An unconventional News Portal.

ಅಮೆರಿಕಾದಲ್ಲಿ ಶೂಟೌಟ್: ಜನಾಂಗೀಯ ದ್ವೇಷಕ್ಕೆ ಭಾರತೀಯ ಎಂಜಿನಿಯರ್ ಬಲಿ

ಅಮೆರಿಕಾದಲ್ಲಿ ಶೂಟೌಟ್: ಜನಾಂಗೀಯ ದ್ವೇಷಕ್ಕೆ ಭಾರತೀಯ ಎಂಜಿನಿಯರ್ ಬಲಿ

46ನೇ ಅಧ್ಯಕ್ಷೀಯ ಚುನಾವಣೆ ಪ್ರಚಾರ ಸಮಯದಲ್ಲಿ ಮುನ್ನೆಲೆಗೆ ಬಂದಿದ್ದ ಅಮೆರಿಕಾದ ಜನಾಂಗೀಯ ದ್ವೇಷ ರಾಜಕಾರಣಕ್ಕೆ ಭಾರತೀಯ ಎಂಜಿನಿಯರ್‌ ಒಬ್ಬರು ಬಲಿಯಾಗಿದ್ದಾರೆ.

ನಿನ್ನೆ ರಾತ್ರಿ ಕನ್‌ಸಾಸ್ ನಗರದ ಒಲಾತೆಯ ಬಾರ್‌ ಒಂದರಲ್ಲಿ ಕುಳಿತಿದ್ದ ಹೈದ್ರಾಬಾದ್‌ ಮೂಲದ ಎಂಜಿನಿಯರ್ ಶ್ರೀನಿವಾಸ್ ಕುಚಿಭೋತ್ಲಾ ಮೇಲೆ ಅಮೆರಿಕಾ ಪ್ರಜೆಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಶ್ರೀನಿವಾಸ್ ಸಾವನ್ನಪ್ಪಿದ್ದಾರೆ. ದಾಳಿ ವೇಳೆ ಶ್ರೀನಿವಾಸ್ ಜತೆಗಿದ್ದ ಇನ್ನೊಬ್ಬ ಭಾರತೀಯ ಪ್ರಜೆ ಅಲೋಕ್ ಮದಸಾನಿ ಗಾಯಗೊಂಡಿದ್ದಾರೆ. ದಾಳಿಯನ್ನು ತಪ್ಪಿಸಲು ಬಂದ ಓರವ್‌ಲ್ಯಾಂಡ್ ಪಾರ್ಕ್ ಎಂಬ ಅಮೆರಿಕಾ ಪ್ರಜೆ ಕೂಡ ಗಾಯಗೊಂಡಿದ್ದಾರೆ.

ದಾಳಿ ನಡೆಸಿದ ಆರೋಪಿ ಆಡಂ.

ದಾಳಿ ನಡೆಸಿದ ಆರೋಪಿ ಆಡಂ.

ಗುಂಡಿನ ದಾಳಿ ನಡೆಸಿದ ಆಡಂ ಪುರಿನ್ಟನ್ ನಗರದ ಹೊರವಲಯದಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದ ಎಂದು ವರದಿಗಳು ಹೇಳುತ್ತಿವೆ. ಅಮೆರಿಕಾದ ನೌಕಾಪಡೆಯಲ್ಲಿ ಆತ ಸೇವೆ ಸಲ್ಲಿಸಿದ್ದ. ದಾಳಿಗೂ ಮುನ್ನ ಆತ ಭಾರತೀಯ ಎಂಜಿನಿಯರ್‌ಗಳನ್ನು ಉದ್ದೇಶಿಸಿ ‘ಗೆಟ್‌ ಔಟ್ ಆಫ್ ಮೈ ಕಂಟ್ರಿ’ (ನನ್ನ ದೇಶದಿಂದ ತೊಲಗಿ) ಎಂದು ಅಬ್ಬರಿಸಿದ ಎಂದು ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ ಇದೊಂದು ಜನಾಂಗೀಯ ದ್ವೇಷದಿಂದ ನಡೆದ ಹತ್ಯೆ ಎಂದು ಹೇಳಲಾಗುತ್ತಿದೆ.

ಡೊನಾಲ್ಡ್ ಟ್ರಂಪ್‌ ಆಯ್ಕೆಯ ಮೂಲಕ ಅಮೆರಿಕಾದಲ್ಲಿ ‘ರಾಷ್ಟ್ರ ಪ್ರೇಮ’ದ ಜ್ವಾಲೆ ಉರಿಯಲು ಆರಂಭಿಸಿದೆ. ವಿದೇಶಿಗರನ್ನು ದೇಶದಿಂದ ಹೊರಹಾಕಲು ಆಡಳಿತ ನೀತಿಗಳನ್ನು ಜಾರಿ ಮಾಡುತ್ತಿದೆ. ಟ್ರಂಪ್‌ ಪ್ರಮಾಣ ವಚನ ಸ್ವೀಕಾರ ಸಮಯದ ಭಾಷಣದಲ್ಲಿಯೇ, “ಅಮೆರಿಕಾ ಉತ್ಪನ್ನಗಳನ್ನೇ ಕೊಳ್ಳಿ; ಅಮೆರಿಕನ್ನರಿಗೆ ಕೆಲಸ ಕೊಡಿ” ಎಂದು ಹೇಳಿದ್ದರು.


Related: 45ನೇ ಅಧ್ಯಕ್ಷರಾಗಿ ಟ್ರಂಪ್ ಪ್ರಮಾಣ ವಚನ: ನೂತನ ಅಧ್ಯಕ್ಷರ ‘ಗುರಿ ತಪ್ಪದ’ ಭಾ‍ಷಣ


ಘಟನೆ ಹೇಗಾಯ್ತು?:

ಬುಧವಾರ ಸಂಜೆ 7. 30ರ ಸುಮಾರಿಗೆ ಒಲಾತೆಯ ಬಾರ್‌ನಲ್ಲಿ ಶ್ರೀನಿವಾಸ್‌ ಮತ್ತು ಅಲೋಕ್ ಕುಳಿತುಕೊಂಡು ಮಾತನಾಡುತ್ತಿದ್ದರು. ಇವರಿಬ್ಬರು ಇಲ್ಲಿನ ಜಿಪಿಎಸ್‌ ತಯಾರಿಕಾ ಸಂಸ್ಥೆ ಗಾರ್ಮಿನ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ ಅಲ್ಲಿಯೇ ಕುಳಿತಿದ್ದ ಆಡಂ ಪುರಿನ್ಟನ್ ಇವರಿಬ್ಬರ ವಿರುದ್ಧ ಬೈಗುಳವನ್ನು ಶುರುಮಾಡಿದ. ಹೀಗಾಗಿ ಆತನನ್ನು ಬಾರ್‌ನಿಂದ ಹೊರಹಾಕಲಾಯಿತು. ನಂತರ ಒಳಬಂದ ಆತ ಇಬ್ಬರ ಮೇಲೂ ಗುಂಡಿನ ದಾಳಿ ನಡೆಸಿದೆ. ಅದಕ್ಕೂ ಮೊದಲ ದೇಶ ಬಿಟ್ಟು ತೊಲಗಿ ಎಂದು ಅಬ್ಬರಿಸಿದ. ದಾಳಿಯನ್ನು ತಡೆಯಲು ಬಂದ ಅಮೆರಿಕನ್ ಪ್ರಜೆ ಕೂಡ ಗಾಯಗೊಂಡ ಎಂದು ವರದಿಗಳು ಹೇಳುತ್ತಿವೆ.

ಸದ್ಯ ಪುರಿನ್ಟನ್‌ನನ್ನು ಪೊಲೀಸರು ಬಂಧಿಸಿದ್ದು ಕೊಲೆ ಆರೋಪವನ್ನು ಹೊರಿಸಿದ್ದಾರೆ. ಜತೆಗೆ ಕೊಲೆ ಯತ್ನ ಕೇಸನ್ನೂ ದಾಖಲಿಸಿದ್ದಾರೆ. ಈಗನ ಮೇಲೆ ಜನಾಂಗೀಯ ದ್ವೇಷದಿಂದ ಕೃತ್ಯ ಎಸಗಿದ ಗುರುತರ ಆರೋಪವನ್ನು ಹೊರಿಸಬೇಕು ಎಂಬ ಆಗ್ರಹಗಳು ಕೇಳಿ ಬಂದಿವೆ.

ಘಟನೆ ಕುರಿತು ತನಿಖೆ ಆರಂಭಿಸಿರುವ ಎಫ್‌ಬಿಐ, ಘಟನೆ ನಡೆದು ಇನ್ನೂ 24 ಗಂಟೆಗಳು ನಡೆದಿಲ್ಲ. ಕೇವಲ ಊಹಾಪೋಹಗಳ ಆಧಾರದ ಮೇಲೆ ಇದೊಂದು ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ನಡೆದ ಕೃತ್ಯ ಎಂದು ಹೇಳಲು ಸಾಧ್ಯವಿಲ್ಲ. ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದೀವಿ ಎಂದು ಸಮಜಾಯಿಷಿ ನೀಡಿದೆ.

ಅನಾಮಿಕರಿಂದ ನಿಧಿ ಸಂಗ್ರಹ: 

ಘಟನೆ ಬಹಿರಂಗವಾಗುತ್ತಿದ್ದಂತೆ ಸಾವನ್ನಪ್ಪಿದ ಶ್ರೀನಿವಾಸ್‌ ಕುಟುಂಬಕ್ಕೆ ನೆರವು ನೀಡಲು ಮತ್ತು ಮೃತದೇಹವನ್ನು ಭಾರತಕ್ಕೆ ಕಳುಹಿಸಲು ನಿಧಿ ಸಂಗ್ರಹಕ್ಕೆ ಹಲವರು ಮುಂದಾಗಿದ್ದಾರೆ. ಒಲಾತೆ ನಗರದಲ್ಲಿರುವ ಗಾರ್ಮಿನ್ ಕಂಪನಿ ತನ್ನ ಸಿಬ್ಬಂದಿಗಳಿ ಇ-ಮೇಲ್‌ನಲ್ಲಿ ಘಟನೆ ಕುರಿತು ಸಂತಾಪ ವ್ಯಕ್ತಪಡಿಸಿದೆ. ಇದೊಂದು ದುರಾದೃಷ್ಟಕರ ಘಟನೆ ಎಂದು ಅದು ಹೇಳಿದೆ.

ಭಾರತದ ಜವಹರ್‌ಲಾಲ್ ನೆಹರೂ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ಪದವಿ ಮುಗಿಸಿದ ಶ್ರೀನಿವಾಸ್‌ ಅಮೆರಿಕಾದ ಟೆಕ್ಸಾಸ್‌ನಲ್ಲಿ ಸ್ನಾತ್ತಕೋತ್ತರ ಪದವಿ ಮುಗಿಸಿದ್ದರು. 2014ರಲ್ಲಿ ಗಾರ್ಮಿನ್ ಲಿಮಿಟೆಡ್‌ ಕಂಪನಿಯ ಹೆಲಿಕಾಪ್ಟರ್‌ ಆಪರೇಷನ್ಸ್ ವಿಭಾಗದಲ್ಲಿ ಕೆಲಸ ಆರಂಭಿಸಿದ್ದರು.

ಶ್ರೀನಿವಾಸ್‌ ಕುಟುಂಬಕ್ಕೆ ನೆರವಾಗುವ ಹಿನ್ನೆಲೆಯಲ್ಲಿ 1. 5 ಲಕ್ಷ ಡಾಲರ್‌ ಸಂಗ್ರಹಿಸಲು ಆನ್‌ಲೈನ್‌ ಅಭಿಯಾನವನ್ನು ಶುರುಮಾಡಲಾಗುದೆ. ಕುಟುಂಬ ಜತೆ ಸಂಪರ್ಕ ಇಲ್ಲದವರೂ ನಿಧಿ ಸಂಗ್ರಹದಲ್ಲಿ ತೊಡಗಿದ್ದಾರೆ. ಮೃತರ ಕುಟುಂಬಕ್ಕೆ ನೆರವಾಗುವ ಮೂಲಕ ಅಮೆರಿಕಾದಲ್ಲಿ ತಲೆ ಎತ್ತುತ್ತಿರುವ ಜನಾಂಗೀಯ ದ್ವೀಷಕ್ಕೆ ಸೆಡ್ಡು ಹೊಡೆಯಲು ಕೆರೆ ನೀಡಿದ್ದಾರೆ.


More Reading: ಭಾರತದ ಐಟಿ ಇಂಡಸ್ಟ್ರಿಗೆ ಟ್ರಂಪ್ ಮಾರಕ: ‘ಸಿಲಿಕಾನ್ ವ್ಯಾಲಿ’ಯಿಂದ ಭಾರತೀಯರ ಗುಳೇ?


 

 

Top