆಸ್ಟಿನ್ ಪರವಾಗಿ ನಿಂತರೆ ತಾವು ಮಾತ್ರ ಎಲ್ಲಾ ವಿರೋಧಗಳ ಮಧ್ಯೆಯೂ ಇಸ್ರೇಲ್ ಜೊತೆ ಒಪ್ಪಂದಕ್ಕೆ ನಿಂತು ಬಿಟ್ಟರು. ಸಿರಿಯಾದಲ್ಲಿ ಬಷರ್ ಅಲ್ ಅಸದ್ ವಿರೋಧಿಗಳಿಗೆ ಎರ್ಡೋಗನ್ ಬೆಂಬಲ ಸೂಚಿಸಿದರು. ಹೀಗೆ ಅವರ ನಿಲುವುಗಳು ವಿಚಿತ್ರವೂ ವಿಭಿನ್ನವೂ ಆಗಿ ಕಾಣತೊಡಗಿದವು.

ದೇಶವನ್ನು ಸುಸ್ಥಿರ ಹಾದಿಯಲ್ಲಿ ಎಳೆದು ತಂದ ಪರಿಣಾಮ ಪ್ರತೀ ವರ್ಷ 4.5 ಶೇಕಡಾ ಅಭಿವೃದ್ದಿಯನ್ನು ಅವರ ಸರಕಾರ ದಾಖಲಿಸುತ್ತಿತ್ತು. ಹಣದುಬ್ಬರವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದರು ಎರ್ಡೋಗನ್. ದೇಶ ಉತ್ಪಾದನೆ ಮತ್ತು ರಫ್ತು ಕ್ಷೇತ್ರದಲ್ಲಿ ಹೆಸರುವಾಸಿಯಾಯಿತು. ಆದರೆ 2014ರಲ್ಲಿ ಆರಂಭವಾದ ಆರ್ಥಿಕ ಕುಸಿತ ಅವರ ಅಷ್ಟೂ ಸಾಧನೆಗಳಿಗೆ ಎಳ್ಳು ನೀರು ಬಿಟ್ಟಿತು. ಬೆಳವಣಿಗೆ ದರ ಶೇ 2.9ಕ್ಕೆ  ಕುಸಿಯಿತು. ನಿರುದ್ಯೋಗ ಶೇಕಡಾ 10ಕ್ಕೆ ಏರಿಕೆಯಾಯಿತು. ವಿರೋಧಿಗಳಿಗೆ ಬೇಕಾಗಿದ್ದ ಅಸ್ತ್ರ ಸಿಕ್ಕಿಯಾಗಿತ್ತು.

ದೇಶದಲ್ಲಿ ಕೆಲವು ಕಡೆ ಆಲ್ಕೋಹಾಲ್ ಮುಕ್ತ ಪ್ರದೇಶ ಮಾಡಲು ಹೊರಟಿದ್ದನ್ನು ವಿರೋಧಿಗಳು ಟೀಕಿಸಲು ಆರಂಭಿಸಿದರು.

ಕೊನೆಗೊಂದು ದಿನ, ನಿನ್ನೆ ಶುಕ್ರವಾರ ರಾತ್ರಿ ಈ ಎಲ್ಲಾ ಕಾರಣಗಳನ್ನು ಮುಂದಿಟ್ಟುಕೊಂಡು ಸೇನೆ ಕ್ಷಿಪ್ರ ಕ್ರಾಂತಿಗೆ ಕರೆ ನೀಡಿತು. ದೇಶದಲ್ಲಿ ಮಾನವ ಹಕ್ಕುಗಳನ್ನು ಪುನರ್ ಸ್ಥಾಪಿಸಬೇಕಾಗಿದೆ, ಸಂವಿಧಾನವನ್ನು ಪುನರ್ ರಚಿಸಬೇಕಾಗಿದೆ, ಕಾನೂನು ಮತ್ತು ಸುರಕ್ಷತೆಗೆ ತೊಂದರೆಯಾಗಿದೆ ಎಂಬುದಾಗಿ ಸೇನೆಯ ಒಂದು ಗುಂಪು ಅಧ್ಯಕ್ಷರ ವಿರುದ್ಧ ಹರಿಹಾಯಿತು.

ಇದೇ ಸೇನೆಯನ್ನು ಹತ್ತಿಕ್ಕಲು ಅಧ್ಯಕ್ಷರು ಅಲ್ಲಿನ ನಾಗರಿಕರಿಗೆ ಕರೆ ನೀಡಿದರು. ಅಲ್ಲಿ ಈಗ ಸೇನೆಯ ಒಂದು ಗುಂಪು ಮತ್ತು ಜನರ ನಡುವೆ ಸಂಘರ್ಷ ಏರ್ಪಟ್ಟಿದೆ. ಇದು ಎಲ್ಲಿಗೆ ಹೋಗಿ ತಲುಪಲಿದೆಯೋ ಗೊತ್ತಿಲ್ಲ. ಆದರೆ ಸುಧರಣಾವಾದಿ ಹಾದಿಯಲ್ಲಿದ್ದ ಟರ್ಕಿಯ ಈ ಬೆಳವಣಿಗೆ ವಿಶ್ವದಾದ್ಯಂತ ಆತಂಕ ಹುಟ್ಟುಹಾಕಿದೆ. ಮೊದಲೇ ಐಸಿಲ್ ಸಮಸ್ಯೆಯಿಂದ ನಲುಗುತ್ತಿರುವ ಮಧ್ಯ ಏಷ್ಯಾದಲ್ಲಿ ಹೊಸದೊಂದು ಮಾನವ ಇತಿಹಾಸದ ಬಿಕ್ಕಟ್ಟು ಹುಟ್ಟಿಕೊಂಡರೆ ಅಚ್ಚರಿ ಇಲ್ಲ.

ಕೃಪೆ: ಬಿಬಿಸಿ

Top