An unconventional News Portal.

ಈಜಿಪ್ಟ್ ಧಡೂತಿ ಮಹಿಳೆಗೆ ಮುಂಬೈನಲ್ಲಿ ಶಸ್ತಚಿಕಿತ್ಸೆ: 500 ಕೇಜಿ ತೂಕ ಇಳಿಸಲು ವೈದ್ಯಕೀಯ ಕಸರತ್ತು

ಈಜಿಪ್ಟ್ ಧಡೂತಿ ಮಹಿಳೆಗೆ ಮುಂಬೈನಲ್ಲಿ ಶಸ್ತಚಿಕಿತ್ಸೆ: 500 ಕೇಜಿ ತೂಕ ಇಳಿಸಲು ವೈದ್ಯಕೀಯ ಕಸರತ್ತು

ಎಮನ್ ಅಹ್ಮದ್ ಅಬ್ದ್ ಅಲ್ ಅಟಿ…

ಈಜಿಪ್ಟಿನ 36 ವರ್ಷದ ಮಹಿಳೆಯೊಬ್ಬಳ ಹೆಸರಿದು. ಈಕೆಯ ತೂಕ ಇವತ್ತಿಗೆ ಬರೋಬ್ಬರಿ 500 ಕೇಜಿಗಳು. ಮತ್ತು ವಿಶ್ವದಲ್ಲಿಯೇ ಬದುಕಿರುವ ಅತ್ಯಂತ ಹೆಚ್ಚು ತೂಕದ ಮಹಿಳೆ ಈಕೆ. ಸದ್ಯ ಈಕೆ ದೇಹದ ತೂಕ ಕಡಿಮೆ ಮಾಡಕೊಳ್ಳಲು ಶಸ್ತ್ರ ಚಿಕಿತ್ಸೆಗಾಗಿ ಭಾರತಕ್ಕೆ ಬರಲಿದ್ದಾಳೆ. ಈಕೆಯನ್ನು ಮುಂಬೈ ವೈದ್ಯ ಡಾ. ಮುಫ್ಫಝಲ್ ಲಕ್ಡವಾಲಾ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಿದ್ದಾರೆ.

ಆರಂಭದಲ್ಲಿ ಆಕೆಯನ್ನು ಕರೆತರುವುದು ಕಷ್ಟ ಎಂಬ ಕಾರಣಕ್ಕೆ ಕೈರೋದಲ್ಲಿರುವ ಭಾರತದ ರಾಯಭಾರ ಕಚೇರಿ ಆಕೆಗೆ ವೀಸಾ ನೀಡಲು ಹಿಂದೇಟು ಹಾಕಿತ್ತು. ಕೊನೆಗೆ ವೈದ್ಯರೇ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬಳಿ ಕೇಳಿಕೊಂಡ ನಂತರ ಎಮನ್ಗೆ ವೀಸಾ ನೀಡಲಾಯಿತು.

ವಿಶೇಷ ಅಂದರೆ, ಆಕೆ ಕಳೆದ 25 ವರ್ಷಗಳಿಂದ ಮನೆ ಬಿಟ್ಟು ಹೊರ ಬಂದಿಲ್ಲ. ಆಕೆಯ ಕುಟುಂಬಸ್ಥರು ಎಮನ್ 500 ಕೆಜಿ ತೂಗುತ್ತಾಳೆ ಎನ್ನುತ್ತಿದ್ದಾರೆ. ಒಂದೊಮ್ಮೆ ಅದು ನಿಜವೇ ಆಗಿದ್ದಲ್ಲಿ ಎಮನ್ ಗಿನ್ನೆಸ್ ದಾಖಲೆಗೆ ಪಾತ್ರವಾಗಲಿದ್ದಾಳೆ. ಈ ಹಿಂದೆ 2010ರಲ್ಲಿ ಅಮೆರಿಕಾದ ಪೌಲಿನ್ ಪಾಟ್ಟೆರ್ ಎಂಬಾಕೆ 292 ಕೆಜಿ ತೂಗುತ್ತಿದ್ದುದು ಇವತ್ತಿಗೂ ದಾಖಲೆಯಾಗಿ ಉಳಿದುಕೊಂಡಿದೆ.

ಡಾ. ಲಕ್ಡವಾಲಾ ದೇಹದ ತೂಕ ನಿಯಂತ್ರಿಸುವ ಜನಪ್ರಿಯ ತಜ್ಞ ವೈದ್ಯರಾಗಿದ್ದು, ಈ ಹಿಂದೆ ಸಚಿವರಾದ ನಿತಿನ್ ಗಡ್ಕರಿ, ವೆಂಕಯ್ಯ ನಾಯ್ಡು ಮುಂತಾದವರಿಗೆ ಚಿಕಿತ್ಸೆ ನೀಡಿದ್ದಾರೆ. ಈಗ ಎಮನ್ ಫೋಟೋಗಳನ್ನು, ವೈದ್ಯಕೀಯ ವರದಿಗಳನ್ನು ತರಿಸಿಕೊಂಡು ಹೇಗೆ ಆಪರೇಷನ್ ಮಾಡಬಹುದು ಎಂಬ ಅಧ್ಯಯನ ನಡೆಸುತ್ತಿದ್ದಾರೆ. ಆಕೆಯ ವೈದ್ಯಕೀಯ ವರದಿಗಳು, ಚಿತ್ರಗಳನ್ನು ನೋಡಿದರೆ ಆಕೆ ಕನಿಷ್ಟ 450 ಕೆಜಿ ಇದ್ದಾಳೆ ಎಂದು ಲಕ್ಡವಾಲಾ ಹೇಳಿದ್ದಾರೆ.

ಎಮನ್ ಸ್ಥೂಲಕಾಯಳಾಗಿದ್ದು ಹೀಗೆ!:

500 KG lady

ಎಮನ್ ಹುಟ್ಟಿದಾಗ 5 ಕೆಜಿ ತೂಗುತ್ತಿದ್ದಳು. ಮುಂದೆ ಆನೆಕಾಲು ರೋಗದಿಂದಾಗಿ ದಿನದಿಂದ ದಿನಕ್ಕೆ ಆಕೆ ದಪ್ಪಗಾಗುತ್ತಾ ಹೋದಳು. “ಆಕೆ 11 ವಯಸ್ಸಿಗೆ ಬರುತ್ತಿದ್ದಂತೆ ಎಷ್ಟರಮಟ್ಟಿಗೆ ದಪ್ಪಗಾದಳು ಎಂದರೆ ನಡೆದಾಡುವುದೂ ಕಷ್ಟವಾಗತೊಡಗಿತು. ಎದ್ದು ನಿಲ್ಲಲೂ ಸಾಧ್ಯವಾಗದಷ್ಟು ದಪ್ಪಗಾದಳು. ಅಲ್ಲಿಂದ ಹಾಸಿಗೆಯೇ ಆಕೆಯ ಜೀವನವಾಯಿತು. ಅದಾದ ನಂತರ ಆಕೆಗೆ ಮನೆ ಬಿಟ್ಟು ತೆರಳುವುದು ಸಾಧ್ಯವಾಗಿಲ್ಲ,” ಎಂದು ಕುಟುಂಬಸ್ಥರು ಹೇಳಿದ್ದಾರೆ. ತನ್ನ ಶರೀರದ ಕಾರಣಕ್ಕೆ ಆಕೆ ಶಾಲೆಗೂ ಹೋಗಿಲ್ಲ. ಸದ್ಯ ಆಕೆಯ ಆರೈಕೆಗೆ ಜನ ಬೇಕಾಗಿದ್ದು, ತಾಯಿ ಮತ್ತು ಸಹೋದರಿ ಆಕೆಯನ್ನು ನೋಡಿಕೊಳ್ಳುತ್ತಿದ್ದಾರೆ.

ಅಕ್ಟೋಬರಿನಲ್ಲೇ ಎಮನ್ ಸಹೋದರಿ ಲಕ್ಡವಾಲಾ ಜತೆ ಮಾತುಕತೆ ನಡೆಸಿದ್ದರು. ಆದರೆ ಮುಂಬೈಗೆ ಪ್ರಯಾಣಿಸಲೂ ಹಣವಿಲ್ಲದ್ದರಿಂದ ಕುಟುಂಬ ಧನ ಸಂಗ್ರಹದಲ್ಲಿ ತೊಡಗಿಸಿಕೊಂಡಿತ್ತು. ಸದ್ಯ ಇದೀಗ ಮುಂಬೈವರೆಗೆ ಬರಬೇಕಾದ ವಿಮಾನದ ವೆಚ್ಚ ಸಂಗ್ರಹವಾಗಿದ್ದು, ಅಂದುಕೊಂಡಂತೆ ನಡೆದರೆ ಮುಂದಿನವಾರ ಮುಂಬೈಗೆ ಎಮನ್ ಬರಲಿದ್ದಾರೆ.

ಲಕ್ಡವಾಲಾ. “ಆಕೆಗೆ ಆನೆಕಾಲು ರೋಗ ಇರಲಿಕ್ಕಿಲ್ಲ, ಬದಲಾಗಿ ಸ್ಥೂಲಕಾಯ ಸಂಬಂಧಿ ರೋಗದಿಂದ ಬಳಲುತ್ತಿರಬಹುದು,” ಎಂದು ಅಂದಾಜಿಸಿದ್ದಾರೆ. “ಎಮನ್ ಶಸ್ತ್ರ ಚಿಕಿತ್ಸೆ ಮತ್ತು ನಂತರದ ಆರೈಕೆಗಾಗಿ ಮುಂಬೈನಲ್ಲಿ ಎರಡರಿಂದ ಮೂರು ತಿಂಗಳು ಇರಬೇಕಾಗುತ್ತದೆ. ಆದರೆ ಆಕೆಯ ತೂಕವನ್ನು 100 ಕೆಜಿ ಒಳಗೆ ತರಲು ಎರಡರಿಂದ ಮೂರು ವರ್ಷ ಹಿಡಿಯಬಹುದು,” ಎಂದು ವೈದ್ಯರು ಅಂದಾಜಿಸಿದ್ದಾರೆ.

“ನಾನು ಆಕೆಗೆ ಸಹಾಯ ಮಾಡಬಲ್ಲೆ. ಹಾಗಂತ ನಾನು ಎಲ್ಲ ಸರಿ ಹೋಗಿಯೇ ಹೋಗುತ್ತದೆ ಎಂಬ ಭರವಸೆ ನೀಡಲಾರೆ,” ಎಂದು ಲಕ್ಡವಾಲಾ ಹೇಳಿದ್ದಾರೆ.

ಬೇರಿಯಾಟ್ರಿಕ್ ಶಸ್ತ್ರ ಚಿಕಿತ್ಸೆ:

gastric_band

ತೂಕ ಕಡಿಮೆ ಮಾಡುವ ಅಥವಾ ಬೇರಿಯಾಟ್ರಿಕ್ ಶಸ್ತ್ರ ಚಿಕಿತ್ಸೆ ಇತ್ತೀಚೆಗೆ ಸಾಮಾನ್ಯವಾಗಿದೆ. ಸ್ಥೂಲ ಕಾಯದಿಂದ ಜೀವಕ್ಕೆ ಅಪಾಯವಿದೆ ಎಂದಾಗ ಮಾತ್ರವೇ ಈ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ.

ಬೇರಿಯಾಟ್ರಿಕ್ ನಲ್ಲಿ ಎರಡು ರೀತಿಯ ಶಸ್ತ್ರ ಚಿಕಿತ್ಸೆಗಳಿವೆ. ಒಂದರಲ್ಲಿ ಹೊಟ್ಟೆಯ ಗಾತ್ರವನ್ನು ಬ್ಯಾಂಡ್ (ಪಟ್ಟಿ) ಸಹಾಯದಿಂದ ಕುಗ್ಗಿಸಲಾಗುತ್ತದೆ. ಇದರಿಂದ ಸ್ವಲ್ಪ ಆಹಾರ ತಿಂದಾಗಲೇ ಹೊಟ್ಟೆ ತುಂಬಿದೆ ಎಂದು ಅನಿಸುತ್ತದೆ.

ಇನ್ನೊಂದು ವಿಧಾನದಲ್ಲಿ ದೇಹದ ಜೀರ್ಣ ವ್ಯವಸ್ಥೆಯನ್ನು ಪುನರ್ ವಿನ್ಯಾಸ ಮಾಡಲಾಗುತ್ತದೆ. ಈ ಮೂಲಕ ಕಡಿಮೆ ಆಹಾರ ಸೇವಿಸಿದಾಗಲೂ ಹೊಟ್ಟೆ ತುಂಬಿದೆ ಎಂಬ ಭಾವನೆ ಉಂಟಾಗುತ್ತದೆ.

ಸದ್ಯ ಮುಂಬೈನಲ್ಲಿ ವಿಶ್ವದ ಅತೀ ತೂಕದ ಮಹಿಳೆಯನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಲಾಗುತ್ತಿದೆ. ಬೇರಿಯಾಟ್ರಿಕ್ ಶಸ್ತ್ರ ಚಿಕಿತ್ಸೆಯ ಮಾರುಕಟ್ಟೆ ವಿಸ್ತರಣೆಗೆ ಕಸರತ್ತುಗಳು ನಡೆಯುತ್ತಿರುವ ಹೊತ್ತಿನಲ್ಲಿ ಇದು ಮಹತ್ವ ಪಡೆದುಕೊಂಡಿದೆ.

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top