An unconventional News Portal.

‘ಲೊಕ್ಯಾಂಟೋ’ ಎಂಬ ಟ್ರ್ಯಾಪ್: ಅಂತರ್ಜಾಲ ವೇಶ್ಯಾವಾಟಿಕೆ ದಂಧೆಯ ಸಚಿತ್ರ ವರದಿ!

‘ಲೊಕ್ಯಾಂಟೋ’ ಎಂಬ ಟ್ರ್ಯಾಪ್: ಅಂತರ್ಜಾಲ ವೇಶ್ಯಾವಾಟಿಕೆ ದಂಧೆಯ ಸಚಿತ್ರ ವರದಿ!

ಇದರ ಹೆಸರು ಲೊಕ್ಯಾಂಟೋ. ಉಚಿತ ಜಾಹೀರಾಹಿತುಗಳನ್ನು ಪ್ರಕಟಿಸಲು ಅನುವು ಮಾಡಿಕೊಡುವ ವೆಬ್ ತಾಣವಿದು. ಇಲ್ಲಿಗೊಮ್ಮೆ ನೀವು ಭೇಟಿ ನೀಡಿದರೆ, ಪರ್ಸನಲ್ ಎಂಬ ವಿಭಾಗದಲ್ಲಿ ಊಹಿಸಿರಲು ಸಾಧ್ಯವಿಲ್ಲದ ಸೇವೆಯೊಂದು ನಿಮಗಾಗಿ ಕಾಯುತ್ತಿರುತ್ತದೆ. ಯಾವುದೇ ಮುಚ್ಚುಮರೆ ಇಲ್ಲದೆ, ಕಾನೂನಿನ ಭಯವೂ ಇಲ್ಲದೆ; ಎಲ್ಲವೂ ಇಲ್ಲಿ ಖುಲ್ಲಂ ಖುಲ್ಲಾ…

‘ಸಮಾಚಾರ’ ಓದುಗರೊಬ್ಬರು ನೀಡಿದ ಟಿಪ್ ಬೆನ್ನತ್ತಿದ ನಮಗೆ ಸಿಲಿಕಾನ್ ಸಿಟಿಯ ತಳುಕು ಬಳುಕಿನ ಜಗತ್ತಿನೊಳಗೆ ತಣ್ಣಗೆ ನಡೆದುಕೊಂಡು ಬರುತ್ತಿರುವ ವೇಶ್ಯಾವಾಟಿಕೆಯ ಹೊಸ ಅವತರಣಿಕೆಯ ಪರಿಚಯವಾಯಿತು. ಇಲ್ಲಿ ಪಿಂಪ್ಗಳ ಮೊಬೈಲ್ ನಂಬರ್ ಬೆರಳ ತುದಿಗೆ ಸಿಗುತ್ತದೆ. ಕರೆ ಮಾಡಿದರೆ, ಐದು ನಿಮಿಷದೊಳಗೆ ನಿಮ್ಮ ವಾಟ್ಸ್ಆಪ್ಗೆ ಹುಡುಗಿಯರ ಫೊಟೋಗಳು ಬಂದು ಬೀಳುತ್ತವೆ. ಕೈಲಿ ಕಾಸಿದ್ದರೆ ನೀವಿರುವ ಜಾಗದಿಂದ ಕಾಲ್ನಡಿಗೆ ದೂರದಲ್ಲಿ ನಿಮಗಾಗಿ ಯುವತಿಯೊಬ್ಬಳು ಕಾಯುತ್ತಿರುತ್ತಾಳೆ. ಅಬ್ಬಾ… ಇದೊಂದು ವ್ಯವಸ್ಥಿತ ಜಾಲ, ತಂತ್ರಜ್ಞಾನವನ್ನು ಇನ್ನಿಲ್ಲದಂತೆ ಬಳಸಿಕೊಳ್ಳುತ್ತಿರುವ ಹೈಟೆಕ್ ದಂಧೆ.

ಏನಿದು ಲೊಕ್ಯಾಂಟೋ?:

ಜರ್ಮನ್ ಮೂಲದ ವೆಬ್ ತಾಣದ ಹೆಸರು ಲೊಕ್ಯಾಂಟೊ. ಸುಮಾರು 16 ದೇಶಗಳಲ್ಲಿ ಇದರ ಕಾರ್ಯಾಚರಣೆ ಇದೆ. ಇಲ್ಲಿ ನೀವು ಉಚಿತವಾಗಿ ಯಾವ ಜಾಹೀರಾತುಗಳನ್ನು ಬೇಕಾದರೂ ಪ್ರಕಟಿಸಬಹುದು. ಅದಕ್ಕಾಗಿ ನೀವು ಹಣ ಕಟ್ಟಬೇಕಿಲ್ಲ. ಕಾನೂನಿನ ಅಡೆತಡೆಗಳಿಲ್ಲ. ನಿಮ್ಮದೊಂದು ಇ- ಮೇಲ್ ವಿಳಾಸ ನೀಡಿದರೆ ಸಾಕು. ಇದರ ಭಾರತದ ಅವತರಣಿಕೆಯಲ್ಲಿ ಜಾಹೀರಾತು ಪ್ರಕಟಿಸಲು ಒಂದು ವಿಭಾಗವಿದೆ.

online-pro-locanto-entry

ಮೇಲಿನ ಚಿತ್ರದಲ್ಲಿ ನೀವು ಗಮನಿಸಿದಂತೆ, ನೀವು ಗಂಡಸರನ್ನು ಹುಡುಕುತ್ತಿರುವ ಮಹಿಳೆಯರಾಗಿದ್ದರೆ, ಇಲ್ಲಾ ಹೆಂಗಸರನ್ನು ಹುಡುಕುತ್ತಿರುವ ಗಂಡಸಾಗಿದ್ದರೆ, ಹೀಗೆ ಯಾರೇ ಆಗಿದ್ದರೂ ನೀವೊಂದು ಜಾಹೀರಾತನ್ನು ಪ್ರಕಟಿಸಬಹುದು. ಅದನ್ನು ನೋಡಿದ ಗ್ರಾಹಕರು ನಿಮಗೆ ಕರೆ ಮಾಡುತ್ತಾರೆ. ವಿಶೇಷ ಏನೆಂದರೆ ಅಂತರ್ಜಾಲ ತಾಣಗಳ ಬಳಕೆ ಆಧಾರದ ಮೇಲೆ ರೇಟಿಂಗ್ ನೀಡುವ ‘ಅಲೆಕ್ಸಾ ಡಾಕ್ ಕಾಂ’ ಪ್ರಕಾರ ಭಾರತದಲ್ಲಿ ಲೊಕ್ಯಾಂಟೋ ಟಾಪ್ 300 ವೆಬ್ ತಾಣಗಳ ಪೈಕಿ ಸ್ಥಾನ ಪಡೆದುಕೊಂಡಿದೆ. ಅಂದರೆ, ಅದನ್ನು ಬಳಸುತ್ತಿರುವವರ ಸಂಖ್ಯೆ ಎಷ್ಟಿರಬಹುದು ಎಂದು ಯೋಚಿಸಿ.

ಜಾಹೀರಾತು ಎಂಬ ಟ್ರ್ಯಾಪ್:

ಹಾಗಂತ ಇಲ್ಲಿ ನೀಡುವ ಜಾಹೀರಾತುಗಳ ಕತೆ ಇಷ್ಟಕ್ಕೆ ನಿಲ್ಲುವುದಿಲ್ಲ. ಇವುಗಳನ್ನು ಪರೀಕ್ಷಿಸುವ ಹಿನ್ನೆಲೆಯಲ್ಲಿ ‘ಸಮಾಚಾರ’ ಲೊಕ್ಯಾಂಟೋದಲ್ಲಿರುವ ಅಸಂಖ್ಯಾತ ಬೆಂಗಳೂರಿನ ನಂಬರ್ಗಳ ಪೈಕಿ ಕಿಶೋರ್ ಎಂಬ ಹೆಸರಿನಲ್ಲಿ ದಾಖಲಾಗಿದ್ದ ನಂಬರ್ಗೆ ಕರೆ ಮಾಡಿತು. ಆ ಕಡೆಯಿಂದ ಫೋನ್ ಎತ್ತಿಕೊಂಡ ಕಿಶೋರ್, “ನಿಮಗೆ ಶಾರ್ಟ್ ಟೈಮ್ ಅಥವಾ ನೈಟ್ ಸ್ಟಾಂಡ್ ಸರ್ವಿಸ್…ಯಾವುದು ಬೇಕು?,” ಎಂದ.

ಇವತ್ತು ಅಂತರ್ಜಾಲದ ಮೂಲಕ ವೇಶ್ಯಾವಾಟಿಕೆ ನಡೆಸುತ್ತಿರುವವರು ಬಳಸುವ ಭಾಷೆ ಇದು. ಶಾರ್ಟ್ ಟೈಮ್ ಅಂದರೇನು, ನೈಟ್ ಸ್ಟಾಂಡ್ ಎಂದರೇನು ಎಂದು ಬಿಡಿಸಿ ಹೇಳುವ ಅಗತ್ಯವಿಲ್ಲ. ಹೀಗೆ, ಮಾತಿಗೆ ಮುಂಚೆಯೇ ಸೇವೆಯ ವಿವರ ನೀಡಿದ ಕಿಶೋರ್, ನಂತರ ವಾಟ್ಸ್ಆಪ್ ನೋಡಿ ಅಂದ. ಅಷ್ಟರಲ್ಲಿ ಆತ ಕಳಿಸಿದ ಚಿತ್ರಗಳು ಮೊಬೈಲ್ ಪರದೆಯನ್ನು ಆಕ್ರಮಿಸಿಕೊಂಡಾಗಿತ್ತು.

online-pro-whatsapp

ಹೀಗೆ, ಸುಮಾರು 15 ಫೊಟೋಗಳನ್ನು ಆತ ಕಳುಹಿಸಿದ್ದ. ”ಇವರೆಲ್ಲವರೂ ನಿಜವಾಗಿಯೂ ನಿಮ್ಮ ಜತೆಗಿರುವ ಹುಡುಗಿಯರೇನಾ?” ಎಂದರೆ “ಅದರಲ್ಲಿ ಅನುಮಾನವೇ ಬೇಡ,” ಎಂದ. ಪೊಲೀಸರು, ಮತ್ತಿತರ ಸಮಸ್ಯೆಗಳಿಲ್ಲವಾ ಎಂದರೆ, ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ಎಂದ. ಜತೆಗೆ ಅಪಾರ್ಟ್ಮೆಂಟ್ ರೂಮಿನ ಚಿತ್ರವೊಂದನ್ನು ಕಳುಹಿಸಿದ.

Screenshot_2016-07-13-13-08-43

ಅವಳು ರಾದಿಕಾ:

ಅಂತರ್ಜಾಲದಲ್ಲಿ ಸೇವೆ ನೀಡುತ್ತಿರುವವರ ವೇಗವಿದು. ಇದೇ ವಿಚಾರದಲ್ಲಿ ಇನ್ನೊಂದಿಷ್ಟು ಆಳಕ್ಕಿಳಿದರೆ ಹೈ ಪ್ರೊಫೈಲ್ ಎಸ್ಕಾರ್ಟ್ ಸೇವೆಗಳು ಯಾವ ಮಟ್ಟಕ್ಕೆ ಅಪ್ಡೇಟ್ ಆಗಿವೆ ಎಂಬುದಕ್ಕೆ ಹೊಸ ಪುರಾವೆಗಳು ಸಿಗುತ್ತಾ ಹೋದವು. ಅವುಗಳಲ್ಲಿ ಒಂದು ರಾದಿಕಾ ಡಾಟ್ ಕಾಮ್. ಕ್ರೀಯಾಶೀಲತೆಯಲ್ಲಿ ಯಾವುದಕ್ಕೂ ಕಡಿಮೆ ಇಲ್ಲದ ಈ ವೆಬ್ ತಾಣದಲ್ಲಿ ಎಸ್ಕಾರ್ಟ್ ಸೇವೆ ಬಗ್ಗೆ ತಲೆದೂಗುವಂತಹ ಬರವಣಿಗೆ ಒದೆ. ಅದೂ ಶುದ್ಧ ಇಂಗ್ಲಿಷ್ ಭಾ‍ಷೆಯಲ್ಲಿ. ಈ ದಂಧೆಯ ಒಳಹೊರಗನ್ನು, ಗ್ರಾಹಕ ಸಂಕಷ್ಟಗಳನ್ನು ಅವರು ಅರ್ಥ ಮಾಡಿಕೊಂಡಿರುವುದಕ್ಕೆ ಇದರಲ್ಲಿ ಸಾಕ್ಷಿಗಳು ಸಿಗುತ್ತವೆ. ‘ಒಳ್ಳೆಯ ಎಸ್ಕಾರ್ಟ್ ಸೇವೆಯನ್ನು ಹುಡುಕುವುದೇ ಶೇ. 50ರಷ್ಟು ತೃಪ್ತಿ ಪಡೆದುಕೊಂಡಂತೆ. ಇನ್ನು ಉಳಿದ ಶೇ. 50ರಷ್ಟು ತೃಪ್ತಿಯನ್ನು ನಾವು ನೀಡುತ್ತೇವೆ’ ಎಂದು ವೆಬ್ಸೈಟ್ ಹೇಳಿಕೊಳ್ಳುತ್ತದೆ. ಜತೆಗೆ ನಂಬರ್ ಕೂಡ ನೀಡಲಾಗಿದೆ.

online-pro-radika

ಅಂತಹದ್ದೇ ಇನ್ನೊಂದು ವೆಬ್ಸೈಟ್ ಉಮಾರೈ ಎಂಬ ಮಹಿಳೆಯ ಹೆಸರಿನಲ್ಲಿದೆ.

online-pro-uma

ಹೀಗೆ, ಅಂತರ್ಜಾಲದಲ್ಲಿ ತುಂಬಿಹೋಗಿರುವ ಈ ನಂಬರ್ಗಳಿಗೆ ಕರೆ ಮಾಡಿಕೊಂಡ ಹೋದವರಿಗೆಲ್ಲರಿಗೂ ತೃಪ್ತಿ ಸಿಗುತ್ತದೆ ಎಂಬುದಕ್ಕೆ ಖಾತ್ರಿ ಇಲ್ಲ. “ಇಂದಿರಾನಗರದ ಮೆಟ್ರೊ ನಿಲ್ದಾಣದ ಪಕ್ಕದಲ್ಲಿರುವ ಬಿಲ್ಡಿಂಗ್ಗೆ ಬನ್ನಿ ಎಂದರು. ಅಲ್ಲಿಗೆ ಹೋದ ಮೇಲೆ ಅವರು ಫೋನ್ನಲ್ಲಿ ಕೇಳಿದ್ದಕ್ಕಿಂತ ಹೆಚ್ಚಿನ ಹಣ ಕಿತ್ತುಕೊಂಡರು. ಜತೆಗೆ ಕಳಿಸಿದ ಫೋಟೊಗಳಲ್ಲಿರುವ ಹುಡುಗಿಯರು ಅಲ್ಲಿರಲಿಲ್ಲ. ಅದೊಂದು ಟಿಪಿಕಲ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಸಾಜ್ ಪಾರ್ಲರ್ ಆಗಿತ್ತು. ಗಲಾಟೆ ಮಾಡಿದರೆ, ಬೇಕಾದರೆ ಕಂಪ್ಲೇಂಟ್ ಕೊಡಿ ಎಂದು ನಮಗೇ ದಬಾಯಿಸಿದರು,” ಎನ್ನುತ್ತಾರೆ ಲೊಕ್ಯಾಂಟೊ ನಂಬಿಕೊಂಡು ಹೋದ ಯುವಕರೊಬ್ಬರು.

ಬದಲಾದ ಸ್ವರೂಪ:

ಹೀಗೆ, ಮೋಸ ಹೋದವರು ಸಾಕಷ್ಟು ಬಾರಿ ಪೊಲೀಸರಿಗೆ ದೂರುಗಳನ್ನೂ ನೀಡಿದ್ದಾರೆ. “ಇವರು ಅಂತರ್ಜಾಲದಲ್ಲಿ ಸಿಕ್ಕ ನಂಬರ್ ನಂಬಿಕೊಂಡು ಹೋಗಿ ಮೋಸ ಹೋಗುತ್ತಾರೆ. ನಮಗೆ ದೂರು ಬಂದ ನಂತರ ಆ ನಂಬರ್ಗಳನ್ನು ಟ್ರ್ಯಾಕ್ ಮಾಡಿದರೆ ದಿಲ್ಲಿ, ಬಾಂಬೆ ಹೀಗೆ ಯಾವುದೋ ದೂರದ ನಗರಗಳಲ್ಲಿ ಟವರ್ ಲೊಕೇಶನ್ ಸಿಗುತ್ತದೆ,” ಎನ್ನುತ್ತಾರೆ ಸಿಸಿಬಿ ಅಧಿಕಾರಿ ಆನಂದ್ ಕಬ್ಬೂರಿ.

ಇವತ್ತು ಹೆಚ್ಚುತ್ತಿರುವ ಅಂತರ್ಜಾಲ ಆಧಾರಿತ ವೇಶ್ಯಾವಾಟಿಕೆ ಜಾಲದ ಕುರಿತು ಇನ್ನಷ್ಟು ಒಳನೋಟಗಳನ್ನು ನೀಡುವ ಅವರು, “ಹಿಂದೆ ವೇಶ್ಯಾವಾಟಿಕೆ ಎಂದರೆ ವೇಶ್ಯಾವಾಟಿಕೆ ಮಾತ್ರವೇ ನಡೆಯುತ್ತಿತ್ತು. ಅದರಲ್ಲಿ ಒಂದು ನಿಯತ್ತು ಇರುತ್ತಿತ್ತು. ಆದರೆ ಈಗ ಆ ಕಾಲ ಬದಲಾಗಿದೆ. ವೇಶ್ಯಾವಾಟಿಕೆ ಜತೆಗೆ ವಿಡಿಯೋ ರೆಕಾರ್ಡಿಂಗ್ ಮಾಡಿಕೊಳ್ಳುತ್ತಾರೆ. ನಂತರ ಅದನ್ನು ಇಟ್ಟುಕೊಂಡು ಬ್ಲಾಕ್ ಮೇಲ್ಗೆ ಇಳಿಯುವ ಪ್ರಸಂಗಗಳೂ ನಡೆದಿವೆ,” ಎಂದು ಮಾಹಿತಿ ನೀಡುತ್ತಾರೆ ಕಬ್ಬೂರಿ.

ಇವತ್ತು ಅಂತರ್ಜಾಲದ ನೆರವಿನೊಂದಿಗೆ ನಡೆಯುತ್ತಿರುವ ಹಲವು ದಂಧೆಗಳ ಪೈಕಿ ಇದೊಂದು ಸ್ಯಾಂಪಲ್ ಅಷ್ಟೆ. ಆಳಕ್ಕೆ ಇಳಿಯುತ್ತಾ ಹೋದಂತೆ ಇನ್ನೂ ಹತ್ತು ಹಲವು ಸ್ವರೂಪದ ವಂಚನೆ ಜಾಲಗಳ ಮಾಹಿತಿ ಸಿಗುತ್ತದೆ. ಅವೆಲ್ಲವನ್ನೂ ಮುಂದಿನ ದಿನಗಳಲ್ಲಿ ನಿಮ್ಮ ಮುಂದಿಡುವ ಪ್ರಯತ್ನವನ್ನು ‘ಸಮಾಚಾರ’ ಮಾಡಲಿದೆ.

(ಫೀಚರ ಇಮೇಜ್: ಡಿಎನ್‌ಎ)

Top