An unconventional News Portal.

ಐಎಸ್ಎಸ್ ವಿಕ್ರಮಾದಿತ್ಯದಲ್ಲಿ ವಿಷಾನಿಲ ಸೋರಿಕೆ: ಮೋದಿ ಉದ್ಘಾಟಿಸಿದ ಸಮರನೌಕೆಯಲ್ಲಿ ಮೊದಲ ದುರಂತ

ಐಎಸ್ಎಸ್ ವಿಕ್ರಮಾದಿತ್ಯದಲ್ಲಿ ವಿಷಾನಿಲ ಸೋರಿಕೆ: ಮೋದಿ ಉದ್ಘಾಟಿಸಿದ ಸಮರನೌಕೆಯಲ್ಲಿ ಮೊದಲ ದುರಂತ

ಭಾರತೀಯ ನೌಕಾ ಪಡೆಗೆ ಸೇರಿದ ‘ಐಎನ್ಎಸ್ ವಿಕ್ರಮಾದಿತ್ಯ’ ಸಮರ ನೌಕೆಯಲ್ಲಿ ವಿಷಾನಿಲ ಸೋರಿಕೆಯಿಂದಾಗಿ ಇಬ್ಬರು ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಇದು ಕಾರವಾರ ನೌಕಾನೆಲೆಯ ವ್ಯಾಪ್ತಿಯೊಳಗೆ ನಡೆದಿರುವ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ. ಸುತ್ತಾಟದ ನಂತರ ಕಾರವಾರ ನೌಕಾನೆಲೆಯ ವ್ಯಾಪ್ತಿಯಲ್ಲಿ ನೌಕೆಯು ಬಂದು ನಿಂತಿತ್ತು. ಈ ಸಮಯದಲ್ಲಿ ಬಿಡಿ ಭಾಗಗಳ ರಿಪೇರಿ ಕಾರ್ಯ ನಡೆಸುತ್ತಿದ್ದಾಗ ಈ ದುರಂತ ಘಟಿಸಿದೆ ಎಂದು ಪ್ರಾಥಮಿಕ ವರದಿಗಳು ಹೇಳುತ್ತಿವೆ.

ಈ ಕುರಿತು ನೌಕಾಪಡೆಯ ವಕ್ತಾರರು ಮಾಹಿತಿ ನೀಡಿದ್ದು, “ಸ್ಥಳೀಯರೊಬ್ಬರು ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಮತ್ತಿಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ,” ಎಂದು ತಿಳಿಸಿದ್ದಾರೆ.

ಮೃತಪಟ್ಟವರು, ಕಾರವಾರ ತಾಲೂಕಿನ ಅಮದಳ್ಳಿಯ ಮೂಲದ ಮೋಹನ್ ದಾಸ್ (28) ಮತ್ತು ಬಿಹಾರ ಮೂಲದ ರಾಜೇಶ್ ಕುಮಾರ್ (28) ಎಂದು ‘ಈನಾಡು ಇಂಡಿಯಾ’ ವರದಿ ಹೇಳಿದೆ. ಆದರೆ, ‘ಎಕನಾಮಿಕ್ ಟೈಮ್ಸ್’ ವರದಿಯಲ್ಲಿ ‘ರಾಕೇಶ್ ಕುಮಾರ್ ಮತ್ತು ಮೋಹನ್ ದಾಸ್ ಕೊಲಂಬರ್ ಎಂಬ ಇಬ್ಬರು ನೌಕಾ ಪಡೆಯ ಡಿ ದರ್ಜೆಯ ನೌಕರರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಲಾಗಿದೆ. ಹೀಗಾಗಿ, ಈ ಕುರಿತು ಇನ್ನಷ್ಟು ನಿಖರ ಮಾಹಿತಿ ಹೊರಬರಬೇಕಿದೆ.

ಘಟನೆ ಕುರಿತು ಆಂತರಿಕ ತನಿಖೆಗೆ ಆದೇಶಿಸಲಾಗಿದೆ. ಶುಕ್ರವಾರ ಸಂಜೆ ವೇಳೆಗೆ ಸಮರ ನೌಕೆಯ ಸೀವೇಜ್ ಟ್ರೀಟ್ಮೆಂಟ್ ಪ್ಲಾಂಟ್(ಎಸ್ಟಿಪಿ)ನಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ವಿಷಾನಿಲ ಸೋರಿಕೆ ಆಗಿದ್ದು ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ.

ಇದು ವಿಕ್ರಮಾದಿತ್ಯ:

ದೇಶದ ಅತೀ ದೊಡ್ಡ ವಿಮಾನವಾಹಕ ಸಮರ ನೌಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಐಎನ್ಎಸ್ ವಿಕ್ರಮಾದಿತ್ಯವನ್ನು 2014ರ ಜೂನ್ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದರು.

ಈ ಸಮಯದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ”ದೇಶದ ಭದ್ರತೆಯ ದೃಷ್ಟಿಯಿಂದ ಇದೊಂದು ಮಹತ್ವದ ಹೆಜ್ಜೆ. ನೌಕಾಪಡೆಯ ಇತಿಹಾಸದಲ್ಲಿಯೇ ಇದು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ . ವೈಯಕ್ತಿಕವಾಗಿಯೂ ಈ ಯಾನ ನನಗೆ ಹೆಮ್ಮೆ ತರಿಸಿದೆ,” ಎಂದು ಹೇಳಿದ್ದರು.

ಕಾರವಾರದಲ್ಲಿ ಈ ಘಟನೆ ನಡೆಯುವ ಮುನ್ನ ಐಎನ್ಎಸ್ ವಿಕ್ರಮಾದಿತ್ಯ ಸಮರ ನೌಕೆ ಶ್ರೀಲಂಕಾಗೆ ಭೇಟಿ ನೀಡಿತ್ತು. ಲೋಕಾರ್ಪಣೆಗೊಂಡ 2 ವರ್ಷಗಳ ನಂತರ ಮೊದಲ ಬಾರಿಗೆ ಸಮರ ನೌಕೆಯನ್ನು ಸಾಗರೋತ್ತರ ಯಾನಕ್ಕೆ ಕಳುಹಿಸಲಾಗಿತ್ತು. ಈ ಮೂಲಕ ಭಾರತ ಮತ್ತು ಶ್ರೀಲಂಕಾ ನಡುವಿನ ಕಡಲ ಸಹಕಾರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಾಗಿದೆ ಎಂದು ಭಾರತೀಯ ನೌಕಾ ಪಡೆ ಹೇಳಿಕೊಂಡಿತ್ತು.

ಇದು ಐಎನ್ಎಸ್ ಸರಣಿಯ ಸಮರ ನೌಕೆಗಳಲ್ಲಿ ನಡೆಯುತ್ತಿರುವ ಮೊದಲ ಘಟನೆ ಅಲ್ಲದಿದ್ದರೂ, ವಿಕ್ರಮಾದಿತ್ಯ ಸಮರ ನೌಕೆಯಲ್ಲಿ ಘಟಿಸಿದ ಮೊದಲ ದುರಂತವಾಗಿದೆ.

Top