An unconventional News Portal.

ಹುಟ್ಟು, ಮದುವೆ, ಮಗು ಮತ್ತು ವೇಶ್ಯೆ: ಇದು ಪೆರ್ನಾ ಜಾತಿ ಹೆಂಗಸರ ಅನಿವಾರ್ಯ ಕರ್ಮ

ಹುಟ್ಟು, ಮದುವೆ, ಮಗು ಮತ್ತು ವೇಶ್ಯೆ: ಇದು ಪೆರ್ನಾ ಜಾತಿ ಹೆಂಗಸರ ಅನಿವಾರ್ಯ ಕರ್ಮ

ಸೀತಾ ಮನೆಗೆ ಬಂದಾಗ ಆಕೆಯ ಗಂಡ ಇನ್ನೂ ನಿದ್ದೆ ಮಂಪರಿನಲ್ಲಿಯೇ ಇದ್ದ. ರಾತ್ರಿ ಹೊತ್ತು ದೆಹಲಿಯ ಬೀದಿ ಬದಿಯಲ್ಲಿ ವೇಶ್ಯೆಯಾಗಿ ಆಕೆ ನಿಂತಿದ್ದಳು. ಬೆಳಕಾಗುವ ವೇಳೆಗೆ ಮನೆಗೆ ಬಂದಿದ್ದಳು. ಬಂದವಳೆ ಸ್ನಾನ ಮಾಡಿ, ಬೆಳಗಿನ ಉಪಹಾರ ಸಿದ್ಧಪಡಿಸಿ, ಮಕ್ಕಳನ್ನು ಶಾಲೆಗೆ ಹೊರಡಿಸುತ್ತಿದ್ದಳು. ಈ ಎಲ್ಲಾ ಕೆಲಸಗಳು ಮುಗಿದ ನಂತರವೇ ಆಕೆಯ ವಿಶ್ರಾಂತಿ ಸಮಯ ಶುರುವಾಗಿತ್ತು.

ದೆಹಲಿ ನಗರಕ್ಕೆ ಹೊಂದಿಕೊಂಡ ನಜಾಫ್ಘರ್ ಭಾಗದಲ್ಲಿ ಸೀತಾ ಮನೆ ಇದೆ. ಆಕೆ ನಿತ್ಯ ಬದುಕಿದಾಗಿ ಏನು ಮಾಡುತ್ತಾಳೆ ಎಂಬುದರಲ್ಲಿ ಯಾವ ಮುಚ್ಚು ಮರೆಯೂ ಇಲ್ಲ. ಅದು ಎಲ್ಲರಿಗೂ ಗೊತ್ತು. ಆಕೆಯದು ಪೆರ್ನಾ ಜಾತಿ. ಈ ಜಾತಿಯಲ್ಲಿ ಮದುವೆ, ಮದುವೆಯ ನಂತರ ಮಗು, ಅದಾದ ನಂತರ ವೇಶ್ಯಾವಾಟಿಕೆ. ಇದು ಜಾತಿ ಎಂಬ ಅನಿಷ್ಟಕ್ಕೆ ಅಂಟಿಕೊಂಡಿರುವ ಮತ್ತೊಂದು ಹೀನ ಸಂಪ್ರದಾಯ, ಹಿರಿಯರು ಬಿಟ್ಟು ಹೋಗಿರುವ ಬಳವಳಿ.

“ನನ್ನ ಮೊದಲ ಮಗು ಹುಟ್ಟಿದ ತಕ್ಷಣ ಸತ್ತು ಹೋಯಿತು. ನನ್ನ ಮಗಳಿಗೆ (ಎರಡನೇ ಮಗು) ವರ್ಷ ತುಂಬುತ್ತಿರುವಂತೆ ನಾನು ಈ ಕೆಲಸಕ್ಕೆ ಇಳಿದೆ,” ಎನ್ನುತ್ತಾರೆ ತನ್ನ ಪ್ರೌಢಾವಸ್ಥೆಯಲ್ಲಿ ಮದುವೆಯಾಗಿ ಈಗ ವೇಶ್ಯಾವೃತ್ತಿಗಿಳಿದಿರುವ ಸೀತಾ. ಈಗ ತಮ್ಮ 20ರ ಹರೆಯದ ದಿನಗಳನ್ನು ನೆನಪಿಸಿಕೊಳ್ಳುವ ಸೀತಾ, ಕತ್ತಾಲಾಗುತ್ತಿದ್ದಂತೆ ಪೆರ್ನಾ ಕಾಲೋನಿ ತೊರೆದು ನೇರವಾಗಿ ಬಸ್ ಸ್ಟ್ಯಾಂಡ್, ಪಾರ್ಕ್, ಸಿಗ್ನಲ್ ಗಳಿಗೆ ಕಾಲಿಡುತ್ತಾರೆ. ಹೀಗೆ ಕಾಲಿಡುವಾಗ ಪೊಲೀಸರು ಇಲ್ಲದ ಜಾಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

“ನಾವು ಬೇಗ ಕೆಲಸ ಮುಗಿಯಲಿ ಎಂದುಕೊಳ್ಳುತ್ತೇವೆ,” ಎನ್ನುತ್ತಾರೆ ಸೀತಾ. ಹೀಗಾಗಿ ಗ್ರಾಹಕರು ಸಿಗುತ್ತಿದ್ದಂತೆ ಕೂಗಳತೆ ದೂರದಲ್ಲಿ ಗೆಳೆಯರೊಬ್ಬರನ್ನು ಎಚ್ಚರಿಕೆ ಸಂದೇಶ ರವಾವಾನಿಸಲು ನಿಲ್ಲಿಸಿ, ಕಾರೋ, ಇಲ್ಲದಾದಲ್ಲಿ ಕತ್ತಲ ಮರೆಯಲ್ಲಿ ತಮ್ಮ ಕೆಲಸ ಮುಗಿಸುತ್ತಾರೆ. ಪ್ರತಿ ಗ್ರಾಹಕನೂ 200 ರಿಂದ 300 ರೂಪಾಯಿ ನೀಡಬೇಕು. ಹೀಗೆ ಒಬ್ಬಾಕೆ ಒಂದು ರಾತ್ರಿಯಲ್ಲಿ ಹೆಚ್ಚೆಂದರೆ 1000, ಕಡಿಮೆ ಎಂದರೆ ಖಾಲಿ ಕೈ. ಅಷ್ಟರಮಟ್ಟಿಗೆ ಪೆರ್ನಾ ಜಾತಿಯ ಹೆಣ್ಣುಮಕ್ಕಳ ದುಡಿಮೆ.

ಬಡತನವೇ ವೇಶ್ಯವಾಟಿಕೆಯ ಮೂಲ:

ಸೀತಾ ಕುಟುಂಬದಲ್ಲಿ ಬಂದಿರುವ ಪರಂಪರಾಗತ ನೆಲೆಯಲ್ಲಿ ಈ ವೃತ್ತಿಗೆ ಕಾಲಿಟ್ಟಿದ್ದರೆ, ಲೀಲಾ ಕತೆ ಕೊಂಚ ಭಿನ್ನವಾಗಿದೆ. ದೆಹಲಿಯ ಧರ್ಮಾಪುರಿ ಭಾಗದ ನಜಾಫ್ಘರ್ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಈಕೆ ಗಂಡ ತೀರಿಕೊಂಡ ನಂತರ ಜೀವನೋಪಾಯಕ್ಕಾಗಿ ಈ ದಾರಿಗೆ ಬಂದವರು.

sex-worker

ಆಕೆಯ ಪ್ರಕಾರ ಮಹಿಳೆಗೆ ಜೀವನೋಪಾಯಕ್ಕೆ ಇದೂ ಒಂದು ವೃತ್ತಿ; ಅಷ್ಟೆ. ಲೀಲಾ ಸಣ್ಣ ವಯಸ್ಸಿನವರಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದರು. ಆಕೆಯ ಚಿಕ್ಕಮ್ಮ, ಇತರ ಸಂಬಂಧಿಕರೆಲ್ಲ ರಾತ್ರಿ ದುಡಿಮೆ ಮಾಡುತ್ತಿದ್ದುದನ್ನು ನೋಡಿಕೊಂಡು ಬೆಳೆದವರು. “ಇಲ್ಲಿ ಸಂಪ್ರದಾಯಕ್ಕಿಂತ ಹೆಚ್ಚಾಗಿ ಆರ್ಥಿಕ ಅನಿವಾರ್ಯತೆ ವೇಶ್ಯಾವೃತ್ತಿಗೆ ಬರಲು ಕಾರಣ,” ಎನ್ನುತ್ತಾರೆ ಲೀಲಾ.

“ಅದರಲ್ಲೂ ಪೆರ್ನಾ ಜಾತಿಯಲ್ಲಿ ಹುಟ್ಟಿ, ಆಕೆ ಹೆಣ್ಣಾಗಿದ್ದು, ಬಡತನವೂ ಆ ಕುಟುಂಬಕ್ಕಿದ್ದರೆ, ಆಕೆಗೆ ವೇಶ್ಯಾವೃತ್ತಿ ಎನ್ನುವುದು ಅನಿವಾರ್ಯ ಎಂಬ ಪರಿಸ್ಥಿತಿ ಇದೆ,” ಎನ್ನುತ್ತಾರೆ ನಜಾಫ್ಘರ್ ಪೆರ್ನಾ ಸಮುದಾಯದ ಜತೆ ಕಳೆದ 5 ವರ್ಷಗಳಿಂದ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ‘ಆಪ್ನೆ ಆಪ್’ ಸರಕಾರೇತರ ಸಂಸ್ಥೆಯ ರುಚಿಕಾ ಗುಪ್ತಾ.

“ಒಮ್ಮೆ ಹೆಣ್ಣು ಮೈನೆರೆತರೆ ಮದುವೆಯಾಗುತ್ತಾಳೆ. ಮದುವೆಯಾಗುತ್ತಿದ್ದಂತೆ ಬಾಣಂತನ. ಮಗು ಬೆಳೆಯುತ್ತಿದ್ದಂತೆ ಗಂಡನೇ ಮಧ್ಯಸ್ಥಿಕೆವಹಿಸಿ ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳುತ್ತಾನೆ. ಇಡೀ ಸಮುದಾಯವೇ ಹಾಗೆ. ಸಮುದಾಯದ ಹೆಣ್ಣಿಗೆ ಅದರಿಂದ ಹೊರಬರುವ ದಾರಿ ಗೊತ್ತಿಲ್ಲ. ಇನ್ನೊಂದು ಹತ್ತು ವರ್ಷ ಅಷ್ಟೆ. ಆಕೆಯ ಮಗಳು ಇದೇ ವೇಶ್ಯಾವಾಟಿಕೆಗೆ ತಳ್ಳಲ್ಪಡುತ್ತಾಳೆ,” ಎನ್ನುತ್ತಾರೆ ಗುಪ್ತಾ.

ಒಂದೊಮ್ಮೆ ಈ ಜಾತಿಯಲ್ಲಿ ಹುಟ್ಟಿದ ಹೆಣ್ಣು ವೇಶ್ಯಾವೃತ್ತಿ ಸ್ವೀಕರಿಸಲು ಒಲ್ಲದಿದ್ದಲ್ಲಿ ಸಮುದಾಯದವರೇ ಮುಂದೆ ನಿಂತು ದೌರ್ಜನ್ಯ ಎಸಗುತ್ತಾರೆ. ಇಲ್ಲಿ ಹೆಂಡತಿಯಾಗಿ ಬರುವವಳು ಕುಟುಂಬದ ಆರ್ಥಿಕ ಹೊರೆ ನಿಭಾಯಿಸಬೇಕು ಎಂದು ನಿರೀಕ್ಷಿಸಲಾಗುತ್ತದೆ. ಹೀಗೆ ಈಗ ಲೀಲಾ ಮಗಳೂ ಆಕೆಯ ಹೊಸ ಸಂಸಾರ ಬಿಟ್ಟು ಒತ್ತಡ ತಾಳಲಾರದೆ ತಾಯಿ ಜತೆಗೆ ಬೀದಿಗೆ ಬಂದಿದ್ದಾಳೆ.

“ಅವರೆಲ್ಲಾ ಆಕೆಗೆ ನಿನ್ನ ಬಟ್ಟೆ ಕಳಚಿ ರಸ್ತೆಯಲ್ಲಿ ನಿಲ್ಲಿಸುತ್ತೇವೆ ಎಂದು ಹೆಸರಿಸುತ್ತಿದ್ದರು,” ಎನ್ನುತ್ತಾರೆ ಲೀಲಾ. ಕೊನೆಗೆ ಸರಕಾರೇತರ ಸಂಸ್ಥೆಯ ಸಹಾಯದಿಂದ ಲೀಲಾ ಈಗ ಕೋರ್ಟ್ ಮೊರೆ ಹೋಗಿದ್ದಾರೆ. ನನ್ನ ಮಗಳಿಗೆ ಆಯ್ಕೆ ಸ್ವಾತಂತ್ರ್ಯ ನೀಡಿ ಎಂದು ಆಕೆ ಕೋರಿಕೊಂಡಿದ್ದಾರೆ.

ಆದರೆ ಸೀತಾ ಕತೆ ಹಾಗಲ್ಲ. “ಇದು ನನ್ನ ಸ್ವಂತ ಆಯ್ಕೆ,” ಎನ್ನುತ್ತಾರೆ ಸೀತಾ. ಇವತ್ತು ಆಕೆಯ ಗಂಡ ಡ್ರೈವರ್ ಆಗಿ ದುಡಿಯುವಷ್ಟನ್ನು ಈಕೆಯೂ ದುಡಿಯುತ್ತಾರೆ. ಆದರೆ ಆಯ್ಕೆಯಾಚೆಗೆ ಆಕೆಯ ಸಮುದಾಯದಲ್ಲಿ ಅಂತಹದ್ದೊಂದು ಅಮಾನವೀಯ ಸಂಪ್ರದಾಯ ಬೆಳೆದು ಬಂದಿದೆ. ಇದು ವ್ಯಕ್ತಿ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಮೀರಿದೆ ಎನ್ನುವುದು ವಿಪರ್ಯಾಸ.

ಬೆಳವಣಿಗೆ ಮೀರಿದ ‘ಇತಿಹಾಸ’:

ಪೆರ್ನಾ, ದೇವದಾಸಿ ಇವೆಲ್ಲಾ ಉದಾಹರಣೆಗಳಷ್ಟೆ. ಇಂತಹ ಹಲವು ಆಚರಣೆಗಳು, ಸಂಪ್ರದಾಯಗಳು ದೇಶದ ನಾನಾ ಜಾತಿ ಸಮುದಾಯಗಳಲ್ಲಿ ಇವತ್ತಿಗೂ ಇದೆ. ಸಂವಿಧಾನ, ಜಾಗತೀಕರಣ ಏನೇ ಜಾರಿಗೆ ಬಂದರೂ ಇವರಲ್ಲಿನ ಅನಿಷ್ಟ ಆಚರಣೆಗಳು ಬದಲಾಗಿಲ್ಲ. ಈ ಆಧುನಿಕ ಯುಗದಲ್ಲೂ ಇತಿಹಾಸದ ಪಳಯುಳಿಕೆಗಳಂತೆ ಅವೆಲ್ಲಾ ಅಲ್ಲಲ್ಲಿ ಉಳಿದು ಬಿಟ್ಟಿವೆ. ಸರಕಾರದ ಯಾವ ಕಾನೂನು ಯೋಜನೆಗಳಿಂದಲೂ ಇವುಗಳನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಲು ಸಾಧ್ಯವಾಗುತ್ತಿಲ್ಲ.

ಉದಾಹರಣೆಗೆ ಪೆರ್ನಾ ಸಮುದಾಯ ಪರಿಶಿಷ್ಟ ಜಾತಿ ಅಡಿಯಲ್ಲಿ ಬರುತ್ತದೆ. ಆದರೆ ಇವರಿಗೆ ಎಸ್ಸಿಗಳಿಗೆ ಬರುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಬೇಕಾದ ಯಾವ ದಾಖಲೆಗಳೂ ಇಲ್ಲ. ಸರಕಾರಗಳು ನೀಡುವ ಯಾವ ಗುರುತಿನ ಚೀಟಿಗಳನ್ನೂ ಇವರು ಪಡೆದುಕೊಂಡಿಲ್ಲ. ಸದ್ಯ ಕೆಲವು ಸರಕಾರೇತರ ಸಂಸ್ಥೆಗಳ ಸಹಾಯದಿಂದ ಈ ಸಮುದಾಯದ ಜನರಿಗೆ ಜಾತಿ ಪ್ರಮಾಣ ಪತ್ರ , ಗುರುತಿನ ಚೀಟಿಗಳು ಕೊಡಿಸುವ ಕೆಲಸಗಳು ಜಾರಿಯಲ್ಲಿವೆ. ಈಗ ಇವರೆಲ್ಲಾ ಸರಕಾರದ ಯೋಜನೆಗಳ ಲಾಭ ಪಡೆದುಕೊಂಡು ತಮ್ಮ ಮಕ್ಕಳನ್ನಾದರೂ ಕುಲಕಸುಬಿನಿಂದ ಹೊರಕ್ಕಿಡಬೇಕಾಗಿದೆ. ಮೀಸಲಾತಿ ಇವತ್ತಿಗೂ ಯಾಕೆ ಬೇಕು ಎಂಬುದಕ್ಕೆ ದೇಶದ ರಾಜಧಾನಿಯ ಮಗ್ಗಲಿನಲ್ಲಿಯೇ ಜ್ವಲಂತ ಉದಾಹರಣೆಗಳು ಸಿಗುತ್ತವೆ.

“ತೀರಾ ಕಾಳಜಿಯಿಂದ ಪ್ರಯತ್ನಗಳನ್ನು ಮಾಡಿದಾಗ ಮಾತ್ರ ಇವರು ವೇಶ್ಯಾವೃತ್ತಿ ಬಿಟ್ಟುಬಿಡುವುದು ಸಾಧ್ಯವಾಗುತ್ತದೆ,” ಎನ್ನುತ್ತಾರೆ ಈ ರೀತಿಯ ಡೀನೊಟಿಫೈ ಸಮುದಾಯಗಳ ಬಗ್ಗೆ ಅಧ್ಯಯನ ಮಾಡಿರುವ ಅನುಜಾ ಅಗರವಾಲ್.

ಬಹುಶಃ ಈ ಸಮುದಾಯಗಳಿಗೆ ಆ ರೀತಿಯ ಕಾಳಜಿಯ ಅಗತ್ಯವಿದೆ. ಜತೆಗೆ, ಸಮಾಜ ಕೂಡ ತನ್ನ ಜತೆಗೆ ಇಂತವರನ್ನು ಮುಖ್ಯವಾಹಿನಿಗೆ ಸೇರಿಸಿಕೊಳ್ಳುವ ಸೌಜನ್ಯವನ್ನು ತೋರಿಸಬೇಕಿದೆ. ಹಾಗೆ ಆದಾಗ ಮಾತ್ರವೇ ಅನಿಷ್ಟ ಆಚರಣೆಗಳನ್ನು ಮೀರಿ ಪೆರ್ನಾದಂತಹ ಸಮುದಾಯಗಳು ಮೀಸಲಾತಿ ಇಲ್ಲದ ವ್ಯವಸ್ಥೆಯಲ್ಲಿ ಎಲ್ಲರೊಳಗೆ ಒಂದಾಗುತ್ತವೆ.

ಕೃಪೆ: ಅಲ್ ಜಝೀರಾ.

Leave a comment

Top