An unconventional News Portal.

‘ಬುದ್ಧಂ- ಶರಣಂ- ಗಚ್ಛಾಮಿ’: ಬೌದ್ಧ ಧರ್ಮಕ್ಕೆ ಮತಾಂತರಗೊಂಡ ದಲಿತರ ಪರಿಸ್ಥಿತಿ ಹೀಗಿದೆ!

‘ಬುದ್ಧಂ- ಶರಣಂ- ಗಚ್ಛಾಮಿ’: ಬೌದ್ಧ ಧರ್ಮಕ್ಕೆ ಮತಾಂತರಗೊಂಡ ದಲಿತರ ಪರಿಸ್ಥಿತಿ ಹೀಗಿದೆ!

ಗೋರಕ್ಷಣೆ, ಹಿಂದೂ ಧರ್ಮದ ಕುರಿತು ದೇಶಾದ್ಯಂತ ಚರ್ಚೆ ನಡೆಯುತ್ತಿರುವ ಹೊತ್ತಿಗೇ ಜಾತಿ ವ್ಯವಸ್ಥೆ ವಿರುದ್ಧ ಸಿಡಿದು, ಮತಾಂತರಗೊಂಡ ದಲಿತರು ಉತ್ತಮ ಸ್ಥಿತಿಯಲ್ಲಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ವಿಶೇಷವಾಗಿ ಕೆಳಜಾತಿಗಳಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡವರ ಸ್ಥಿತಿ, ದೇಶದ ಪರಿಶಿಷ್ಟ ಸಮುದಾಯಗಳಿಗೆ ಹೋಲಿಸಿದರೆ ಗುಣಮಟ್ಟದಿಂದ ಕೂಡಿದೆ ಎಂಬುದನ್ನು ಅಂಕಿ ಅಂಶಗಳು ಹೇಳುತ್ತಿವೆ.

ಭಾರತದಲ್ಲಿ ಸುಮಾರು 80 ಲಕ್ಷಕ್ಕೂ ಹೆಚ್ಚಿನ ಬೌದ್ಧರು ವಾಸ ಮಾಡುತ್ತಿದ್ದಾರೆ. ಇವರಲ್ಲಿ ಶೇ. 87ರಷ್ಟು ಮಂದಿ ಹಿಂದೂ ಧರ್ಮದ ಹೀನ ಜಾತಿ ಪದ್ಧತಿಯಿಂದ ತಪ್ಪಿಸಿಕೊಳ್ಳಲು ಬೌದ್ಧ ಧರ್ಮದ ಕಡೆಗೆ ಆಕರ್ಷಿತರಾದವರು. ಅದರಲ್ಲೂ ವಿಶೇಷವಾಗಿ ದಲಿತ ಸಮುದಾಯಗಳಿಂದ ಮತಾಂತರಗೊಂಡವರು. ಉಳಿದ ಶೇ. 13ರಷ್ಟು ಬೌದ್ಧರು ಹಿಮಾಲಯ ಮತ್ತು ಈಶಾನ್ಯ ಭಾರತ ಮೂಲದ ಪಾರಂಪರಿಕ ಅನುಯಾಯಿಗಳಾಗಿದ್ದಾರೆ.

ಇವತ್ತು ಪರಿಶಿಷ್ಟ ಜಾತಿ ಸಮುದಾಯದವರಿಗೆ ಹೋಲಿಸಿದರೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡ (ನಿಯೋ- ಬುದ್ಧಿಸ್ಟ್)ರಲ್ಲಿಶೈಕ್ಷಣಿಕ ಪ್ರಗತಿ, ಉದ್ಯೋಗದ ಅವಕಾಶ ಹಾಗೂ ಲಿಂಗಾನುಪಾತದ ವಿಚಾರಗಳಲ್ಲಿ ಉತ್ತಮ ಸ್ಥಿತಿಯಲ್ಲಿದ್ದಾರೆ. ಹಾಗಂತ 2011ರ ಜನಗಣತಿಯ ಅಂಕಿಅಂಶಗಳನ್ನು ಇಟ್ಟುಕೊಂಡು ವಿಶ್ಲೇಷಣಾತ್ಮಕ ವರದಿ ಪ್ರಕಟಿಸಿರುವ ‘ಇಂಡಿಯಾ ಸ್ಪೆಂಡ್’ ಜಾಲತಾಣ ಪ್ರತಿಪಾದಿಸುತ್ತಿದೆ.

ಬೌದ್ಧರ ಜನಸಂಖ್ಯೆಗೆ ಶೇ. 87ರಷ್ಟು ಪಾಲನ್ನು ನೀಡಿರುವುದು ಮತಾಂತರವೇ ಆದರೂ, ಗುಣಮಟ್ಟದ ಜೀವನದ ಅವಕಾಶ ಇದಕ್ಕೆ ಪ್ರಮುಖ ಕಾರಣ ಎಂಬುದು ಕಂಡುಬರುತ್ತಿದೆ. ಭಾರತದ ಬೌದ್ಧ ಸಮುದಾಯದಲ್ಲಿ ಶೇ. 81. 29ರಷ್ಟು ಸಾಕ್ಷರತೆ ಇದೆ. ಇದು ಅಂತಾರಾಷ್ಟ್ರೀಯ ಮಟ್ಟದ ಸಾಕ್ಷರತೆ ಸೂಚ್ಯಂಕ (ಶೇ. 72. 98)ಕ್ಕಿಂತ ಹೆಚ್ಚಿದೆ ಎಂಬುದು ಗಮನಾರ್ಹ. ಇದಕ್ಕೆ ಹೋಲಿಸಿದರೆ ಹಿಂದೂಗಳಲ್ಲಿ ಶೇ. 73. 27 ಹಾಗೂ ಪರಿಶಿಷ್ಟ ಜಾತಿಗಳಲ್ಲಿ ಶೇ. 66.07ರಷ್ಟು ಸಾಕ್ಷರತೆ ಪ್ರಮಾಣ ಇದೆ.

“ಉನ್ನತ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ದಲಿತರಲ್ಲಿ ಬಹುತೇಕರು ಬೌದ್ಧ ಧರ್ಮದ ಅನುಯಾಯಿಗಳು,” ಎನ್ನುತ್ತಾರೆ ಭೀಮ್ ಆರ್ಮಿಯ ಮುಖಂಡ ಸತ್ಪಾಲ್ ತನ್ವರ್. ಸದ್ಯ ಭೀಮ್ ಆರ್ಮಿ ಸಾಮೂಹಿಕವಾಗಿ ದಲಿತರನ್ನು ಬೌದ್ಧ ಧರ್ಮಕ್ಕೆ ಮತಾಂತರಗೊಳಿಸುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ. “ಕರ್ಮದಂತಹ ಸಿದ್ಧಾಂತಗಳನ್ನು ಮುಂದಿಟ್ಟು ಜಾತಿ ವ್ಯವಸ್ಥೆ ದಲಿತರನ್ನು ತುಳಿಯುವ ಕೆಲಸ ಮಾಡುತ್ತಿದೆ. ಇದಕ್ಕೆ ಪರ್ಯಾಯವಾಗಿ ಬೌದ್ಧ ಧರ್ಮ ದಲಿತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿದೆ,” ಎನ್ನುತ್ತಾರೆ ಅವರು.

ಸಾಕ್ಷರತೆಗೆ ಒತ್ತು: 

ಪಾರಂಪರಿಕವಾಗಿ ಬೌದ್ಧ ಧರ್ಮವನ್ನು ಪಾಲಿಸುತ್ತಿರುವ ಮಿಝೋರಾಮ್‌ ಹಾಗೂ ಅರುಣಾಚಲ ಪ್ರದೇಶಗಳಲ್ಲಿರುವ ಬೌದ್ಧರಲ್ಲಿ ಸರಾಸರಿಗಿಂತ ಕಡಿಮೆ ಸಾಕ್ಷರತೆ ಕಂಡುಬರುತ್ತದೆ. ಅದೇ ವೇಳೆ, ಛತ್ತೀಸ್‌ಗಢ, ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳಲ್ಲಿ ಬೌದ್ಧ ಧರ್ಮಕ್ಕೆ ಮತಾತಂತರಗೊಂಡವರಲ್ಲಿ ಹೆಚ್ಚಿನ ಸಾಕ್ಷರತೆ ದಾಖಲಾಗಿದೆ. ಇದೇ ಮಾದರಿಯಲ್ಲಿ ಮಧ್ಯ ಪ್ರದೇಶ, ಕರ್ನಾಟಕ ಮತ್ತು ಉತ್ತರ ಪ್ರದೇಶಗಳಲ್ಲಿಯೂ ಬೌದ್ಧ ಧರ್ಮದ ಅನುಯಾಯಿಗಳಲ್ಲಿ ಸಾಕ್ಷರತೆ ಪ್ರಮಾಣ ಸರಾಸರಿ ಶೇ. 80ಕ್ಕಿಂತ ಹೆಚ್ಚಿದೆ ಎಂಬುದು ಗಮನಾರ್ಹ.

ಅಂಬೇಡ್ಕರ್ ಕಾರ್ಯಚಟುವಟಿಕೆಗಳ ಕೇಂದ್ರವಾಗಿದ್ದ ಮಹಾರಾಷ್ಟ್ರದಲ್ಲಿ ಬೇರೆಯದೇ ಚಿತ್ರಣ ಲಭ್ಯವಾಗುತ್ತದೆ. ಇಲ್ಲಿನ ಜನಸಂಖ್ಯೆಯಲ್ಲಿ ಶೇ. 5.81ರಷ್ಟು ಪಾಲನ್ನು ಬೌದ್ಧ ಧರ್ಮ ಹೊಂದಿದೆ. 1956ರಲ್ಲಿ ಅಂಬೇಡ್ಕರ್ ತಮ್ಮ 6 ಲಕ್ಷ ಅನುಯಾಯಿಗಳ ಜತೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದರು. ಇದು ಹಿಂದೂ ಧರ್ಮದಲ್ಲಿರುವ ಜಾತಿ ವ್ಯವಸ್ಥೆಯ ವಿರುದ್ಧ ದಾಖಲಾದ ಪ್ರತಿರೋಧ ಇದಾದರೂ, ಇತ್ತೀಚಿನ ದಿನಗಳಲ್ಲಿ ಬೌದ್ಧ ಧರ್ಮಕ್ಕೆ ಮತಾಂತರ ಹೊಂದುವವರ ಸಂಖ್ಯೆಯಲ್ಲಿ ಕಡಿಮೆಯಾಗಿದೆ.

ಉತ್ತರ ಪ್ರದೇಶದ ಶೇ. 68. 59 ಬೌದ್ಧ ಧರ್ಮದವರು ಸಾಕ್ಷರರಾಗಿದ್ದು, ಅಲ್ಲಿನ ದಲಿತ ಸಮುದಾಯದ ಸಾಕ್ಷರತೆ ಪ್ರಮಾಣಕ್ಕಿಂತ ಇದು ಹೆಚ್ಚಿದೆ. ಮಹಿಳೆಯರ ವಿಚಾರಕ್ಕೆ ಬಂದರೆ, ದೇಶದ ದಲಿತ ಸಮುದಾಯದ ಮಹಿಳೆಯರಿಗೆ ಹೋಲಿಸಿದರೆ, ಬೌದ್ಧ ಧರ್ಮದ ಮಹಿಳೆಯರ ಸಾಕ್ಷರತೆ ಪ್ರಮಾಣ ಹೆಚ್ಚಿದೆ. 2011ರ ಜನಗಣತಿ ಪ್ರಕಾರ ದೇಶದ ಒಟ್ಟಾರೆ ಮಹಿಳೆಯರ ಸಾಕ್ಷರತೆ ಪ್ರಮಾಣ ಶೇ. 64. 63 ಇದೆ. ಅದೇ ಬೌದ್ಧ ಧರ್ಮದ ಮಹಿಳೆಯರಲ್ಲಿ ಶೇ. 74. 04ರಷ್ಟು ಸಾಕ್ಷರತೆ ಪ್ರಮಾಣವಿದೆ. ಆದರೆ ಉತ್ತರ ಪ್ರದೇಶ ಮತ್ತು ಕರ್ನಾಟಕದ ಬೌದ್ಧ ಧರ್ಮೀಯರ ಮಹಿಳೆಯರಲ್ಲಿ ಮಾತ್ರವೇ ಸರಾಸರಿ ಸಾಕ್ಷರತೆ ಸರಾಸರಿಗಿಂತ ಕಡಿಮೆ ಇದೆ. ಆದರೆ ದಲಿತ ಮಹಿಳೆಯರಿಗೆ ಹೋಲಿಸಿದರೆ ಈ ರಾಜ್ಯಗಳಲ್ಲಿಯೂ ಬೌದ್ಧ ಧರ್ಮವನ್ನು ಅನುಸರಿಸುತ್ತಿರುವ ಮಹಿಳೆಯರಲ್ಲಿ ಶಿಕ್ಷಣ ಗುಣಮಟ್ಟ ಚೆನ್ನಾಗಿದೆ.

ಲಿಂಗಾನುಪಾತದಲ್ಲಿಯೂ ಮುಂದು: 

2011ರಲ್ಲಿ ಪ್ರತಿ ಸಾವಿರ ಪುರುಷ ಬೌದ್ಧರಿಗೆ 965 ಮಹಿಳೆಯರಿದ್ದರು. ದಲಿತರಲ್ಲಿ ಇದೇ ಅನುಪಾತ 1000: 945ರಷ್ಟಿದೆ. ದೇಶದ ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದರೆ ಲಿಂಗಾನುಪಾತ 1000: 942 ಇದೆ. ಬೌದ್ಧ ಧರ್ಮದಲ್ಲಿ ಹೆಚ್ಚಿನ ಮಕ್ಕಳನ್ನು ಹೊಂದದೇ ಇರಲು ಹೆಚ್ಚಿನ ಆಸಕ್ತಿ ತೋರಿಸಲಾಗುತ್ತದೆ. ಹಾಗಿದ್ದೂ ಲಿಂಗಾನುಪಾತದ ವಿಚಾರಕ್ಕೆ ಬಂದರೆ ಮಹಿಳೆಯರ ಸಂಖ್ಯೆ ಪುರುಷರಿಗೆ ಸರಿಗಟ್ಟುವ ದಾರಿಯಲ್ಲಿದೆ.

ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ. 31ರಷ್ಟು ಜನ ನಗರ ಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದಾರೆ. ಇದಕ್ಕೆ ಹೋಲಿಸಿದರೆ ಬೌದ್ಧ ಧರ್ಮದ ಅನುಯಾಯಿಗಳಲ್ಲಿ ಶೇ. 43ರಷ್ಟು ಜನ ನಗರವಾಸಿಗಳಾಗಿದ್ದಾರೆ. ಇದೂ ಕೂಡ ಅವರಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗಲು ಕಾರಣ ಇದ್ದಿರಬಹುದು.

ಈ ಕುರಿತು ವಿಸ್ತೃತವಾದ ‘ಇಂಡಿಯಾ ಸ್ಪೆಂಡ್’ ವರದಿ ಇಲ್ಲಿದೆ.

ಚಿತ್ರ: ಇಂಡಿಯನ್ ಎಕ್ಸ್‌ಪ್ರೆಸ್‌.

Leave a comment

Top