An unconventional News Portal.

ಗುಜರಾತ್ ಚುನಾವಣೆ: ಅಖಾಡದಲ್ಲಿ ಮೊಳಗಿದ ಬಾಲಿಷ ಹೇಳಿಕೆಗಳು; ಗಂಭೀರ ಪರಿಣಾಮಗಳು!

ಗುಜರಾತ್ ಚುನಾವಣೆ: ಅಖಾಡದಲ್ಲಿ ಮೊಳಗಿದ ಬಾಲಿಷ ಹೇಳಿಕೆಗಳು; ಗಂಭೀರ ಪರಿಣಾಮಗಳು!

ಗುಜರಾತ್ ವಿಧಾನಸಭೆ ಚುನಾವಣೆ ಕಾಂಗ್ರೆಸ್‌ಗೆ ಹಾಗೂ ಗುಜರಾತ್ನಲ್ಲಿ ಕಳೆದ 22 ವರ್ಷಗಳಿಂದ ಅಧಿಕಾರಿದಲ್ಲಿರುವ ಬಿಜೆಪಿಗೆ ಪ್ರತಿಷ್ಠೆ ಪ್ರಶ್ನೆಯಾಗಿದೆ. ರಾಹುಲ್ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವೈಯಕ್ತಿಕ ಪ್ರತಿಷ್ಠೆ ಪಣಕ್ಕಿಟ್ಟು ಪ್ರಚಾರ ನಡೆಸುತ್ತಿದ್ದಾರೆ. ಮೊದಲ ಹಂತದ ಮತದಾನ ಮುಕ್ತಾಯಗೊಂಡಿದೆ. ಎರಡನೇ ಹಂತಕ್ಕೆ ಭರ್ಜರಿ ಭಾಷಣಗಳು ಮೊಳಗುತ್ತಿವೆ.

ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಆರೋಪ, ಪ್ರತ್ಯಾರೋಪಗಳಲ್ಲಿ ಸಾಕಷ್ಟು ವಿಷಯಗಳು ಬಂದು ಹೋಗಿವೆ. ರಾಜಕೀಯ ವಿಶ್ಲೇಷಕರು, ಮಾಧ್ಯಮಗಳು ಸೋಲು-ಗೆಲುವುಗಳ ಲೆಕ್ಕಾಚಾರ ಮಂಡಿಸಿದ್ದಾರೆ. ಗುಜರಾತ್ನಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಎರಡರಲ್ಲಿ ಯಾವ ಪಕ್ಷ ಗೆದ್ದರು ಗುಜರಾತಿನ ಜನ ಕಳೆದುಕೊಳ್ಳುವುದು ಅಥವಾ ಪಡೆದುಕೊಳ್ಳುವುದು ಏನೂ ಇಲ್ಲ. ಬಿಜೆಪಿ ಗೆದ್ದರೆ 22 ವರ್ಷದ ಲೆಕ್ಕಕ್ಕೆ ಮತ್ತೆ 5 ವರ್ಷ ಸೇರುತ್ತೆ. ಕಾಂಗ್ರೆಸ್ ಗೆದ್ದರೆ ಗುಜರಾತನ್ನು ಆಳುವ ಪಕ್ಷ ಬದಲಾಗುತ್ತದೆ ಅಷ್ಟೆ.

ಸೋಲು-ಗೆಲುವುಗಳ ಆಚೆಗೆ, ಚಿಂತನೆಗೆ ಹಚ್ಚುವ, ಆಲೋಚನೆಗೆ ಮಾಡಲೇಬೇಕಾದ ಸಾಕಷ್ಟು ಘಟನೆಗಳು ಗುಜರಾತ್ ಚುನಾವಣಾ ಪ್ರಚಾರದಲ್ಲಿ ನಡೆದು ಹೋಗಿವೆ. ಈ ಸಾಲಿಗೆ ಸೇರುವ ಮೊದಲ ವಿಷಯ ರಾಹುಲ್ ಗಾಂಧಿ ಧರ್ಮದ ಬಗ್ಗೆ ಬಿಜೆಪಿ ಹಬ್ಬಿಸಿದ್ದ ಪುಕಾರು. ಸೋಮನಾಥ ದೇವಸ್ಥಾನದ ರಿಜಿಸ್ಟರ್ ಬುಕ್ನ ಹಿಂದೂಯೇತರ ಕಾಲಂನಲ್ಲಿ ರಾಹುಲ್ ಗಾಂಧಿ ಹೆಸರು ಉಲ್ಲೇಖವಾಗಿದ್ದು ದೊಡ್ಡ ಸುದ್ದಿಯಾಗಿತ್ತು. ‘ರಾಹುಲ್ ಗಾಂಧಿ ಹಿಂದೂ’ ಅಲ್ಲ ಅಂತಾ ಬಿಜೆಪಿ ಆರೋಪಿಸಿತ್ತು. ಮಾಧ್ಯಮಗಳು ರಾಹುಲ್ ಗಾಂಧಿ ಧರ್ಮದ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದವು. ಕೆಲ ಕಲುಷಿತ ಮನಸ್ಸಿನ ಪತ್ರಕರ್ತರು ರಾಹುಲ್ ಗಾಂಧಿ ಧರ್ಮದ ಬಗ್ಗೆ ಅಗನತ್ಯ ಕಿರುಚಾಟ, ಚೀರಾಟ ಸಹ ನಡೆಸಿದರು. ರಾಹುಲ್ ಗಾಂಧಿ ಹಿಂದೂ ಅಲ್ಲ ಅಂತಾ ವಾದಿಸಿ ಬಿಜೆಪಿ ಸಣ್ಣತನ ಪ್ರದರ್ಶಿಸಿತು.

ಆದರೆ, ಒಂದು ಹೆಜ್ಜೆ ಮುಂದೆ ಹೋದ ಕಾಂಗ್ರೆಸ್ ವಕ್ತಾರ ರಣ್ದೀಪ್ ಸಿಂಗ್ ಸುರ್ಜೆವಾಲಾ, “ರಾಹುಲ್ ಗಾಂಧಿ ಜನಿವಾರಧಾರಿ ಹಿಂದೂ,” ಅಂತಾ ಸಮರ್ಥನೆ ನೀಡುವ ಮೂಲಕ ಕಾಂಗ್ರೆಸ್ನ ಡಾಂಭಿಕ ಜಾತ್ಯಾತೀತೆಯನ್ನ ಜಗತ್ತಿನ ಮುಂದೆ ಬಯಲು ಮಾಡಿದ್ರು. ಇಲ್ಲಿ ಸಾಕಷ್ಟು ಮಹತ್ವದ ವಿಷಯಗಳು ಚರ್ಚೆಗೆ ಬರಲೇ ಇಲ್ಲ.

ಚುನಾವಣೆಯಲ್ಲಿ ಹಿಂದೂ ಧರ್ಮೀಯರ ಮತ ಪಡೆಯಲು ಹಿಂದೂ ಧರ್ಮೀಯರೇ ನಾಯಕ ಆಗಿರಬೇಕಾ? ಬಿಜೆಪಿ ವಾದದಂತೆ ರಾಹುಲ್ ಗಾಂಧಿ ಹಿಂದೂ ಅಲ್ಲದಿದ್ರೆ ರಾಹುಲ್ ಗಾಂಧಿಗೆ ಮತಗಳಿಸೋ ಅರ್ಹತೆ ಇಲ್ಲ ಅಂತಾ ಅರ್ಥವೇ? ಬಿಜೆಪಿ ಈ ವಾದಕ್ಕೆ ಕಾಂಗ್ರೆಸ್ ತಾಳಹಾಕಿದ್ದ ವಿಪರ್ಯಾಸ. ಬಿಜೆಪಿ ಆರೋಪವನ್ನ ಅಲ್ಲಗೆಳೆಯಲು ರಾಹುಲ್ ಗಾಂಧಿ ‘ಜನಿವಾರಧಾರಿ ಹಿಂದೂ’ ಅಂತಾ ಹೇಳಿದ್ದು ದುರಂತ. ರಾಹುಲ್ ಗಾಂಧಿ ಹಿಂದೂ ಧರ್ಮೀಯ ಅಂತಾ ಸಾಬೀತು ಮಾಡೋಕೆ ಆತ ಜನಿವಾರಧಾರಿ ಅಂತಾ ಹೇಳುವ ಅಗತ್ಯ ಇತ್ತಾ? ಈ ಹೇಳಿಕೆಯಿಂದ ತಾನು ಜಾತ್ಯಾತೀತ ಪಕ್ಷ ಅಂತಾ ಹೇಳಿಕೊಳ್ಳುವ ಕಾಂಗ್ರೆಸ್, ಸಮಾಜಕ್ಕೆ ಯಾವ ಸಂದೇಶ ರವಾಸಿತು? ನಿಜಕ್ಕೂ ಚರ್ಚೆಗೆ ಬರಬೇಕಿದ್ದ ಈ ವಿಷಯಗಳು ಕಾಂಗ್ರೆಸ್, ಬಿಜೆಪಿ ಹಾಗೂ ಪತ್ರಕರ್ತರ ಅಬ್ಬರದಲ್ಲಿ ಮರೆಯಾಗಿ ಹೋದವು. ಈ ಮೂಲಕ ಭಾರತದಲ್ಲಿ ಚುನಾವಣೆ ಗೆಲ್ಲಬೇಕು ಅಂದರೆ ಹಿಂದೂವೇ ಆಗಿರಬೇಕು ಅನ್ನೋ ಸಂದೇಶವನ್ನ ಬಿಜೆಪಿ ನೀಡಿದರೆ, ‘ಜನಿವಾರಧಾರಿ ಹಿಂದೂ’ನೇ ಶ್ರೇಷ್ಠ ಅನ್ನೋ ಸಂದೇಶವನ್ನ ಕಾಂಗ್ರೆಸ್ ನೀಡಿತು.

ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್, ನರೇಂದ್ರ ಮೋದಿ ಅವರನ್ನ ‘ನೀಚ’ (ಹಿಂದಿಯಲ್ಲಿ ನೀಚ ಎಂದರೆ ಕೆಳಜಾತಿ ಎಂಬ ಅರ್ಥ ಬರುತ್ತದೆ) ಅಂತಾ ಜರಿದಿದ್ದು ದೊಡ್ಡ ಸುದ್ದಿ ಮಾಡಿತು. ‘ನೀಚ’ ಎನ್ನುವ ಪದವನ್ನ ಬಳಸಿದ್ದಕ್ಕೆ ರಾಹುಲ್ ಗಾಂಧಿ, ಮಣಿಶಂಕರ್ ಅಯ್ಯರ್ ಅವರನ್ನ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿದರು. ಮಣಿಶಂಕರ್ ಅಯ್ಯರ್ ತಮ್ಮ ಹೇಳಿಕೆಗೆ ಕ್ಷಮೆ ಕೇಳಿದರು. “ಬಿಜೆಪಿ ಹಾಗೂ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುವಾಗ ನಿಂದನಾತ್ಮಕ ಪದ ಬಳಸಬಾರದು,” ಅಂತಾ ತಮ್ಮ ಪಕ್ಷದ ನಾಯಕರಿಗೆ ಸೂಚನೆ ನೀಡಿ ರಾಹುಲ್ ಗಾಂಧಿ ದೊಡ್ಡವರಾದರು. ಮಣಿಶಂಕರ್ ಅಯ್ಯರ್ ಅವರನ್ನ ಟಾರ್ಗೆಟ್ ಮಾಡಿರುವ ನರೇಂದ್ರ ಮೋದಿ, ಅದೇ ಹೇಳಿಕೆ ಪುನರುಚ್ಚರಿಸುತ್ತಾ ತಮ್ಮ ಸಣ್ಣತನವನ್ನ ಮತ್ತೆ ಮತ್ತೆ ತೋರಿಸುತ್ತಿದ್ದಾರೆ.

ಇಲ್ಲಿ ಒಂದು ವಿಷಯವನ್ನ ಗಮನಿಸಲೇಬೇಕು. ಅಂನತ್ಕುಮಾರ್ ಹೆಗಡೆ ಸೇರಿದಂತೆ, ಮೋದಿ ಸಂಪುಟದಲ್ಲಿರುವ ಹಲವು ಸಚಿವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಪ್ರಧಾನಿ ಮೋದಿ ಯಾವೊಬ್ಬ ಸಚಿವನ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ರಾಜಕೀಯದಲ್ಲಿ ಸಾಕಷ್ಟು ಅನುಭವ ಹೊಂದಿರೋ ಪ್ರಧಾನಿ ನರೇಂದ್ರ ಮೋದಿ, ಈ ವಿಷಯದಲ್ಲಿ ರಾಹುಲ್ ಗಾಂಧಿ ಮುಂದೆ ಸಣ್ಣವರಾಗಿ ಕಾಣುತ್ತಿದ್ದಾರೆ.

ಟ್ರಂಪ್ರಿಂದ ಪಾಠ ಕಲಿಯದ ಮೋದಿ:

“ಗುಜರಾತ್ ಎಲೆಕ್ಷನ್ನಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡುತ್ತಿದೆ,” ಅಂತಾ ನರೇಂದ್ರ ಮೋದಿ ನಗುತ್ತಲೇ ಆರೋಪ ಮಾಡಿದ್ದಾರೆ. “ಮಣಿಶಂಕರ್ ಅಯ್ಯರ್ ಮನೆಯಲ್ಲಿ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ, ಪಾಕಿಸ್ತಾನದ ಮಾಜಿ ಮಿಲಿಟರಿ ಮುಖ್ಯಸ್ಥ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಉಪರಾಷ್ಟ್ರಪತಿ ಹಮಿದ್ ಅನ್ಸಾರಿ ಹಾಗೂ ಇತರೆ ಕಾಂಗ್ರೆಸ್ ನಾಯಕರು ಮೂರು ತಾಸು ಸಭೆ ನಡೆಸಿದ್ದಾರೆ,” ಅಂತಾ ಮೋದಿ ಆರೋಪ ಮಾಡಿದ್ದಾರೆ. “ಅಹ್ಮದ್ ಪಟೇಲ್ ಅವರನ್ನ ಗುಜರಾತ್ ಮುಖ್ಯಮಂತ್ರಿ ಮಾಡಲು ಪಾಕಿಸ್ತಾನ ಹಾಗೂ ಕಾಂಗ್ರೆಸ್ ಷಡ್ಯಂತ್ರ ರೂಪಿಸಿದೆ,” ಅಂತಾ ಆರೋಪಿಸಿದ್ದಾರೆ. ಮಣಿಶಂಕರ್ ಅಯ್ಯರ್, ನನ್ನನ್ನು ಕೊಲೆ ಮಾಡಿಸಲು ಪಾಕ್ಗೆ ಸುಪಾರಿ ಕೊಟ್ಟಿದ್ದಾರೆ ಅನ್ನೋ ಅನುಮಾನವನ್ನ ವ್ಯಕ್ತಪಡಿಸಿದ್ದಾರೆ.

ಒಂದು ದೇಶದ ಚುನಾವಣೆಯಲ್ಲಿ ಇನ್ನೊಂದು ದೇಶ ಹಸ್ತಕ್ಷೇಪ ಮಾಡುವುದು ಸಣ್ಣ ವಿಷಯವಲ್ಲ. ಅದು ಮೋದಿ ನಗುತ್ತಲೇ ಮಾಡುವ ಆರೋಪದಷ್ಟು ಸುಲಭದ್ದೂ ಅಲ್ಲ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯನ್ನ ಇಲ್ಲಿ ನೆನಪಿಸಿಕೊಳ್ಳಬಹುದು. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಮಾಡಿತ್ತು. ರಷ್ಯಾಕ್ಕೆ ಹಿಲರಿ ಕ್ಲಿಂಟನ್ ಗೆಲ್ಲುವುದು ಬೇಕಿರಲಿಲ್ಲ, ಟ್ರಂಪ್ ಗೆಲುವು ಬೇಕಿತ್ತು ಅಂತಾ ಸುದ್ದಿಯಾಗಿತ್ತು. ಇದನ್ನ ಅಮೆರಿಕದ ತನಿಖಾ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿವೆ. ಈ ಪ್ರಕರಣಕ್ಕೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ರಾಜೀನಾಮೆ ಕೊಟ್ಟ ಮನೆಗೆ ಹೋಗಿದ್ದಾರೆ. ಕೆಲವರು ತಪ್ಪನ್ನ ಒಪ್ಪಿಕೊಂಡು ಕ್ಷಮೆ ಕೇಳಿದ್ದಾರೆ. ಟ್ರಂಪ್ ತನಿಖೆ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎನ್ನುವ ಆರೋಪವೂ ಇದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಈ ಪ್ರಕರಣದ ಬಿಸಿಯೂ ತಟ್ಟುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಆರೋಪ ಗಂಭೀರವಾದದ್ದು. ಪಾಕಿಸ್ತಾನ, ಗುಜರಾತ್ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎನ್ನುವುದಾದರೆ, ಕಾಂಗ್ರೆಸ್ ನಾಯಕರ ವಿರುದ್ಧ ನರೇಂದ್ರ ಮೋದಿ ಸರಕಾರ ಕ್ರಮ ಕೈಗೊಳ್ಳಬೇಕು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು. ಒಂದು ಸಾರ್ವಭೌಮ ದೇಶದ ಚುನಾವಣೆಯಲ್ಲಿ ಇನ್ನೊಂದು ಸಾರ್ವಭೌಮ ದೇಶ ಹಸ್ತಕ್ಷೇಪ ಮಾಡುತ್ತೆ ಅನ್ನೋದು ತಮಾಷೆ ಮಾತಲ್ಲ; ನಗೋಕೆ ಇಲ್ಲಿ ಕಾರಣಗಳೂ ಇಲ್ಲ.

ಮಣಿಶಂಕರ್ ಅಯ್ಯರ್ ಪ್ರಧಾನಿ ಮೋದಿ ಹತ್ಯೆಗೆ ಪಾಕಿಸ್ತಾನಕ್ಕೆ ಸುಪಾರಿ ನೀಡಿದ್ದಾರೆ ಅನ್ನೋ ಆರೋಪವೂ ಸಣ್ಣದಲ್ಲ. ಮಣಿಶಂಕರ್ ಅಯ್ಯರ್ ವಿರುದ್ಧ ಮೋದಿ ಮಾಡಿರುವ ಆರೋಪ ಗಂಭೀರವಾದದ್ದು. ಹೀಗಾಗಿ ಕೇಂದ್ರ ಸರ್ಕಾರ ಮಣಿಶಂಕರ್ ವಿರುದ್ಧ ತನಿಖೆ ನಡೆಸಬೇಕು. ಕಾಂಗ್ರೆಸ್ ನಾಯಕರ ವಿರುದ್ಧ ವ್ಯವಸ್ಥಿತ ರೀತಿಯಲ್ಲಿ ತನಿಖೆ ನಡೆಯದೆ ಹೋದ್ರೆ ಮೋದಿ ಆರೋಪ ಗಾಳಿಯಲ್ಲಿ ಹೊಡೆದ ಗುಂಡು ಆಗುತ್ತೆ. ಗುಜರಾತ್ ಎಲೆಕ್ಷನ್ ಗೆಲ್ಲಲು ಮೋದಿ, ಪ್ರಧಾನಿ ಹುದ್ದೆ ಘನತೆ ಮರೆತು ಮಾಡಿದ ಈ ಆರೋಪ ಪ್ರಧಾನ ಮಂತ್ರಿ ಹುದ್ದೆಗೆ ಕಳಂಕ ತರುವಂತದ್ದು. “ಪ್ರಧಾನ ಮಂತ್ರಿ ನರೇಂದ್ರ ಮೋದಿ, ಇನ್ನಾದರೂ ಪ್ರಬುದ್ಧತೆ ಪ್ರದರ್ಶಿಸಲಿ,” ಅಂತಾ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಿಡುಗಡೆ ಮಾಡಿರುವ ಹೇಳಿಕೆ ಮತ್ತಷ್ಟು ಮಹತ್ವ ಪಡೆದುಕೊಳ್ಳುತ್ತೆ.

ಹೀಗೆ, ಒಂದು ಚುನಾವಣೆ ಪ್ರತಿಷ್ಠಯಾಗಿ ಬದಲಾದಾಗ ನಡೆಯುವ ಇಂತಹ ಬಹಿರಂಗ ವಾಕ್ಸಮರಗಳನ್ನು ಚುನಾವಣೆಗೆ ಮಾತ್ರವೇ ಸೀಮಿತವಾಗಿ ನೋಡಲು ಸಾಧ್ಯವಿಲ್ಲ. ಈ ಹಿಂದೆ, ‘ಗೆದ್ದರೆ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕ್ತೀವಿ’ ಅಂದಿತ್ತು ಬಿಜೆಪಿ. ಅಧಿಕಾರಕ್ಕೆ ಬಂದ ನಂತರ, ‘ಅದು ಚುನಾವಣಾ ಘೋಷಣೆ ಅಷ್ಟೆ,’ ಅಂದಿದ್ದರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ. ಇದೀಗ ಗುಜರಾತ್ ಚುನಾವಣೆಗಾಗಿ ಬಿಜೆಪಿ ಪಾಕಿಸ್ತಾನವನ್ನು ಎಳೆದು ತಂದಿದೆ. ಕಾಂಗ್ರೆಸ್ ‘ಜನಿವಾರಧಾರಿ ಹಿಂದೂ’ ಸಮರ್ಥನೆಯನ್ನು ಮುಂದಿಡುವ ಮೂಲಕ ಅಸಹ್ಯಕರ ಮಾದರಿಯನ್ನು ಜನರಿಗೆ ಪರಿಚಯಿಸಲು ಹೊರಟಿದೆ. ಚುನಾವಣೆಯ ಸೋಲು ಗೆಲುವಿನ ಆಚೆಗೆ ಇಂತಹ ಹೇಳಿಕೆಗಳ ಗಂಭೀರ ಪರಿಣಾಮಗಳನ್ನು ಜನ ಗಮನಿಸಬೇಕಿದೆ.

Leave a comment

Top