An unconventional News Portal.

ಇಂದಿರಾ ಕ್ಯಾಂಟೀನ್ ಬಗ್ಗೆ ತಾತ್ಸಾರ: ಹೋಟೆಲ್‌ ಮಾಲೀಕರ ಮೇಲೆ ‘ಸೇವಾ ಶುಲ್ಕ’ದ ಪ್ರಹಾರ!

ಇಂದಿರಾ ಕ್ಯಾಂಟೀನ್ ಬಗ್ಗೆ ತಾತ್ಸಾರ: ಹೋಟೆಲ್‌ ಮಾಲೀಕರ ಮೇಲೆ ‘ಸೇವಾ ಶುಲ್ಕ’ದ ಪ್ರಹಾರ!

ರಾಜ್ಯ ಸರಕಾರ ಪ್ರತಿಷ್ಠೆಯ ವಿಚಾರವಾಗಿ ತೆಗೆದುಕೊಂಡಿರುವ ‘ಇಂದಿರಾ ಕ್ಯಾಂಟೀನ್’ ಅನುಷ್ಠಾನಕ್ಕೆ ಗಡವು ನಿಗದಿ ಮಾಡಿದೆ. ಸಿಎಂ ಸಿದ್ದರಾಮಯ್ಯ ಮಂಗಳವಾರ ನಡೆದ ಸಭೆಯಲ್ಲಿ ಸಚಿವ ಕೆ. ಜೆ. ಜಾರ್ಜ್‌ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್‌ 15ರಂದು ಬೆಂಗಳೂರಿನ ಎಲ್ಲಾ 198 ವಾರ್ಡ್‌ಗಳಲ್ಲಿ ಕಡಿಮೆ ಬೆಲೆಗೆ ಗುಣಮಟ್ಟದ ಆಹಾರ ನೀಡುವ ‘ಇಂದಿರಾ ಕ್ಯಾಂಟೀನ್‌’ಗಳು ಕಾರ್ಯಾರಂಭ ಮಾಡಲಿವೆ. ಇದೇ ವೇಳೆ, ಈ ಮಹತ್ವಾಕಾಂಕ್ಷಿ ಯೋಜನೆಗೆ ಅಸಹಕಾರ ನೀಡಿದ್ದ ಹೋಟೆಲ್‌ ಮಾಲೀಕರಿಗೂ ‘ಸೇವಾ ಶುಲ್ಕ’ದ ಬಿಸಿ ಮುಟ್ಟಿಸುವ ಮುನ್ಸೂಚನೆಯನ್ನು ಸರಕಾರ ನೀಡಿದೆ.

ಈ ವರ್ಷದ ಆರಂಭದಲ್ಲಿ ಕೇಂದ್ರ ಸರಕಾರ ಹೋಟೆಲ್‌ಗಳಲ್ಲಿ ಊಟ- ತಿಂಡಿಯ ಬಿಲ್‌ ಜತೆಗೆ ‘ಸೇವಾ ಶುಲ್ಕ’ ಅಥವಾ ‘ಸರ್ವಿಸ್‌ ಚಾರ್ಜ್‌’ ವಿಧಿಸುವುದು ಕಡ್ಡಾಯವೇನಲ್ಲ; ಗ್ರಾಹಕರಿಂದ ಒತ್ತಾಯ ಪೂರ್ವಕವಾಗಿ ಸರ್ವಿಸ್ ಚಾರ್ಜ್ ತೆಗೆದುಕೊಳ್ಳಬಾದರು ಎಂದು ಹೇಳಿತ್ತು. ಇದೀಗ ಕರ್ನಾಟಕದಲ್ಲಿಯೂ ಅದನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲಾಗುತ್ತದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಖಾತೆ ಸಚಿವ ಯು. ಟಿ. ಖಾದರ್ ಹೇಳಿದ್ದಾರೆ. ಈ ಮೂಲಕ ರಾಜ್ಯ ಸರಕಾರ ಮತ್ತು ಹೋಟೆಲ್‌ ಮಾಲೀಕರ ನಡುವೆ ಮತ್ತೊಂದು ಸುತ್ತಿನ ಗುದ್ದಾಟಕ್ಕೆ ಅಖಾಡ ರೆಡಿಯಾದಂತಾಗಿದೆ.

ಏನಿದು ಸೇವಾ ಶುಲ್ಕ?:

ಗ್ರಾಹಕರ ಜೇಬಿಗೆ ಕತ್ತರಿ ಈ ಸೇವಾ ಶುಲ್ಕ.

ಗ್ರಾಹಕರ ಜೇಬಿಗೆ ಕತ್ತರಿ ಈ ಸೇವಾ ಶುಲ್ಕ.

ಯಾವುದಾದರೂ ದೊಡ್ಡ ಹೋಟೆಲ್‌ಗೆ ಹೋದರೆ ತಿಂಡಿ- ಊಟ ನಂತರ ಬಿಲ್‌ ನೀಡಲಾಗುತ್ತದೆ. ಆಹಾರಗಳ ಮೆನ್ಯುನಲ್ಲಿ ನಮೋದಿಸಿದ ಹಣಕ್ಕಿಂತ ಹೆಚ್ಚಿನ ಹಣ ಬಿಲ್‌ನಲ್ಲಿರುತ್ತದೆ. ಕಾರಣ, ಸರ್ವಿಸ್ ಚಾರ್ಜ್‌. ಹೋಟೆಲ್‌ನಲ್ಲಿ ಕೂರಲು ಒಳ್ಳೆಯ ಆಸನ, ಹವಾ ನಿಯಂತ್ರಣ ವ್ಯವಸ್ಥೆ ಹೀಗೆ ಅವರು ನೀಡುವ ಮೌಲ್ಯವರ್ಧಿತ ಸೇವೆಗೆ ಹೋಟೆಲ್‌ಗಳು ವಿಧಿಸುವ ಶುಲ್ಕವದು. ಪ್ರತಿ ಗ್ರಾಹಕರ ಬಿಲ್‌ನ ಮೊತ್ತಕ್ಕೆ ಶೇ, 5ರಿಂದ 20ರಷ್ಟು ಸೇವಾ ಶುಲ್ಕವನ್ನು ವಿಧಿಸುವ ಮೂಲಕ ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಕೆಲಸ ನಡೆಯುತ್ತದೆ. ಇದೊಂದು ರೀತಿಯಲ್ಲಿ ಒತ್ತಾಯ ಪೂರ್ವಕವಾಗಿ ‘ಟಿಪ್ಸ್’ ವಸೂಲಿ ಕೆಲಸ.

ಈ ಹಣವನ್ನು ಹೋಟೆಲ್‌ಗಳ ಮ್ಯಾನೇಜರ್‌ಗಳಿಂದ ಶುರುವಾಗಿ ಹೌಸ್‌ಕೀಪಿಂಗ್‌ ವರೆಗೆ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳುತ್ತಾರೆ. ಆದರೆ, “ನಮ್ಮ ಬಳಿ ಎಷ್ಟೆಷ್ಟು ಹಣವನ್ನು ಹಂಚಿಕೆ ಮಾಡುತ್ತಾರೆ ಎಂದು ಮಾಹಿತಿ ಇಲ್ಲ,” ಎನ್ನುತ್ತಾರೆ ಉತ್ತರ ಬೆಂಗಳೂರು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್.

ಹೀಗೆ ಪರೋಕ್ಷವಾಗಿ ಸೇವೆಯ ಹೆಸರಿನಲ್ಲಿ ಹೋಟೆಲ್‌ಗಳು ಗ್ರಾಹಕರಿಂದ ಹಣ ವಸೂಲಿ ಮಾಡುವ ಪ್ರಕ್ರಿಯೆಗೆ ಕೇಂದ್ರ ಸರಕಾರ ತಡೆ ಹಾಕಿದೆ. ಅದನ್ನು ಗ್ರಾಹಕರ ವಿವೇಚನೆಗೆ ಬಿಡಲಾಗಿದ್ದು, ಸರ್ವಿಸ್ ಚಾರ್ಜ್‌ ನೀಡಲೇಬೇಕು ಎಂದು ಒತ್ತಾಯ ಮಾಡುವ ಹಾಗಿಲ್ಲ ಎಂದು ಜನವರಿಯಲ್ಲಿ ಗ್ರಾಹಕರ ವ್ಯವಹಾರಗಳ ಸಚಿವಾಲಯ ಸುತ್ತೋಲೆ ಹೊರಡಿಸಿತ್ತು. ಜತೆಗೆ, ರಾಜ್ಯ ಸರಕಾರಗಳು ಈ ಕುರಿತು ಹೋಟೆಲ್‌ ಮಾಲೀಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿತ್ತು.

ಇಂದಿರಾ ಕ್ಯಾಂಟೀನ್‌ ಹಿನ್ನೆಲೆ:

ಇಂದಿರಾ ಕ್ಯಾಂಟೀನ್ ಕುರಿತು ವಿಧಾನಸೌಧದಲ್ಲಿ ನಡೆದ ಸಭೆ.

ಇಂದಿರಾ ಕ್ಯಾಂಟೀನ್ ಕುರಿತು ವಿಧಾನಸೌಧದಲ್ಲಿ ನಡೆದ ಸಭೆ.

ಇದೀಗ ರಾಜ್ಯದಲ್ಲಿಯೂ ಸೇವಾ ಶುಲ್ಕದ ಕುರಿತು ಸರಕಾರ ಹೋಟೆಲ್ ಮಾಲೀಕರಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ. ಇದಕ್ಕೆ ಪ್ರಮುಖ ಕಾರಣ, ಇಂದಿರಾ ಕ್ಯಾಂಟೀನ್ ವಿಚಾರದಲ್ಲಿ ಬೆಂಗಳೂರಿನ ಹೋಟೆಲ್ ಮಾಲೀಕರ ಸಂಘಗಳು ತೋರಿಸಿದ ನಿರ್ಲಕ್ಷ್ಯ ಕಾರಣ ಎಂದು ಮೂಲಗಳು ಹೇಳುತ್ತವೆ.

“ಇಂದಿರಾ ಕ್ಯಾಂಟೀನ್‌ಗಳನ್ನು ನೀವೇ ವಹಿಸಿಕೊಳ್ಳಿ ಎಂದು ಸರಕಾರ ಹೇಳಿತ್ತು. ನಾವೂ ನಮ್ಮ ಸದಸ್ಯರಿಗೆ ಈ ಕುರಿತು ಸಂದೇಶಗಳನ್ನು ಕಳುಹಿಸಿದ್ದೆವು. ಆದರೆ ಯಾರೂ ಕೂಡ ಆಸಕ್ತಿ ತೋರಿಸಲಿಲ್ಲ. ಇದನ್ನು ಸರಕಾರಕ್ಕೆ ತಿಳಿಸಿದ್ದೆವು. ಇತ್ತೀಚೆಗೆ ಕೇಟರಿಂಗ್ ಸೇವೆ ನೀಡುವವರಿಗೆ ಇಂದಿರಾ ಕ್ಯಾಂಟೀನ್ ವಹಿಸಿಕೊಳ್ಳಲು ಒತ್ತಾಯಿಸುವುದು ಸೂಕ್ತ ಎಂದು ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದೆವು. ಅಷ್ಟರೊಳಗೆ ಸರಕಾರವೇ ಕ್ಯಾಂಟೀನ್ ಆರಂಭಿಸಲು ತೀರ್ಮಾನ ಪ್ರಕಟಿಸಿತು,” ಎಂದು ಮಾಹಿತಿ ನೀಡುತ್ತಾರೆ ಜರ್ನಾಧನ್ ಹೆಬ್ಬಾರ್. ಇವರ ಸಂಘದ ಅಡಿಯಲ್ಲಿ ಸುಮಾರು 2 ಸಾವಿರ ಹೋಟೆಲ್‌ಗಳು ಬೆಂಗಳೂರಿನಲ್ಲಿ ವ್ಯವಹಾರ ಮಾಡುತ್ತಿವೆ.

ಇಂದಿರಾ ಕ್ಯಾಂಟೀನ್ ಹೆಸರಿನಲ್ಲಿ ನಗರದ ಬಡಜನರಿಗೆ 5 ರೂ.ಗೆ ತಿಂಡಿ, 15 ರೂಪಾಯಿಗೆ ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ನೀಡುವ ಮಹತ್ವದ ಯೋಜನೆಗೆ ಜಾರಿಗೆ ಬರಲಿದೆ. ಆಹಾರ ವಿಚಾರದಲ್ಲಿ ದೊಡ್ಡ ಮಟ್ಟದ ಮಾರುಕಟ್ಟೆಯಲ್ಲಿ ಹೊಂದಿರುವ ಬೆಂಗಳೂರಿನಲ್ಲಿ ಪ್ರತಿ ವಾರ್ಡ್‌ಗಳಲ್ಲಿಯೂ ಈ ಸರಕಾರಿ ಕ್ಯಾಂಟೀನ್‌ಗಳು ಅಸ್ಥಿತ್ವಕ್ಕೆ ಬರಲಿವೆ. ಸಹಜವಾಗಿಯೇ ಹೋಟೆಲ್‌ಗಳು, ದರ್ಶಿನಿಗಳು ತಮ್ಮ ಒಂದಷ್ಟು ಗ್ರಾಹಕರನ್ನು ಕಳೆದುಕೊಳ್ಳುತ್ತವೆ. ಹೀಗಾಗಿ, ಆರಂಭದಿಂದಲೇ ಸರಕಾರದ ಈ ಜೀವಪರವಾಗಿರುವ ಯೋಜನೆಯನ್ನು ಅವು ಪರೋಕ್ಷವಾಗಿ ವಿರೋಧಿಸುತ್ತಿವೆ. ಅದಕ್ಕೀಗ ‘ಸೇವಾ ಶುಲ್ಕ’ದ ಪ್ರಹಾರವನ್ನು ಅವು ಅನುಭವಿಸಬೇಕಾಗಿ ಬಂದಿದೆ.

ಗ್ರಾಹಕರ ಹಸಿವನ್ನೇ ಬಂಡವಾಳ ಮಾಡಿಕೊಂಡ ದರ್ಶಿನಿಗಳು ನಡೆಸುತ್ತಿರುವ ಸುಲಿಗೆಗೆ ನಿಯಂತ್ರಣದ ಅಗತ್ಯವಿತ್ತು. ಅದೀಗ ಸೇವಾ ಶುಲ್ಕದ ಹಿನ್ನೆಲೆಯಲ್ಲಿ ಆರಂಭವಾಗಿದೆ ಅಂದುಕೊಂಡರೂ, ಇನ್ನಷ್ಟು ಕಠಿಣ ಕ್ರಮಗಳು ಕಾಲದ ಅಗತ್ಯವಾಗಿವೆ.

Leave a comment

Top