An unconventional News Portal.

ತ್ರಿವಳಿ ತಲಾಖ್ ‘ಸಂವಿಧಾನ ಬಾಹಿರ’: ಕೇಂದ್ರ ಸರಕಾರದ ಅಂಗಳಕ್ಕೆ ಚೆಂಡು; ಕಾನೂನು ರಚಿಸಲು 6 ತಿಂಗಳ ಕಾಲಾವಕಾಶ

ತ್ರಿವಳಿ ತಲಾಖ್ ‘ಸಂವಿಧಾನ ಬಾಹಿರ’: ಕೇಂದ್ರ ಸರಕಾರದ ಅಂಗಳಕ್ಕೆ ಚೆಂಡು; ಕಾನೂನು ರಚಿಸಲು 6 ತಿಂಗಳ ಕಾಲಾವಕಾಶ

ದೇಶದ ಬಹುಚರ್ಚಿತ ‘ತ್ರಿವಳಿ ತಲಾಖ್’ ವಿಚಾರದಲ್ಲಿ ಸುಪ್ರಿಂ ಕೋರ್ಟ್ ಪಂಚ ಸದಸ್ಯರ ನ್ಯಾಯಪೀಠ ಮಂಗಳವಾರ ತೀರ್ಪು ನೀಡಿದೆ.

ಮೂವರು ನ್ಯಾಯಾಧೀಶರು, ಮುಸ್ಲಿಂ ಮಹಿಳೆಯರಿಗೆ ಬಾಯ್ಮಾತಿನಲ್ಲಿ ವಿಚ್ಚೇದನ ನೀಡುವ ಆಚರಣೆ ತ್ರಿವಳಿ ತಲಾಖ್ ‘ಸಂವಿಧಾನ ಬಾಹಿರ’ ಎಂದು ಹೇಳಿದ್ದಾರೆ. ಇಬ್ಬರು ನ್ಯಾಯಾಧೀಶರು ಆಚರಣೆಯ ಸಿಂದುತ್ವವನ್ನು ಎತ್ತಿ ಹಿಡಿದಿದ್ದಾರೆ.

ನ್ಯಾ. ರೋಹಿಗ್ಟನ್ ನಾರಿಮನ್, ನ್ಯಾ. ಉದಯ್ ಲಲಿತ್ ಹಾಗೂ ನ್ಯಾ. ಜೋಸೆಫ್ ಕುರಿಯನ್ ತ್ರಿವಳಿ ತಲಾಖ್ ವಿರುದ್ಧ ನಿಲುವು ತೆಗೆದುಕೊಂಡಿದ್ದಾರೆ. ನ್ಯಾಯಾಪೀಠದಲ್ಲಿದ್ದ ಇನ್ನಿಬ್ಬರು ನ್ಯಾಯಾಧೀಶರಾದ ಅಬ್ದುಲ್ ನಝೀರ್ ಹಾಗೂ ಜೆ. ಎಸ್. ಖೇಹರ್ ಆಚರಣೆಯ ಸಿಂದುಧ್ವವನ್ನು ಎತ್ತಿಹಿಡಿದಿದ್ದಾರೆ.

ಈ ಹಿನ್ನೆಲೆಯಲ್ಲಿ ಮುಖ್ಯನ್ಯಾಯಮೂರ್ತಿ ಖೇಹರ್ ತ್ರಿವಳಿ ತಲಾಖ್ ವಿಚಾರದಲ್ಲಿ ಮುಂದಿನ 6 ತಿಂಗಳ ಒಳಗಾಗಿ ಕಾನೂನು ರೂಪಿಸುವಂತೆ ಕೇಂದ್ರ ಸರಕಾರಕ್ಕೆ ತಿಳಿಸಿದ್ದಾರೆ. ಈ ಸಮಯದಲ್ಲಿ ತ್ರಿವಳಿ ತಲಾಖ್ ಆಚರಣೆ ಮೇಲೆ ನಿರ್ಬಂಧವನ್ನೂ ಹೇರಲಾಗಿದೆ.

ಹೀಗಾಗಿ, ತ್ರಿವಳಿ ತಲಾಖ್ ವಿಚಾರದಲ್ಲಿ ಚೆಂಡು ಈಗ ಮತ್ತೆ ಕೇಂದ್ರ ಸರಕಾರದ ಅಂಗಳಕ್ಕೆ ಬಿದ್ದಂತಾಗಿದೆ. ಈ ಹಿಂದೆ ವಿಚಾರಣೆ ವೇಳೆಯಲ್ಲಿಯೇ ಸರಕಾರ ತ್ರಿವಳಿ ತಲಾಖ್ ವಿಚಾರದಲ್ಲಿ ಕಾನೂನ ರೂಪಿಸಲು ಸಿದ್ಧವಾಗಿದೆ ಎಂದು ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ತಿಳಿಸಿದ್ದರು.

ಏನಿದು ತ್ರಿವಳಿ ತಲಾಖ್?:

ತ್ರಿವಳಿ ತಲಾಖ್ ಮುಸ್ಲಿಂ ಸಮುದಾಯದಲ್ಲಿ ಬಳಕೆಯಲ್ಲಿರುವ ಒಂದು ವಿಚ್ಛೇದನ ವಿಧಾನ. ಇದರ ಪ್ರಕಾರ ಪತಿ ಸರಳವಾಗಿ ಮೂರು ಬಾರಿ ತಲಾಖ್ಎಂದು ಹೇಳಿದರೆ ಅಲ್ಲಿಗೆ ಆ ದಾಂಪತ್ಯ ಕೊನೆಯಾಗುತ್ತದೆ. ‘ಹನ್ನಾಫಿ ಇಸ್ಲಾಮಿಕ್ ಸ್ಕೂಲ್ ಆಫ್ ಲಾಅಥವಾ ಹನ್ನಾಫಿ ಕಾನೂನುಗಳನ್ನು ಪಾಲಿಸುವವರು ಈ ರೀತಿಯ ವಿಚ್ಛೇದನ ವಿಧಾನ ಅನುಸರಿಸುತ್ತಾರೆ. ವಿಶೇಷವೆಂದರೆ ಭಾರತದ ಹೆಚ್ಚಿನವರು ಈ ಹನ್ನಾಫಿ ಕಾನೂನುಗಳನ್ನು ಅನುಸರಿಸುವ ಮುಸ್ಲಿಮರಾಗಿದ್ದಾರೆ.

ಹಾಗಂತ ಇದು ಜಾಗತಿಕವಾಗಿ ನೆಲೆಸಿರುವ ಎಲ್ಲಾ ಇಸ್ಲಾಂ ಧರ್ಮೀಯರು ಪಾಲಿಸುವ ಕಾನೂನೇನೂ ಅಲ್ಲ. ಹಲವು ದೇಶಗಳಲ್ಲಿ ವಿಚ್ಛೇದನಕ್ಕೆ ಬೇರೆ ಬೇರೆ ಕಾನೂನುಗಳನ್ನು ಪಾಲಿಸುತ್ತಾರೆ. ಕೆಲವು ಕಾನೂನುಗಳಲ್ಲಿ ವಿಚ್ಛೇದನಕ್ಕೆ ಮೂರು ತಿಂಗಳ ಅವಕಾಶ ನೀಡುವ ಕಾನೂನುಗಳೂ ಇವೆ. ಇವೆಲ್ಲದರ ಜತೆಗೆ ಪಾಕಿಸ್ತಾನವೂ ಸೇರಿ ಹಲವು ಇಸ್ಲಾಂ ಧರ್ಮೀಯರ ದೇಶಗಳಲ್ಲೇ ಈ ತ್ರಿವಳಿ ತಲಾಖ್ ಬ್ಯಾನ್ ಮಾಡಲಾಗಿದೆ. ಸರಕಾರವ ಈ ವಿಚಾರವನ್ನು ವಿಚಾರಣೆ ವೇಳೆ ನ್ಯಾಯಾಲಯದ ಗಮನಕ್ಕೆ ತಂದಿತ್ತು.


‘ತ್ರಿವಳಿ ತಲಾಖ್’ ವಿಚಾರಣೆ ಟೈಮ್ ಲೈನ್:

ಅಕ್ಟೋಬರ್ 16, 2015: ಪ್ರಕರಣವೊಂದರ ವಿಚಾರಣೆ ವೇಳೆಯಲ್ಲಿ, ಸುಪ್ರಿಂ ಕೋರ್ಟ್ ನ್ಯಾಯಪೀಠ ಮುಸ್ಲಿಂ ಮಹಿಳೆಯರ ಮೇಲೆ ನಡೆಯುತ್ತಿರುವ ‘ತ್ರಿವಳಿ ತಲಾಕ್’ ಹೆಸರಿನ ದೌರ್ಜನ್ಯದ ಸಂಬಂಧಪಟ್ಟ ಹಾಗೆ ಪ್ರತ್ಯೇಕ ಪೀಠ ಸ್ಥಾಪಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗೆ ಕೋರಿಕೆ ಸಲ್ಲಿಸಿತ್ತು.

ಫೆಬ್ರವರಿ 5, 2016: ಸುಪ್ರಿಂ ಕೋರ್ಟ್ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರಿಗೆ ತ್ರಿವಳಿ ತಲಾಕ್, ನಿಖಾ ಹಲಾಲ್ ಹಾಗೂ ಬಹುಪತ್ನಿತ್ವದ ವಿಚಾರಗಳಲ್ಲಿ ಸಹಾಯ ಮಾಡುವಂತೆ ತಿಳಿಸಿತ್ತು. 

ಮಾರ್ಚ್ 28, 2016: ಮಹಿಳೆಯರ ಮದುವೆ, ವಿಚ್ಚೇದನ, ಆಸ್ತಿ ಹಕ್ಕು ಮತ್ತಿತರ ವಿಚಾರಗಳ ಮೇಲೆ ರಚನೆಗೊಂಡ ಉನ್ನತ ಮಟ್ಟದ ಸಮಿತಿಯ ನಿರ್ಣಯಗಳ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸುಪ್ರಿಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿತು.

ಜೂನ್ 29, 2016: ಸಂವಿಧಾನದ ಅಡಿಯಲ್ಲಿಯೇ ತ್ರಿವಳಿ ತಲಾಖ್ ಕುರಿತು ಪರಿಶೀಲನೆ ನಡೆಸುವುದಾಗಿ ಸುಪ್ರಿಂ ಕೋರ್ಟ್ ಹೇಳಿತು. 

ಅಕ್ಟೋಬರ್ 7, 2016: ಲಿಂಗ ಸಮಾನತೆ ಮತ್ತು ಸಂವಿಧಾನದ ಜಾತ್ಯಾತೀತ ಮೌಲ್ಯಗಳನ್ನು ಮುಂದಿಟ್ಟ ಕೇಂದ್ರ ಸರಕಾರದ ಮೊದಲ ಬಾರಿಗೆ ತ್ರಿವಳಿ ತಲಾಖ್ ವಿರುದ್ಧ ಸುಪ್ರಿಂ ಕೋರ್ಟ್ನಲ್ಲಿ ವಾದ ನಡೆಸಿತು.

ಡಿಸೆಂಬರ್ 9, 2016: ಅಲಹಬಾದ್ ಹೈಕೋರ್ಟ್ ಮುಸ್ಲಿಂ ಕಾನೂನಿನ ಅಡಿಯಲ್ಲಿ ತ್ರಿವಳಿ ತಲಾಖ್ ಆಚರಣೆ ಸಂವಿಧಾನಬಾಹಿರ ಎಂದು ಹೇಳಿತು. ಇದೇ ವೇಳೆ, ವೈಯಕ್ತಿಕ ಕಾನೂನುಗಳು ಸಂವಿಧಾನ ನೀಡಿದ ವೈಯಕ್ತಿಕ ಹಕ್ಕುಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಅನಿಸಿಕೆಗಳನ್ನು ತಿಳಿಸಿತು. 

ಫೆಬ್ರವರಿ 16, 2016: ಸುಪ್ರಿಂ ಕೋರ್ಟ್ ಐದು ಪ್ರತ್ಯೇಕ ಧರ್ಮಗಳಿಗೆ ಸೇರಿದ ನ್ಯಾಯಾಧೀಶರ ಪೀಠವೊಂದನ್ನು ರಚಿಸಿತು. ತ್ರಿವಳಿ ತಲಾಖ್, ನಿಖಾ ಹಲಾಲ್ ಹಾಗೂ ಬಹು ಪತ್ನಿತ್ವದ ವಿಚಾರಗಳ ಬಗ್ಗೆ ವಿಚಾರಣೆ ನಡೆಸುವಂತೆ ಸೂಚನೆ ನೀಡಿತು.

ಮಾರ್ಚ್ 27, 2017: ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಈ ವಿಚಾರಗಳು ಕಾನೂನಿನ ಚೌಕಟ್ಟಿನ ಆಚೆಗೆ ಇತ್ಯರ್ಥವಾಗಬೇಕು ಎಂದು ನ್ಯಾಯಪೀಠದ ಮುಂದೆ ಮನವಿ ಸಲ್ಲಿಸಿತು. 
 
ಏಪ್ರಿಲ್ 11, 2017: ಕೇಂದ್ರ ಸರಕಾರ ಇದಕ್ಕೆ ವಿರುದ್ಧವಾಗಿ ಈ ಅಂಶಗಳು ಮುಸ್ಲಿಂ ಮಹಿಳೆಯರ ವೈಯಕ್ತಿಕ ಹಕ್ಕುಗಳ ಹರಣ ಮಾಡುತ್ತಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿತು. 

ಏಪ್ರಿಲ್16, 2017: ಈ ವಿಚಾರದಲ್ಲಿ ಬಹಿರಂಗ ಹೇಳಿಕೆ ನೀಡಿದ ಪ್ರಧಾನಿ ಮೋದಿ, ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸಬೇಕು ಎಂದರು. 

ಏಪ್ರಿಲ್ 17, 2016: ಇದಾದ ಮಾರನೇ ದಿನ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ತ್ರಿವಳಿ ತಲಾಖ್ ವಿರುದ್ಧ ಹೇಳಿಕೆ ನೀಡಿದರು. ಈ ವಿಚಾರದಲ್ಲಿ ಮೌನವಹಿಸಿರುವ ಎಲ್ಲಾ ರಾಜಕಾರಣಿಗಳು ಹೊಣೆಗಾರರು ಎಂದರು.
ಏಪ್ರಿಲ್ 18, 2017: ತ್ರಿವಳಿ ತಲಾಖ್ ಆಚರಣೆಯು ಮುಸ್ಲಿಂ ಮಹಿಳೆಯರನ್ನು ಪುರುಷರಿಗಿಂತ ಕಡಿಮೆ ಸ್ಥಾನಮಾನಕ್ಕೆ ದೂಡುತ್ತಿದೆ. ಅವರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿರುವ ಈ ಆಚರಣೆಗೆ ತಡೆ ನೀಡಬೇಕು ಎಂದು ನ್ಯಾಯಾಲಯಕ್ಕೆ ತಿಳಿಸಿದರು. 

ಏಪ್ರಿಲ್ 21, 2017: ಇದೇ ಸಮಯದಲ್ಲಿ ದಿಲ್ಲಿ ಹೈ ಕೋರ್ಟ್ ಮುಂದೆ ಹಿಂದೂ ಮಹಿಳೆಯರು ಮುಸ್ಲಿಂ ಪುರುಷರನ್ನು ಮದುವೆಯಾಗುವುದನ್ನು ನಿಷೇಧಿಸಲು ಕೋರಿ ಸಲ್ಲಿಕೆಯಾದ ಅರ್ಜಿಯೊಂದನ್ನು ತಳ್ಳಿ ಹಾಕಲಾಯಿತು. 

ಏಪ್ರಿಲ್ 29, 2017: ಪ್ರತಿಪಕ್ಷಗಳು ತ್ರಿವಳಿ ತಲಾಖ್ ವಿಚಾರದಲ್ಲಿ ಪ್ರಧಾನಿ ಮೋದಿ ಮತಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ ಎಂದ ಆರೋಪಿಸಿದವು. 

ಮಾರ್ಚ್ 30, 2017: ಮೇ. 11ರಿಂದ ವಿಚಾರಣೆ ಆರಂಭಿಸುವುದಾಗಿ ಸುಪ್ರಿಂ ಕೋರ್ಟ್ ತಿಳಿಸಿತು. ಇದು ಅತ್ಯಂತ ಸೂಕ್ಷ್ಮ ವಿಚಾರ ಹಾಗೂ ಪ್ರಮುಖವಾದುದು ಎಂದು ತ್ರಿವಳಿ ತಲಾಖ್ ಹಿನ್ನೆಲೆಯಲ್ಲಿ ಅದು ಹೇಳಿತು.

ಮೇ 11, 2017: ಇಸ್ಲಾಂನ ಮೂಲಭೂತ ತಿಳಿವಳಿಕೆ ಹಾಗೂ ಸಂವಿಧಾನದ ನೆಲೆಯಲ್ಲಿ ತ್ರಿವಳಿ ತಲಾಖೆ ವಿಚಾರವನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವುದಾಗಿ ಸುಪ್ರಿಂ ಕೋರ್ಟ್ ನ್ಯಾಯಪೀಠ ಹೇಳಿತು. 
ಮೇ 12, 2017: ತ್ರಿವಳಿ ತಲಾಖ್ ಆಚರಣೆ ಅತ್ಯಂತ ಹೇಯವಾದುದು. ಆದರೆ, ಇದು ನ್ಯಾಯಸಮ್ಮತವಾದುದು ಎಂದು ಶಾಲೆಗಳಲ್ಲಿ ಬೋಧಿಸಲಾಗುತ್ತಿದೆ ಎಂದು ಸುಪ್ರಿಂ ಕೋರ್ಟ್ ಗಮನಿಸಿತು. 
ಮೇ 15, 2017: ಕೇಂದ್ರ ಸರಕಾರ ತ್ರಿವಳಿ ತಲಾಖ್ ವಿಚಾರದಲ್ಲಿ ಹೊಸ ಕಾನೂನು ತರಲಿದೆ ಎಂದು ಅಟಾರ್ನಿ ಜನರಲ್ ಮುಕುಲ್ ಕೋಹ್ಟಗಿ ಸುಪ್ರಿಂ ಕೋರ್ಟ್ಗೆ ತಿಳಿಸಿದರು.
ಮೇ 16, 2017: ತ್ರಿವಳಿ ತಲಾಖ್ ಆಚರಣೆಗೆ 1,400 ವರ್ಷಗಳ ಇತಿಹಾಸ ಇದೆ. ಹೀಗಾಗಿ, ಇದು ಆಚರಣೆ ಮತ್ತು ನಂಬಿಕೆಗೆ ಸಂಬಂಧಪಟ್ಟ ವಿಚಾರ ಎಂದು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಾದ ನಡೆಸಿತು. 

ಮೇ 17, 2017: ಮದುವೆ ಸಮಯದಲ್ಲಿಯೇ ತ್ರಿವಳಿ ತಲಾಖ್ ಸಾಧ್ಯವಿಲ್ಲ ಎಂದು ಹೇಳಲು ಅವಕಾಶಗಳು ಇವೆಯೇ ಎಂದು ಕಾನೂನು ಮಂಡಳಿಯನ್ನು ಸುಪ್ರಿಂ ಕೋರ್ಟ್ ಕೇಳಿತು.

ಮೇ 18, 2017: ವಿಚಾರಣೆ ಮುಗಿಸಿದ ನ್ಯಾಯಪೀಠ, ಆದೇಶವನ್ನು ಕಾಯ್ದಿರಿಸಿತು. 


ಚರ್ಚೆಯ ಆರಂಭ: ಮುಸ್ಲಿಂ ಮಹಿಳಾ ಸಂಘಟನೆ ‘ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ್ (ಬಿಎಂಎಂಎ)’ ತ್ರಿವಳಿ ತಲಾಖ್ ಹಾಗೂ ‘ನಿಖ್ಹಾ ಹಲಾಲಾ‘ಗೆ ನಿಷೇಧ ಹೇರುವಂತೆ ಕೋರಿ ಎರಡು ವರ್ಷದ ಹಿಂದೆ ಆಂದೋಲನವೊಂದನ್ನು ಆರಂಭಿಸಿತ್ತು; ನಿಖ್ಹಾ ಹಲಾಲಾ ಎಂದರೆ ವಿಚ್ಛೇದನಕ್ಕೊಳಗಾದ ಹೆಂಡತಿ ಮತ್ತೆ ತನ್ನ ಮೊದಲ ಗಂಡನನ್ನು ಸೇರಬೇಕಾದರೆ ಎರಡನೇ ಮದುವೆಯಾಗಬೇಕಾದ ವಿಧಾನ. ‘ತ್ರಿವಳಿ ತಲಾಖ್‘ನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಹಾಗೂ ದುರ್ಬಳಕೆ ಮಾಡಿಕೊಳ್ಳುವುದನ್ನು ನೋಡಿ ನಾವು ಈ ಆಂದೋಲನ ಆರಂಭಿಸಿದ್ದೆವು,” ಎಂದು ಬಿಎಂಎಂಎ ಸಹ ಸಂಸ್ಥಾಪಕಿ ಝಾಕಿಯಾ ಸೋಮನ್ ಆರೋಪಿಸಿದ್ದರು. ಇದೀಗ ಬಿಎಂಎಂಎ ಸುಪ್ರಿಂ ಕೋರ್ಟ್ ಆದೇಶವನ್ನು ಸ್ವಾಗತಿಸಿದೆ ಮತ್ತು ವಿಚಾರಣೆ ಸಮಯದಲ್ಲಿ ಮಾಧ್ಯಮಗಳು ನೀಡಿದ ಸಹಕಾರಕ್ಕೆ ಕೃತಜ್ಞತೆ ಅರ್ಪಿಸಿದೆ. 

Top