An unconventional News Portal.

ಉಭಯ ರಾಷ್ಟ್ರಗಳ ಮಾತುಕತೆಗೆ ‘ಕಾಶ್ಮೀರ ವಿಘ್ನ’: ವಿದೇಶಾಂಗ ಸಚಿವೆ ಸುಷ್ಮಾ ಕನಸು ಭಗ್ನ!

ಉಭಯ ರಾಷ್ಟ್ರಗಳ ಮಾತುಕತೆಗೆ ‘ಕಾಶ್ಮೀರ ವಿಘ್ನ’: ವಿದೇಶಾಂಗ ಸಚಿವೆ ಸುಷ್ಮಾ ಕನಸು ಭಗ್ನ!

ದೇಶದಾದ್ಯಂತ ಕಾಶ್ಮೀರ ವಿಚಾರ ಚರ್ಚೆಯಾಗುತ್ತಿರುವ ಹೊತ್ತಲ್ಲೇ; ಪಾಕಿಸ್ತಾನ ಜತೆ ಆ ವಿವಾದ ಚರ್ಚಿಸಲು ಸಿದ್ದವಿಲ್ಲ ಎಂದು ಭಾರತ ಸ್ಪಷ್ಟಮಾತುಗಳಲ್ಲಿ ಹೇಳಿದೆ.

ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಸಭೆಯಲ್ಲಿ ‘ಗಡಿಯಾಚೆಗಿನ ಭಯೋತ್ಪಾದನೆ’ ವಿಷಯ ಮಾತ್ರ ಚರ್ಚಿಸಲು ಸಿದ್ಧವಿರುವುದಾಗಿ ಭಾರತ ಪಾಕಿಸ್ತಾನಕ್ಕೆ ಸ್ಪಷ್ಟಪಡಿಸಿದೆ. ದೆಹಲಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್, “ಭಾರತ ಮತ್ತು ಪಾಕಿಸ್ತಾನದ ನಡುವಿನ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ನಡೆಯುವುದು ಖಚಿತ,” ಎಂದಿದ್ದಾರೆ.

”ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆ ಕುರಿತು ಚರ್ಚಿಸಲು ತಾವು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಲಿರುವುದಾಗಿ.” ಜೈಶಂಕರ್ ತಿಳಿಸಿದ್ದಾರೆ. ಇದೇ ವೇಳೆ ಅವರು ಪಾಕಿಸ್ತಾನ ಪ್ರಸ್ತಾಪಿಸಿದ್ದ ಜಮ್ಮು ಮತ್ತು ಕಾಶ್ಮೀರ ವಿವಾದದ ಕುರಿತು ಚರ್ಚಿಸಲು ಸಾಧ್ಯವಿಲ್ಲ ಎಂಬುದನ್ನೂ ಸ್ಪಷ್ಟ ಪಡಿಸಿದ್ದಾರೆ. ಈ ಕುರಿತು ಚರ್ಚೆಗೆ ಆಹ್ವಾನ ನೀಡಿದ್ದ ನೆರೆಯ ದೇಶದ ಆಹ್ವಾನವನ್ನು ಅವರು ತಿರಸ್ಕರಿಸಿದ್ದಾರೆ.

“ಸ್ಥಳೀಯ ಸಮಸ್ಯೆಯಲ್ಲಿ ಇಸ್ಲಮಾಬಾದಿಗೆ ಯಾವುದೇ ಕೆಲಸವಿಲ್ಲ,” ಎಂದು ಅವರು ಹೇಳಿದ್ದಾರೆ. ಈ ಮೂಲಕ ಜಮ್ಮು ಮತ್ತು ಕಾಶ್ಮೀರ ‘ಅಂತರಾಷ್ಟ್ರೀಯ ವಿವಾದ’ ಎಂಬ ಪಾಕಿಸ್ತಾನದ ಪ್ರಸ್ತಾಪಕ್ಕೆ ಭಾರತದ ಹಳೆಯ ವಿರೋಧವನ್ನೇ ಮೋದಿ ನೇತೃತ್ವದ ಬಿಜೆಪಿ ಸರಕಾರ ಕೂಡ ಮುಂದುವರಿಸಿದೆ. ಮಾತ್ರವಲ್ಲ, ‘ಇದೊಂದ ದೇಶದೊಳಗಿನ ಸಮಸ್ಯೆ’, ‘ಕಾಶ್ಮೀರ ಭಾರತದ ಅವಿಭಾಜ್ಯ ಅಂಗ’ ಎಂಬುದನ್ನು ಪುನರುಚ್ಚರಿಸಿದೆ.

ದ್ವಿಪಕ್ಷೀಯ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆಗಾಗಿ ಸೋಮವಾರವಷ್ಟೇ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಅಜೀಜ್ ಅಹಮದ್ ಚೌಧರಿ ಆಹ್ವಾನ ನೀಡಿದನ್ನು ಇಲ್ಲಿ ಸ್ಮರಿಸಬಹುದು.

ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದಲ್ಲಿ ಕಾಶ್ಮೀರ ವಿವಾದವನ್ನು ಚರ್ಚಿಸಲು ಪಾಕಿಸ್ತಾನ ಆಹ್ವಾನ ನೀಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಭಾರತ ವಿದೇಶಾಂಗ ಕಾರ್ಯದರ್ಶಿಗಳ ಭೇಟಿ ವೇಳೆ ಕಾಶ್ಮೀರ ವಿಷಯವನ್ನು ಚರ್ಚಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.

ಕೆಂಪುಕೋಟೆಯಲ್ಲಿ ಗುಡುಗು: 

ಸ್ವಾತಂತ್ರ್ಯ ದಿನಾಚರಣೆಯ ದಿನ ಕೆಂಪುಕೋಟೆ ಮೇಲೆ ನಿಂತು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಪಾಕಿಸ್ತಾನದ ವಿರುದ್ಧ ಗುಡುಗಿದ್ದರು. ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲಿಸಿ ಎಂದಿದ್ದಷ್ಟೇ ಅಲ್ಲ, ಬಲೂಚಿಸ್ತಾನ ಪ್ರಾಂತ್ಯದ ಹೆಸರನ್ನು ಉದ್ದೇಶಪೂರ್ವಕವಾಗಿ ಪ್ರಸ್ತಾಪಿಸಿದ್ದರು.

ಇದಾಗಿ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನದ ವಿದೇಶಾಂಗ ಇಲಾಖೆಯಿಂದ ಚರ್ಚೆಗೆ ಆಹ್ವಾನ ಬಂದಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಭಾರತ, ಗಡಿಯಾಚೆಗಿನ ಭಯೋತ್ಪಾದನೆ, ಭಯೋತ್ಪಾದನೆಗೆ ನೀಡುತ್ತಿರುವ ಕುಮ್ಮಕ್ಕು ಮತ್ತು ದೇಶದೊಳಗಿನ ಹಿಂಸೆಗೆ ನೀಡುತ್ತಿರುವ ಪ್ರಚೋದನೆಯನ್ನು ನಿಲ್ಲಿಸಬೇಕು ಎಂಬ ಬೇಡಿಕೆ ಮುಂದಿಟ್ಟಿತ್ತು.

ಸುಷ್ಮಾ ಕನಸು ಭಗ್ನ: Sushma swaraj in pakistan

ಇವತ್ತು ಎರಡೂ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳು ಮುಖಾಮುಖಿ ಕುಳಿತು ಮಾತನಾಡುವ ಪರಿಸ್ಥಿತಿ ಏನಾದರೂ ಸೃಷ್ಟಿಯಾಗಿದ್ದರೆ ಅದಕ್ಕೆ ಕಾರಣ ಮತ್ಯಾರೂ ಅಲ್ಲ; ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್. ಕಳೆದ ಡಿಸೆಂಬರ್ 8ರಂದು ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದಿಗೆ ಅನಿರೀಕ್ಷಿತ ಭೇಟಿ ನೀಡುವುದರೊಂದಿಗೆ ಸ್ವರಾಜ್ ದ್ವಿಪಕ್ಷೀಯ ಮಾತುಕತೆಗಳಿಗೆ ಮುನ್ನುಡಿ ಬರೆದಿದ್ದರು.

ಆದರೆ ಇದಾದ ಬೆನ್ನಿಗೆ ಇದೇ ಜನವರಿ 2ರಂದು ಪಠಾಣ್ ಕೋಟ್ ವಾಯುನೆಲೆಯ ಮೇಲೆ ಭಯೋತ್ಪಾದಕ ದಾಳಿ ನಡೆಯುವುದರೊಂದಗೆ ಮಾತುಕತೆಗಳಿಗೆ ತೀವ್ರ ವಿರೋಧ ಕೇಳಿ ಬಂತು. ಮುಂದೆ ಕಾಶ್ಮೀರದಲ್ಲಿ ನಿರಂತರ ಉಗ್ರ ಚಟುವಟಿಕೆಗಳು ಹೆಚ್ಚಾದಾಗಲೂ ಮಾತುಕತೆಗಳು ನಡೆಯಲೇ ಇಲ್ಲ. ಇದೀಗ ಮತ್ತೆ ದ್ವಿಪಕ್ಷೀಯ ಮಾತುಕತೆಗೆ ಚಾಲನೆ ಸಿಕ್ಕಿದ್ದು, ಎರಡೂ ರಾಷ್ಟ್ರಗಳ ಸಂಬಂಧ ಹಳಸಿರುವ ಈ ಹೊತ್ತಲ್ಲಿ; ಯಾವ ಯಾವ ತೀರ್ಮಾನಗಳು ಮಾತುಕತೆಯಿಂದ ಹೊರ ಬೀಳಲಿವೆ ಎಂಬುದನ್ನು ಕಾದು ನೋಡಬೇಕು.

ಚಿತ್ರ ಕೃಪೆ: ದಿ ಹಿಂದೂ, ಡಾನ್

Top