An unconventional News Portal.

‘ಪಾಕಿಸ್ತಾನ ಮೀರಿಸಿದ ಭಾರತ’: ಭಯೋತ್ಪಾದನಾ ದಾಳಿಗಳ ಅಂಕಿ ಅಂಶ ಬಿಡುಗಡೆ ಮಾಡಿದ ಅಮೆರಿಕಾ

‘ಪಾಕಿಸ್ತಾನ ಮೀರಿಸಿದ ಭಾರತ’: ಭಯೋತ್ಪಾದನಾ ದಾಳಿಗಳ ಅಂಕಿ ಅಂಶ ಬಿಡುಗಡೆ ಮಾಡಿದ ಅಮೆರಿಕಾ

ಅಮೆರಿಕಾದ ಸ್ಟೇಟ್‌ ಡಿಪಾರ್ಟ್‌ಮೆಂಟ್‌ ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯ ಪ್ರಕಾರ, ಭಾರತ 2016ರಲ್ಲಿ ಪಾಕಿಸ್ತಾನಕ್ಕಿಂತಲೂ ಹೆಚ್ಚಿನ ಭಯೋತ್ಪಾದನಾ ದಾಳಿಗಳಿಗೆ ಸಾಕ್ಷಿಯಾಗಿದೆ.

ಇರಾಕ್‌ನಲ್ಲಿ ಇದೇ ವೇಳೆಯಲ್ಲಿ 2,965 ಹಾಗೂ ಅಫ್ಘಾನಿಸ್ತಾನದಲ್ಲಿ 1,340 ಭಯೋತ್ಪಾದನಾ ದಾಳಿಗಳು ನಡೆದಿವೆ. ಮೂರನೇ ಸ್ಥಾನದಲ್ಲಿ ಭಾರತವಿದ್ದು 2016ರಲ್ಲಿ ಇಲ್ಲಿ ನಡೆದ ದಾಳಿಗಳ ಸಂಖ್ಯೆ 927. ನಂತರದ ಸ್ಥಾನದಲ್ಲಿ ಪಾಕಿಸ್ತಾನವಿದ್ದು, ಅಲ್ಲಿ ನಡೆದಿರುವ ಭಯೋತ್ಪಾದನಾ ದಾಳಿಗಳ ಸಂಖ್ಯೆ 734 ಎಂದು ವರದಿ ಹೇಳಿದೆ.

ಭಾರತದಲ್ಲಿ ನಡೆದ ದಾಳಿಗಳ ಪೈಕಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ದಾಳಿಗಳ ಕೊಡುಗೆ ಶೇ. 19, ಛತ್ತೀಸ್‌ಗಢ್‌ನಲ್ಲಿ ಶೇ. 18, ಮಣಿಪುರದಲ್ಲಿ ಶೇ. 12 ಹಾಗೂ ಜಾರ್ಖಂಡ್‌ ರಾಜ್ಯಗಳಲ್ಲಿ ಶೇ. 10ರಷ್ಟು ದಾಳಿಗಳು ನಡೆದಿವೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ, ಭಯೋತ್ಪಾದನಾ ದಾಳಿಗೆ ತುತ್ತಾಗುತ್ತಿರುವ ಸಾಮಾನ್ಯ ರಾಜ್ಯಗಳು ಎನ್ನಿಸಿಕೊಂಡಿವೆ. ಇದರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರವೇ ಹಿಂದಿನ ವರ್ಷಕ್ಕೆ ಹೋಲಿಸಿದರೆ 2016ರಲ್ಲಿ ಶೇ. 93ರಷ್ಟು ದಾಳಿಗಳ ಸಂಖ್ಯೆ ಹೆಚ್ಚಾಗಿದೆ.

ಪ್ರತಿ ವರ್ಷ ಯುಎಸ್‌ ಸ್ಟೇಟ್‌ ಡಿಪಾರ್ಟ್‌ಮೆಂಟ್‌ ಪ್ರಪಂಚದಾದ್ಯಂತ ನಡೆಯುವ ಭಯೋತ್ಪಾದನಾ ದಾಳಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದೆ. ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದಲ್ಲಿ ನಡೆಯುವ ಭಯೋತ್ಪಾದನಾ ದಾಳಿಗಳಲ್ಲಿ ಸಾವನ್ನಪ್ಪುವವರ ಸಂಖ್ಯೆ ಕಡಿಮೆ ಇದೆ. 2016ರಲ್ಲಿ ಭಾರತದಲ್ಲಿ ನಡೆದ ದಾಳಿಗಳಲ್ಲಿ 0.4 ಅನುಪಾತದಲ್ಲಿ ಸಾವಿನ ಸಂಖ್ಯೆ ಇದೆ ಎಂದು ವರದಿ ಹೇಳಿದೆ. ಭಾರತದಲ್ಲಿ ನಡೆದ ಶೇ. 73ರಷ್ಟು ದಾಳಿಗಳಲ್ಲಿ ಪ್ರಾಣಹಾನಿ ಕಂಡು ಬಂದಿಲ್ಲ.

2016ರಲ್ಲಿ ಭಾರತದಲ್ಲಿ ನಡೆದ ದಾಳಿಯಲ್ಲಿ ‘ಅತ್ಯಂತ ಭಯಾನಕ ದಾಳಿ’ ಎಂದು ಜುಲೈ ತಿಂಗಳಿನಲ್ಲಿ ಬಿಹಾರದಲ್ಲಿ ನಡೆದ ಸಿಆರ್‌ಪಿಎಫ್‌ ಅರೆಸೇನಾ ಪಡೆಯ ಮೇಲೆ ನಡೆದ ಮಾವೋವಾದಿಗಳ ದಾಳಿಯನ್ನು ವರದಿಯಲ್ಲಿ ಪಟ್ಟಿ ಮಾಡಲಾಗಿದೆ. ದಾಳಿಯಲ್ಲಿ ಒಟ್ಟು 16 ಸೈನಿಕರು ಸಾವನ್ನಪ್ಪಿದ್ದರು.

ಭಯೋತ್ಪಾದನಾ ದಾಳಿಗಳ ಕುರಿತು ಇನ್ನಷ್ಟು ಮಾಹಿತಿ ನೀಡುವ ವರದಿಯು, 2016ರಲ್ಲಿ ನಡೆದ 927 ದಾಳಿಗಳ ಪೈಕಿ ಶೇ. 47 ದಾಳಿಗಳಲ್ಲಿ ಬಾಂಬ್‌ ಮತ್ತಿತರ ಸ್ಫೋಟಕಗಳನ್ನು ಬಳಸಲಾಗಿತ್ತು. ಶೇ. 18ರಷ್ಟು ದಾಳಿಗಳಲ್ಲಿ ಬಂದೂಕುಗಳನ್ನು ಬಳಸಲಾಗಿತ್ತು. ಜತೆಗೆ, ಶೇ. 15 ದಾಳಿಗಳನ್ನು ಭದ್ರತಾ ಪಡೆಗಳು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದವು. ಶೇ. 12ರಷ್ಟು ದಾಳಿಗಳು ಕಟ್ಟಡಗಳನ್ನು ಹಾಗೂ ಮೂಲಸೌಕರ್ಯಗಳನ್ನು ಗುರಿಯಾಗಿಸಿಟ್ಟುಕೊಂಡು ನಡೆದ ದಾಳಿಗಳಾಗಿದ್ದವು.

2015ರಲ್ಲಿ ಅತಿ ಹೆಚ್ಚು ಭಯೋತ್ಪಾದನಾ ದಾಳಿಗೆ ಗುರಿಯಾದ ದೇಶಗಳ ಪಟ್ಟಿಯ ಮೂರನೇ ಸ್ಥಾನದಲ್ಲಿ ಪಾಕಿಸ್ತಾನ ಜಾಗ ಪಡೆದುಕೊಂಡಿತ್ತು. 2016ರಲ್ಲಿ ಆ ಸ್ಥಾನದಲ್ಲಿ ಭಾರತವಿದೆ. ಪಾಕಿಸ್ತಾನದಲ್ಲಿ ನಡೆಯುವ ಭಯೋತ್ಪಾದನಾ ದಾಳಿಗಳ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಇಳಿಕೆ ಕಂಡು ಬರುತ್ತಿದೆ. 2016ರಲ್ಲಿ ಈ ಪ್ರಮಾಣ ಶೇ. 27ರಷ್ಟು ಕಡಿಮೆಯಾಗಿದೆ ಎಂದು ವರದಿ ಹೇಳಿದೆ.

ಚಿತ್ರ: ಇಂಡಿಯಾ ಟುಡೆ.

 

 

Top