An unconventional News Portal.

ಅಗ್ನಿ-5: ಚೀನಾ ನೆಲ ಮುಟ್ಟಲಿರುವ ಕ್ಷಿಪಣಿಯ ಅಂತಿಮ ಪರೀಕ್ಷೆಗೆ ಭರದ ಸಿದ್ಧತೆ

ಅಗ್ನಿ-5: ಚೀನಾ ನೆಲ ಮುಟ್ಟಲಿರುವ ಕ್ಷಿಪಣಿಯ ಅಂತಿಮ ಪರೀಕ್ಷೆಗೆ ಭರದ ಸಿದ್ಧತೆ

ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಸಾಮಾರ್ಥ್ಯದ ಅಗ್ನಿ-5 ಖಂಡಾಂತರ ಕ್ಷಿಪಣಿಯ ಅಂತಿಮ ಪರೀಕ್ಷೆಗೆ ಭಾರತ ಸಿದ್ಧವಾಗಿದೆ. ಒಡಿಶಾದ ವೀಲರ್ ದ್ವೀಪದಿಂದ ಬರೋಬ್ಬರಿ ಎರಡು ವರ್ಷಗಳ ನಂತರ ಮತ್ತೊಮ್ಮೆ ಅಗ್ನಿ-5 ಆಕಾಶಕ್ಕೆ ಚಿಮ್ಮಲಿದೆ. ಒಂದೊಮ್ಮೆ ಈ ಅಂತಿಮ ಪರೀಕ್ಷೆ ಯಶಸ್ವಿಯಾದಲ್ಲಿ ಅಗ್ನಿ-5 ಭಾರತೀಯ ಸೇನೆಯ ಬತ್ತಳಿಕೆ ಸೇರಲಿದೆ.

ರಕ್ಷಣಾ ಇಲಾಖೆಯ ಸಂಶೋಧನಾ ಸಂಸ್ಥೆ ಡಿಆರ್’ಡಿಒ ಮೂಲಗಳ ಪ್ರಕಾರ ಡಿಸೆಂಬರ್ ಅಂತ್ಯದಲ್ಲಿ ಇಲ್ಲವೇ ಜನವರಿ ಆದಿಯಲ್ಲಿ ಅಗ್ನಿ ಕ್ಷಿಪಣಿಯ ಅಂತಿಮ ಪರೀಕ್ಷಾರ್ಥ ಉಡಾವಣೆ ನಡೆಯಲಿದೆ. “ಕಳೆದ ಜನವರಿ 2015ರಲ್ಲಿ ಉಡಾವಣೆ ಮಾಡಿದಾಗ ಕೆಲವು ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಅವುಗಳನ್ನು ಸರಿ ಪಡಿಸಲಾಗಿದೆ. ಕೆಲವು ಸಣ್ಣ ಪುಟ್ಟ ಸಿದ್ಧತೆಗಳು ಮಾತ್ರ ಬಾಕಿ ಉಳಿದಿವೆ,” ಎಂದು ಮೂಲಗಳು ಹೇಳಿವೆ.

ಚೀನಾದ ಉತ್ತರ ತುತ್ತತುದಿಯನ್ನೂ ತಲುಪುವ ಸಾಮರ್ಥ್ಯವನ್ನು ಅಗ್ನಿ ಸರಣಿಯ ಈ 5ನೇ ಕ್ಷಿಪಣಿ ಹೊಂದಿದೆ. ಇದು ಅಗ್ನಿ -5ರ ನಾಲ್ಕನೇ ಮತ್ತು ಅಂತಿಮ ಪರೀಕ್ಷಾರ್ಥ ಉಡಾವಣೆಯಾಗಿದ್ದು, ಇಲ್ಲಿ ಕ್ಷಿಪಣಿಯ ಪೂರ್ಣ ಸಾಮರ್ಥ್ಯವನ್ನು ಪರೀಕ್ಷೆಗೆ ಒಡ್ಡಲಾಗುತ್ತಿದೆ. ಈ ಹಿಂದಿನ ಪರೀಕ್ಷೆಗಳಲ್ಲಿ ಕ್ಷಿಪಣಿ ತಂತ್ರಜ್ಞಾನವನ್ನು ಮಾತ್ರ ಪರೀಕ್ಷೆಗೆ ಒಡ್ಡಲಾಗಿತ್ತು.

2003ರಲ್ಲಿ ಭಾರತದ ರಕ್ಷಣೆಗಾಗಿ ಅಗ್ನಿ-5ರ ನಿರ್ಮಾಣ ಆರಂಭವಾಗಿತ್ತು. ಅದಾದ ನಂತರ ಏಪ್ರಿಲ್ 2012 ಮೊದಲ ಬಾರಿಗೆ ಪರೀಕ್ಷಾರ್ಥ ಉಡಾವಣೆ ಮಾಡಲಾಗಿತ್ತು. ಸೆಪ್ಟೆಂಬರ್ 2013ರಲ್ಲಿ ಎರಡನೇ ಪರೀಕ್ಷೆ ಹಾಗೂ 2015ರ ಜನರಿಯಲ್ಲಿ ಮೂರನೇ ಪರೀಕ್ಷೆ ನಡೆಸಲಾಗಿತ್ತು. ಎಲ್ಲಾ ಪರೀಕ್ಷೆಗಳು ಯಶಸ್ವಿಯಾಗಿದ್ದವಾದರೂ ಕೆಲವು ಸಣ್ಣ ಪುಟ್ಟ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಇದೀಗ ಅಂತಿಮ ಪರೀಕ್ಷೆ ನಡೆಯಲಿದೆ.

ಅಗ್ನಿ ಕ್ಷಿಪಣಿಯನ್ನು ಸಮಾನ್ಯ ಟ್ರಕ್ಕಿನಲ್ಲಿ ಸಾಗಾಟ ಮಾಡಬಹುದಾಗಿದೆ. ಇದರಿಂದ ಬೇಕೆಂದ ಸ್ಥಳಕ್ಕೆ ಕೊಂಡೊಯ್ದು ಉಡಾವಣೆ ಮಾಡಬಹುದಾಗಿದೆ. 50 ಟನ್ ತೂಕದ ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತೊಯ್ಯುವ ಕ್ಷಿಪಣಿ ಇದಾಗಿದ್ದು ಬರೋಬ್ಬರಿ 6 ಸಾವಿರ ಕಿಲೋಮೀಟರ್ ದೂರದ ಗಮ್ಯವನ್ನು ನಿರ್ಧಿಷ್ಟವಾಗಿ ತಲುಪಲಿದೆ.

ಈ ಉಡಾವಣೆಯೊಂದಿಗೆ ಭಾರತ 5,000 ದಿಂದ 5,500 ಕಿಲೋಮೀಟರ್ ದೂರದ ಗುರಿ ತಲುಪುವ ಕ್ಷಿಪಣಿಗಳನ್ನು ಹೊಂದಿರುವ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಲಿದೆ. ಈಗಾಗಲೇ ಅಮೆರಿಕಾ, ರಷ್ಯಾ, ಚೀನಾ, ಫ್ರಾನ್ಸ್ ಮತ್ತು ಇಂಗ್ಲೆಂಡ್ ಈ ಸಾಧನೆ ಮಾಡಿವೆ.

ಸಣ್ಣ ದೂರವನ್ನು ಕ್ರಮಿಸುವ ಪೃಥ್ವಿ ಮತ್ತು ಧನುಶ್ ಕ್ಷಿಪಣಿಗಳ ನಂತರ ಅಗ್ನಿ-1, ಅಗ್ನಿ-2 ಮತ್ತು ಅಗ್ನಿ-3 ಕ್ಷಿಪಣಿಗಳನ್ನು ನಿರ್ಮಿಸಲಾಗಿತ್ತು. ಆದರೆ ಈ ಕ್ಷಿಪಣಿಗಳು ಪಾಕಿಸ್ತಾನವನ್ನು ಮುಟ್ಟಲಷ್ಟೇ ಶಕ್ತವಾಗಿದ್ದವು. ಆದರೆ ಅಗ್ನಿ-4 ಮತ್ತು ಅಗ್ನಿ 5 ನಿರಾಯಾಸವಾಗಿ ಚೀನಾದ ಗಡಿ ಮುಟ್ಟುವ ಸಾಮಾರ್ಥ್ಯ ಹೊಂದಿದೆ. ಅಗ್ನಿ-5 ಅರಾಮವಾಗಿ ಚೀನಾದ ರಾಜಧಾನಿ ಬೀಜಿಂಗನ್ನೂ ತಲುಪುವಷ್ಟು ಶಕ್ತವಾಗಿದೆ.

ಸದ್ಯದ ಅಗ್ನಿ-5 ಭಾರತಕ್ಕೆ ಹೊರಗಡೆಯಿಂದ ಉಂಟಾಗಬಹುದಾದ ಅಪಾಯವನ್ನು ಮೆಟ್ಟಿ ನಿಲ್ಲಲು ಸಾಕಾಗುತ್ತದೆ. ಆದರೆ ರಕ್ಷಣಾ ಸಂಶೋಧನಾ ಸಂಸ್ಥೆ (ಡಿಆರ್’ಡಿಒ) ಕೆಲವು ನಗರಗಳಿಗೆ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಸ್ಥಾಪಿಸಲು ಹೊರಟಿದೆ. ಒಂದೊಮ್ಮೆ ಇದು ಪೂರ್ಣಗೊಂಡಿದ್ದೇ ಆದಲ್ಲಿ ಭಾರತದ ಪ್ರಮುಖ ನಗರಗಳು ಕ್ಷಿಪಣಿಗಳ ಗಂಡಾಂತರದಿಂದ ಪಾರಾಗಲಿವೆ.

Top