An unconventional News Portal.

ಬೇನಾಮಿ ಆಸ್ತಿ ಮೇಲೆ ಪ್ರಹಾರ: ಮೋದಿ ಸರಕಾರದ ಹೊಸ ‘ಮಂತ್ರದಂಡ’ದ ಅಂತರಂಗದ ಕಹಾನಿ

ಬೇನಾಮಿ ಆಸ್ತಿ ಮೇಲೆ ಪ್ರಹಾರ: ಮೋದಿ ಸರಕಾರದ ಹೊಸ ‘ಮಂತ್ರದಂಡ’ದ ಅಂತರಂಗದ ಕಹಾನಿ

ಅನಾಣ್ಯೀಕರಣ ಘೋಷಣೆ ಮೂಲಕ ರಾತ್ರೋರಾತ್ರಿ 500 ಹಾಗೂ 1 ಸಾವಿರ ಮುಖಬೆಲೆಯ ನೋಟುಗಳನ್ನು ಕಾಗದ ಸಮಾನ ಮಾಡಿದ ಕೇಂದ್ರ ಸರಕಾರದ ನಿರ್ಧಾರ ಡೋಲಾಯಮಾನ ಸ್ಥಿತಿಯನ್ನು ನಿರ್ಮಿಸಿದೆ.

ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ ಘೋಷಣೆ ನಿರೀಕ್ಷಿತ ಫಲ ನೀಡಿಲ್ಲ. ಬದಲಿಗೆ ದೇಶಾದ್ಯಂತ ನಗದು ಹಣದ ಕೊರತೆಯನ್ನು ಸೃಷ್ಟಿಸುವ ಮೂಲಕ ಅಘೋಷಿತ ಆರ್ಥಿಕ ತುರ್ತು ಪರಿಸ್ಥಿತಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, ಹೊಸ ವರ್ಷದಲ್ಲಿ ಮೋದಿ ಸರಕಾರ ಹೊಸತೊಂದು ಘೋಷಣೆ ಮೂಲಕ ಕಪ್ಪು ಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ತನ್ನ ಸಮರವನ್ನು ಮುಂದುವರಿಸಲು ಹೊಸ ಅಖಾಡವೊಂದನ್ನು ನಿರ್ಮಿಸುವ ತಯಾರಿಯಲ್ಲಿದೆ.

ಅದು ‘ಬೇನಾಮಿ ಆಸ್ತಿ’ಗಳ ಮೇಲೆ ಕಾನೂನಾತ್ಮಕ ಪ್ರಹಾರ. ಸದ್ಯ ಈವರೆಗಿನ ಸಾರ್ವಜನಿಕ ಹೇಳಿಕೆಗಳನ್ನು ಹಾಗೂ ವರ್ಷದ ಕೊನೆಯ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಆಡಿದ ಮಾತುಗಳನ್ನು ಗಣನೆಗೆ ತೆಗೆದುಕೊಂಡರೆ, ಬೇನಾಮಿ ಆಸ್ತಿಗಳ ಮೇಲಿನ ಸಮರ ಹೊಸ ವರ್ಷಾರಂಭದಲ್ಲಿ ಸುದ್ದಿಕೇಂದ್ರದಲ್ಲಿರುವ ವಿಚಾರವಾಗಿರಲಿದೆ.

ಹೀಗಾಗಿ, ಬೇನಾಮಿ ಆಸ್ತಿ ಎಂದರೇನು? ಇಷ್ಟು ವರ್ಷಗಳ ಕಾಲ ಬೇನಾಮಿ ಆಸ್ತಿ ಕುರಿತು ನಮ್ಮ ದೇಶದಲ್ಲಿದ್ದ ಕಾನೂನುಗಳೇನು? ಕಳೆದ ತಿಂಗಳು ತಿದ್ದುಪಡಿಗೊಂಡ ಹೊಸ ಕಾನೂನು ಏನು ಹೇಳುತ್ತಿದೆ? ನಿಜಕ್ಕೂ ಬೇನಾಮಿ ಆಸ್ತಿಗಳನ್ನು ಪತ್ತೆ ಹಚ್ಚಿ, ತಪ್ಪಿತಸ್ಥರನ್ನು ಕಟಕಟೆಗೆ ತರಲು ಸಾಧ್ಯನಾ? ಎಂಬ ವಿಚಾರಗಳ ಕುರಿತು ನಿಖರವಾದ ಮಾಹಿತಿಯನ್ನು ಈ ವರದಿ ನೀಡಲಿದೆ.

ಏನಿದು ಬೇನಾಮಿ ಆಸ್ತಿ?:

benami-properties-1

ಸರಳವಾಗಿ ಹೇಳುವುದಾದರೆ, ಬೇನಾಮಿ ಆಸ್ತಿ ಎಂದರೆ ಒಬ್ಬರ ಹೆಸರಿನಲ್ಲಿಇನ್ನೊಬ್ಬರು ಆಸ್ತಿಯನ್ನು ಖರೀದಿಸುವುದು ಮತ್ತು ಖರೀದಿ ಪ್ರಕ್ರಿಯೆಯಲ್ಲಿ ತೆರಿಗೆ ಕಟ್ಟದೇ ತಪ್ಪಿಸಿಕೊಳ್ಳುವುದು ಬೇನಾಮಿ ಆಸ್ತಿಗಳನ್ನು ಸೃಷ್ಟಿಸುತ್ತದೆ. ಈವರೆಗೂ ದೇಶದಲ್ಲಿರುವ ಬೇನಾಮಿ ಆಸ್ತಿಗಳ ಕುರಿತು ನಿಖರ ಅಂಕಿಅಂಶಗಳು ಲಭ್ಯವಿಲ್ಲ. ಒಂದು ಅಂದಾಜಿನ ಪ್ರಕಾರ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಶೇ. 5- 10ರಷ್ಟು ಬೇನಾಮಿ ಹೆಸರಿನಲ್ಲಿ ಆಸ್ತಿಗಳನ್ನು ಖರೀದಿಸಲಾಗುತ್ತಿದೆ.

ಉದ್ಯಮಿಗಳು, ರಾಜಕಾರಣಿಗಳು ಮತ್ತು ಭೂಗತ ಜಗತ್ತಿನ ಕುಳಗಳು ತಮ್ಮ ಬದಲಿಗೆ, ಇನ್ನೊಬ್ಬರ ಹೆಸರಿನಲ್ಲಿ ಆಸ್ತಿಗಳನ್ನು ಖರೀದಿಸುತ್ತಾರೆ ಎಂಬ ನಂಬಿಕೆ ಇದೆ. ಇಂತವರು ನಗದು ಹಣ ನೀಡಿ ಆಸ್ತಿಯನ್ನು ತಮ್ಮ ಸಂಬಂಧಿಕರ, ಪರಿಚಯಸ್ಥರ ಹೆಸರಿನಲ್ಲಿ ಆಸ್ತಿಗಳನ್ನು ಖರೀದಿಸುತ್ತಾರೆ. ಈ ಮೂಲಕ ತೆರಿಗೆ ಕಟ್ಟುವುದರಿಂದ ತಪ್ಪಿಸಿಕೊಳ್ಳುತ್ತಾರೆ. ಹೀಗಾಗಿ ಬೇನಾಮಿ ಆಸ್ತಿಗಳು ಸೃಷ್ಟಿಯಾಗಿವೆ. ಇವುಗಳನ್ನು ತಡೆಯಲು ಈ ಹಿಂದೆಯೇ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಕಾನೂನೊಂದು ದೇಶದಲ್ಲಿ ಜಾರಿಯಾಗಿತ್ತು ಎಂಬುದು ಗಮನಾರ್ಹ.

ಸಮಸ್ಯೆ ಎಲ್ಲಿತ್ತು?:

ದೇಶದಲ್ಲಿ ಬೇನಾಮಿ ಆಸ್ತಿಗಳನ್ನು ಗುರುತಿಸಿ, ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ನಿಟ್ಟಿನಲ್ಲಿ ಮೇ, 1988ರಲ್ಲಿ ಮೊದಲ ಬಾರಿಗೆ ಕಾನೂನೊಂದನ್ನು ರಚಿಸುವ ಪ್ರಕ್ರಿಯೆ ಶುರುವಾಯಿತು. ಜುಲೈ 19, 1988ರಲ್ಲಿ ಅದು ಕಾನೂನು ರೂಪದಲ್ಲಿ ಉಬಯ ಸದನಗಳಲ್ಲಿ ಒಪ್ಪಿಗೆಯನ್ನೂ ಪಡೆದುಕೊಂಡಿತು. ಆದರೆ, 2007ರಲ್ಲಿ ಎರಡನೇ ಆಡಳಿತ ಸುಧಾರಣಾ ಆಯೋಗ ರಚನೆಗೊಂಡಾಗ, ಬೇನಾಮಿ ವ್ಯವವಾರ (ನಿರ್ಬಂಧ) ಕಾಯ್ದೆ 1988 ಅನುಷ್ಠಾನಕ್ಕೆ ಬಂದಿಲ್ಲ ಎಂಬುದನ್ನು ಗುರುತಿಸಿತ್ತು. ‘ದುರಾದೃಷ್ಟಕರ ಅಂಶ ಏನೆಂದರೆ, ಕಳೆದ 18 ವರ್ಷಗಳಲ್ಲಿ ಕಾಯ್ದೆಗೆ ನಿಯಮಗಳನ್ನು ರೂಪಿಸಲಾಗಿಲ್ಲ. ಹೀಗಾಗಿ, ಸರಕಾರ ಬೇನಾಮಿ ಹೆಸರಿನಲ್ಲಿ ಖರೀದಿಸಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಾಗಿಲ್ಲ’ ಎಂದು ಸುಧಾರಣಾ ಆಯೋಗ ಉಲ್ಲೇಖಿಸಿತ್ತು.

ಹೀಗೆ, ಕಾನೂನು ತಂದರೂ, ಅದಕ್ಕೆ ನಿಯಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಸರಕಾರಗಳು ಯಾಕೆ ಮರೆತವು? ಇದಕ್ಕೆ ಕೆಲವು ಕಾರಣಗಳನ್ನು ಮುಂದಿಡಲಾಗುತ್ತಿದೆ. ಒಂದು ಅತ್ಯಂತ ಸರಳವಾಗಿರುವುದು; ರಾಜಕೀಯ ಇಚ್ಚಾಶಕ್ತಿಯ ಕೊರತೆ.

1988- 2014ರವರೆಗೆ ಕೇಂದ್ರದಲ್ಲಿದ್ದ ಸರಕಾರಗಳು ಯಾವವು ಎಂಬುದನ್ನು ಗಮನಿಸಬೇಕಿದೆ:

 • ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ (1988- 89)
 • ಪಿ. ವಿ. ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ (1991- 96)
 • ಎಚ್. ಡಿ. ದೇವೇಗೌಡ ನೇತೃತ್ವದ ಯುನೈಟೆಡ್ ಫ್ರಂಟ್ (1996- 97)
 • ಐ. ಕೆ. ಗುಜ್ರಾಲ್ ನೇತೃತ್ವದ ಯುನೈಟೆಡ್ ಫ್ರಂಟ್ (1997-98)
 • ವಾಜಿಪೇಯಿ ನೇತೃತ್ವದ ಬಿಜೆಪಿ ಮತ್ತು ಎನ್ಡಿಎ (1998- 2004)
 • ಮನಮೋಹನ್ ಸಿಂಗ್ ನೇತೃತ್ವದಲ್ಲಿ ಯುಪಿಎ 1 ಮತ್ತು 2 (2004-2014)

ಇಷ್ಟೂ ಸರಕಾರಗಳ ಅವಧಿಯಲ್ಲಿ ಬೇನಾಮಿ ವ್ಯವಹಾರ (ನಿರ್ಬಂಧ) ಕಾಯ್ದೆಯು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. 2011- 12ರಲ್ಲಿ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಅಧ್ಯಕ್ಷತೆ ಆರ್ಥಿಕ ಸ್ಥಾಯಿ ಸಮಿತಿ ಕೂಡ ಈ ಕಾಯ್ದೆಯ ಲೋಪಗಳನ್ನು ಪಟ್ಟಿ ಮಾಡಿತ್ತು. ಕಾಯ್ದೆಯು ಬೇನಾಮಿ ಆಸ್ತಿಗಳ ನಿರ್ಬಂಧದ ಕುರಿತು ಮಾತನಾಡಿದರೂ, ಅಂತಹ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಪ್ರಬಲ ಕಾನೂನು ರೂಪಿಸುವಲ್ಲಿ ಸೋತು ಹೋಗಿತ್ತು ಎಂದು ಸಿನ್ಹಾ ಗುರುತಿಸಿದ್ದರು.

ಈ ಹಿನ್ನೆಲೆಯಲ್ಲಿ 2011ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರಕಾರ 1988ರ ಕಾಯ್ದೆಗೆ ತಿದ್ದು ಪಡಿಯನ್ನು ತಂದು ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಮಂಡಿಸುವ ಪ್ರಯತ್ನ ಮಾಡಿತ್ತು. ಆದರೆ, ಆ ಸಮಯದಲ್ಲಿ ದೇಶದ ಚರ್ಚೆಯ ಕೇಂದ್ರ ಸ್ಥಾನಕ್ಕೆ ಬಂದ ಭಾರಿ ಹಗರಣಗಳಿಂದಾಗಿ ರಾಜ್ಯಸಭೆ ಮತ್ತು ಲೋಕಸಭೆಗಳಲ್ಲಿ ಕಲಾಪಗಳು ನಡೆಯದೇ ಬಹುತೇಕ ಸಮಯ ಗದ್ದಲಗಳಲ್ಲಿಯೇ ವ್ಯರ್ಥವಾಗಿತ್ತು. ಹೀಗಾಗಿ, ಬೇನಾಮಿ ವ್ಯವಹಾರ (ನಿರ್ಬಂಧ) ಕಾಯ್ದೆ- 2011 ತಿದ್ದುಪಡಿ ಮಸೂದೆ ಯಾವುದೇ ಪರಿಣಾಮ ಬೀರಿರಲಿಲ್ಲ.

ಇದೀಗ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತದೇ ಕಾಯ್ದೆಗೆ ಹೊಸ ತಿದ್ದುಪಡಿಗಳ ಮೂಲಕ ‘ಬೇನಾಮಿ ವ್ಯವಹಾರ (ನಿರ್ಬಂಧ) ತಿದ್ದುಪಡಿ ಕಾಯ್ದೆ- 2016ನ್ನು ಜಾರಿಗೆ ತಂದಿದೆ. ಹಿಂದೆ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರದ ಅವಧಿಯಲ್ಲಿ ನನೆಗುದಿಗೆ ಬಿದ್ದಿದ್ದ ಕಾಯ್ದೆಗೆ ಮರುಜೀವ ಕೊಡುವ ಪ್ರಯತ್ನ ಮಾಡಿದೆ.

ಹೊಸ ಕಾಯ್ದೆಯಲ್ಲಿ ಏನಿವೆ?:

ಹೊಸ ಕಾಯ್ದೆ ಹಿಂದಿನ ಕಾಯ್ದೆಗಳಿಗಿಂತ ಹೆಚ್ಚು ಪ್ರಬಲವಾಗಿ ಕಾಣಿಸುತ್ತಿದೆ. ವಿಶೇಷವಾಗಿ ಬೇನಾಮಿ ಆಸ್ತಿಗಳನ್ನು ಗುರುತಿಸುವುದು ಮಾತ್ರವಲ್ಲ, ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ನಿಟ್ಟಿನಲ್ಲಿ ಒಂದಷ್ಟು ಹೊಸ ಕಾನೂನುಗಳನ್ನು ಇದು ಒಳಗೊಂಡಿದೆ. ಪ್ರಮುಖ ಅಂಶಗಳು ಕೆಳಕಂಡಂತಿವೆ:

 • ಬೇನಾಮಿ ಆಸ್ತಿ ವ್ಯವಹಾರದಲ್ಲಿ ತೊಡಗಿದ್ದು ಕಂಡುಬಂದರೆ ಗರಿಷ್ಟ 7 ವರ್ಷಗಳವರೆಗೆ ಜೈಲು ಶಿಕ್ಷೆ.
 • ತಪ್ಪು ಮಾಹಿತಿ ನೀಡಿದರೆ ಗರಿಷ್ಟ 5 ವರ್ಷ ಸಜೆ ಮತ್ತು ದಂಡ
 • ಬೇನಾಮಿ ಆಸ್ತಿಗಳನ್ನು ಯಾವುದೇ ಪರಿಹಾರ ನೀಡದೆ ಸರಕಾರ ಮುಟ್ಟುಗೋಲು ಹಾಕಿಕೊಳ್ಳಬಹುದು.
 • ಪ್ರಕರಣ ದಾಖಲಾಗುತ್ತಿದ್ದಂತೆ ಬೇನಾಮಿ ಆಸ್ತಿಯನ್ನು ಅಧಿಕಾರಿಗಳೇ ಮುಟ್ಟುಗೋಲು ಹಾಕಿಕೊಂಡು ನಂತರ ತೀರ್ಮಾನ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಬಹುದು.
 • ತೀರ್ಮಾನ ಪ್ರಾಧಿಕಾರ ಸಾಕ್ಷಿಗಳನ್ನು ಗಮನಿಸಿ, ಆದೇಶ ನೀಡಬಹುದು.

ನವೆಂಬರ್ 1ರಿಂದ ಜಾರಿಗೆ ಬಂದಿರುವ ಈ ಕಾಯ್ದೆ ಬೇನಾಮಿ ಆಸ್ತಿಗಳ ಮೇಲೆ ಪ್ರಹಾರವನ್ನು ಮಾಡಲಿದೆ ಎಂಬ ಮನ್ಸೂಚನೆಯೇನೋ ಸಿಕ್ಕಿದೆ. ಆದರೆ, ಇದು ಎಷ್ಟರ ಮಟ್ಟಿಗೆ ತಳಮಟ್ಟದಲ್ಲಿ ಅನುಷ್ಠಾನಕ್ಕೆ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಅದಕ್ಕಿಂತ ಹೆಚ್ಚಾಗಿ ಬೇನಾಮಿ ಆಸ್ತಿಗಳನ್ನು ಗುರುತಿಸಲು ದಾರಿಗಳನ್ನು ಕಂಡುಕೊಳ್ಳಬೇಕಿದೆ. ಸದ್ಯಕ್ಕೆ ಆಸ್ತಿಗಳ ಕುರಿತು, ಕಂಪನಿಗಳು ಹಾಗೂ ವ್ಯಕ್ತಿಗಳು ಸಲ್ಲಿಸುವ ವಾರ್ಷಿಕ ವರದಿ ಮತ್ತು ಐಟಿ ದಾಳಿಗಳಲ್ಲಿ ಸಿಗುವ ದಾಖಲೆಗಳು ಬೇನಾಮಿ ಆಸ್ತಿಗಳ ಕುರಿತು ಮಾಹಿತಿ ನೀಡಲಿವೆ. ಆದರೆ ಬೇನಾಮಿ ಆಸ್ತಿಗಳನ್ನು ಗುರುತಿಸಲು ಇಷ್ಟು ಮಾತ್ರವೇ ಸಾಕಾಗುತ್ತಾ ಎಂಬ ಪ್ರಶ್ನೆ ಆರ್ಥಿಕ ವಿಶ್ಲೇಷಕರಲ್ಲಿದೆ.

Leave a comment

Top