An unconventional News Portal.

ಬೆಂಗಳೂರು ಪೊಲೀಸರ ಬಲೆಗೆ ಬಿದ್ದ ‘ಭಿಲ್‌’ ಗ್ಯಾಂಗ್‌ ಇತಿಹಾಸ ಮತ್ತು ಬ್ರಿಟೀಷರಿಂದ ಸಿಕ್ಕ ‘ಕ್ರಿಮಿನಲ್‌ ಟ್ರೈಬ್‌’ ಪಟ್ಟ

ಬೆಂಗಳೂರು ಪೊಲೀಸರ ಬಲೆಗೆ ಬಿದ್ದ ‘ಭಿಲ್‌’ ಗ್ಯಾಂಗ್‌ ಇತಿಹಾಸ ಮತ್ತು ಬ್ರಿಟೀಷರಿಂದ ಸಿಕ್ಕ ‘ಕ್ರಿಮಿನಲ್‌ ಟ್ರೈಬ್‌’ ಪಟ್ಟ

ಕರ್ನಾಟಕ ಪೊಲೀಸ್‌ ಇಲಾಖೆ ಇತ್ತೀಚಿನ ವರ್ಷಗಳಲ್ಲಿ ಪತ್ತೆ ಹಚ್ಚಿದ ಅತ್ಯುತ್ತಮ ಪ್ರಕರಣಗಳಲ್ಲಿ ‘ಭಿಲ್‌ ಗ್ಯಾಂಗ್‌’ ಸದಸ್ಯರ ಬಂಧನ ಕೂಡ ಒಂದು. ಶುಕ್ರವಾರ ಪೊಲೀಸರು ನಡೆಸಿದ ತನಿಖೆಯ ಬಗ್ಗೆ ಇಲಾಖೆ ತಿಳಿಸಿದ ನಂತರ ಸಾರ್ವಜನಿಕವಾಗಿ ಬೆಂಗಳೂರು ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಇವೆಲ್ಲದರ ನಡುವೆ ಇಡೀ ‘ಭಿಲ್‌’ ಸಮುದಾಯವನ್ನೇ ‘ಕ್ರಿಮಿನಲ್‌ ಟ್ರೈಬ್‌’ ಎಂಬ ಹಣೆಪಟ್ಟಿ ಕಟ್ಟುವ ಪ್ರಯತ್ನವೂ ನಡೆದುಹೋಗಿದೆ. ಆದರೆ ‘ಭಿಲ್‌’ ಸಮುದಾಯದ ಇತಿಹಾಸದ ಪುಟಗಳನ್ನು ತಿರುವಿದರೆ ಅಲ್ಲಿ ಹೋರಾಟವಿದೆ, ಸಂಗ್ರಾಮವಿದೆ, ಬಂಡವಾಳಶಾಹೀ ವಿರುದ್ಧದ ಕೂಗಿದೆ, ಸಮಾಜದಿಂದ ಬಹಿಷ್ಕರಿಸಲ್ಪಟ್ಟ ನೋವಿದೆ ಮತ್ತು ಅದೆಲ್ಲಕ್ಕಿಂತ ವಿಭಿನ್ನವಾದ ಬಿಲ್ವಿದ್ಯಾ ಪ್ರಾವೀಣ್ಯತೆ ಕಾಣುತ್ತದೆ. ಒಂದು ಕಾಲದಲ್ಲಿ ಬ್ರಿಟೀಷರ ವಿರುದ್ಧ ಸೆಣಸಾಡಿ ಬಹಿಷ್ಕರಿಸಲ್ಪಟ್ಟ ‘ಭಿಲ್‌’ ಸಮುದಾಯದ ಇಂದಿನ ಸ್ಥಿತಿಗತಿಗಳೇನು? ವಿಸ್ತೃತ ವರದಿ ಇಲ್ಲಿದೆ…

ಮಧ್ಯ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್‌ ಮತ್ತು ತ್ರಿಪುರಾದ ಕೆಲ ಭಾಗಗಳಲ್ಲಿ ನೆಲೆಸಿರುವ ‘ಭಿಲ್‌’ ಅಥವಾ ‘ಭೀಲ್‌’ ಎಂದು ಕರೆಸಿಕೊಳ್ಳುವ ಸಮುದಾಯ ಉತ್ತರಭಾರತದ ಅತಿ ದೊಡ್ಡ ಆದಿವಾಸಿ ಜನಾಂಗ. ಬಿಲ್ವಿದ್ಯೆಯಲ್ಲಿ ಅತ್ಯುತ್ತ ಪ್ರಾವೀಣ್ಯತೆ ಹೊಂದಿರುವ ಭಿಲ್‌ ಜನರು ರಾಜಾಳ್ವಿಕೆಯ ಕಾಲಗಳಲ್ಲಿ ಸೇನೆಯ ಅವಿಭಾಜ್ಯ ಅಂಗವಾಗಿದ್ದವರು. ಅದೆಷ್ಟೋ ಯುದ್ಧಗಳ ಗತಿಯನ್ನೇ ಬದಲಿಸಿದ ಕೀರ್ತಿಯೂ ಇವರಿಗಿದೆ. ದೈಹಿಕವಾಗಿ ಬಲಾಢ್ಯರಾಗಿರುವ ಈ ಸಮುದಾಯದ ಮಂದಿ ಸಾವಿರಾರು ವರ್ಷಗಳ ಕಾಲ ಸೈನಿಕರಾಗಿಯೇ ಜೀವನ ಸಾಗಿಸಿದ್ದಾರೆ. ನಾಗರೀಕತೆ ಬೆಳೆದಂತೆ, ಅಸ್ತ್ರ-ಶಸ್ತ್ರಗಳ ಬಳಕೆ ಆರಂಭವಾಗಿತ್ತು. ಜನರಿನ್ನೂ ಬಿಲ್ಲು ಬಾಣಗಳನ್ನು ಬಳಸಲು ಮುಂದಾಗುವ ಮೊದಲೇ ಭಿಲ್‌ ಸಮುದಾಯ ಪರಿಣಿತಿ ಹೊಂದಿತ್ತು. ಅದಕ್ಕಾಗಿಯೇ ಇವರು ಸೈನ್ಯದಲ್ಲಿ ಪ್ರಾಮುಖ್ಯತೆ ಪಡೆದಿದ್ದರು ಎಂಬ ಅಂಶಗಳು ಅಂತರ್ಜಾಲದಲ್ಲಿ ಲಭ್ಯವಾಗುತ್ತದೆ.

ಇತಿಹಾಸ:
ಭಿಲ್‌ ಎಂಬ ಹೆಸರು ತಮಿಳಿನ ವಿಲ್ಲುವಾರ ಎಂಬ ಪದದಿಂದ ಬಂದಿದೆ ಎನ್ನಲಾಗುತ್ತದೆ. ಅದೇ ರೀತಿ ವಿಲ್ಲು ಅಥವಾ ಬಿಲ್ಲು ಎಂಬ ಪದದಿಂದ ಆ ಹೆಸರು ಬಂದಿದೆ ಎಂಬುದಾಗಿಯೂ ಹೇಳಲಾಗುತ್ತದೆ. ಒಟ್ಟಿನಲ್ಲಿ ವೃತ್ತಿಪರ ಬಿಲ್ಲುಗಾರರಾಗಿದ್ದರಿಂದ ಸಮುದಾಯವನ್ನು ಭಿಲ್‌ ಎಂದು ಕರೆದಿರುವುದು ಸ್ಪಷ್ಟ. ರಾಮಾಯಣ ಮತ್ತು ಮಹಾಭಾರತದಲ್ಲಿಯೂ ಭಿಲ್‌ ಜನಾಂಗದ ಉಲ್ಲೇಖವಿದೆ. ಅಪಹರಣವಾದ ಸೀತೆಯನ್ನು ಹುಡುಕಿ ಹೋಗುವ ರಾಮನಿಗೆ ದಾರಿಯಲ್ಲಿ ಭಿಲ್‌ ಜನಾಂಗದ ಕೆಲ ಮಹಿಳೆಯರು ಊಟ ಉಪಚಾರ ಮಾಡಿದ ಉಲ್ಲೇಖವಿದೆ. ಮಹಾ ಕಾವ್ಯಗಳಲ್ಲಿ ಮತ್ತು ಪುರಾಣಗಳಲ್ಲಿ ಅಲ್ಲಲ್ಲಿ ಇಣುಕಿ ಮರೆಯಾಗುವ ಭಿಲ್‌ ಜನರು ನಂತರ ಇತಿಹಾಸದಲ್ಲಿ ದೊಡ್ಡ ಪಾತ್ರವನ್ನು ಹೊಂದಿದ್ದಾರೆ. ಹಿಂದಿನ ಕಾಲದಲ್ಲಿ ಭಿಲ್‌ರನ್ನು ಮಹಾ ಯೋಧರೆಂದು ಗುರುತಿಸಲಾಗುತ್ತಿತ್ತು. ಮೊಘಲರ, ಮರಾಠರ ಮತ್ತು ಬ್ರಿಟೀ‍‍ಷರ ವಿರುದ್ಧ ಯುದ್ಧದಲ್ಲಿ ಭಿಲ್‌ ಸೇನಾನಿಗಳು ಭಾಗಿಯಾಗಿದ್ದರು. ಬ್ರಿಟಿಷರಿಗೆ ಹಲವು ಆದಿವಾಸಿ ಜನಾಂಗಗಳಂತೆ ಭಿಲ್‌ ಸಮುದಾಯವೂ ಕೂಡ ದೊಡ್ಡ ಶತ್ರುವಾಗಿತ್ತು. ಭಿಲ್‌ ಜನರ ಗೊರಿಲ್ಲಾ ಯುದ್ಧದಿಂದ ಬ್ರಿಟೀಷ್‌ ಸೇನೆ ಹೈರಾಣಾಗಿಹೋಗಿತ್ತು. ಭಿಲ್‌ರನ್ನು ತಡೆಯಲು ಸಾಧ್ಯವೇ ಆಗದ ಸಂದರ್ಭಗಳೂ ಸೃಷ್ಟಿಯಾಗಿತ್ತು ಎನ್ನಲಾಗುತ್ತದೆ. ಆಗ, ಬ್ರಿಟೀಷ್‌ ಸೇನೆ ಭಿಲ್‌ ಜನಾಂಗವನ್ನು ಬಹಿಷ್ಕರಿಸಿ, ಅವರಿಗೆ ಕಳ್ಳರು ಮತ್ತು ಹಿಂಸಾಚಾರಿಗಳು ಎಂಬ ಪಟ್ಟ ನೀಡಿತ್ತು. ‘ರಾಜದ್ರೋಹ’ದ ಕಾನೂನಿನಡಿಯಲ್ಲಿ ಹಲವು ಭಿಲ್‌ ಸಮುದಾಯದ ನಾಯಕರನ್ನು ಬಂಧಿಸಲಾಗಿತ್ತು ಎಂದೂ ಹೇಳಲಾಗುತ್ತದೆ.
ಬಟ್ಟೆ – ಭಾಷೆ:
ಬೇರೆ ರಾಜ್ಯಗಳನ್ನು ಹೊರತುಪಡಿಸಿ, ರಾಜಸ್ಥಾನದಲ್ಲಿ ಶೇಕಡ 39 % ಜನಸಂಖ್ಯೆಯನ್ನು ಭಿಲ್‌ ಸಮುದಾಯ ಹೊಂದಿದೆ ಎಂಬ ಮಾಹಿತಿ ನೀಡುತ್ತದೆ ‘ಇಕೋ ಇಂಡಿಯಾ’ ವೆಬ್‌ ತಾಣ. ಅವರು ಬಳಸುವ ಭಾಷೆ ‘ಭಿಲಿ’. ಅದೊಂದು ಇಂಡೋ-ಆರ್ಯನ್‌ ಭಾಷೆಯಾಗಿದ್ದು ಮರಾಠಿ, ರಾಜಸ್ಥಾನಿಯ ಸೊಗಡೂ ಅದರಲ್ಲಿ ಸೇರಿಕೊಂಡಿದೆ. ಭಿಲ್‌ ಸಮುದಾಯ ಮಹಿಳೆಯರು ಸಾಂಪ್ರದಾಯಿಕ ಸೀರೆಗಳನ್ನು ತೊಟ್ಟರೆ, ಪುರುಷರು ಉದ್ದವಾದ ಜುಬ್ಬಾ ಮತ್ತು ಪೈಜಾಮ ಧರಿಸುತ್ತಾರೆ. ಹಿತ್ತಾಳೆಯ ಆಭರಣಗಳನ್ನು ಮಹಿಳೆಯರು ಧರಿಸುತ್ತಾರೆ. ಭಿಲ್‌ ಜನರು ನೀಳ ಕಾಯದವರು, ಉತ್ತಮ ಶರೀರ ಹೊಂದಿದವರು ಮತ್ತು ನೋಡಲು ಸ್ಪುರದ್ರೂಪಿಗಳು. ಸರಳತೆ ಮತ್ತು ಸತ್ಯನುಡಿಗಾಗಿ ಅವರು ಹೆಸರಾದವರು ಮತ್ತು ಸ್ವತಂತ್ರ್ಯವನ್ನು ಬಹಳವಾಗಿ ಪ್ರೀತಿಸುವವರು ಎನ್ನಲಾಗುತ್ತದೆ. ಅದರ ಜತೆ ವಂಶಪಾರಂಪರಿಕವಾಗಿ ಭಿಲ್‌ ಜನ ಶಕ್ತಿಶಾಲಿಗಳು ಮತ್ತು ಧೈರ್ಯಶಾಲಿಗಳು. ಭಿಲ್‌ ಜನಾಂಗದ ಶಸ್ತ್ರ ಬಿದುರಿನಿಂದ ಮಾಡಿದ ಭಿಲ್ಲು (ಧನಸ್ಸು). ತಲೆತಲಾಂತರದಿಂದ ಭೇಟೆಯಾಡುವುದರಲ್ಲಿ ನಿಸ್ಸೀಮರು. ಸದ್ಯ ರೈತರಾಗಿ ಬದಲಾಗಿದ್ದಾರೆ. ಎಲ್ಲಾ ಕೋಮು, ಪಂಥ, ಧರ್ಮದಲ್ಲಿರುವಂತೆಯೇ ಇಲ್ಲಿಯೂ ದುಷ್ಟರಿರಬಹುದು, ಕಳ್ಳರಿರಬಹುದು, ಆದರೆ ಇಡೀ ಜನಾಂಗ ಸತ್ಯ ಮತ್ತು ನ್ಯಾಯಕ್ಕೆ ಹತ್ತಿರವಾದ ಜೀವನ ನಡೆಸಿಕೊಂಡು ಬಂದಿದೆ. ಕೆಲವು ಮೂಲಗಳ ಪ್ರಕಾರ, ಅವರು ಇವತ್ತಿಗೂ ಹೆಬ್ಬೆರಳನ್ನು ಬಳಸಿ ಬಿಲ್ಲು ಬಾಣಗಳ ಪ್ರಯೋಗ ಮಾಡುವುದಿಲ್ಲ. ಅವರ ಆರಾದ್ಯ ದೈವ ಏಕಲವ್ಯನ ನೆನಪಿಗಾಗಿ ಹೀಗೊಂದು ಸಂಪ್ರದಾಯವನ್ನು ಅವರು ಆಚರಿಸಿಕೊಂಡು ಬರುತ್ತಿದ್ದಾರೆ.
ಸಂಸ್ಕೃತಿ ಮತ್ತು ಧರ್ಮ:
ಭಿಲ್‌ ಜನಾಂಗದ ಧಾರ್ಮಿಕ ಪದ್ಧತಿಗಳು ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿವೆ. ಹೆಚ್ಚಿನ ಜನರು ಸ್ಥಳೀಯವಾದ ದೇವರುಗಳನ್ನು ಆಚರಿಸುತ್ತಾರೆ. ‘ಖಂಡೋಬಾ’, ‘ಕನ್ಹೋಬಾ’, ‘ಬಹಿರೋಬಾ’ ಮತ್ತು ‘ಸೀತಾಲ್ಮಾತ’ (ಸೀತಾಮಾತೆ), ಹೆಚ್ಚು ಜನರಿಂದ ಪೂಜಿತವಾಗುವ ದೇವದೇವತೆಗಳು. ಭಿಲ್‌ರಲ್ಲಿ ಕೆಲವರು ಹುಲಿಯನ್ನು ದೇವರೆಂದು ಪೂಜಿಸುತ್ತಾರೆ. ಅದಕ್ಕೆ ‘ವಾಗ್ದೇವ್‌’, ಎಂಬ ಹೆಸರಿನಿಂದ ಕರೆಯುತ್ತಾರೆ. ಆದರೆ ವಿಶೇಷವೆಂದರೆ ಅವರಿಗೆ ಅವರದ್ದೇ ಆದ ಸ್ವಂತ ದೇವಸ್ಥಾನಗಳಿಲ್ಲ. ಇದು ಎಲ್ಲಾ ಆದಿವಾಸಿ ಜನಾಂಗಗಳಿಗೂ ಅನ್ವಯಿಸುವ ಸಾಧ್ಯತೆಯೂ ಇದೆ. ಬುಡಕಟ್ಟು ಜನಾಂಗಗಳಲ್ಲಿ ಕಂಡುಬರುವ ಅಮಾಯಕ ಮೂಢನಂಬಿಕೆಗಳೂ ಭಿಲ್‌ರಲ್ಲಿ ಹಾಸುಹಿಕ್ಕಾಗಿದೆ. ಯುದ್ಧಕ್ಕೆ ಹೊರಡುವ ಮುನ್ನವೂ ಅವರು ಶಕುನಕ್ಕಾಗಿ ಕಾಯುತ್ತಿದ್ದರು. ಯಾವುದೇ ಕೆಲಸ ಕಾರ್ಯಗಳಿಗೂ ಶಕುನವಿಲ್ಲದೇ ಹೊರಡುವವರಲ್ಲ. ಹಳ್ಳಿಗೊಬ್ಬ ಸ್ಥಳೀಯವಾಗಿ ‘ಗುರು’ ಇರುತ್ತಾರೆ. ಪೂಜೆ ಪುನಸ್ಕಾರಗಳನ್ನು ಅವರೇ ಮಾಡುತ್ತಾರೆ. ಅದೇ ರೀತಿ ಹಳ್ಳಗೊಬ್ಬ ಮುಖ್ಯಸ್ಥ, ಆತನೇ ಕೋರ್ಟ್‌, ಆತನೇ ನ್ಯಾಯಾಧೀಶ. ಭಿಲ್‌ ಸಮುದಾಯ ಇರುವೆಲ್ಲ ಕಡೆ ಇಂದಿಗೂ ಪೊಲೀಸ್‌ ಠಾಣೆಗಳಿಗೆ ದೂರುಗಳು ಹೋಗುವುದು ತೀರಾ ಕಡಿಮೆ. ಸಮುದಾಯದ ಕಟ್ಟುಪಾಡುಗಳನ್ನು ಜನರು ತಪ್ಪದೇ ಪಾಲಿಸುತ್ತಾರೆ. ಹಾಡು ಮತ್ತು ನೃತ್ಯಕ್ಕೆ ಭಿಲ್‌ ಜನಾಂಗ ಹೆಚ್ಚಿನ ಒತ್ತು ನೀಡುತ್ತದೆ. ‘ಘೂಮರ್‌’ ಎಂಬ ನೃತ್ಯಶೈಲಿ ಭಿಲ್‌ ಸಮುದಾಯದ ಪ್ರಖ್ಯಾತ ನೃತ್ಯ ಪ್ರಾಕಾರ. ಶ್ರಾವಣ ಮಾಸದಲ್ಲಿ ಪುರುಷರು ‘ಥಾನ್‌ ಗಾಯಿರ್‌’, ಎಂಬ ನೃತ್ಯ ರೂಪಕವನ್ನು ಮಾಡುತ್ತಾರೆ. ಇದೊಂದು ಧಾರ್ಮಿಕ ನೃತ್ಯ ರೂಪಕವಾಗಿದ್ದು, ಭಿಲ್‌ ಜನಾಂಗದ ಇತಿಹಾಸವನ್ನೂ ಸಾರುತ್ತದೆ. ಶಿಲ್ಪಕಲೆಯಲ್ಲಿಯೂ ಪರಿಣಿತಿ ಹೊಂದಿರುವ ಭಿಲ್‌ ಜನರು ಕರಕುಶಲ ಕಲೆಯನ್ನೂ ಬಲ್ಲವರಾಗಿದ್ದಾರೆ.
 ಇತಿಹಾಸದಲ್ಲಿ ಎದುರಿಸಿದ ನೂರೆಂಟು ಯುದ್ಧಗಳು, ನಂತರದಲ್ಲಿ ಬ್ರಿಟೀಷರ ಆಳ್ವಿಕೆಯನ್ನು ಸಹಿಸದೇ ನಡೆಸಿದ ಹೋರಾಟ, ನಂತರದ ‘ರಾಜದ್ರೋಹಿ’ ಪಟ್ಟ ಇವೆಲ್ಲವನ್ನೂ ಸಹಿಸಿ ಈಗ ಕೃಷಿ ಮತ್ತು ಕೂಲಿನಾಲಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ವೀರ ಯೋಧ ಎನಿಸಿಕೊಂಡವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳು ಇಂದು ಹಳಸಿವೆ. ಮುಖ್ಯವಾಗಿ ಮಧ್ಯಪ್ರದೇಶ ಮತ್ತು ರಾಜಸ್ಥಾನ ಭಾಗಗಳಲ್ಲಿರುವ ಭಿಲ್‌ ಸಮುದಾಯ ಹಿಂದುಳಿದ ವರ್ಗಗಳಾಗಿಯೇ ಉಳಿದಿದೆ. ಬ್ರಿಟೀಷರು ತಮ್ಮ ವಿರುದ್ಧ ಹೋರಾಟ ಮಾಡಿದ ಕಾರಣಕ್ಕೆ ‘ಕ್ರಿಮಿನಲ್‌ ಟ್ರೈಬ್‌’, ಎಂದು ಹಲವು ಬುಡಕಟ್ಟು ಜನಾಂಗಗಳನ್ನು ಬಹಿಷ್ಕರಿಸಿತ್ತು. ಅದೇ ಸ್ಥಿತಿ ಇವತ್ತಿಗೂ ಮುಂದುವರೆದಿದ್ದು, ಆಧುನೀಕತೆಯ ಓಟದಲ್ಲಿ ಭಿಲ್‌ ಜನಾಂಗ ಹಿಂದೆಬಿದ್ದಿದೆ. ಇವತ್ತಿಗೂ ಓಟ್‌ ಬ್ಯಾಂಕ್‌ ಆಗಿ ಬಳಕೆಯಾಗುತ್ತಿರುವ ಭಿಲ್‌ ಕುಟುಂಬಗಳಿಗೆ ಓದುವ ಅವಕಾಶ ವಿರಳ. ಮಧ್ಯಪ್ರದೇಶ ಮತ್ತು ರಾಜಸ್ಥಾನ ಭಾಗಗಳಲ್ಲಿ ಭೂಮಾಲೀಕರಿಂದ ಸಾಲ ಪಡೆಯುತ್ತಾರೆ. ಅತೀ ದೊಡ್ಡ ಮೊತ್ತದ ಬಡ್ಡಿ ಇವರ ಮೇಲೆ ಹೇರಲಾಗುತ್ತದೆ. ಅದು ಎಷ್ಟರ ಮಟ್ಟಿಗೆಂದರೆ ಅದನ್ನು ತೀರಿಸಲು ಎಂದಿಗೂ ಸಾಧ್ಯವೇ ಇಲ್ಲ. ಸಾವಿರಾರು ಸಂಖ್ಯೆಯಲ್ಲಿ ಭಿಲ್‌ ಜನರು ಜೀತದಾಳುಗಳಾಗಿದ್ದಾರೆ. ಕೆಲವರು ಸಣ್ಣಪುಟ್ಟ ಕೂಲಿ ಮಾಡಿ ಜೀವನ ಸಾಗಿಸುತ್ತಾರೆ, ಕೃಷಿ ಭೂಮಿ ಇರುವವರು ಕೃಷಿ ಮಾಡುತ್ತಾರೆ. ಏನೂ ಇಲ್ಲದ ಕೆಲವರು ಶತಮಾನಗಳ ಪ್ರವೀಣತೆಯನ್ನು ಹೊತ್ತು ಅಪರಾಧ ಲೋಕಕ್ಕೆ ಕಾಲಿಟ್ಟಿದ್ದಾರೆ. ಅಂತವರಲ್ಲಿಯೇ ಕೆಲವು ಈಗ ಬೆಂಗಳೂರು ಪೊಲೀಸರ ಅತಿಥಿಗಳು.

Leave a comment

Top