An unconventional News Portal.

ರೈತರ ಆತ್ಮಹತ್ಯೆಗೆ ಬ್ಯಾಂಕುಗಳ ಕೊಡುಗೆ ಅಪಾರ: ಲೇವಾದೇವಿಗಾರರ ಮೇಲಿನ ಆರೋಪ ನಿರಾಧಾರ

ರೈತರ ಆತ್ಮಹತ್ಯೆಗೆ ಬ್ಯಾಂಕುಗಳ ಕೊಡುಗೆ ಅಪಾರ: ಲೇವಾದೇವಿಗಾರರ ಮೇಲಿನ ಆರೋಪ ನಿರಾಧಾರ

ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ, ಲೇವಾದೇವಿದಾರರಿಂದ ಪಡೆದ ಸಾಲವೇ ಜೀವಕ್ಕೆ ಕುತ್ತಾಯಿತು ಎಂಬ ಮಾತು ಕೇಳಿ ಬರುತ್ತದೆ. ಆದರೆ ಅದು ಸುಳ್ಳು ಎನ್ನುತ್ತಿದೆ ‘ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ’ (ಎನ್.ಸಿ.ಆರ್.ಬಿ) ದ ಮಾಹಿತಿ. 2015ರಲ್ಲಿ ಸಾಲ ಮರುಪಾವತಿಸಲಾಗದೆ ಆತ್ಮಹತ್ಯೆಗೆ ಶರಣಾದ ರೈತರಲ್ಲಿ ಶೇಕಡಾ 80 ರಷ್ಟು ಜನ ಬ್ಯಾಂಕುಗಳು ಮತ್ತು ನೋಂದಾಯಿತ ಮೈಕ್ರೋಫೈನಾನ್ಸ್ ಗಳಿಂದ ಸಾಲ ಪಡೆದವರು ಎಂದು ಈ ದಾಖಲೆಗಳು ಹೇಳುತ್ತಿವೆ.

ಇದೇ ಮೊದಲ ಬಾರಿಗೆ ಆತ್ಯಹತ್ಯೆ ಮಾಡಿಕೊಂಡ ರೈತರ ಮರು ಪಾವತಿಸಲಾಗದ ಸಾಲದ ಬಗ್ಗೆಯೂ ಎನ್.ಸಿ.ಆರ್.ಬಿ ಮಾಹಿತಿ ಕಲೆ ಹಾಕಿದ್ದು ಅಘಾತಕಾರಿ ವಿಚಾರಗಳು ಹೊರಬಿದ್ದಿವೆ.

ಅಪರಾಧ ವಿಭಾಗದ ದಾಖಲೆಗಳ ಪ್ರಕಾರ 2015ರಲ್ಲಿ 3,097 ರೈತರು ಸಾಲ ಕಟ್ಟಲಾಗದ ಕಾರಣಕ್ಕೇನೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ 2,474 ಜನ ಬ್ಯಾಂಕು ಮತ್ತು ಮೈಕ್ರೋಪೈನಾನ್ಸ್ ಗಳಿಂದಲೇ ಸಾಲ ಪಡೆದವರಾಗಿದ್ದಾರೆ. ಸಾಲವೇ ರೈತರ ಆತ್ಮಹತ್ಯೆಗೆ ಮೂಲ ಕಾರಣವಾಗಿದ್ದರೂ, ಸಾಲದ ಮೂಲದ ವಿಚಾರಕ್ಕೆ ಬಂದರೆ  ಲೇವಾದೇವಿದಾರರ ಪಾಲು ಶೇಕಡಾ 9.8 ಮಾತ್ರ.

ಆತ್ಮಹತ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳ:

ಇನ್ನು 2015ರಲ್ಲಿ ಶೇಕಡಾ 41.7ರಷ್ಟು ಆತ್ಮಹತ್ಯೆಗಳು ಹೆಚ್ಚಾಗಿವೆ. 2014ರಲ್ಲಿ 5,650 ರೈತರು ಜೀವತೆತ್ತಿದ್ದರೆ, 2015ರಲ್ಲಿ ಈ ಪ್ರಮಾಣ 8,007ಕ್ಕೆ ಏರಿಕೆಯಾಗಿದೆ. ಇನ್ನು ರಾಜ್ಯವಾರು ನೋಡುವುದಾದರೆ ಮಹಾರಾಷ್ಟ್ರದಲ್ಲಿ 3,030, ತೆಲಂಗಾಣದಲ್ಲಿ 1,358, ಕರ್ನಾಟಕದಲ್ಲಿ 1,197, ಚತ್ತೀಸ್ ಗಢ ದಲ್ಲಿ 854 ಮತ್ತು ಮಧ್ಯಪ್ರದೇಶದಲ್ಲಿ 516 ಜನ ಜೀವ ತೆತ್ತಿದ್ದಾರೆ. ಅದರಲ್ಲೂ ಕರ್ನಾಟಕದಲ್ಲಿ 2014ಕ್ಕಿಂತ 2015ರಲ್ಲಿ ಆತ್ಮಹತ್ಯೆ ಪ್ರಮಾಣ ಮೂರು ಪಟ್ಟು ಜಾಸ್ತಿಯಾಗಿದೆ. 2014ರಲ್ಲಿ 300 ಜನ ಜೀವ ಕಳೆದುಕೊಂಡಿದ್ದರೆ, 2015ರಲ್ಲಿ ಬರೋಬ್ಬರಿ 1,197 ಜನ ಸಾವಿಗೀಡಾಗಿದ್ದಾರೆ.

ಇನ್ನು ಸಾಲ ಮರುಪಾವತಿಸಲಾಗದೆ ಆತ್ಮಹತ್ಯೆ ಮಾಡಿಕೊಂಡವರು ಸಂಖ್ಯೆಯೂ 2015ರಲ್ಲಿ ಹೆಚ್ಚಳವಾಗಿದೆ. 2014ರಲ್ಲಿ 1,163 ಜನ ಸಾವಿಗೀಡಾಗಿದ್ದರೆ, 2015ರಲ್ಲಿ 3,097 ಜನ ಸಾಲ ತುಂಬಲಾಗದೆ ಸಾವಿಗೀಡಾಗಿದ್ದಾರೆ. ಇದೇ ವೇಳೆ 2015ರಲ್ಲಿ ಬೆಳೆ ನಾಶವಾದ ಕಾರಣಕ್ಕೆ 969 ರೈತರು, ಹಾಗೂ ಇತರ ಕಾರಣಗಳಿಗಾಗಿ 1,562 ರೈತರು ಆತ್ಮಹತ್ಯೆಯ ಮೊರೆ ಹೋಗಿದ್ದಾರೆ.

“ಇತ್ತೀಚಿನ ದಾಖಲೆಗಳು ತುಂಬಾ ಮುಖ್ಯವಾದವು. ಕಾರಣ ನಾವೆಲ್ಲಾ ರೈತರ ಆತ್ಮಹತ್ಯೆಗೆ ಲೇವಾದೇವಿದಾರರೇ ಅಪರಾಧಿಗಳು ಎಂದುಕೊಂಡಿದ್ದೆವು. ಇವತ್ತಿಗೂ ಅರ್ಧಕರ್ಧ ರೈತರು ಲೇವಾದೇವಿದಾರರಿಂದಲೇ ಸಾಲ ಪಡೆಯುತ್ತಾರೆ. ಆದರೆ ಬ್ಯಾಂಕುಗಳಿಗೆ ಮತ್ತು ಮೈಕ್ರೋಪೈನಾನ್ಸ್ ಗಳಿಗೆ ಹೋಲಿಸಿದರೆ ಲೇವಾದೇವಿದಾರರು ಕಡಿಮೆ ಒತ್ತಡವನ್ನು ರೈತರ ಮೇಲೆ ಹೇರುತ್ತಾರೆ,” ಎನ್ನುತ್ತಾರೆ ಯೋಜನಾ ಆಯೋಗದ ಮಾಜಿ ಸದಸ್ಯರಾದ ಅಭಿಜಿತ್ ಸೇನ್.

“ಸಾಲ ಮರುಪಾವತಿ ವಿಚಾರದಲ್ಲಿ ಬ್ಯಾಂಕುಗಳು ಹೆಚ್ಚು ದಾರಳಿಯಾಗಿರುವುದಿಲ್ಲ; ಕಾರಣ ಕಾನೂನುಗಳು. ಅದೇ ಮೈಕ್ರೋಫೈನಾನ್ಸ್ ವಿಚಾರಕ್ಕೆ ಬಂದಾಗ ಪರಿಸ್ಥಿತಿ ಚಿಂತಾಜನಕವಾಗಿದೆ. ಸ್ವಸಹಾಯ ಸಂಘಗಳಲ್ಲಿ ಒಬ್ಬರು ಸಾಲ ಕಟ್ಟದಿದ್ದರೆ ಉಳಿದವರ ಉಳಿತಾಯ ಕಡಿತವಾಗುತ್ತದೆ ಎಂದು ಹೆದರಿಸಲಾಗುತ್ತದೆ. ಹೀಗಾಗಿ ಸಾಲ ಬಾಕಿ ಉಳಿಸಿಕೊಂಡವರ ಮೇಲೆ ಉಳಿದ ಸದಸ್ಯರು ವಿಪರೀತ ಒತ್ತಡ ಹೇರುತ್ತಾರೆ. ಕೆಲವು ಸಂದರ್ಭ ಸಾಲ ಕಟ್ಟಲಾಗದವರ ಮನೆಗೆ ಗೂಂಡಾಗಳನ್ನೂ ಕಳುಹಿಸುತ್ತಾರೆ,” ಎನ್ನುತ್ತಾರೆ ಸೇನ್.

ಎರಡನೇ ಸ್ಥಾನದಲ್ಲಿ ಕರ್ನಾಟಕ:

ಸಾಲ ಬಾಬ್ತು ತುಂಬಲಾಗದೆ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 1,293 ಜನ ಸಾವಿಗೀಡಾಗಿದ್ದರೆ, ಕರ್ನಾಟಕದಲ್ಲಿ 946 ಹಾಗೂ ತೆಲಂಗಾಣದಲ್ಲಿ 632 ಜನ ಬಲಿಯಾಗಿದ್ದಾರೆ. ಲೇವಾದೇವಿದಾರರಿಂದ ಸಾಲ ಪಡೆದುಕೊಂಡು ಮರುಪಾವತಿಸಲಾಗದೆ ಸತ್ತವರಲ್ಲೂ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ತೆಲಂಗಾಣದಲ್ಲಿ 131 ಹಾಗೂ ಕರ್ನಾಟಕ 113 ಜನ ಲೇವಾದೇವಿದಾರರಿಗೆ ಸಾಲ ಕೊಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳೆನಾಶದ ವಿಚಾರಕ್ಕೆ ಬಂದಾಗ ಮಹಾರಾಷ್ಟ್ರದಲ್ಲಿ 769, ತೆಲಂಗಾಣದಲ್ಲಿ 363, ಆಂಧ್ರಪ್ರದೇಶದಲ್ಲಿ 153 ಹಾಗೂ ಕರ್ನಾಟಕದಲ್ಲಿ 122 ರೈತರು ಸಾವನ್ನಪ್ಪಿದ್ದಾರೆ.

ಇನ್ನು ಕೌಟುಂಬಿಕ ಸಮಸ್ಯೆಯ ಕಾರಣಕ್ಕೆ 933 ರೈತರು ಹಾಗೂ ಅನಾರೋಗ್ಯದ ಕಾರಣಕ್ಕೆ 842 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್.ಸಿ.ಆರ್.ಬಿ ದಾಖಲೆಗಳು ಹೇಳುತ್ತಿವೆ.

ಮಾರ್ಮಿಕ ವಿಚಾರ ಏನೆಂದರೆ, ಕರ್ನಾಟಕ ಸರಕಾರದ ವಾರ್ತಾ ಇಲಾಖೆ ಇತ್ತೀಚೆಗೆ ‘ರೈತ ಗೀತೆ’ಯನ್ನು ಪ್ರಸ್ತುತಪಡಿಸಿತ್ತು. ಇದರಲ್ಲಿ ‘ದೇಶವೇ ಸಾಲ ಹೊತ್ತಿದೆ; ರೈತರ ಸಾಲ ಮುಗಿಯೋ ಹೊತ್ತಿದೆ’ ಎಂಬ ಸಾಲುಗಳು ರಾಗವಾಗಿ ಕೇಳಿಬರುತ್ತವೆ. ದೇಶದ ಬ್ಯಾಂಕುಗಳು ಸದ್ಯಕ್ಕೆ ಹೊತ್ತುಕೊಂಡಿರುವುದು ವಿಜಯ್ ಮಲ್ಯ ತರಹದ ಉದ್ಯಮಿಗಳ ಸಾಲ ಎಂಬುದನ್ನು ಗಮನಿಸಬೇಕಿದೆ.

ಚಿತ್ರ ಕೃಪೆ: ಯೂತ್ ಕಿ ಅವಾಜ್

ENTER YOUR E-MAIL

Name
Email *
August 2017
M T W T F S S
« Jul    
 123456
78910111213
14151617181920
21222324252627
28293031  

Top