An unconventional News Portal.

‘ಗುಂಡಿ ಗಂಡಾಂತರ ರಾಜಕೀಯ’: 15 ಸಾವಿರ ಕಿ.ಮೀ ರಸ್ತೆ; 15 ಸಾವಿರ ಗುಂಡಿಗಳು; 15 ದಿನಗಳ ಗಡುವು

‘ಗುಂಡಿ ಗಂಡಾಂತರ ರಾಜಕೀಯ’: 15 ಸಾವಿರ ಕಿ.ಮೀ ರಸ್ತೆ; 15 ಸಾವಿರ ಗುಂಡಿಗಳು; 15 ದಿನಗಳ ಗಡುವು

‘ಸಮಗ್ರ ಸಂಚಾರ ಮತ್ತು ಸಾರಿಗೆ ಯೋಜನೆ'(ಸಿಟಿಟಿಪಿ)ಯನ್ನು ಅಳವಡಿಸಿಕೊಂಡಿರುವ, ಕೋಟ್ಯಾಂತರ ರೂಪಾಯಿ ಉದ್ಯಮವಾಗಿ ಬೆಳೆದಿರುವ ಬೆಂಗಳೂರಿನ ಟ್ರಾಫಿಕ್‌ ವ್ಯವಸ್ಥೆ ಇದೀಗ ರಸ್ತೆ ಗುಂಡಿಗಳಿಂದ ನಲುಗಿ ಹೋಗಿದೆ.

ಹಲವು ದಿನಗಳಿಂದ ಸುರಿಯುತ್ತಿರುವ ಮಳೆ, ಕಳಪೆ ಕಾಮಗಾರಿ ಹಾಗೂ ಆಡಳಿತ ವರ್ಗದ ನಿರ್ಲಕ್ಷ್ಯತೆಯ ಫಲ; ಕಳೆದ ಒಂದು ವಾರದ ಅಂತರದಲ್ಲಿ ಮೂವರ ಬಲಿಯಾಗಿದೆ. ಅಕ್ಟೋಬರ್ 2ರಂದು ರಾತ್ರಿ ಮೈಸೂರು ರಸ್ತೆ ಮೇಲ್ಸೇತುವೆ ಬಳಿ ರಸ್ತೆ ಗುಂಡಿ ತಪ್ಪಿಸುವ ಸಹಾಸ ಮಾಡುತ್ತಿದ್ದ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಜೋಸೆಫ್ ಹಾಗೂ ಸಗಾಯ್ ಮೇರಿ ಎಂಬುವವರ ಮೇಲೆ ಬಸ್‌ ಹರಿದಿತ್ತು. ಇದಾದ ವಾರ ನಂತರ, ಅಕ್ಟೋಬರ್‌ 9ರಂದು ಮೈಸೂರು ರಸ್ತೆಯಲ್ಲಿಯ ನಾಯಂಡಹಳ್ಳಿ ಜಂಕ್ಷನ್‌ ಬಳಿ ರಾಧಾ ಅಂಜನಪ್ಪ ಎಂಬುವವರು ಮೃತಪಟ್ಟಿದ್ದಾರೆ. ಈ ಎರಡು ಪ್ರಕರಣಗಳಲ್ಲಿ ಒಟ್ಟು ಮೂವರು ಪ್ರಾಣ ತೆತ್ತಿದ್ದು, ರಸ್ತೆ ಗುಂಡಿಗಳೇ ಕಾರಣವಾಗಿವೆ.

ಸಿಎಂ ಸಿದ್ದರಾಮಯ್ಯ ಸೋಮವಾರ ರಸ್ತೆ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ 15 ದಿನಗಳ ಕಾಲಾವಕಾಶ ನೀಡಿದ್ದಾರೆ. ಬೆಂಗಳೂರು ಅಭಿವೃದ್ಧಿ ಹೊಣೆಯನ್ನು ಹೊತ್ತುಕೊಂಡಿರುವ ಸಚಿವ ಕೆ. ಜೆ. ಜಾರ್ಜ್‌, “ಬೆಂಗಳೂರಿನಲ್ಲಿ ನಡೆಯುವ ಎಲ್ಲಾ ಅಪಘಾತಗಳಿಗೆ ರಸ್ತೆ ಗುಂಡಿಯೇ ಹೊಣೆ ಮಾಡುವುದು ಸರಿಯಲ್ಲ,” ಎಂದಿದ್ದಾರೆ.

ಹೀಗಿರುವಾಗಲೇ ಮಂಗಳವಾರ ‘ವಿಜಯ ಕರ್ನಾಟಕ’ ಲೈವ್‌ ಗುಂಡಿ ಗಂಡಾಂತರವನ್ನು ಬಿಂಬಿಸುವ ಚಿತ್ರಗಳನ್ನು ಪ್ರಕಟಿಸಿದೆ. ಮೈಸೂರು ರಸ್ತೆಯ ರಾಜರಾಜೇಶ್ವರಿ ನಗರ ಬಳಿಯಲ್ಲಿ ಮುಸ್ಲಿಂ ದಂಪತಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ, ರಸ್ತೆ ಗುಂಡಿ ತಪ್ಪಿಸಲು ಹೋಗಿ ಸ್ಕಿಡ್‌ ಆಗಿ ಬಿದ್ದ ಚಿತ್ರಗಳು, ಬೆಂಗಳೂರು ರಸ್ತೆಗಳ ಸದ್ಯದ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಂತಿವೆ.

“ಕಳೆದ ಹಲವು ದಿನಗಳಿಂದ ಬೆಂಗಳೂರಿನ ರಸ್ತೆಗಳ ಚಿತ್ರಗಳನ್ನು ತೆಗೆಯುತ್ತಿದ್ದೆ. ಅದೇ ರೀತಿ, ಸೋಮವಾರ ಬೆಂಗಳೂರು- ಮೈಸೂರು ರಸ್ತೆಯಲ್ಲಿ ದೊಡ್ಡ ಗುಂಡಿಯೊಂದು ಬಿದ್ದಿತ್ತು. ಅದನ್ನು ಹಾದು ಹೋಗುವ ವಾಹನಗಳ ಚಿತ್ರ ತೆಗೆಯುತ್ತಿದ್ದಾಗ ಸ್ಕೂಟರ್‌ನಲ್ಲಿ ಬಂದ ದಂಪತಿ ಆಯ ತಪ್ಪಿ ಬಿದ್ದರು. ಜತೆಗೆ ಪುಟ್ಟ ಮಗುವೊಂದು ಇತ್ತು. ನಂತರ ನಾವೆಲ್ಲಾ ಸೇರಿ ಅವರನ್ನು ರಕ್ಷಿಸಿದೆವು,” ಎಂದು ಚಿತ್ರಗಳು ಸೆರೆಸಿಕ್ಕ ಬಗೆಯನ್ನು ‘ಸಮಾಚಾರ’ದ ಜತೆ ಹಂಚಿಕೊಂಡರು ‘ವಿಕ’ದ ಮುಖ್ಯ ಛಾಯಾಗ್ರಾಹಕ ಕೆ. ಎಸ್‌. ಶ್ರೀಧರ್.

ಆ ಚಿತ್ರಗಳ ಆನಿಮೇಷನ್ ಮೇಲಿದೆ.

15 ಸಾವಿರ ಗುಂಡಿಗಳು: 

ಬೆಂಗಳೂರು ರಸ್ತೆಗಳಲ್ಲಿ ಸದ್ಯ 15,935 ಗುಂಡಿಗಳಿವೆ ಎಂಬ ಅಂಕಿಅಂಶವನ್ನು ಕಳೆದ ವಾರ ಸ್ಥಳೀಯ ಆಡಳಿತ ನೀಡಿತ್ತು. “ಅವುಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ. ಆದರೆ ಮಳೆಯ ಕಾರಣ ಕಾಮಗಾರಿ ನಿಧಾನಗತಿಯಲ್ಲಿದೆ,” ಎಂದು ಬಿಬಿಎಂಪಿ ಮೇಯರ್ ಆರ್‌. ಸಂಪತ್‌ರಾಜ್‌ ಹೇಳಿದ್ದರು.

ವಾರ ಕಳೆದ ನಂತರವೂ ರಸ್ತೆಗಳ ಪರಿಸ್ಥಿತಿಯಲ್ಲಿ ಬದಲಾಗಿಲ್ಲ. ವರದಿಯಾಗದೆ ಹೋಗುವ ಅಪಘಾತಗಳು ಮತ್ತು ಅವುಗಳಿಗೆ ರಸ್ತೆಯಲ್ಲಿರುವ ಗುಂಡಿಗಳೇ ಕಾರಣವಾಗುತ್ತಿರುವ ಪ್ರಕ್ರಿಯೆ ಜಾರಿಯಲ್ಲಿದೆ. ಕಳೆದ ಎರಡು ತಿಂಗಳ ಅಂತರದಲ್ಲಿ ಬಿಬಿಎಂಪಿ ರಸ್ತೆ ಗುಂಡಿಗಳನ್ನು ಮುಚ್ಚಲು 15 ದಿನಗಳ ಗಡುವನ್ನು ಎರಡು ಬಾರಿ ಪ್ರಕಟಿಸಿದೆ ಎಂಬುದು ಗಮನಾರ್ಹ.

“ರಸ್ತೆ ಗುಂಡಿಗಳನ್ನು ಮುಚ್ಚಲು ಪ್ರತಿ ವರ್ಷವೂ ಹಣ ಬಿಡುಗಡೆಯಾಗುತ್ತದೆ. ಇದರಲ್ಲಿ ಕನಿಷ್ಟ ಶೇ. 30ರಷ್ಟು ಕಮಿಷನ್ ರೂಪದಲ್ಲಿ ಬಿಬಿಎಂಪಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ನೀಡಬೇಕಾಗುತ್ತದೆ. ಇದರ ಜತೆಗೆ ಸಬ್‌ಲೀಸ್‌ಗಳನ್ನು ನೀಡುವುದರಿಂದ ಬಿಡಗಡೆಯಾದ ಹಣ ಶೇ. 10-15 ರಷ್ಟು ಕಮಿಷನ್‌ ರೂಪದಲ್ಲಿ ಖರ್ಚಾಗಿರುತ್ತದೆ. ಉಳಿದ ಹಣದಲ್ಲಿ ಕೇಂದ್ರಕೃತ ವ್ಯವಸ್ಥೆಯ ಮೂಲಕ ಡಾಂಬರ್‌ ಖರೀದಿಸಿ, ಗುಂಡಿ ಬಿದ್ದ ಸ್ಥಳಕ್ಕೆ ಸಾಗಿಸಿ, ಮುಚ್ಚುಬೇಕಿದೆ. ಹೀಗಾಗಿ ಗುಣಮಟ್ಟದ ಕಾಮಗಾರಿಯನ್ನು ನಿರೀಕ್ಷಿಸುವುದು ಕಷ್ಟ,” ಎನ್ನುತ್ತಾರೆ ಬಿಬಿಎಂಪಿಯ ಗುತ್ತಿಗೆದಾರರೊಬ್ಬರು.

‘ಬೆಂಗಳೂರಿನ 13,474 ಕಿ. ಮೀ ರಸ್ತೆಯ ಪೈಕಿ 3,081 ಕಿ. ಮೀ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಟೆಂಡರ್‌ ಕರೆದಿದೆ. ಸದ್ಯ, 2,374 ಕಿ.ಮೀ ರಸ್ತೆಗಳಲ್ಲಿ ಗುಂಡಿಯೇ ಇಲ್ಲ ಎಂದು ಹೇಳಿಕೊಳ್ಳುತ್ತಿದೆ,’ ಎಂದು ‘ದಿ ಹಿಂದೂ’ ವರದಿ ಹೇಳುತ್ತಿದೆ.

ಸೋಮವಾರ, ರಸ್ತೆ ಗುಂಡಿಗಳನ್ನು ಖುದ್ದಾಗಿ ವೀಕ್ಷಿಸಿರುವ ಸಿಎಂ ಸಿದ್ದರಾಮಯ್ಯ ನಂತರ ಅಧಿಕಾರಿಗಳ ಸಭೆಯನ್ನು ನಡೆಸಿದರು. ನಂತರ, ಪ್ರವಾಹ ಪೀಡಿತ ಪ್ರದೇಶಗಳಿಗೆ 117 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದರು. ಈ ಸಮಯದಲ್ಲಿ ಮಾತನಾಡಿದ ಸಿಎಂ, “ಬಿಜೆಪಿ ಅಧಿಕಾರದಲ್ಲಿ ಸಮಯದಲ್ಲಿ ಬಿಬಿಎಂಪಿ ಹೆಸರಿನಲ್ಲಿ 8 ಸಾವಿರ ಕೋಟಿ ಸಾಲ ಮಾಡಲಾಗಿತ್ತು. 2.5 ಸಾವಿರ ಕೋಟಿ ರೂಪಾಯಿಗಳನ್ನು ಗುತ್ತಿಗೆದಾರರಿಗೆ ಬಾಕಿ ಉಳಿಸಲಾಗಿತ್ತು. ನಾವು ಬಂದ ನಂತರ ಗುತ್ತಿಗೆದಾರರ ಬಾಕಿ ಪಾವತಿ ಮಾಡಿದ್ದೇವೆ. ಇನ್ನೂ 700 ಕೋಟಿ ಬಾಕಿ ಉಳಿಸಿಕೊಂಡಿದ್ದು, ಬ್ಯಾಂಕ್‌ಗಳಿಂದ ಸಾಲ ಮಾಡಿ ತೀರಿಸುತ್ತೇವೆ,” ಎಂದರು.

ಸದ್ಯ, ಸಿಎಂ ಸಿದ್ದರಾಮಯ್ಯ ಕೂಡ 15 ದಿನಗಳ ಗಡುವು ನೀಡಿದ್ದಾರೆ. ರಸ್ತೆ ಗುಂಡಿಗಳನ್ನು ಮುಚ್ಚವ ಜವಾಬ್ದಾರಿಯನ್ನು ಎಂಜಿನಿಯರ್‌ಗಳಿಗೆ ನೀಡಿದ್ದಾರೆ. ಒಂದು ವೇಳೆ, ಕಾಮಗಾರಿಯಲ್ಲಿ ಸಮಸ್ಯೆಯಾದರೆ ಎಂಜಿನಿಯರ್‌ಗಳನ್ನೇ ಹೊಣೆ ಮಾಡಲಾಗುವುದು ಎಂದಿದ್ದಾರೆ.

ಬೆಂಗಳೂರಿನ ರಸ್ತೆ ಗುಂಡಿಗಳ ವಿಚಾರ ಸುದ್ದಿಕೇಂದ್ರಕ್ಕೆ ಬರುತ್ತಿರುವುದು ಇದು ಮೊದಲೇನೂ ಅಲ್ಲ. ನಾಲ್ಕು ವರ್ಷಗಳ ಹಿಂದೆ, ಕಲಾವಿದ ಬಾದಲ್ ನಂಜುಂಡಸ್ವಾಮಿ ಸುಲ್ತಾನ್‌ ಪಾಳ್ಯದಲ್ಲಿ ಮೂರು ತಿಂಗಳಿನಿಂದ ರಸ್ತೆಯ ನಡುವೆ ಸೃಷ್ಟಿಯಾಗಿದ್ದ ಗುಂಡಿಯೊಂದರೊಳಗೆ ಮೊಸಳೆಯ ಪ್ರತಿಕೃತಿಯೊಂದನ್ನು ಸೃಷ್ಟಿಸಿದ್ದರು. ಇದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿತ್ತು.

ಬಾದಲ್ ಕಲಾಕೃತಿ.

ಬಾದಲ್ ಕಲಾಕೃತಿ.

“ಒಮ್ಮೆ ರಿಚ್ಮಂಡ್‌ ಸರ್ಕಲ್‌ ಬಳಿ ಹೋಗುತ್ತಿದ್ದಾಗ ಗುಂಡಿಯೊಂದರ ಕಾರಣಕ್ಕೆ ಅಪಘಾತಕ್ಕೆ ಒಳಗಾದೆ. ನಂತರ ಕಲೆಯನ್ನು ಇಟ್ಟುಕೊಂಡು ಈ ಸಮಸ್ಯೆ ಬಗ್ಗೆ ಗಮನಸೆಳೆಯುವ ಪ್ರಯತ್ನ ಆರಂಭಿಸಿದೆ. ಸಾಕಷ್ಟು ಕಡೆಗಳಲ್ಲಿ ರಸ್ತೆ ಗುಂಡಿಗಳನ್ನು ಬಳಸಿಕೊಂಡು ಚಿತ್ರ ಬಿಡಿಸಿದೆ. ಅದರಿಂದ ಬಿಬಿಎಂಪಿ ಒಂದಷ್ಟು ಗುಂಡಿಗಳನ್ನು ಮುಚ್ಚಿತ್ತು. ಈ ಬಾರಿ ಇಡೀ ಬೆಂಗಳೂರಿನ ರಸ್ತೆಗಳು ಗುಂಡಿಮಯವಾಗಿವೆ,” ಎನ್ನುತ್ತಾರೆ ಬಾದಲ್ ನಂಜುಂಡಸ್ವಾಮಿ.

ಸದ್ಯ, ಸಿಲಿಕಾನ್‌ ಸಿಟಿಯ 13 ಸಾವಿರ ಕಿ.ಮೀ ರಸ್ತೆಯಲ್ಲಿ 15 ಸಾವಿರ ಗುಂಡಿಗಳು ಸಾವಿಗಾಗಿ ಬಾಯ್ತೆರದು ಕುಳಿತಿವೆ. ಇವುಗಳನ್ನು ಮುಚ್ಚಲು ಮೂರನೇ ಬಾರಿ 15 ದಿನಗಳ ಗಡುವು ನೀಡಲಾಗಿದೆ. ಈ ಬಾರಿಯಾದರೂ ಮಳೆ ನೆಪವಾಗದಿರಲಿ. ಗುಂಡಿಗಳನ್ನು ಮುಚ್ಚುವುದು ತುರ್ತು ಕೆಲಸ. ಆದರೆ ರಸ್ತೆಗಳಲ್ಲಿ ಪದೇ ಪದೇ ಗುಂಡಿಗಳೇಕೆ ಬೀಳುತ್ತಿವೆ? ಈ ಪ್ರಶ್ನೆಗೆ ಪರಿಹಾರವೊಂದನ್ನು ಕಂಡುಕೊಳ್ಳುವುದು ಕೂಡ ಅಷ್ಟೆ ಮುಖ್ಯ.

ಫೀಚರ್ ಆನಿಮೇಷನ್ :(ಚಿತ್ರ ಕೃಪೆ: ವಿಜಯ ಕರ್ನಾಟಕ)

Leave a comment

Top