An unconventional News Portal.

ದೇಶದೊಳಗೆ ಹೆಚ್ಚುತ್ತಿರುವ ಅಸಮಾನತೆ: ಆಕ್ಸ್‌ಫಾಮ್‌ ಪಟ್ಟಿಯಲ್ಲಿ ಭಾರತಕ್ಕೆ 132ನೇ ಸ್ಥಾನ

ದೇಶದೊಳಗೆ ಹೆಚ್ಚುತ್ತಿರುವ ಅಸಮಾನತೆ: ಆಕ್ಸ್‌ಫಾಮ್‌ ಪಟ್ಟಿಯಲ್ಲಿ ಭಾರತಕ್ಕೆ 132ನೇ ಸ್ಥಾನ

ಪ್ರಪಂಚದ 152 ದೇಶಗಳ ಪೈಕಿ ಅಸಮಾನತೆಯನ್ನು ಹೋಗಲಾಡಿಸಲು ಇಚ್ಚಾಶಕ್ತಿಯನ್ನು ಪ್ರದರ್ಶಿಸಿದ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 132ನೇ ಸ್ಥಾನವನ್ನು ಸ್ವತಂತ್ರ ಸಂಸ್ಥೆ ಆಕ್ಸ್‌ಫಾಮ್‌ ನೀಡಿದೆ.

ಸೋಮವಾರ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಸ್ವೀಡನ್‌, ಬೆಲ್ಜಿಯಂ, ಡೆನ್ಮಾರಕ್‌, ನಾರ್ವೆ ಹಾಗೂ ಜರ್ಮನಿ ದೇಶಗಳು ತಮ್ಮ ದೇಶಗಳ ಪ್ರಜೆಗಳ ನಡುವಿನ ಅಸಮಾನತೆಯನ್ನು ಹೋಗಲಾಡಿಸಲು ಕ್ರಮಗಳನ್ನು ಕೈಗೊಂಡವರ ಪಟ್ಟಿಯಲ್ಲಿ ಉತ್ತಮ ಸ್ಥಾನಗಳನ್ನು ಪಡೆದುಕೊಂಡಿವೆ.

ಇತ್ತೀಚೆಗಷ್ಟೆ ಉದ್ಯಮಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಲು ಕೆಲಸ ಮಾಡುತ್ತಿರುವ ಅಂತಾರಾಷ್ಟ್ರೀಯ ಸಂಸ್ಥೆಯೊಂದು ಭಾರತದ ಆಡಳಿತಕ್ಕೆ ಮೊದಲ ಸ್ಥಾನವನ್ನು ನೀಡಿತ್ತು. ಪ್ರಪಂಚ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಆಡಳಿತದ ಬಗ್ಗೆ ಶೇ. 73ರಷ್ಟು ಜನ ಸದಾಭಿಪ್ರಾಯ ಹೊಂದಿದ್ದಾರೆ, ಇದು ಪ್ರಪಂಚ ಇತರೆ ದೇಶಗಳಿಗೆ ಹೋಲಿಸಿದರೆ ಅತಿ ಹೆಚ್ಚು ಎಂದು ‘ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ’ ವರದಿ ಹೇಳಿತ್ತು. ಈ ಸಂಸ್ಥೆಯ ಹಿತಾಸಕ್ತಿಗಳ ಬಗ್ಗೆ ಅರಿವು ಇದ್ದವರು, ವರದಿಯ ಕುರಿತು ಪ್ರಶ್ನೆಗಳನ್ನು ಎತ್ತಿದ್ದರು. ಇದೀಗ ಆಕ್ಸ್‌ಫಾಮ್‌ ಬಿಡಗಡೆ ಮಾಡಿರುವ ಪಟ್ಟಿಯಲ್ಲಿ ದೇಶದ ಜನರ ಸದಾಭಿಪ್ರಾಯಗಳ ಆಚೆಗೂ, ಪ್ರಜೆಗಳ ನಡುವಿನ ಅಸಮಾನತೆ ವಿಚಾರದಲ್ಲಿ ಭಾರತ ಆಡಳಿಯ ಇಚ್ಚಾಶಕ್ತಿ ಪ್ರದರ್ಶನದಲ್ಲಿ ಏಷಿಯಾದ ಇತರೆ ದೇಶಗಳಿಗೆ ಹೋಲಿಸಿದರೆ, ಅತ್ಯಂತ ಕಳಪೆಯಾಗಿರುವುದು ಬಹಿರಂಗವಾಗಿದೆ. ಈ ಮೂಲಕ ಆರ್ಥಿಕ ಪ್ರಗತಿಯ ನೆರಳಿನಲ್ಲಿ ದೇಶ ಸಾಗುತ್ತಿರುವ ಹಾದಿಯ ಕುರಿತು ಸ್ಪಷ್ಟ ಚಿತ್ರಣವೊಂದು ಲಭ್ಯವಾದಂತಾಗಿದೆ.

ಆಕ್ಸ್‌ಫಾಮ್‌ ಮತ್ತು ಡೆವೆಲಪ್‌ಮೆಂಟ್‌ ಫೈನಾನ್ಸ್‌ ಇಂಟರ್‌ನ್ಯಾಷನಲ್‌ ಜಂಟಿಯಾಗಿ ಪ್ರತಿ ದೇಶವೂ ಸಾಮಾಜಿಕ ವಿಚಾರಗಳಿಗೆ ಖರ್ಚು ಮಾಡುತ್ತಿರುವುದು, ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಕ್ರಮ ಕೈಗೊಂಡಿರುವುದು ಹಾಗೂ ತೆರಿಗೆ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಪಟ್ಟಿಯನ್ನು ತಯಾರಿಸಿವೆ. “ಯಾವುದೇ ದೇಶ ತನ್ನ ಪ್ರಜೆಗಳ ನಡುವಿನ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಲು ಈ ಮೂರು ಪ್ರಮುಖ ಅಂಶಗಳತ್ತ ಗಮನ ಹರಿಸಬೇಕಿದೆ,” ಎಂದು ಆಕ್ಸ್‌ಫಾಮ್‌ ವರದಿ ಹೇಳುತ್ತದೆ. ಪಟ್ಟಿ ತಯಾರಿಕೆಗಾಗಿ ಆಯಾ ದೇಶಗಳ ಆರೋಗ್ಯ, ಶಿಕ್ಷಣ ಕ್ಷೇತ್ರಗಳ ಮೇಲಿನ ಹೂಡಿಕೆ, ಆದಾಯಗಳ ಹಂಚಿಕೆ, ತೆರಿಗೆ ವಿನಾಯಿತಿಗಳು ಮತ್ತಿತರ 21 ಅಂಶಗಳನ್ನು ಅಧ್ಯಯನ ಮಾಡಲಾಗಿದೆ.

“ಭಾರತದ ತೆರಿಗೆ ವ್ಯವಸ್ಥೆ ಕಾಗದದ ಮೇಲೆ ಹೆಚ್ಚು ಪರಿಣಾಮಕಾರಿ ಕಾಣಿಸುತ್ತಿದೆ. ಆದರೆ ವಾಸ್ತವ ಇದಕ್ಕೆ ವಿರುದ್ಧವಾಗಿದೆ. ಭಾರತದ ಹೆಚ್ಚಿನ ಕಾರ್ಮಿಕ ವರ್ಗ ಕೃಷಿ ಕ್ಷೇತ್ರದಲ್ಲಿ ಹಾಗೂ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುತ್ತಿದೆ. ಇವರಿಗೆ ಪೂರಕವಾದ ಆರ್ಥಿಕ ನೀತಿಗಳಿಲ್ಲದೆ ಇರುವುದು ಅಸಮಾನತೆ ಹೆಚ್ಚಲು ಕಾರಣವಾಗಿದೆ,” ಎಂದು ವರದಿ ಹೇಳಿದೆ.

“ಇಲ್ಲಿನ ಸಂಘಟಿತ ವಲಯದಲ್ಲಿ ಹೆಚ್ಚು ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಅಸಂಘಟಿತ ವಲಯದಲ್ಲಿ ಉತ್ಪಾದನೆ ಕುಸಿಯುತ್ತಿದೆ. ಜತೆಗೆ, ಕಡಿಮೆ ಸಂಬಳ, ಉದ್ಯೋಗ ಭದ್ರತೆ ಹಾಗೂ ಕಾನೂನು ನೆರವು ಇಲ್ಲ. ಒಟ್ಟಾರೆ ಕಾರ್ಮಿಕರಿಗೆ ಪೂರಕವಾದ ವಾತಾವರಣ ಭಾರತದಲ್ಲಿ ಕಂಡುಬರುತ್ತಿಲ್ಲ,” ಎಂದು ಆಕ್ಸ್‌ಫಾಮ್‌ ಸಿಇಓ ನಿಶಾ ಅಗರ್‌ವಾಲ್‌ ಹೇಳುತ್ತಾರೆ.

ಮಹಿಳಾ ತಾರತಮ್ಯ:

ವರದಿಯಲ್ಲಿ ಭಾರತದ ಉದ್ಯೋಗನಿರತ ಮಹಿಳೆಯರ ಬಗ್ಗೆ ದೊಡ್ಡ ಮಟ್ಟದ ತಾರತಮ್ಯ ಇರುವುದನ್ನು ಎತ್ತಿ ತೋರಿಸಲಾಗಿದೆ. “ಏಷಿಯಾದ ಇತರೆ ದೇಶಗಳಿಗೆ ಹೋಲಿಸಿದರೆ ಕಳೆದ ಒಂದು ದಶಕದ ಅವಧಿಯಲ್ಲಿ ಭಾರತದ ಮಹಿಳೆಯರ ಉದ್ಯೋಗದ ಭದ್ರತೆ ಶೇ. 10ರಷ್ಟು ಕಡಿಮೆಯಾಗಿದೆ. ದೇಶದ ಆರ್ಥಿಕತೆ ಅಭಿವೃದ್ಧಿಹೊಂದಿದ ಹಾಗೆಲ್ಲಾ ಮಹಿಳೆಯ ಪಾಲುದಾರಿಕೆ ಕಡಿಮೆಯಾಗುವುದು ಕಂಡುಬರುತ್ತಿದೆ. ಮದುವೆ, ಮಕ್ಕಳ ಕಾರಣಕ್ಕೆ ವೃತ್ತಿಪರ ಮಹಿಳೆಯರು ಕೆಲಸ ಬಿಡುವುದು ಸಾಮಾನ್ಯವಾಗಿದೆ. ಕಾನೂನಿನ ಅಡಿಯಲ್ಲಿ ಕಾರ್ಪೊರೇಟ್‌ ಕಂಪನಿಗಳು ತಮ್ಮ ಆಡಳಿತ ಮಂಡಳಿಯಲ್ಲಿ ಒಬ್ಬರಾದರೂ ಮಹಿಳೆಯನ್ನೂ ಹೊಂದುವುದು ಕಡ್ಡಾಯ. ಹಾಗಿದ್ದೂ ಅನೇಕ ಕಂಪನಿಗಳ ಅಡಳಿತ ಮಂಡಳಿಗಳಲ್ಲಿ ಮಹಿಳೆಯ ಪಾಲುದಾರಿಕೆಯೇ ಇಲ್ಲ,” ಎಂದು ವರದಿ ಹೇಳಿದೆ.

ಏಷಿಯಾದ ಇತರೆ ದೇಶಗಳಾದ ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಭೂತಾನ್‌, ನೇಪಾಳಗಳಿಗೆ ಹೋಲಿಸಿದರೆ ಭಾರತ ಅತ್ಯಂತ ಕಳಪೆ ಸೂಚ್ಯಂಕವನ್ನು ತೋರಿಸುತ್ತಿದೆ. ದಕ್ಷಿಣ ಆಫ್ರಿಕಾ ಮತ್ತು ಅಮೆರಿಕಾ ದೇಶಗಳು ಈ ವಿಚಾರದಲ್ಲಿ ಉತ್ತಮ ಆರ್ಥಿಕ ನೀತಿಗಳನ್ನು ಹೊಂದಿವೆ. ಸಾರಾಂಶದಲ್ಲಿ ಹೇಳುವುದಾರೆ, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕಾರ್ಮಿಕರ ಹಕ್ಕುಗಳು ಮತ್ತು ಲಿಂಗ ಸಮಾನತೆಯ ವಿಚಾರದಲ್ಲಿ ಸಾಕಷ್ಟು ಸುಧಾರಣೆಗಳು ಕಂಡು ಬರುತ್ತಿದೆ. ಆದರೆ ಭಾರತದಲ್ಲಿ ದಶಕದಿಂದ ದಶಕಕ್ಕೆ ಈ ಪ್ರಮಾಣ ಕುಸಿಯುತ್ತಿದೆ ಎಂದು ವರದಿ ಹೇಳುತ್ತಿದೆ. ಆಡಳಿತದ ಬಗ್ಗೆ ಜನರ ಸದಾಭಿಪ್ರಾಯ ಹೊಂದಿದ ಮಾತ್ರಕ್ಕೆ, ದೇಶದ ಆಡಳಿತ ಜನಪರವಾಗಿ ಇರುತ್ತದೆ ಎಂದು ಅರ್ಥೈಸಿಕೊಳ್ಳಬೇಕಿಲ್ಲ ಎಂಬುದನ್ನು ವರದಿ ಸಾರ ಹೇಳುತ್ತಿದೆ.

Leave a comment

Top