An unconventional News Portal.

ರಾಜ್ಯಸಭಾ ಚುನಾವಣೆಯಲ್ಲಿ ಮತದಾನಕ್ಕೆ ಕೋಟಿ ಕೋಟಿ ಬೇಡಿಕೆ ಇಟ್ಟ ಶಾಸಕರು: ‘ಇಂಡಿಯಾ ಟುಡೆ’ ಇನ್ವೆಷ್ಟಿಗೇಶನ್

ರಾಜ್ಯಸಭಾ ಚುನಾವಣೆಯಲ್ಲಿ ಮತದಾನಕ್ಕೆ ಕೋಟಿ ಕೋಟಿ ಬೇಡಿಕೆ ಇಟ್ಟ ಶಾಸಕರು: ‘ಇಂಡಿಯಾ ಟುಡೆ’ ಇನ್ವೆಷ್ಟಿಗೇಶನ್

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಲು ಭಾರಿ ಮೊತ್ತದ ಲಂಚದ ಬೇಡಿಕೆ ಮುಂದಿಟ್ಟ ರಾಜ್ಯದ ನಾಲ್ವರು ಶಾಸಕರ ಬಣ್ಣವನ್ನು ‘ಇಂಡಿಯಾ ಟುಡೆ’ ರಹಸ್ಯ ಕ್ಯಾಮೆರಾಗಳು ಬಯಲು ಮಾಡಿವೆ.

ಗುರುವಾರ ಸಂಜೆ ವೇಳೆ ರಾಷ್ಟ್ರೀಯ ವಾಹಿನಿ ಭಿತ್ತರಿಸಿದ ತನಿಖಾ ವರದಿಯಲ್ಲಿ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಲು ಐದು ಕೋಟಿ- ಹತ್ತು ಕೋಟಿ ಲಂಚದ ಬೇಡಿಕೆ ಮುಂದಿಟ್ಟುಕೊಂಡು ಮಾತುಕತೆ ನಡೆಸುತ್ತಿರುವುದನ್ನು ತೋರಿಸಲಾಗಿದೆ. ದಿಲ್ಲಿ ಹಾಗೂ ಬೆಂಗಳೂರಿನ ಪಂಚತಾರ ಹೋಟೆಲ್ನಲ್ಲಿ ವಾಹಿನಿಯ ‘ವಿಶೇಷ ತನಿಖಾ ತಂಡ’ದ ಸದಸ್ಯರು ಬಸವ ಕಲ್ಯಾಣದ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ್ ಖೂಬ, ಆಳಂದ ಶಾಸಕ ಬಿ. ಆರ್. ಪಾಟೀಲ್, ಇನ್ನೊಬ್ಬ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಹಾಗೂ ಕೋಲಾರದ ಶಾಸಕ ವರ್ತೂರು ಪ್ರಕಾಶ್ ಜತೆ ‘ಡೀಲ್’ ಮಾತುಕತೆ ನಡೆಸಿದ್ದಾರೆ.

ಇದೀಗ ರಾಷ್ಟ್ರಮಟ್ಟದಲ್ಲಿ ರಾಜ್ಯ ಸಭಾ ಚುನಾವಣೆಯಲ್ಲಿ ಮತ ಮಾರಾಟದ ಸುದ್ದಿ ಸದ್ದು ಮಾಡುತ್ತಿದೆ. ಬುದ್ದಿಜೀವಿಗಳ ಮನೆ ಎಂದೇ ಹೆಸರುವಾಸಿಯಾಗಿದ್ದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಭಾರಿ ಮೊತ್ತದ ವಹಿವಾಟು ನಡೆಯುತ್ತದೆ ಎಂಬ ಗುಮಾನಿಗೆ ಗಟ್ಟಿಯಾದ ಸಾಕ್ಷಿ ಲಭಿಸಿದಂತಾಗಿದೆ. ಜತೆಗೆ ರಾಜ್ಯದ ಮಾನ ರಾಷ್ಟ್ರದಲ್ಲಿ ಹರಾಜಾಗಿದೆ.

‘ಇಂಡಿಯಾ ಟುಡೆ’ ವರದಿಯ ಸಂಪೂರ್ಣ ವಿವರ ಇಲ್ಲಿದೆ.

ದಿಲ್ಲಿಯಲ್ಲಿ ಮುಖಾಮುಖಿ:

ದಿಲ್ಲಿಯಲ್ಲಿ ಶಾಸಕ ಮಲ್ಲಿಕಾರ್ಜುನ್ ಖೂಬ ಅವರನ್ನು ‘ಇಂಡಿಯಾ ಟುಡೆ’ ಪತ್ರಕರ್ತರು ಭೇಟಿ ಮಾಡಿದ್ದಾರೆ. ಈ ಸಮಯದಲ್ಲಿ ಖೂಬ ರಾಜ್ಯ ಸಭಾ ಚುನಾವಣಾ ವೇಳೆಯಲ್ಲಿ ಕಾಂಗ್ರೆಸ್ ಮೂರನೇ ಅಭ್ಯರ್ಥಿ ಪರವಾಗಿ ಅಡ್ಡ ಮತದಾನ ಮಾಡಲು ಒಪ್ಪಿಕೊಂಡಿದ್ದಾರೆ. ಇದಕ್ಕಾಗಿ ತಮ್ಮದೇ ಶಾಸಕ ತಂಡ ರೆಡಿ ಇದ್ದು, ಒಂದು- ಎರಡು ಕೋಟಿ ರೂಪಾಯಿಗಳ ಮಾತೇ ಇಲ್ಲ ಎಂದಿದ್ದಾರೆ. ಕೊನೆಗೆ, ತಾವೊಬ್ಬರು ಅಡ್ಡ ಮತದಾನ ಮಾಡಲು 5 ಕೋಟಿ ರೂಪಾಯಿ ಬೇಡಿಕೆ ಮುಂದಿಟ್ಟಿದ್ದಾರೆ.

ಸೋಫಾದಲ್ಲಿ ಅರಾಮಾಗಿ ಕುಳಿತುಕೊಂಡು ‘ಡೀಲ್’ ಕುದುರಿಸುತ್ತಿರುವ ಖೂಬ ಅವರ ದೃಶ್ಯಗಳೀಗ ರಾಷ್ಟ್ರೀಯ ಸುದ್ದಿವಾಹಿನಿಗಳ ತೆರೆಯನ್ನು ಅಲಂಕರಿಸಿದೆ.

ಲೀಲಾ ಪ್ಯಾಲೇಸ್ ಡೀಲ್: 

ವಾಹಿನಿಯ ಇದೇ ಪತ್ರಕರ್ತರ ತಂಡ ಅಳಂದ ಶಾಸಕ ಬಿ. ಆರ್. ಪಾಟೀಲ್ ಅವರನ್ನು ಲೀಲಾ ಪ್ಯಾಲೇಸ್ ಹೋಟೆಲ್ ರೂಂ ನಂಬರ್ 409ರಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದೆ. ಈ ಸಮಯದಲ್ಲಿ ಪಾಟೀಲರ ಜತೆಗೆ ಅವರ ಕೆಲವು ಬೆಂಬಲಿಗರೂ ಮಾತುಕತೆಯಲ್ಲಿ ಭಾಗಿಯಾಗಿರುವುದು ದೃಶ್ಯದ ಧ್ವನಿಗಳಲ್ಲಿ ಸ್ಪಷ್ಟವಾಗಿತ್ತಿದೆ. “ರಾಜ್ಯಸಭಾ ಚುನಾವಣೆ ಎಂಬುದು ಒಂದು ಪೊಲಿಟಿಕಲ್ ಮ್ಯಾಚ್,” ಎಂದು ಪಾಟೀಲ್ ಚಟಾಕಿ ಹಾರಿಸಿದ್ದಾರೆ. “ಯಾವ ಪಕ್ಷ, ಯಾರ ಪಕ್ಷ,” ಎಂದು ವ್ಯಂಗ್ಯವಾಗಿಯೇ ಮಾತನಾಡಿರುವ ಪಾಟೀಲರು, ಕೊನೆಗೆ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತ ಹಾಕಲು ‘ಡೀಲ್’ ಕುದುರಿಸಿದ್ದಾರೆ.

ಅದೇ ಹೋಟೆಲ್ನ ಕೆಳ ಮಹಡಿಯಲ್ಲಿ ‘ಇಂಡಿಯಾ ಟುಡೆ’ ತಂಡ ಶಾಸಕ ಜಿ. ಟಿ. ದೇವೇಗೌಡ ಅವರನ್ನು ಭೇಟಿ ಮಾಡಿ ಮಾತುಕತೆಗೆ ಮುಂದಾಗಿದೆ. ಈ ಸಮಯದಲ್ಲಿ ಯಾವುದನ್ನೂ ಮಾತನಾಡದ ದೇವೇಗೌಡರು, ನಾಳೆ ತೀರ್ಮಾನ ಮಾಡಿ ತಿಳಿಸುತ್ತೇನೆ ಎಂದು ಎದ್ದು ಹೊರನಡೆದಿದ್ದಾರೆ. ಈ ಸಮಯದಲ್ಲಿ ದೇವೇಗೌಡರ ಅಳಿಯ ರಾಮ್ ಎಂಬಾತ ಶಾಸಕರ ಪರವಾಗಿ ಮಾತುಕತೆ ನಡೆಸಿದ್ದಾನೆ. “ಎಷ್ಟು ಕೊಡುತ್ತೀರಿ,” ಎಂದು ರಹಸ್ಯ ಕಾರ್ಯಾಚರಣೆ ನಡೆಸುತ್ತಿದ್ದ ಪತ್ರಕರ್ತರಿಗೆ ಕೇಳಿರುವುದು ಇದೀಗ ಬಯಲಾಗಿದೆ.

ಅದೇ ಮಾದರಿಯಲ್ಲಿ, ಕೋಲಾರದ ಸ್ವತಂತ್ರ ಎಂಎಲ್ಎ ವರ್ತೂರು ಪ್ರಕಾಶ್ ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಹಣದ ಮಾತುಕತೆ ನಡೆಸಿರುವುದನ್ನು ರಹಸ್ಯ ಕ್ಯಾಮೆರಾದ ದೃಶ್ಯಾವಳಿಗಳು ಹೇಳುತ್ತಿವೆ. ಪತ್ರಕರ್ತರ ತನಿಖಾ ತಂಡದ ಜತೆ ಪಂಚತಾರ ಹೋಟೆಲ್ ಒಂದರಲ್ಲಿ ಮಾತನಾಡಿದ ಅವರು, “ಸ್ವತಂತ್ರ ಶಾಸಕರಿಗೆ ಹಣ ಬರುತ್ತದೆ. ಅದಕ್ಕೆ ಏನೂ ಸಮಸ್ಯೆ ಇರುವುದಿಲ್ಲ,” ಎಂದು ಹೇಳಿಕೊಂಡಿದ್ದಾರೆ.

ಮುಂದೇನು?: 

ಈಗಷ್ಟೆ ಸುದ್ದಿ ರಾಷ್ಟ್ರ ಮಟ್ಟದಲ್ಲಿ ಕಾವು ಪಡೆದುಕೊಳ್ಳುತ್ತಿದೆ. ಮುಂದಿನ ಪರಿಣಾಮಗಳನ್ನು ಕಾದು ನೋಡಬೇಕಿದೆ.

Top