An unconventional News Portal.

ಎನ್ಕೌಂಟರಿನಲ್ಲಿ 8 ‘ಸಿಮಿ’ ಕಾರ್ಯಕರ್ತರ ಹತ್ಯೆ; ಗೋಡೆ ಹಾರಿ ತಪ್ಪಿಸಿಕೊಂಡಿದ್ದ ಖೈದಿಗಳ ದುರಂತ ಅಂತ್ಯ!

ಎನ್ಕೌಂಟರಿನಲ್ಲಿ 8 ‘ಸಿಮಿ’ ಕಾರ್ಯಕರ್ತರ ಹತ್ಯೆ; ಗೋಡೆ ಹಾರಿ ತಪ್ಪಿಸಿಕೊಂಡಿದ್ದ ಖೈದಿಗಳ ದುರಂತ ಅಂತ್ಯ!

ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ಕೇಂದ್ರ ಕಾರಾಗೃಹದಿಂದ 8 ಖೈದಿಗಳು ಪರಾರಿಯಾಗಿದ್ದಾರೆ. ಸೋಮವಾರ ನಸುಕಿನ ವೇಳೆ ಈ ಕೃತ್ಯ ನಡೆದಿದ್ದು ಪರಾರಿಯಾದವರೆಲ್ಲಾ ನಿಷೇಧಿತ ‘ಸಿಮಿ’ ಸಂಘಟನೆಗೆ ಸೇರಿದ ಶಂಕಿತರಾಗಿದ್ದಾರೆ. ಈ ಮೂಲಕ ಮಧ್ಯ ಪ್ರದೇಶದ ಜೈಲಿನಿಂದ ಸಿಮಿ ಕಾರ್ಯಕರ್ತರು ಎರಡನೇ ಬಾರಿ ತಪ್ಪಿಸಿಕೊಂಡಿದ್ದಾರೆ.

“ಸೋಮವಾರ ಬೆಳಿಗ್ಗೆ 2 ಗಂಟೆ ಹೊತ್ತಿಗೆ ಈ ಘಟನೆ ನಡೆದಿದೆ. ಖೈದಿಗಳು ಹೊದಿಕೆಗಳು ಮತ್ತು ಬೆಡ್ ಶೀಟ್ಗಳನ್ನು ಬಳಸಿ ಗಸ್ತಿನಲ್ಲಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಸದೆ ಬಡಿದಿದ್ದಾರೆ. ನಂತರ ಜೈಲಿನ ಬೀಗ ತೆಗೆದು ಹೊರ ಬಂದಿದ್ದಾರೆ. ಆ ನಂತರ ಹೊದಿಕೆಯಲ್ಲೇ ಹಗ್ಗ ಮಾಡಿ ಜೈಲಿನ ಗೋಡೆ ಹತ್ತಿ ಪರಾರಿಯಾಗಿದ್ದಾರೆ,” ಎಂದು ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಸಕ್ಸೆನಾ ಮಾಹಿತಿ ನೀಡಿದ್ದಾರೆ. ಇದೀಗ ತಪ್ಪಿಸಿಕೊಂಡವರನ್ನು ಹುಡುಕುತ್ತಿದ್ದೇವೆ ಎಂದು ಸಕ್ಸೇನಾ ಹೇಳಿದ್ದಾರೆ.

ಗೋಡೆಹಾರಿ ಹೋಗುವ ವೇಳೆ ಓರ್ವ ಕಾವಲುಗಾರ ಪೊಲೀಸ್ ಅಧಿಕಾರಿಯ ಕುತ್ತಿಯನ್ನು ಬಿಗಿದಿದ್ದರೆ, ಇನ್ನೊಬ್ಬ ಅಧಿಕಾರಿಯ ಕುತ್ತಿಗೆಯನ್ನು ಪ್ಲೇಟ್ ಮತ್ತು ಲೋಟದಿಂದ ಕತ್ತರಿಸಿ ಕೊಲೆ ಮಾಡಿದ್ದಾರೆ. ಶಂಕಿತ ಸಿಮಿ ಕಾರ್ಯಕರ್ತರು ದೀಪಾವಳಿಯ ರಾತ್ರಿಯನ್ನೇ ಎಸ್ಕೇಪ್ ಆಗಲು ಆಯ್ಕೆ ಮಾಡಿಕೊಂಡಿದ್ದು, ದೇಶದ ಜನ ಪಟಾಕಿ ಸಿಡಿಸುತ್ತಾ ಸಂಭ್ರಮಿಸುತ್ತಿದ್ದರೆ, ಖೈದಿಗಳು ಮಾತ್ರ ಕತ್ತಲೆಯಲ್ಲಿ ನಿಧಾನವಾಗಿ ಮರೆಯಾಗಿದ್ದಾರೆ.

central-jail-bhopalಪರಾರಿಯಾದ 8 ಜನರು ನಿಷೇಧಿತ ‘ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ)’ಗೆ ಸೇರಿದವರಾಗಿದ್ದಾರೆ, ಎಂದು ಹಿರಿಯ ಪೊಲೀಸ್ ಅಧಿಕಾರಿ ರಾಮ ಸಿಂಗ್ ಮಾಹಿತಿ ನೀಡಿದ್ದಾರೆ.

ಘಟನೆ ಸಂಬಂಧ ಜೈಲಿನ ಸೂಪರಿಂಟೆಂಡ್ ಸೇರಿ ನಾಲ್ವರು ಅಧಿಕಾರಿಗಳನ್ನು ಭೋಪಾಲ್ ಕೇಂದ್ರೀಯ ಕಾರಾಗೃಹಗಳ ಮಾಹಾನಿರ್ದೇಶಕ ಸಂಜಯ್ ಚೌಧರಿ ಕೆಲಸದಿಂದ ಅಮಾನತು ಮಾಡಿದ್ದಾರೆ. ಈ ಕುರಿತು ಉನ್ನತಮಟ್ಟದ ತನಿಖೆಗೂ ಅವರು ಆದೇಶ ನೀಡಿದ್ದಾರೆ.

ಘಟೆನೆ ಬೆನ್ನಿಗೆ ರಾಜ್ಯದಾದ್ಯಂತೆ ಹೈ ಅಲರ್ಟ್ ಘೋಷಿಸಲಾಗಿದೆ.

ಇದೇ ಸಂಘಟನೆ 2003ರಲ್ಲಿ ಮುಂಬೈ ದಾಳಿ ಕೃತ್ಯ ನಡೆಸಿತ್ತು ಎಂದು ಪೊಲೀಸರು ಹೇಳುತ್ತಾ ಬಂದಿದ್ದಾರೆ. ಈ ಬಾಂಬ್ ಸ್ಪೋಟದಲ್ಲಿ 50 ಜನ ಸಾವನ್ನಪ್ಪಿದ್ದರು. ಆದರೆ ಸಿಮಿ ಮಾತ್ರ ಇದು ತನ್ನ ಕೃತ್ಯವಲ್ಲ ಎಂದು ಪ್ರತಿಪಾದಿಸುತ್ತಿದೆ.

ಸಿಮಿ ಹುಟ್ಟು:

ಸಿಮಿ ಸಂಘಟನೆ ಮುಸ್ಲಿಂ ಸಮುದಾಯದ ಕಲ್ಯಾಣದ ಉದ್ದೇಶ ಇಟ್ಟುಕೊಂಡು 1977ರಲ್ಲಿ ಆರಂಭವಾಗಿತ್ತು. ಆದರೆ ಬರಬರುತ್ತಾ ‘ತೀವ್ರವಾದ’ದತ್ತ ಸಂಘಟನೆ ಮುಖ ಮಾಡಿತು. ಅದರಲ್ಲೂ 1992ರ ಬಾಬ್ರಿ ಮಸೀದಿ ಧ್ವಂಸದ ನಂತರ ನಡೆದ ಹಲವು ಬಾಂಬ್ ಸ್ಪೋಟ ಪ್ರಕರಣಗಳಲ್ಲಿ ‘ಸಿಮಿ’ ಕೈವಾಡದ ಬಗ್ಗೆ ಭಾರತದ ತನಿಖಾ ಸಂಸ್ಥೆಗಳು ಆರೋಪ ಹೊರಿಸುತ್ತಾ ಬಂದಿವೆ. ಕೊನೆಗೆ 2001ರಲ್ಲಿ ‘ಸಿಮಿ’ ಸಂಘಟನೆಯನ್ನು ಸರಕಾರ ನಿಷೇಧಿಸಿತ್ತು.

ಹಿಂದೆಯೂ ಪರಾರಿಯಾಗಿದ್ದರು:

ಸಿಮಿ ಸಂಘಟನೆಗೆ ಸೇರಿದವರು ಪರಾರಿಯಾಗುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ 2013ರಲ್ಲೂ ಇದೇ ರೀತಿ ಭೋಪಾಲ್ನಿಂದ 285 ಕಿ.ಮೀ ದೂರದಲ್ಲಿರುವ ಖಾಂಡ್ವಾದಲ್ಲಿ 7 ಖೈದಿಗಳು ಟಾಯ್ಲೆಟ್ ಗೋಡೆ ಕೊರೆದು ಪರಾರಿಯಾಗಿದ್ದರು. ಇದರಲ್ಲಿ 6 ಜನ ಸಿಮಿ ಸಂಘಟನೆಗೆ ಸೇರಿದವರಿದ್ದರು. ಇವರಲ್ಲಿ ಓರ್ವ ಮಾತ್ರ ಪೊಲೀಸರ ಕೈಗೆ ಮತ್ತೆ ಸಿಕ್ಕಿ ಬಿದ್ದಿದ್ದ. ಉಳಿದವರು ಇವತ್ತಿನವರೆಗೂ ಪತ್ತೆಯಾಗಿಲ್ಲ.

ಕಳೆದ ವರ್ಷ ಇದೇ ರೀತಿ ಅತೀ ಹೆಚ್ಚಿನ ಭದ್ರತೆ ಇರುವ ತಿಹಾರ್ ಜೈಲಿನಿಂದ ಇಬ್ಬರು ಕೈದಿಗಳು ಗೋಡೆ ಅಡಿಯಲ್ಲಿ ಸುರಂಗ ಕೊರೆದು ಪರಾರಿಯಾಗಿದ್ದರು. ಇತ್ತೀಚೆಗೆ ಪರಪ್ಪನ ಅಗ್ರಹಾರ ಕಾರಾಗೃಹದಿಂದಲೂ ಖೈದಿಯೊಬ್ಬ ತರಕಾರಿ ಗಾಡಿಯಲ್ಲಿ ಪರಾರಿಯಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ವರದಿ ಕೇಳಿದ ರಾಜನಾಥ್ ಸಿಂಗ್

ಘಟನೆ ಕುರಿತಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಜೊತೆ ಸಂಭಾಷಣೆ ನಡೆಸಿರುವ ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ್ ಘಟನೆಯ ಕುರಿತು ವಿವರವಾದ ವರದಿ ಕೇಳಿದ್ದಾರೆ. ರಾಜ್ಯ ಗೃಹ ಮಂತ್ರಿ ಭೂಪೇಂದ್ರ ಸಿಂಗ್ ತಪ್ಪಿಸಿಕೊಂಡಿರುವ ಆರೋಪಿಗಳನ್ನು ಆದಷ್ಟು ಶೀಘ್ರ ಬಂದಧಿಸುವಂತೆ ಪೊಲೀಸರಿಗೆ ತಾಕೀತು ಮಾಡಿದ್ದಾರೆ.

UPDATE:

ಎನ್ಕೌಂಟರಿನಲಲಿ ಎಂಟೂ ಜನರ ಹತ್ಯೆ:

ಕಾರಾಗೃಹದಿಂದ ತಪ್ಪಿಸಿಕೊಂಡಿದ್ದ ಎಂಟೂ ಜನ ಶಂಕಿತ ಸಿಮಿ ಕಾರ್ಯಕರ್ತರನ್ನು ಎನ್ಕೌಂಟರಿನಲ್ಲಿ ಹತ್ಯೆ ಮಾಡಲಾಗಿದೆ. ಕೇವಲ 8 ಗಂಟೆಗಳಲ್ಲಿ ಮಧ್ಯಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ನಗರದ ಹೊರಭಾಗದ ಗುಂಗಾ ಪೊಲೀಸ್ ವ್ಯಾಪ್ತಿಯ ಮನಿಖೇಡ ಎಂಬ ಜೈಲಿನಿಂದ 10 ಕಿಲೋಮೀಟರ್ ದೂರದ ಪ್ರದೇಶದಲ್ಲಿ ಇವರನ್ನು ಹತ್ಯೆ ಮಾಡಲಾಗಿದೆ. ನಗರ ಪೊಲೀಸರು, ಎಟಿಎಸ್ ಮತ್ತು ಸಿಟಿಜಿ (ಕೌಂಟರ್ ಟೆರರಿಸ್ಟ್ ಗ್ರೂಪ್) ಪೊಲೀಸರು ಜಂಟಿಯಾಗಿ ಈ ಎನ್ಕೌಂಟರ್ ನಡೆಸಿದ್ದಾರೆ. ಬೆಳಗ್ಗೆ 4 ಗಂಟೆಗೆ ಆರಂಭಿಸಿದ ಕಾರ್ಯಾಚರಣೆ 11 ಗಂಟೆಗೆ ಅಂತ್ಯವಾಗಿದೆ.

“ಸಿಮಿ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಮುಖಾಮುಖಿಯಾಗಿದ್ದರು. ಈ ಸಂದರ್ಭ ಶಂಕಿತ ಸಿಮಿ ಸದಸ್ಯರು ಕಲ್ಲು ತೂರಾಟ ಆರಂಭಿಸಿದ್ದಾರೆ. ಗ್ರಾಮದವರು ಇವರು ದರೋಡೆಗೆ ಬಂದವರು ಎಂದು ತಿಳಿದು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಶರಣಾಗುವಂತೆ ಸೂಚಿಸಿದರೆ ಶಂಕಿತರು ಕೇಳದೆ ಗುಂಡಿನ ದಾಳಿ ಆರಂಭಿಸಿದ್ದಾರೆ. ಪೊಲೀಸರು ಅನಿವಾರ್ಯವಾಗಿ ಅವರನ್ನು ಕೊಲ್ಲಬೇಕಾಯಿತು,” ಎಂದು ಐಜಿಪಿ ಯೋಗೇಶ್ ಚೌಧರಿ ಎನ್ಕೌಂಟರನ್ನು ಸಮರ್ಥಿಸಿಕೊಂಡಿದ್ದಾರೆ. ಸುಮಾರು ಒಂದು ಗಂಟೆ ಕಾಲ ನಡೆದ ಎನ್ಕೌಂಟರಿನಲ್ಲಿ ಇಬ್ಬರು ಪೊಲೀಸರೂ ಗಾಯಗೊಂಡಿದ್ದಾರೆ. ಶಂಕಿತ ಕಾರ್ಯಕರ್ತರ ಬಳಿ ಖರ್ಜೂರ ಸೇರಿದಂತೆ ಹಲವು ಹಣ್ಣುಗಳಿದ್ದವು. ಇವರಿಗೆ ಜೈಲಿನಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದವರನ್ನು ಪತ್ತೆ ಹಚ್ಚಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಶಂಕಿತರಿಗೆ ಅಷ್ಟು ಬೇಗ ಗುಂಡಿಹಾರಿಸಲು ಬಂದೂಕು ಎಲ್ಲಿಂದ ಸಿಕ್ಕಿತು ಎನ್ನುವುದು ಇನ್ನೂ ತಿಳಿದು ಬಂದಿಲ್ಲ.

ಇದೇ ಸಂದರ್ಭ ಜೈಲಿನಿಂದ ಶಂಕಿತರು ತಪ್ಪಿಸಿಕೊಂಡ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ನಡೆಸಲಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ಚಿತ್ರ ಕೃಪೆ: ಹಿಂದೂಸ್ಥಾನ್ ಟೈಮ್ಸ್, ಟೈಮ್ಸ್ ಆಫ್ ಇಂಡಿಯಾ

Leave a comment

Top