An unconventional News Portal.

ಉರಿ ದಾಳಿ ಹಿನ್ನೆಲೆಯಲ್ಲಿ ಯುದ್ಧಕ್ಕೆ ತಯಾರಿ; ಎಲ್ಓಸಿ ದಾಟಿತಾ ಭಾರತ ಸೇನೆ?

ಉರಿ ದಾಳಿ ಹಿನ್ನೆಲೆಯಲ್ಲಿ ಯುದ್ಧಕ್ಕೆ ತಯಾರಿ; ಎಲ್ಓಸಿ ದಾಟಿತಾ ಭಾರತ ಸೇನೆ?

ಉರಿಯ ಸೇನಾ ನೆಲೆಯ ಮೇಲೆ ನಡೆದ  ದಾಳಿ ಇದೀಗ ಅಂತಾರಾಷ್ಟ್ರೀಯ ರೂಪ ಪಡೆದುಕೊಂಡಿದೆ.

ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಕಾಶ್ಮೀರ ವಿವಾದವನ್ನು ಈಗ ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದು, ತಮ್ಮ ಪರವಾಧ ಅಭಿಪ್ರಾಯ ರೂಪಿಸುವಲ್ಲಿ ನಿರತವಾಗಿವೆ.

ಬುಧವಾರ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ “ಪಾಕಿಸ್ತಾನ ಉಗ್ರ ರಾಷ್ಟ್ರ ಮತ್ತು ಜಾಗತಿಕ ಭಯೋತ್ಪಾದನೆಯ ಕೇಂದ್ರ,” ಎಂದು ಭಾರತ ಪ್ರತಿಪಾದಿಸಿದೆ. ಪಾಕಿಸ್ತಾನದ ಉಗ್ರವಾದದಿಂದ ಭಾರತ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಇರಾನಿಗೂ ಸಮಸ್ಯೆ ಸೃಷ್ಟಿಯಾಗಿದೆ ಎಂದು ನೆರೆಯ ರಾಷ್ಟ್ರದ ‘ಭಯತ್ಪಾದಕ ಸ್ನೇಹಿ’ ನಿಲುವುಗಳನ್ನು ಖಂಡಿಸಿದೆ.

“ಮಾನವ ಹಕ್ಕುಗಳ ಹೀನಾಯ ಉಲ್ಲಂಘನೆ ಎಂಬುದೇನಾದರೂ ಇದ್ದರೆ ಅದು ಭಯೋತ್ಪಾದನೆ. ಒಂದು ಸರಕಾರವೇ ತನ್ನ ನೀತಿಯಾಗಿ ಭಯೋತ್ಪಾದನೆಯನ್ನು ಅಳವಡಿಸಿಕೊಳ್ಳುವುದು ಯುದ್ಧಾಪರಾಧ,” ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಭಾಷಣಕ್ಕೆ ಭಾರತದ ರಾಯಭಾರಿ ಈನಮ್ ಗಂಭೀರ್ ಪ್ರತಿಕ್ರಿಯೆ ನೀಡಿದ್ದಾರೆ.

ಇದಕ್ಕೂ ಮೊದಲು ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿದ್ದ ನವಾಜ್ ಶರೀಫ್, “ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಮಾನವ ಹಕ್ಕುಗಳ ದಮನ ನಡೆಯುತ್ತಿದೆ. ಇದರಿಂದ ವಿಷಾಯಂತರ ಮಾಡಲು ಭಾರತ ಪಾಕಿಸ್ತಾನವನ್ನು ದೂರುತ್ತಿದೆ,” ಎಂದು ಹೇಳಿದ್ದರು.

ಇದಕ್ಕೆ ಪೂರ್ಣ ಪ್ರಮಾಣದ ಉತ್ತರವಿನ್ನೂ ಭಾರತ ನೀಡಿಲ್ಲ. ಈ ವಾರದಲ್ಲೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಭಾರತದ ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್ ಮಾತನಾಡಲಿದ್ದು ಪಾಕಿಸ್ತಾನಕ್ಕೆ ತೀಕ್ಷ್ಣ ಎಚ್ಚರಿಕೆ ನೀಡುವ ಸಾಧ್ಯತೆಗಳಿವೆ.

ಪಾಕಿಸ್ತಾನದ ಯುದ್ಧ ಸಿದ್ದತೆ

ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಪಾಕಿಸ್ತಾನದ ಮೇಲೆ ಯುದ್ಧಕ್ಕೆ ಹೋಗುವ ಸೂಚನೆಗಳನ್ನು ನೀಡುತ್ತಿದೆ. ಇದಕ್ಕೆ ಪಾಕಿಸ್ತಾನವೂ ತೀಕ್ಷ್ಣ ಉತ್ತರ ನೀಡಿದ್ದು, ತಾನು ಯಾವುದೇ ದಾಳಿಯನ್ನಾದರೂ ಎದುರಿಸಲು ಸಿದ್ಧ ಎಂದು ಹೇಳಿದೆ. ನ್ಯೂಕ್ಲಿಯರ್ ಅಸ್ತ್ರಗಳ ಬಳಕೆಯ ಬೆದರಿಕೆಯನ್ನೂ ಹಾಕಿದೆ.

ಮೂಲಗಳ ಪ್ರಕಾರ ಪಾಕಿಸ್ತಾನ ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್ ಗಡಿಯಲ್ಲಿರುವ ತನ್ನ ಸೈನಿಕರಿಗೆ ರಜೆ ನೀಡುತ್ತಿಲ್ಲ. ಭಾರತ ಗಡಿ ಭಾಗದಿಂದ ಹಾದು ಹೋಗುವ ವಿಮಾನಯಾನ ಮಾರ್ಗಗಳನ್ನೂ ಪಾಕಿಸ್ತಾನ ಬದಲಾಯಿಸಿದೆ.

ಪಾಕಿಸ್ತಾನದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ “ಖಾಲಿ ಕೊಡಗಳು ದೊಡ್ಡ ಸದ್ದು ಮಾಡುತ್ತವೆ,” ಎಂದು ಟಾಂಗ್ ನೀಡಿದ್ದಾರೆ.

“ಪ್ರಧಾನಿ ಮಂತ್ರಿಗಳು ಹೇಳಿದಂತೆ ದಾಳಿಗೆ ಕಾರಣರಾದವರನ್ನು ಶಿಕ್ಷಿಸಲು ಬದ್ಧವಾಗಿದ್ದೇವೆ. ಆದರೆ ಹೇಗೆ ಎಂಬುದರ ಕುರಿತು ಸಮಾಲೋಚನೆಯಲ್ಲಿದ್ದೇವೆ,” ಎಂದು ರಕ್ಷಣಾ ಸಚಿವರು ತಿಳಿಸಿದ್ದಾರೆ.

ಭಾರತದ ಪ್ರತಿತಂತ್ರ

ಈ ಬಾರಿ ಭಾರತ ಪಾಕಿಸ್ತಾನವನ್ನು ಬಗ್ಗು ಬಡಿಲು ಹಲವು ದಾರಿಗಳನ್ನು ತೆರೆದಿಟ್ಟುಕೊಂಡಿದೆ. ಅವುಗಳಲ್ಲಿ ಪಾಕಿಸ್ತಾನದ ವಿರುದ್ಧ ಅಂತರ್ ರಾಷ್ಟ್ರೀಯ ಅಭಿಪ್ರಾಯ ರೂಪಿಸುವ ಕೆಲಸದಲ್ಲಿ ಈಗಾಗಲೇ ನಿರತವಾಗಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಇದಕ್ಕಾಗಿ ಭರಪೂರವಾಗಿ ಬಳಸಿಕೊಳ್ಳುವುದು ಭಾರತದ ಯೋಜನೆ.

ಇದಲ್ಲದೇ ಪಾಕಿಸ್ತಾನದ ಮೇಲೆ ಯುದ್ಧ ಸಾರುವ, ಗಡಿ ನಿಯಂತ್ರಣ ರೇಖೆ ದಾಟಿ ಸೇನೆ ನುಗ್ಗಿಸುವ ಆಯ್ಕೆಯನ್ನೂ ಬಾರತ ಮುಂದಿಟ್ಟುಕೊಂಡಿದೆ. ಆದರೆ ಪಾಕಿಸ್ತಾನವೂ ತನ್ನ ಸೇನೆಯನ್ನು ಸಜ್ಜಾಗಿ ಇಟ್ಟುಕೊಡಿದ್ದು ಎರಡೂ ಕಡೆಗಳಿಂದ ಯುದ್ಧದ ಮುನ್ಸೂಚನೆ ವಾತಾವರಣಗಳು ಕಾಣಿಸುತ್ತಿವೆ.

ಪಾಕಿಸ್ತಾನ ರಾಯಭಾರಿಗೆ ‘ಉರಿ’ ಬಿಸಿ

‘ಉರಿ’ ದಾಳಿ ಬೆನ್ನಿಗೆ ಭಾರತೀಯ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಸಿಟ್ ರನ್ನು ಮಾತುಕತೆಗೆ ಕರೆದು ಭಾರತ ತನ್ನ ಆಕ್ರೋಷ ವ್ಯಕ್ತಪಡಿಸಿದೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್ ಜೈ ಶಂಕರ್ ಬುಧವಾರ ರಾಯಭಾರಿಯನ್ನು ಕರೆಸಿಕೊಂಡು ಡಿಎನ್ಎ ಮತ್ತು ಬೆರಳಚ್ಚು ದಾಖಲೆಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ಸ್ಪೋಟ ಸ್ಥಳದಿಂದ ಜಿಪಿಎಸ್, ಪಾಕಿಸ್ತಾನದ ಗುರುತುಗಳಿರುವ ಗ್ರೆನೇಡುಗಳು, ಸಂವಹನ ಸಾಧನಗಳು, ಆಹಾರ, ಔಷಧ ಮತ್ತು ಬಟ್ಟೆಗಳನ್ನು ಸಂಗ್ರಹಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಆಕ್ರಮಣದ ವದಂತಿ

“ಇದೇ ಸಂದರ್ಭದಲ್ಲಿ ಗಡಿ ನಿಯಂತ್ರಣ ರೇಖೆ ದಾಟಿ ಭಾರತ ಪಾಕಿಸ್ತಾನ ಆಡಳಿತ ಕಾಶ್ಮೀರದ ಭಾಗದಲ್ಲಿ ಸೇನೆ ಇಳಿಸಿದೆ. ಹೆಲಿಕಾಫ್ಟರ್ ಮೂಲಕ ಸೈನಿಕರು ಇಳಿದಿದ್ದು, 20 ಉಗ್ರರನ್ನು ಕೊಂದಿದೆ,” ಎಂದು ‘ದಿ ಕ್ವಿಂಟ್’ ವರದಿ ಮಾಡಿದೆ. ಸೇನೆಯ ಉನ್ನತ ಮೂಲಗಳನ್ನು ಉಲ್ಲೇಖಿಸಿ ಈ ವರದಿ ಪ್ರಕಟಿಸಿದೆ.

ಆದರೆ ‘ಭಾರತ ಪಿಒಕೆ ಮೇಕೆ ಆಕ್ರಮಣ ನಡೆಸಿಲ್ಲ’ ಎಂದು ಇತರ ಆಂಗ್ಲ ವೆಬ್ಸೈಟ್ಗಳು ವರದಿ ಮಾಡಿದ್ದು, ಇದೊಂದು ವದಂತಿ ಎಂದು ಹೇಳಿವೆ.

Top